ಇರಾಕ್‌ನ ಮೇಲೆ ಅಮೆರಿಕ ಮಾಡಿದ ರಾಕ್ಷಸಿ ಕೃತ್ಯದಿಂದಾಗಿ ಅಲ್ಲಿನ ಸರ್ಕಾರದ ವರದಿಯಂತೆ ಸುಮಾರು ಸುಮಾರು 30 ಲಕ್ಷಕ್ಕೂ ಅಧಿಕ ವಿಧವೆಯರಿದ್ದಾರೆ. ಅಲ್ಲದೆ ಮಹಿಳೆಯರ ಮೇಲಿನ ಹಿಂಸೆ, ಮರ್ಯಾದಾ ಹತ್ಯೆಗಳು, ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ತೀವ್ರ ಏರಿಕೆಯಾಗಿದೆ...
ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಪರಮಾಣು ಪ್ರಸರಣ ನಿಷೇಧ ಒಪ್ಪಂದ(ಎನ್‌ಪಿಟಿ)ವನ್ನು ಉಲ್ಲಂಘಿಸಿರುವ ಅಮೆರಿಕ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿ ತಾನು ವಿಶ್ವದಲ್ಲೆ ಅತಿ ಕ್ರೂರ ಸರ್ವಾಧಿಕಾರಿ ರಾಷ್ಟ್ರ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ. ಕಳೆದ 50 ವರ್ಷಗಳ ಜಗತ್ತಿನ ರಾಜಕೀಯ ಇತಿಹಾಸವನ್ನು ಗಮನಿಸಿದರೆ ಅಮೆರಿಕದಷ್ಟು ಬೇರೆ ಯಾವ ರಾಷ್ಟ್ರಗಳು ಕೂಡ ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಮಧ್ಯಪ್ರವೇಶಿಸಿಲ್ಲ. ಸೋವಿಯತ್ ರಷ್ಯಾ ಪತನಗೊಂಡ ನಂತರ ಅಮೆರಿಕ ತನ್ನನ್ನು ತಾನು ಜಗತ್ತಿನ ಸೇನಾಧಿಪತಿ ಎಂದುಕೊಂಡು ತನ್ನ ಹಿತಾಸಕ್ತಿಗೆ ವಿರುದ್ಧವಿರುವ ಅಥವಾ ತನ್ನ ಆಜ್ಞೆಗೆ ತಲೆಭಾಗದ ದೇಶಗಳನ್ನು ನಾಶಗೊಳಿಸುತ್ತಿದೆ. ಈಗ ಇರಾನ್ ಮೇಲೆ ದಾಳಿ ನಡೆಸಿದಂತೆ 20 ದಶಕಗಳ ಹಿಂದೆ ಇರಾಕ್ ಮೇಲೆ ದಾಳಿ ನಡೆಸಿ ದೇಶವನ್ನು ಸಂಪೂರ್ಣ ಹಾಳುಗೆಡವಿತ್ತು.
2003ರಲ್ಲಿ ಅಮೆರಿಕವು ಇರಾಕ್ ಮೇಲೆ ಮಾಡಿದ ದಾಳಿಯು ಇತಿಹಾಸದಲ್ಲಿ ವಿವಾದಾಸ್ಪದ ಘಟನೆಯಾಗಿ ಉಳಿದಿದೆ. ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ನೇತೃತ್ವದ ಆಡಳಿತವು ಇರಾಕ್‌ನ ಅಧ್ಯಕ್ಷ ಸದ್ದಾಂ ಹುಸೇನ್ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ ಎಂಬ ಆರೋಪವನ್ನು ಹೊರಿಸಿ ಅಮೆರಿಕ ತನ್ನ ಮಿತ್ರರಾಷ್ಟ್ರಗಳೊಂದಿಗೆ “ಆಪರೇಷನ್ ಇರಾಕಿ ಫ್ರೀಡಮ್” ಎಂಬ ಹೆಸರಿನಲ್ಲಿ ದಾಳಿಯನ್ನು ಆರಂಭಿಸಿತು. ಈ ದಾಳಿಯು ಸದ್ದಾಂ ಹುಸೇನ್ ಆಡಳಿತವನ್ನು ಕಿತ್ತುಹಾಕಿತು. ಈ ಘಟನೆಯ ನಂತರ ಇರಾಕ್‌ನಲ್ಲಿ ದೀರ್ಘಕಾಲೀನ ಗೊಂದಲ, ರಾಜಕೀಯ ಅಸ್ಥಿರತೆ, ಸಾಮಾಜಿಕ ಸಮಸ್ಯೆಗಳು, ಬಡತನ, ನಿರುದ್ಯೋಗ, ಮತ್ತು ಪ್ರತ್ಯೇಕತಾವಾದಿ ಗುಂಪುಗಳು ಏರಿಕೆಗೆ ಕಾರಣವಾಯಿತು. ಪ್ರಮುಖವಾದ ವಿಷಯವೇನೆಂದರೆ ದಾಳಿಯ ನಂತರ ಇರಾಕ್‌ನಲ್ಲಿ ಯಾವುದೇ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳು ಕಂಡುಬರಲಿಲ್ಲ. ಹಾಗೆಯೇ ವಿಶ್ವಸಂಸ್ಥೆಯ ಪರಿವೀಕ್ಷಣೆ ತಂಡ ಇಂತಹ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ಪ್ರಬಲವಾದ ಪುರಾವೆಯನ್ನು ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಕೊನೆಗೆ ಭಯೋತ್ಪಾದಕ ಎಂಬ ನೆಪವೊಡ್ಡಿ ತಾನೆ ಸಾಕಿದ ಇರಾಕ್‌ನ ನಾಯಕ ಸದ್ದಾಂ ಹುಸೇನ್‌ನ್ನು ಗಲ್ಲಿಗೇರಿಸಲಾಯಿತು.
ಅಮೆರಿಕದ ಆಂತರಿಕ ಮಧ್ಯ ಪ್ರವೇಶ ಹಾಗೂ ಮಿಲಿಟರಿ ದಾಳಿಯಿಂದಾಗಿ ಇರಾಕ್‌ನ ಜನತೆಗೆ ಭಾರೀ ತೊಂದರೆ ಅನುಭವಿಸಬೇಕಾಯಿತು. ಲಕ್ಷಾಂತರ ಅಮಾಯಕರು ಸಾವನ್ನಪ್ಪಿದರು. ದೇಶದ ಮೂಲಸೌಕರ್ಯವು ನಾಶವಾಯಿತು. ಹಲವು ಪ್ರತ್ಯೇಕತಾವಾದಿ ಗುಂಪುಗಳು ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿದವು. ಅಮೆರಿಕದ ಈ ಕ್ರಮವು ತೈಲ ಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಮಾಡಿದ ಘನಘೋರ ಕ್ರಮ ಎಂಬುದನ್ನು ನಂತರದಲ್ಲಿ ಎಲ್ಲರಿಗೂ ಮನವರಿಕೆಯಾಯಿತು. ಪ್ರಾಣ ಕಳೆದುಕೊಂಡವರು ಮಾತ್ರವಲ್ಲದೆ ಹಲವು ಗಂಭೀರ ಪರಿಣಾಮಗಳನ್ನು ಆ ದೇಶವು ಎದುರಿಸಬೇಕಾಯಿತು. ವಿಶ್ವಸಂಸ್ಥೆಯ ವರದಿಯ ಪ್ರಕಾರ, 2003ರಿಂದ ಇಲ್ಲಿಯವರೆಗೂ 47 ಲಕ್ಷಕ್ಕೂ ಹೆಚ್ಚು ಇರಾಕಿಗಳು ತಮ್ಮ ಮನೆ, ನಗರವನ್ನು ಬಿಟ್ಟು ಇರಾನ್, ಜೋರ್ಡಾನ್ ಮತ್ತು ಸಿರಿಯಾ ದೇಶಗಳಲ್ಲಿ ನಿರಾಶ್ರಿತರಾದರು. ಬಹುತೇಕರಿಗೆ ಇಲ್ಲಿಯವರೆಗೂ ಸರಿಯಾದ ಆಶ್ರಯ ದೊರಕಿಲ್ಲ.
ಇರಾಕ್‌ನ ಮೇಲೆ ಅಮೆರಿಕ ಮಾಡಿದ ರಾಕ್ಷಸಿ ಕೃತ್ಯದಿಂದಾಗಿ ಅಲ್ಲಿನ ಸರ್ಕಾರದ ವರದಿಯಂತೆ ಸುಮಾರು ಸುಮಾರು 30 ಲಕ್ಷಕ್ಕೂ ಅಧಿಕ ವಿಧವೆಯರಿದ್ದಾರೆ. ಅಲ್ಲದೆ ಮಹಿಳೆಯರ ಮೇಲಿನ ಹಿಂಸೆ, ಮರ್ಯಾದಾ ಹತ್ಯೆಗಳು, ಅತ್ಯಾಚಾರ ಮತ್ತು ಅಪಹರಣ ಪ್ರಕರಣಗಳು ತೀವ್ರ ಏರಿಕೆಯಾಗಿದೆ. ಅಪರಾಧ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಈ ದೇಶದ ಬಹುತೇಕ ಮಹಿಳೆಯರು ಸಾಮಾಜಿಕ ಸ್ಥಾನಮಾನ ಕಂಡುಕೊಳ್ಳದೆ ಮನೆಯಲ್ಲಿ ಇದ್ದಾರೆ. ಇವರಿಗೆ ಉದ್ಯೋಗ ಮತ್ತು ಶಿಕ್ಷಣದ ಅವಕಾಶಗಳು ಸೀಮಿತವಾಗಿವೆ. ನೆರೆಯ ರಾಷ್ಟ್ರಗಳಿಗೆ ಓಡಿಹೋದ ಅನೇಕ ಇರಾಕಿ ಮಹಿಳೆಯರು ತಮ್ಮ ಮಕ್ಕಳನ್ನು ಪೋಷಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಅಮೆರಿಕ ದಾಳಿ ಮಾಡಿದ ಅಪಾಯಕಾರಿ ರಾಸಾಯನಿಕ ಬಾಂಬ್‌ಗಳ ಪರಿಣಾಮದಿಂದಾಗಿ ಇರಾಕ್‌ನ ಹಲವು ಪ್ರಾಂತ್ಯಗಳಲ್ಲಿ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಸಾಂಕ್ರಾಮಿಕ ರೋಗಗಳು ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನ ಜನರಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿವೆ.
ಇದನ್ನು ಓದಿದ್ದಾರಾ? ಈ ದಿನ ಸಂಪಾದಕೀಯ | 1180 ದಿನಗಳ ಚನ್ನರಾಯಪಟ್ಟಣ ಚಳವಳಿಗೆ ಸರ್ಕಾರ ಸ್ಪಂದಿಸಲಿ
ಇನ್ನು ಪ್ರಮುಖವಾದ ವಿಷಯವೆಂದರೆ ಅಮೆರಿಕ ಕೈಗೊಂಡ ಇರಾಕ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಸುಮಾರು 5 ಸಾವಿರ ಸೈನಿಕರನ್ನು ಅಮೆರಿಕ ಕಳೆದುಕೊಂಡಿದೆ. 32 ಸಾವಿರಕ್ಕೂ ಹೆಚ್ಚು ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಂಕಿಅಂಶಗಳು 2001 ಸೆಪ್ಟೆಂಬರ್ 11 ರ ದಾಳಿಯಲ್ಲಿ ಗಾಯಗೊಂಡ ಜನರಿಗಿಂತಲೂ ಹೆಚ್ಚಾಗಿದೆ. ಇದು ಕೇವಲ ಇರಾಕ್‌ಗೆ ಸೀಮಿತವಾಗಿರದೆ, ನಂತರದ ದಶಕಗಳಲ್ಲಿ ಲಿಬಿಯಾ, ಸಿರಿಯಾ ಮುಂತಾದ ದೇಶಗಳಲ್ಲಿಯೂ ಅಮೆರಿಕದ ಹಸ್ತಕ್ಷೇಪದ ನಿರಂತರತೆ ಹೆಚ್ಚಾಯಿತು. ಚೀನಾ ಮತ್ತು ರಷ್ಯಾಗಳಿಗೆ ಆಪ್ತವಾಗಿರುವ ದೇಶಗಳು, ನೈಸರ್ಗಿಕ ಸಂಪನ್ಮೂಲ ಹೊಂದಿರುವ ದೇಶಗಳನ್ನು ಸದಾ ಗುರಿ ಮಾಡುತ್ತಲೇ ಬಂದಿದೆ.
ಹಲವು ದೇಶಗಳ ಮೇಲೆ ದಾಳಿ
ಯುದ್ಧದಾಹ ಹಾಗೂ ಸಂಪನ್ಮೂಲ ದಾಹದಿಂದ ವಿಯೆಟ್ನಾಂ, ಚಿಲಿ, ಲಿಬಿಯ, ಸಿರಿಯಾ, ಅಫ್ಘಾನಿಸ್ತಾನ, ಯಮನ್ ಅಲ್ಲದೆ ಲ್ಯಾಟಿನ್ ಅಮೆರಿಕ ದೇಶಗಳು ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಲವು ಬಾರಿ ತೊಂದರೆಗೊಳಗಾಗಿವೆ. ಜೊತೆಗೆ ಆರ್ಥಿಕವಾಗಿ ನಷ್ಟವನ್ನು ಅನುಭವಿಸಿವೆ. ಕೆಲವು ರಾಷ್ಟ್ರಗಳಲ್ಲಿ ಕಮ್ಯೂನಿಸಂ ಅನ್ನು ನಾಶ ಮಾಡಲು ಹವಣಿಸಿದರೆ, ಹಲವೊಮ್ಮೆ ಆಯಾ ದೇಶದ ಸಂಪನ್ಮೂಲವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದೆ. ಸೋವಿಯತ್ ರಷ್ಯಾ ಒಕ್ಕೂಟದ ಪತನದ ನಂತರ ವಿಶ್ವಕ್ಕೆ ನಾನೆ ದೊಡ್ಡಣ್ಣ ಎಂದು ಹೇಳಿಕೊಳ್ಳುತ್ತಿದೆ.
ಮಧ್ಯಪ್ರಾಚ್ಯದಲ್ಲಿ ಅಮೆರಿಕದ ವಿದೇಶಾಂಗ ನೀತಿಯು ಸಂಕೀರ್ಣ ಮತ್ತು ವಿವಾದಾತ್ಮಕವಾಗಿದೆ. ವಿಯೆಟ್ನಾಂ ಯುದ್ಧವು ಅಮೆರಿಕದ ವಿದೇಶಾಂಗ ನೀತಿಯ ಒಂದು ದುರಂತ ಉದಾಹರಣೆಯಾಗಿದೆ ಎಂದು ಅನೇಕರು ಪರಿಗಣಿಸುತ್ತಾರೆ. ಕಮ್ಯುನಿಸಂ ಅನ್ನು ತಡೆಯುವ ಹೆಸರಿನಲ್ಲಿ ನಡೆದ ಈ ಯುದ್ಧವು ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು ಮತ್ತು ವಿಯೆಟ್ನಾಂಅನ್ನು ಸಂಪೂರ್ಣವಾಗಿ ನಾಶಮಾಡಿತು. ಅಮೆರಿಕವು ಲ್ಯಾಟಿನ್ ಅಮೆರಿಕದ ಅನೇಕ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಹಸ್ತಕ್ಷೇಪ ಮಾಡಿದೆ. ಕೆಲವು ಸಂದರ್ಭಗಳಲ್ಲಿ, ಚುನಾಯಿತ ಸರ್ಕಾರಗಳನ್ನು ಉರುಳಿಸಲು ಬೆಂಬಲ ನೀಡಿದೆ ಹಾಗೂ ಮಿಲಿಟರಿ ಸರ್ವಾಧಿಕಾರಿಗಳನ್ನು ಬೆಂಬಲಿಸಿದೆ. 1973ರಲ್ಲಿ ಚಿಲಿ ದೇಶದಲ್ಲಿ ಅಮೆರಿಕವು ತನ್ನ ಸಿಐಎ ಸಹಾಯದಿಂದ ಚಿಲಿಯ ಜನರಿಂದ ಆಯ್ಕೆಯಾದ ಪ್ರಧಾನಿ ಸಾಲ್ವಡಾರ್ ಅಲ್ಲಾಂಡೆ ಅವರನ್ನು ಪತನಗೊಳಿಸುವುದು ಸೇರಿದಂತೆ ಹಲವು ಹಸ್ತಕ್ಷೇಪಗಳು ಆ ದೇಶಗಳಲ್ಲಿ ರಾಜಕೀಯ ಅಸ್ಥಿರತೆ, ಹಿಂಸಾಚಾರ ಮತ್ತು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯುಂಟುಮಾಡಿದವು.
ಲಿಬಿಯಾ, ಯಮನ್, ಸಿರಿಯಾ, ಅಫ್ಘಾನಿಸ್ತಾನ ಮುಂತಾದ ಸರ್ಕಾರಗಳನ್ನು ಅಸ್ಥಿರಗೊಳಿಸಲು ಐಸಿಸ್‌ನಂತಹ ಉಗ್ರಗಾಮಿ ಸಂಘಟನೆಯನ್ನು ಹುಟ್ಟುಹಾಕಿತು. ಕೊನೆಗೆ ಇದೇ ಐಸಿಸ್ ಸಂಘಟನೆ ಅಮೆರಿಕಕ್ಕೆ ಮಗ್ಗುಲ ಮುಳ್ಳಾಗಿದ್ದು ಸುಳ್ಳಲ್ಲ. ಒಳಗೆ ಹಲವು ದುರಾಲೋಚನೆಗಳನ್ನು ಇಟ್ಟುಕೊಳ್ಳುವ ಅಮೆರಿಕ ಮೇಲ್ನೋಟಕ್ಕೆ ತಾನು ವಿಶ್ವದ ಎಲ್ಲ ದೇಶಗಳ ಸಮಸ್ಯೆಯನ್ನು ಸರಿಪಡಿಸುತ್ತೇನೆ ಎಂದು ಹೇಳಿ ಮೂರನೇ ವ್ಯಕ್ತಿಯಾಗಿ ಕಾಲಿಟ್ಟು ಉಭಯ ದೇಶಗಳ ಮೂಲ ಸಮಸ್ಯೆಗಳನ್ನು ಬಿಟ್ಟು ತನ್ನ ಪ್ರಭಾವ ಬೆಳೆಸುವುದು ಅಮೆರಿಕದ ಚಾಳಿಯಾಗಿದೆ. ಇದಕ್ಕೆ ಸದ್ಯದ ಉದಾಹರಣೆಯೆಂದರೆ ಇಸ್ರೇಲ್ – ಪ್ಯಾಲೆಸ್ತೀನ್ ಹಾಗೂ ರಷ್ಯಾ – ಉಕ್ರೇನ್ ಯುದ್ಧಗಳು. ಇಸ್ರೇಲ್ – ಪ್ಯಾಲೆಸ್ತೀನ್ ಯುದ್ಧಕ್ಕೆ ಹಲವು ದಶಕಗಳ ಇತಿಹಾಸವಿದೆ. ತನ್ನ ಸ್ವಂತ ಭೂಮಿಗಾಗಿ ಬಂಡುಕೋರರ ಹಣೆಪಟ್ಟಿಯನ್ನು ಕಟ್ಟಿಕೊಂಡು ಹೋರಾಡಬೇಕಾದ ಅನಿವಾರ್ಯತೆ ಪ್ಯಾಲೆಸ್ತೀನ್ ಪ್ರಜೆಗಳಿಗೆ ಒದಗಿಬಂದಿದೆ. ಈ ಇತಿಹಾಸವು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸತ್ಯಾಸತ್ಯತೆಯ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ. ಸುಳ್ಳಿನ ಆಧಾರದ ಮೇಲೆ ಯುದ್ಧವನ್ನು ಆರಂಭಿಸಿದ್ದು, ಜಾಗತಿಕ ರಾಜಕೀಯದಲ್ಲಿ ಅಮೆರಿಕದ ನೀಚತನ ಬಯಲಾಗಿದೆ. ಸರ್ವಾಧಿಕಾರಿ ಧೋರಣೆಯ ಅಮೆರಿಕದ ದುಷ್ಕೃತ್ಯಗಳು ಮುಂದೊಂದು ದಿನ ತಾನೇ ವಿನಾಶವನ್ನು ಅನುಭವಿಸುವ ದಿನ ದೂರವಿಲ್ಲ.
