ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಉಳಿಯುವ ಯಾವ ಲಕ್ಷಣವೂ ಇಲ್ಲ. ಅದಕ್ಕೆ ಹೊರಗಿನವರ ಶ್ರಮದ ಅಗತ್ಯವೇ ಇಲ್ಲ. ಪರಸ್ಪರ ಗುದ್ದಾಡಿಕೊಳ್ಳುತ್ತಿರುವ ಒಳಗಿನ ನಾಲ್ಕು ಗುಂಪುಗಳೇ ಈ ಸರ್ಕಾರವನ್ನು ನಿಸ್ಸಂದೇಹವಾಗಿ ಮುಗಿಸಲಿದೆ ಎಂದು ಬಿಜೆಪಿ ಟೀಕಿಸಿದೆ.
‘ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಲು ಸಿಂಗಾಪುರದಲ್ಲಿ ಷಡ್ಯಂತ್ರ ನಡೆಸಲಾಗುತ್ತಿದೆ’ ಎಂಬ ಡಿ ಕೆ ಶಿವಕುಮಾರ್ ಅವರ ಆರೋಪಕ್ಕೆ ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.
“ಬಡ, ಮಧ್ಯಮ, ಶ್ರಮಿಕ ವರ್ಗದವರು ಹೋದಲ್ಲಿ ಬಂದಲ್ಲಿ ಸರ್ಕಾರವನ್ನು ವಾಚಾಮಗೋಚರವಾಗಿ ನಿಂದಿಸಲು ಆರಂಭಿಸಿದ್ದಾರೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ತಮ್ಮ ಭವಿಷ್ಯ ಮಂಕಾಗಲಿದೆ ಎಂಬ ಕಾರಣಕ್ಕೆ ಡಿ ಕೆ ಶಿವಕುಮಾರ್ ಈಗ ಸಿಂಗಾಪುರದ ನಾಟಕ ಆರಂಭಿಸಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.
“ಅಷ್ಟಕ್ಕೂ ಈ ಸರ್ಕಾರವನ್ನು ಬೀಳಿಸಲು ಹೊರಗಿನವರೇ ಬೇಕಾಗಿಲ್ಲ. ಅಸಲಿಗೆ ಸರ್ಕಾರದ ಪ್ರಮುಖ ಭಾಗವಾಗಿರುವವರಿಗೆ ಈ ಸರ್ಕಾರ ಬೇಕಾಗಿಲ್ಲ. ಸಚಿವರಾದ ಜಮೀರ್ ಅಹಮದ್, ಎಂ ಬಿ ಪಾಟೀಲ್, ಸತೀಶ್ ಜಾರಕಿಹೊಳಿ ಗಟ್ಟಿಯಾಗಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುತ್ತಾರೆ ಎಂದು ಹೇಳುವ ಹಾಗಿಲ್ಲ. ಹೇಳಿದರೆ ಡಿ ಕೆ ಶಿವಕುಮಾರ್ ಬಣ ಮುಗಿಬೀಳುತ್ತದೆ” ಎಂದು ಟೀಕಿಸಿದೆ.
“ಸಿದ್ದರಾಮಯ್ಯರವರ ವಿರುದ್ಧ ಮಾತನಾಡುವ ಹೊಸ ಗುಂಪಿನ ನಾಯಕ ಹರಿಪ್ರಸಾದ್ ಬಗ್ಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ಸಹ ನೀಡದೇ ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ವರ್ತಿಸುತ್ತಾರೆ” ಎಂದು ಬಿಜೆಪಿ ಹೇಳಿದೆ.
“ಜನತೆಯ ಕಿವಿಯ ಮೇಲೆ ಸದಾ ಹೂವಿಡುವ ಕಾಂಗ್ರೆಸ್, ತನ್ನ ಪರಂಪರೆಯನ್ನು ರಾಜ್ಯದಲ್ಲಿ ಮುಂದುವರೆಸಿದೆ. ತಮ್ಮ ಸರ್ಕಾರದ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಬೆಲೆಯೇರಿಕೆಯಿಂದ ತತ್ತರಿಸಿರುವ ರಾಜ್ಯದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕನಕಪುರದವರು ಸಿಂಗಾಪುರ ಎನ್ನುತ್ತಿದ್ದಾರೆ” ಎಂದು ಆರೋಪಿಸಿದೆ.
“ಈ ತುಘಲಕ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಗ್ಯಾರಂಟಿಗಳ ವಿಷಯದಲ್ಲಿ ಉಲ್ಟಾ ಹೊಡೆದಿದೆ, ವರ್ಗಾವಣೆ ದಂಧೆಯಲ್ಲಿ ನಿರತವಾಗಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹಿಂದೂ ಕಾರ್ಯಕರ್ತರ, ಜೈನ ಮುನಿಗಳ ಹತ್ಯೆ, ಪೊಲೀಸರ ಮೇಲೆ ಹಲ್ಲೆ, ಸಾಲು ಸಾಲು ಅತ್ಯಾಚಾರ ಹೀಗೆ ತಾನು ಆಡಳಿತವನ್ನು ನಿಭಾಯಿಸಲು ಅಸಮರ್ಥ ಎಂಬುದನ್ನು ಶುರುವಾತಿನಲ್ಲಿಯೇ ನಿರೂಪಿಸಿದೆ” ಎಂದು ಬಿಜೆಪಿ ದೂರಿದೆ.
“ಹೀಗಾಗಿ ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂಬಂತೆ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಸರ್ಕಾರಕ್ಕೆ ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ” ಎಂದು ಟೀಕಿಸಿದೆ.
ಈ ಸುದ್ದಿ ಓದಿದ್ದೀರಾ? ವಿದೇಶದಲ್ಲಿ ಕುಳಿತು ನಮ್ಮ ಸರ್ಕಾರ ಬೀಳಿಸುವ ಕೆಲಸ ನಡೆಯುತ್ತಿದೆ: ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಡಿ ಕೆ ಶಿವಕುಮಾರ್ ಆರೋಪವೇನು?
ಸಿಂಗಾಪುರದಲ್ಲಿ ಕುಳಿತು ಬಹುಮತದ ಸರ್ಕಾರ ಬೀಳಿಸಲು ಯೋಜನೆ ರೂಪಿಸಲಾಗುತ್ತಿದೆ. ನನಗೆ ಸಿಕ್ಕಿರುವ ಮಾಹಿತಿಗಳ ಪ್ರಕಾರ ಅವರು ಸಿಂಗಾಪುರದಿಂದ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಸಂಚು ರೂಪಿಸುವ ಬದಲು ವಿದೇಶದಲ್ಲಿ ಸಂಚು ರೂಪಿಸಲಾಗುತ್ತಿದೆ” ಎಂದು ಡಿ ಕೆ ಶಿವಕುಮಾರ್ ಆರೋಪಿಸಿದ್ದರು.
“ಇದೆಲ್ಲವೂ ಒಂದು ತಂತ್ರ. ನಾನು ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಬೆಂಗಳೂರಿನಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಿದರೆ ಸಂಚು ಬಯಲಿಗೆ ಬರುವ ಸಾಧ್ಯತೆ ಇರುವುದರಿಂದ ಸಿಂಗಾಪುರದಲ್ಲಿ ತಂತ್ರ ಮಾಡಲಾಗಿದೆ” ಎಂದು ವೈದ್ಯಕೀಯ ತಪಾಸಣೆಗಾಗಿ ಸಿಂಗಾಪುರಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು.