ಕಳೆದೆರಡು ವರ್ಷಗಳಿಂದ ಜಲ ಜೀವನ್ ಮಿಶನ್ ಕಾಮಗಾರಿ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಶಾಸಕ ಎಸ್.ಆರ್.ಶ್ರೀನಿವಾಸ್ ಕಾಮಗಾರಿ ವಿಳಂಬ, ಅರ್ಧಕ್ಕೆ ನಿಲ್ಲಿಸಿದ ಕೆಲಸ, ಹಸ್ತಾಂತರಕ್ಕೆ ಮೀನಾ ಮೇಷ ಎಣಿಸುತ್ತಿರುವ ಬಗ್ಗೆ ಗ್ರಾಪಂ ಅಧಿಕಾರಿಗಳು, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ತರಾಟೆ ತೆಗೆದುಕೊಂಡರು.
ಗುಬ್ಬಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಆಯೋಜಿಸಿದ್ದ ಹರ್ ಘರ್ ಜಲ್ ಕೆಲಸದ ಬಗ್ಗೆ ಸಂಪೂರ್ಣ ತಾಲ್ಲೂಕಿನ 34 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲಸಗಳ ಬಗ್ಗೆ ಪರಿಶೀಲಿಸಿ ಮಾತನಾಡಿದ ಅವರು ತಾಂತ್ರಿಕ ಸಮಸ್ಯೆ ಬಗ್ಗೆ ಆಲಿಸಿದ್ದೇನೆ. ಆದರೆ ಕಳಪೆ ಗುಣಮಟ್ಟದ ಕೆಲಸದ ಬಗ್ಗೆ ಗ್ರಾಮಸ್ಥರಿಂದ ದೂರು ಬರುತ್ತಿವೆ. ಇಂತಹ ಕಾಮಗಾರಿ ಬಗ್ಗೆ ಅಧಿಕಾರಿಗಳು ಕ್ರಮವಹಿಸಿ ಇನ್ನೂ ಹದಿನೈದು ದಿನದಲ್ಲಿ ಬಾಕಿ ಕೆಲಸ ಹಾಗೂ ದುರಸ್ಥಿ ಮಾಡಿಸಿ ಪಂಚಾಯಿತಿಗೆ ಹಸ್ತಾಂತರ ಮಾಡಬೇಕು ಎಂದು ತಾಕೀತು ಮಾಡಿದರು.
ಪ್ರತಿ ಹೋಬಳಿ ಮಟ್ಟದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕೆಲಸಗಳ ಬಗ್ಗೆ ಮಾಹಿತಿ ಪಡೆದು ಚರ್ಚೆ ಮಾಡಲಾಯಿತು. ಶೇಕಡಾ 70 ರಷ್ಟು ಕೆಲಸ ಮುಗಿದಿದ್ದರೂ ದೂರುಗಳು ಬಂದಿವೆ. ಕೆಲಸ ಮುಗಿದು ನೀರು ಪೂರೈಕೆ ಮಾಡುತ್ತಿರುವ ಗ್ರಾಮಗಳಿಗೆ ಪಿಡಿಓ ಸ್ಥಳ ಪರಿಶೀಲನೆ ಮಾಡಿ ಹಸ್ತಾಂತರ ಮಾಡಿಕೊಳ್ಳಬೇಕು ಎಂದು ತಿಳಿಸಿ ಕೆಲವಡೆ ಕೊರೆದ ಬೋರ್ ವೆಲ್ ವಿಫಲವಾಗಿದೆ. ಮತ್ತೇ ಕೆಲ ಗ್ರಾಮದಲ್ಲಿ ಕುಡಿಯಲು ಯೋಗ್ಯವಿಲ್ಲ ಎಂಬ ಪರೀಕ್ಷೆ ಫಲಿತಾಂಶ ಬಂದಿದೆ. ಇಂತಹ ಕಡೆ ಕೂಡಲೇ ಮತ್ತೊಂದು ಬೋರ್ ವೆಲ್ ವ್ಯವಸ್ಥೆ ಮಾಡಿ ನೀರು ಸರಬರಾಜು ಮಾಡುವಂತೆ ಸೂಚಿಸಿದರು.

ಚರ್ಚೆಯ ಸಮಯದಲ್ಲಿ ಗುತ್ತಿಗೆದಾರರು ತಮ್ಮ ಅಹವಾಲು ಹೇಳಿಕೊಂಡರು. ತುಮಕೂರು ಜಿಲ್ಲೆಯಲ್ಲಿ ನಮ್ಮ ಹಣದಲ್ಲಿ ಶೇಕಡಾ 35 ರಷ್ಟು ಹಣ ಹಿಡಿಯುತ್ತಿದ್ದಾರೆ. ಹಾಸನ ಮತ್ತು ರಾಮನಗರ ಜಿಲ್ಲೆಯಲ್ಲಿ ಇಎಂಡಿ, ಎಫ್ ಎಸ್ ಟಿ ಹೆಸರಿನಲ್ಲಿ ಹಣ ಹಿಡಿದಿಲ್ಲ. ಆದರೆ ತುಮಕೂರು ಜಿಲ್ಲೆಯ ಮಾತ್ರ ಹಿಡಿದಿದ್ದಾರೆ. ಈ ಜೊತೆಗೆ ಎಲ್ಲಾ ಸಮಸ್ಯೆಗೆ ಗುತ್ತಿಗೆದಾರರೇ ಹೊಣೆ ಮಾಡುತ್ತಿದ್ದಾರೆ. ಯಾವ ಅಧಿಕಾರಿಯೂ ಜವಾಬ್ದಾರಿ ಹೊರದೆ ಎಲ್ಲಾ ಕಾರಣಕ್ಕೂ ಶನೇಶ್ವರ ಹೊಣೆ ಎನ್ನುತ್ತಿದ್ದಾರೆ ಎಂದು ಗುತ್ತಿಗೆದಾರ ಪರವಾಗಿ ರೇಣುಕಾ ಪ್ರಸಾದ್ ಕಿಡಿಕಾರಿದರು.
ಗುತ್ತಿಗೆದಾರರ ಸಮಸ್ಯೆ ಆಲಿಸಿದ ಶಾಸಕರು ಕೆಲಸ ಎರಡು ವರ್ಷದವರೆಗೆ ವಿಳಂಬ ಮಾಡಿ ನಿಗದಿತ ಸಮಯಕ್ಕೆ ಹಸ್ತಾಂತರ ಮಾಡದ ಬಗ್ಗೆ ತಿಳಿದೇ ಅಧಿಕಾರಿಗಳು ಗುತ್ತಿಗೆದಾರರ ಹಣ ಹಿಡಿದಿದ್ದಾರೆ. ವಿಳಂಬವಾಗಿ ಸಮಸ್ಯೆ ಎದುರಾದಲ್ಲಿ ದುರಸ್ಥಿ ಮಾಡಲಿ ಎಂದು ಗುತ್ತಿಗೆದಾರರ ಹಣ ಹಿಡಿದಿದ್ದಾರೆ. ಇನ್ನೂ ಹೆಚ್ಚಿನ ಸಮಯ ಪಡೆಯದೆ ಕೂಡಲೇ ಕೆಲಸ ಮುಗಿಸಿ ಪಂಚಾಯಿತಿಗೆ ಹಸ್ತಾಂತರ ಮಾಡಿ ಬಿಲ್ ಪಡೆದುಕೊಳ್ಳಲು ಸೂಚಿಸಿ, ಹಸ್ತಾಂತರ ಪಡೆಯಲು ಪಿಡಿಓಗಳು ನಿಧಾನ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಡಬ ಹೋಬಳಿ ಲಿಂಗಮ್ಮನಹಳ್ಳಿ, ಚಾಕೇನಹಳ್ಳಿ, ಇಸ್ಲಾಂ ನಗರ ಗ್ರಾಮದಲ್ಲಿ ಬೋರ್ ಹಾಗೂ ಪೈಪ್ ಲೈನ್ ಸಮಸ್ಯೆ ಕೂಡಲೇ ಬಗೆಹರಿಸಬೇಕು. ಕೆಲಸವನ್ನೇ ಆರಂಭಿಸದ, ಅರ್ಧಕ್ಕೆ ಕೈ ಬಿಟ್ಟ ಗುತ್ತಿಗೆದಾರರ ಮೇಲೆ ಕ್ರಮ ವಹಿಸಬೇಕು. ಇದೆಲ್ಲಾ ಕೆಲಸಗಳಿಗೆ ವಿಳಂಬಕ್ಕೆ ವಿದ್ಯುತ್ ಸಂಪರ್ಕ ನೀಡದಿರುವುದು ಕಾರಣ. ಪರಿವರ್ತಕ ಅಳವಡಿಕೆಗೆ ಬೆಸ್ಕಾಂ ಹಾಗೂ ಕುಡಿಯುವ ನೀರು ನೈರ್ಮಲ್ಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿ, ಗುತ್ತಿಗೆದಾರರು ವಿಳಂಬ ಅನುಸರಿಸಿ ಬಿಲ್ ಆಗಲಿಲ್ಲ ಅಂತ ಊರು ಬಿಡುವುದು, ಆತ್ಮಹತ್ಯೆ ಮಾಡಿಕೊಳ್ಳುವುದು ಆಗಬಾರದು. ಕೂಡಲೇ ಕೆಲಸವನ್ನು ಪೂರ್ಣಗೊಳಿಸಿ ಎಂದು ಹೇಳಿದರು.
ಸಭೆಯಲ್ಲಿ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಇಇ ಕುಮಾರಸ್ವಾಮಿ, ತಾಪಂ ಇಓ ಶಿವಪ್ರಕಾಶ್, ಎಇಇ ನಟರಾಜ್, ಎಇ ಲಿಂಗರಾಜ್ ಶೆಟ್ಟಿ ಸೇರಿದಂತೆ ಎಲ್ಲಾ ಪಿಡಿಓಗಳು ಹಾಜರಿದ್ದರು.