ಹಾಲಿನ ದರ ಏರಿಕೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಸೇಡಂನ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, “ವಿದ್ಯುತ್ ಬೆಲೆ ಏರಿಕೆಯಾದ ನಂತರ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆಯನ್ನೂ ಲೀಟರಿಗೆ 3 ರೂ. ಹೆಚ್ಚಿಸಿದೆ. ಆ ಮೂಲಕ ಶ್ರಮಜೀವಿಗಳ ಕಿಸೆಗೆ ಕನ್ನ ಹಾಕಿದೆ. ಗ್ಯಾರಂಟಿಗಳನ್ನು ಘೋಷಿಸಿದ ಸರ್ಕಾರ, ಒಂದು ಕೈಯ್ಯಲ್ಲಿ ಕೊಟ್ಟು, ಇನ್ನೊಂದು ಕೈಯ್ಯಲ್ಲಿ ಕಸಿದುಕೊಳ್ಳುವ ಕೆಲಸ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.
“ಚುನಾವಣೆಗೆ ಮುನ್ನ ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ ಬಾಯಿ ಬಡಿದುಕೊಂಡಿತ್ತು. ಆದರೆ, ಅಧಿಕಾರಕ್ಕೆ ಬಂದೊಡನೆ ಬೆಲೆ ಏರಿಕೆಯ ಸರಣಿ ಶಾಕ್ ನೀಡುತ್ತಿದೆ. ಅನ್ನಭಾಗ್ಯದ ಹಣವನ್ನು ಹಾಲು, ವಿದ್ಯುತ್ ದರ ಏರಿಕೆಯಿಂದ ವಸೂಲಿ ಮಾಡಲು ಆರಂಭಿಸಿದೆ” ಎಂದು ಟೀಕಿಸಿದ್ದಾರೆ.
ಚುನಾವಣೆ ಪ್ರಣಾಳಿಕೆಯಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನದ ಭರವಸೆ ಕೊಟ್ಟಿದ್ದವರು ಎರಡೇ ತಿಂಗಳಲ್ಲಿ ಅದನ್ನು ಮರೆತೇ ಹೋಗಿದ್ದಾರೆ. ಜಾನುವಾರುಗಳು ಪಶು ಆಹಾರ ಬೆಲೆ ಇಳಿಕೆಗೆ ಯಾವ ಗ್ಯಾರಂಟಿಯೂ ಇಲ್ಲ” ಎಂದು ಕಿಡಿಕಾರಿದ್ದಾರೆ.