ರೈತರು ಬೆಳೆಗಳಿಗೆ ವಿತರಿಸುವ ರಸ ಗೊಬ್ಬರಗಳ ಬೆಲೆಯನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದು ಆರೋಪಿಸಿ ಇಂದು ಕೃಷಿ ಇಲಾಖೆ ಕಚೇರಿಯ ಎದುರು ಯುವ ಕಾಂಗ್ರೆಸ್ ಗ್ರಾಮಾಂತರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಆರಂಭದಿಂದಲೂ ಜನಸಾಮಾನ್ಯರ ಮೇಲೆ ಗದಾ ಪ್ರಹಾರ ಮಾಡುತ್ತಲೇ ಬಂದಿದೆ. ಇದೀಗ ರೈತರ ಬೆಳೆಗಳಿಗೆ ವಿತರಿಸುವ ರಾಸಾಯನಿಕ ರಸಗೊಬ್ಬರಗಳ ಬೆಲೆಯನ್ನು ಹೆಚ್ಚಳ ಮಾಡಿದೆ. , ಕಳೆದ ವರ್ಷ ಇಫ್ಕೋ 15-15-15 ರಸಗೊಬ್ಬರದ ಬೆಲೆ 1250 ರೂಪಾಯಿ ಇತ್ತು. ಅದನ್ನು ಈ ವರ್ಷ 1650 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಅದೇ ರೀತಿ ಆರ್.ಸಿ.ಎಫ್. 15-15-15ರ ಬೆಲೆ 1470 ರೂ.ಗಳಿದ್ದದ್ದು, ಈ ವರ್ಷ 1650 ರೂ.ಗಳಾಗಿದೆ. ಹೀಗೆ ರೈತರು ಬೆಳೆಗಳಿಗೆ ವಿತರಿಸುವ ಅನೇಕ ಗೊಬ್ಬರಗಳ ಮೇಲೆ ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಹೆಚ್ಚಳ ಮಾಡಿದ್ದು, ರೈತರ ಮೇಲೆ ಗದಾಪ್ರಹಾರ ಮಾಡುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದರು.