ಬಳ್ಳಾರಿಯ ಜೆಎಸ್‌ಡಬ್ಲ್ಯೂ ಉಕ್ಕಿನ ಕಾರ್ಖಾನೆ ಸಾವಿನ ಕಂಪನಿಯಾಗಿದ್ದು, ಎರಡು ವರ್ಷಗಳ ಹಿಂದೆ ವೇಸ್ಟ್ ಡಂಪಿಂಗ್ ಯಾರ್ಡ್‌ನಲ್ಲಿ ದುರಂತದಲ್ಲಿ ಸಾವಿಗೀಡಾದ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಬೇಕು ಎಂದು ಜಿಂದಾಲ್ ಕಾರ್ಖಾನೆಯ ಆಡಳಿತ ಅಧಿಕಾರಿಗಳನ್ನು ವಕೀಲ ಬಾದಾಮಿ ಶಿವಲಿಂಗ ನಾಯಕ ಒತ್ತಾಯಿಸಿದರು.
ಜಿಲ್ಲೆಯ ಸಂಡೂರು ತಾಲೂಕಿನ ತುಮಟಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ರಾಮಾಂಜನಿ ಹಾಗೂ ಹೊನ್ನೂರಪ್ಪ ಅವರು ಜಿಂದಾಲ್ ಉಕ್ಕಿನ ಕಾರ್ಖಾನೆಯ ವೇಸ್ಟ್ ಡಂಪಿಂಗ್ ಯಾರ್ಡ್ ನಲ್ಲಿ ನಡೆದ ಅವಘಡದಲ್ಲಿ ಮರಣ ಹೊಂದಿದ್ದರು. ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
“ಬಡತನ ಹಾಗೂ ಹಸಿವು ಮನುಷ್ಯನಿಗೆ ಯಾವ ಕೆಲಸವನ್ನಾದರೂ ಮಾಡಲು ಪ್ರೇರೇಪಿಸುತ್ತದೆ. ಅದೇ ರೀತಿ ತನ್ನ ಕುಟುಂಬದ ಆರ್ಥಿಕ ಸಂಕಷ್ಟ ನೀಗಿಸಿಕೊಳ್ಳಲು ಸಂಡೂರು ತಾಲೂಕಿನ ತುಮಟಿ ಗ್ರಾಮದ ಹೊನ್ನೂರಪ್ಪ ಹಾಗೂ ರಾಮಾಂಜನಿ ಇವರುಗಳು ಹೊಟ್ಟೆಪಾಡಿಗಾಗಿ ಜಿಂದಾಲ್ ಕಾರ್ಖಾನೆಯ ಡಂಪಿಂಗ್ ಯಾರ್ಡ್ ನಲ್ಲಿ ಕಬ್ಬಿಣದ ತುಂಡುಗಳನ್ನು ಸಂಗ್ರಹಿಸಲು ಹೋಗಿ ಜೀವ ಕಳೆದುಕೊಂಡಿದ್ದು, ಕುಟುಂಬಕ್ಕೆ ಸೌಜನ್ಯಕ್ಕಾದರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಕನಿಷ್ಠ ಸೌಲಭ್ಯವನ್ನು ಕಲ್ಪಿಸಿ ಕೊಡಬೇಕು. ಘಟನೆ ನಡೆದು ಎರಡುವರೆ ವರ್ಷ ಕಳೆದರೂ ಜಿಲ್ಲಾಧಿಕಾರಿಗಳು, ತಾಲೂಕಿನ ಶಾಸಕರು ಹಾಗೂ ಅವಳಿ ಜಿಲ್ಲೆಯ ಸಂಸದರಾಗಲಿ ಕುಟುಂಬದ ನೆರವಿಗೆ ಬಂದಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಆ ಕುಟುಂಬದ ನೆರವಿಗೆ ಬರಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಬಳ್ಳಾರಿ | ಖರೀದಿ ಕೇಂದ್ರದ ಜೋಳವನ್ನು ಶೀಘ್ರ ಸಾಗಾಣಿಕೆ ಮಾಡಿ: ಮೆಣಸಿನ ಈಶ್ವರಪ್ಪ
ಇಷ್ಟಾದರೂ ಜಿಲ್ಲಾಧಿಕಾರಿಗಳು ಮತ್ತು ಜಿಂದಾಲ್ ಕಾರ್ಖಾನೆಯ ಅಧಿಕಾರಿಗಳು ನಿರ್ಲಕ್ಷ ವಹಿಸಿದಲ್ಲಿ ಇದೇ ಜೂನ್ 27ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ವಿ ಎಸ್ ಶಿವಶಂಕರ್, ಮಾನವ ಬಂಧುತ್ವ ವೇದಿಕೆಯ ಸಂಗನಕಲ್ಲು ವಿಜಯಕುಮಾರ್, ಎ ಸ್ವಾಮಿ, ರತ್ನಮ್ಮ ಹಾಗೂ ಇತರರು ಉಪಸ್ಥಿತರಿದ್ದರು.