ಪರಿಶಿಷ್ಟ ಪಂಗಡದ ಅವೈಜ್ಞಾನಿಕ ಒಳಮೀಸಲಾತಿಯನ್ನು ರದ್ದು ಪಡಿಸಬೇಕು. ಇಲ್ಲವೇ ನಮ್ಮ ಬಂಜಾರ, ಭೋವಿ, ಕೊರಚ, ಕೊರಮ ಸಮಾಜಗಳಿಗೆ ಶೇ.6ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಗೋರ್ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಆಗ್ರಹಿಸಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಗೃಹ ಸಚಿವ ಡಾ. ಜಿ.ಪರಮೇಶ್ವರ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಸಮಸ್ತ ಬಂಜಾರ, ಭೋವಿ, ಕೊರಚ, ಕೊರಮ ಸಮಾಜದ ಸರ್ವ ನಾಗರಿಕರು ತಮ್ಮ ಸರ್ಕಾರ ಪರಿಶಿಷ್ಟ ಪಂಗಡದಲ್ಲಿ ಒಳಮೀಸಲಾತಿ ಮಾಡುತ್ತಿರುವುದು ಸರಿಯಷ್ಟೆ. ಆದರೆ ಇದನ್ನು ಮಾಡುವಾಗ ನ್ಯಾ.ನಾಗಮೋಹನ ದಾಸ್ ವರದಿ ತಯಾರಿಸಲು ಜಾತಿ ಗಣತಿ ಕಾರ್ಯವನ್ನು ಮಾಡಿರುತ್ತೀರಿ. ಇದು ಸಮರ್ಪಕವಾಗಿ, ವೈಜ್ಞಾನಿಕವಾಗಿ ನ್ಯಾಯವಾಗಿ ನಡೆದಿರುವದಿಲ್ಲ. ನಮ್ಮ ಜನಾಂಗದವರು ಅನಕ್ಷರಸ್ಥರು. ಮುಗ್ಧರು ಇರುವುದರಿಂದ ಹಾಗೂ ನಮ್ಮ ಹತ್ತಿರ ಸರಿಯಾದ ದಾಖಲೆಗಳು ಇಲ್ಲದಿರುವುದರಿಂದ ನಮ್ಮ ಜನಾಂಗಗಳ ನೋಂದಣಿ ಸರಿಯಾಗಿ ಆಗಿಲ್ಲ” ಎಂದು ಆರೋಪಿಸಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ | ರಾಷ್ಟ್ರದ ತೈಲ ಸುರಕ್ಷತೆಗೆ ತಾಳೆ ಕೃಷಿಯ ಬಲ: ರೈತ ಸದಾನಂದ ಕರಾಡೆಯ ಯಶೋಗಾಥೆ
ಜಾತಿ ಗಣತಿ ಸಂದರ್ಭದಲ್ಲಿ ಕೆಲವೊಂದಿಷ್ಟು ಜನ ಹೊಟ್ಟೆಪಾಡಿಗಾಗಿ ದುಡಿಯಲು ಗುಳೆ ಹೋಗಿರುವುದರಿಂದ ಈ ಜಾತಿಗಣತಿಯಿಂದ ಹೊರಗುಳಿದಿದ್ದಾರೆ. ಆದ ಕಾರಣ ಈ ಒಳಮೀಸಲಾತಿಯನ್ನು ಇಲ್ಲಿಗೆ ಬಿಡುವುದು ಸೂಕ್ತವೆಂದು ನಮ್ಮ ಅಭಿಪ್ರಾಯ. ಹಾಗೊಂದು ವೇಳೆ ಮಾಡಲೇಬೇಕೆಂಬ ಇಚ್ಛೆ ನಿಮಗಿದ್ದರೆ ಒಳಮೀಸಲಾತಿಯಲ್ಲಿ ನಮ್ಮ ಈ ನಾಲ್ಕು ಸಮಾಜಗಳಿಗೆ ಶೇ.6ರಷ್ಟು ಮೀಸಲಾತಿ ನೀಡಿದರೆ ನಮಗೆ ಅನುಕೂಲವಾಗುತ್ತದೆ. ಸಾಮಾಜಿಕ ನ್ಯಾಯದ ಅಡಿಯಲ್ಲಿ ನಮಗೆ ಉಪಕಾರ ಮಾಡುತ್ತೀರೆಂದು ತಮ್ಮಲ್ಲಿ ಕಳಕಳಿಯ ವಿನಂತಿ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಮೇಘರಾಜ ಬಳಿಗೇರಿ, ಯಮನೂರಪ್ಪ ಕಟ್ಟಿಮನಿ, ಪ್ರಕಾಶ ಬಳಿಗೇರಿ, ಹನಮಂತ ಚವ್ಹಾಣ, ಪ್ರಾಣೇಶ ನಾಯಕ, ರಾಘವೇಂದ್ರ ಬಳಗೇರಿ, ಲಿಂಬಣ್ಣ ನಾಯಕ, ಚೇತನ ಬಳಿಗೇರಿ, ದಿಲೀಪ ಕಾರಭಾರಿ ಹಾಗೂ ಸಮಾಜದ ಮುಖಂಡರು ಇದ್ದರು.