ಕಾಂಗ್ರೆಸ್ ಶಾಸಕರಾದ ರಾಜು ಕಾಗೆ ತಮ್ಮ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಂದಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಬೆಳಗಾವಿ ದಕ್ಷಿಣ ಶಾಸಕ ಹಾಗೂ ಬಿಜೆಪಿ ನಾಯಕ ಅಭಯ ಪಾಟೀಲ ಟೀಕಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜು ಕಾಗೆ ಸತ್ಯವನ್ನೇ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೋಗಸ್ ಪತ್ರ ನೀಡಿ ಶಾಸಕರನ್ನು ಸಮಾಧಾನಪಡಿಸುತ್ತಿದ್ದಾರೆ. ಲಂಚ ಕೊಟ್ಟಿಲ್ಲದ ಕಾರಣ ಅನುದಾನ ಬಿಡುಗಡೆ ಆಗಿಲ್ಲ ಎಂದರೆ ಇದು ಸರ್ಕಾರದ ನೈತಿಕ ಕುಸಿತ” ಎಂದರು.
“ಮುಖ್ಯಮಂತ್ರಿಗಳ ವಿಶೇಷ ಅನುದಾನವೇ ಬೋಗಸ್ ಆಗಿದ್ದರೆ, ಬೇರೆ ಯೋಜನೆಗಳಿಗೆ ಹಣ ಹೇಗೆ ಬಿಡುಗಡೆಯಾಗುತ್ತದೆ? ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಕ್ಷಣ ರಾಜೀನಾಮೆ ನೀಡಲಿ” ಎಂದು ಆಗ್ರಹಿಸಿದರು.
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಡುಗಡೆಗೊಂಡ ಅನುದಾನದಿಂದ ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದನ್ನು ಅಭಯ ಪಾಟೀಲ ಹೈಲೈಟ್ ಮಾಡಿದರು. “ಇನ್ನು ಕೆಲ ಯೋಜನೆಗಳಡಿ ಬಿಜೆಪಿ ನೀಡಿದ್ದ ಅನುದಾನವನ್ನು ಈ ಸರ್ಕಾರ ವಾಪಸ್ ಪಡೆದಿದೆ. ಜನತೆ ಸರ್ಕಾರದ ವಿರುದ್ಧ ತಿರುಗಿಬೀಳುವ ಸ್ಥಿತಿ ನಿರ್ಮಾಣವಾಗುತ್ತಿದೆ. ಚಳಿಗಾಲದ ಅಧಿವೇಶನದಲ್ಲಿ ನಾವು ಸರ್ಕಾರದ ವಿರುದ್ಧ ಕಪ್ಪು ಬಾವುಟ ತೋರಿಸಲೇಬೇಕು” ಎಂದು ಎಚ್ಚರಿಕೆ ನೀಡಿದರು.