ರಾಯಭಾರ | ಬಿಜೆಪಿ ಏಕೆ ಸಂವಿಧಾನದ ಬಗ್ಗೆ ಮಾತನಾಡಬಾರದು?

Date:

Advertisements

ಬಿಜೆಪಿ ಸಂವಿಧಾನದ ಹೆಸರಿನಲ್ಲಿ ನಡೆಸಿರುವ ಈ ಕುಚೇಷ್ಟೆ ಕಳ್ಳನೇ ಪೊಲೀಸರಿಗೆ ತಿರುಗಿಸಿ ಬಯ್ಯಲು ಹೋದಂತಿದೆ. ಸಂವಿಧಾನವನ್ನು ಮುಂದಿರಿಸಿಕೊಂಡು ತನ್ನ ಬಾಯಿ ಮುಚ್ಚಿಸಲು ಯತ್ನಿಸುವ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ನಡೆಗೆ ಧಿಮಾಕಿನ ಉತ್ತರ ಕೊಡುವ ಪ್ರಯತ್ನವಾಗಿ ಬಿಜೆಪಿ “ಸಂವಿಧಾನ ಹತ್ಯಾ ದಿವಸ”ದ ಹೆಸರಿನಲ್ಲಿ ನಾಟಕವಾಡುತ್ತಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರತಿ ವರ್ಷ ಜೂನ್‌ 25ನೇ ತಾರೀಖನ್ನು “ಸಂವಿಧಾನ ಹತ್ಯಾ ದಿವಸ” ಎಂದು ಆಚರಿಸಲು ಮುಂದಾಗಿದೆ. ಈ ಸಂಬಂಧ 2024ರಲ್ಲಿಯೇ ಗೆಜೆಟ್‌ ನೋಟಿಫಿಕೇಷನ್‌ಅನ್ನು ಕೇಂದ್ರ ಸರ್ಕಾರ ಹೊರಡಿಸಿತ್ತು. ಈ ಬಾರಿ, ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇನ್ನಷ್ಟು ವ್ಯಾಪಕ ಪ್ರಚಾರದೊಂದಿಗೆ ಈ ದಿನಾಚರಣೆಯನ್ನು ದೇಶಾದ್ಯಂತ ಸಂಘಟಿಸಲು ಬಿಜೆಪಿ ಮುಂದಾಗಿದೆ.

ಬಿಜೆಪಿ ಸಂವಿಧಾನದ ಹೆಸರಿನಲ್ಲಿ ನಡೆಸಿರುವ ಈ ಕುಚೇಷ್ಟೆ ಕಳ್ಳನೇ ಪೊಲೀಸರಿಗೆ ತಿರುಗಿಸಿ ಬಯ್ಯಲು ಹೋದಂತಿದೆ. ಸಂವಿಧಾನವನ್ನು ಮುಂದಿರಿಸಿಕೊಂಡು ತನ್ನ ಬಾಯಿ ಮುಚ್ಚಿಸಲು ಯತ್ನಿಸುವ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ನಡೆಗೆ ಧಿಮಾಕಿನ ಉತ್ತರ ಕೊಡುವ ಪ್ರಯತ್ನವಾಗಿ ಬಿಜೆಪಿ “ಸಂವಿಧಾನ ಹತ್ಯಾ ದಿವಸ”ದ ಹೆಸರಿನಲ್ಲಿ ನಾಟಕವಾಡುತ್ತಿದೆ.

Advertisements

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ, ನ್ಯಾಯಾಲಯದಲ್ಲಿ ತಮಗಾದ ಹಿನ್ನೆಡೆಯಿಂದಾಗಿ ಪ್ರಧಾನಮಂತ್ರಿ ಹುದ್ದೆಯಲ್ಲಿ ಶತಾಯಗತಾಯ ಉಳಿಯುವ ಸಲುವಾಗಿ ಇರಿಸಿದ ತಪ್ಪು ಹೆಜ್ಜೆ ತುರ್ತು ಪರಿಸ್ಥಿತಿಗೆ ಕಾರಣವಾಯಿತು. ತಮ್ಮ ಅಪ್ತ ಗಡಣದ ಕೈಗೆ ಸಿಲುಕಿದ ಇಂದಿರಾ, ತಾವು ಏನು ಮಾಡಿದರೂ ದೇಶದ ಬಹುಪಾಲು ಜನತೆ ತಮ್ಮನ್ನು ನಿರಾಯಾಸವಾಗಿ ಬೆಂಬಲಿಸುತ್ತಾರೆ ಎನ್ನುವ ಭ್ರಮೆಯಲ್ಲಿ ತುರ್ತು ಪರಿಸ್ಥಿತಿ ಹೇರುವ ನಿರ್ಧಾರ ಕೈಗೊಂಡರು.

ಇಂದಿರಾ ಗಾಂಧಿಯವರ ವಿರುದ್ಧ 1971ರ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದ ರಾಜ್‌‌ ನಾರಾಯಣ್‌ ಅವರು ಹೂಡಿದ್ದ ಚುನಾವಣಾ ತಕರಾರು ಅರ್ಜಿಯ ವಿಚಾರಣೆ ನಡೆಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಇಂದಿರಾ ಅವರ ಮೇಲೆ ಮಾಡಲಾದ ಆರೋಪಗಳನ್ನು ಎತ್ತಿ ಹಿಡಿದಿತ್ತು. ಇಂದಿರಾ ಅವರು ತಮ್ಮ ಪ್ರಧಾನಿ ಹುದ್ದೆಯ ಅಧಿಕಾರದ ದುರ್ಬಳಕೆಯನ್ನು ಮಾಡಿಕೊಂಡು ಸರ್ಕಾರಿ ಯಂತ್ರವನ್ನು ತಮ್ಮ ಚುನಾವಣಾ ಕಾರ್ಯಕ್ರಮಗಳ ಆಯೋಜನೆಗೆ ದುಡಿಸಿಕೊಂಡಿದ್ದರು ಎನ್ನುವ ಆರೋಪ ಸಾಧಾರವೆಂದು ಹೇಳಿತು. ಈ ಹಿನ್ನೆಲೆಯಲ್ಲಿ ಇಂದಿರಾ ಅವರ ಚುನಾವಣಾ ಫಲಿತಾಂಶವನ್ನು ಅಸಿಂಧುಗೊಳಿಸಿತು. ಅಲ್ಲದೆ, ಅವರು ಚುನಾವಣಾ ಅಕ್ರಮಗಳ ಕಾರಣಕ್ಕಾಗಿ ಮುಂದಿನ ಆರು ವರ್ಷಗಳ ಕಾಲ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂದು ನಿಷೇಧ ಹೇರಿತು.

samvidhan hatya diwas 750x394 1

ಅಲಾಹಾಬಾದ್‌ ಹೈಕೋರ್ಟ್‌ನ ಈ ತೀರ್ಪನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿಯಿತು. ಅದಾಗಲೇ ಸುಮಾರು ಒಂದು ವರ್ಷಗಳಿಂದ ಇಂದಿರಾ ಗಾಂಧಿಯವರ ಆಡಳಿತದ ವಿರುದ್ಧ ಜಯಪ್ರಕಾಶ್‌ ನಾರಾಯಣ್‌ ಅವರ ನೇತೃತ್ವದಲ್ಲಿ ಬಿಹಾರದಲ್ಲಿ ಆರಂಭಗೊಂದು ದೇಶಾದ್ಯಂತ ನಿಧಾನಕ್ಕೆ ಪಸರಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು, ಕಾರ್ಮಿಕ ಸಂಘಟನೆಗಳನ್ನೇ ಪ್ರಧಾನವಾಗಿ ಒಳಗೊಂಡಿದ್ದ “ಸಂಪೂರ್ಣ ಕ್ರಾಂತಿ” ಚಳವಳಿಗೆ ಇಂದಿರಾ ವಿರುದ್ಧದ ತೀರ್ಪು ಪ್ರಬಲ ಅಸ್ತ್ರವಾಗಿ ದೊರೆಯಿತು. ಇಂದಿರಾ ಅವರ ಲೋಕಸಭಾ ಸದಸ್ಯತ್ವವನ್ನು ರದ್ದುಗೊಳಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ನ ತೀರ್ಪನ್ನು ಯಾವಾಗ ಸುಪ್ರೀಂ ಕೋರ್ಟ್‌ ಸಹ ಎತ್ತಿ ಹಿಡಿಯಿತೋ ಆಗ ಜೆಪಿಯವರು ದೆಹಲಿಯ ಬೃಹತ್‌ ರ್ಯಾಲಿಯಲ್ಲಿ ಇಂದಿರಾ ವಿರುದ್ಧ ಗುಡುಗಿದರು. ದೇಶದ ಅಧಿಕಾರಿ ವರ್ಗ, ಪೊಲೀಸರು, ಮಿಲಿಟರಿ ಸರ್ಕಾರದ ಅನೈತಿಕ ಆದೇಶಗಳನ್ನು ಧಿಕ್ಕರಿಸಬೇಕು ಎಂದು ಕರೆಕೊಟ್ಟರು.

ಹೀಗೆ ಸರ್ಕಾರದ ಆದೇಶವನ್ನು ಧಿಕ್ಕರಿಸುವಂತೆ ಅಧಿಕಾರಿಗಳಿಗೆ ಕರೆ ನೀಡುವುದು ದೇಶವಿರೋಧಿ ಚಟುವಟಿಕೆ ಎಂದು ವ್ಯಾಖ್ಯಾನಿಸಿದ ಇಂದಿರಾ ಬಣ, ದೇಶದಲ್ಲಿ ಅರಾಜಕತೆಗೆ ಪ್ರೇರಣೆ ನೀಡುವ ಶಕ್ತಿಗಳನ್ನು ತಹಬದಿಗೆ ತರುವ ಸಲುವಾಗಿ ತುರ್ತು ಪರಿಸ್ಥಿತಿ ಘೋಷಿಸುವಂತೆ ಅಂದಿನ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿ ಅವರನ್ನು ಕೋರಲು ಇಂದಿರಾ ಅವರನ್ನು ಪ್ರೇರೇಪಿಸಿತು. ತೀರ್ಪಿನ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡುವ ಸಲುವಾಗಿ ಸರ್ವೋಚ್ಚ ನ್ಯಾಯಾಲಯವು ಕೇವಲ ಹಂಗಾಮಿ/ಪ್ರಭಾರಿಯಾಗಿ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಸಿದ್ದ ಇಂದಿರಾ ಅವರು ತುರ್ತು ಪರಿಸ್ಥಿತಿಯನ್ನು ಘೋಷಿಸುವಂತೆ ರಾಷ್ಟ್ರಪತಿ ಫಕ್ರುದ್ದೀನ್‌ ಅಲಿಯವರನ್ನು ಕೋರಿದರು. ಅದಕ್ಕೆ ಕಾನೂನಿನ ಬಲವಿಲ್ಲ ಎನ್ನುವುದನ್ನೂ ಉಪೇಕ್ಷಿಸಿ ರಾಷ್ಟ್ರಪತಿ ಅವರು ತುರ್ತು ಪರಿಸ್ಥಿತಿ ಘೋಷಿಸಿಬಿಟ್ಟರು. ನಂತರದ್ದೆಲ್ಲವೂ ಇತಿಹಾಸ. ಇಂದಿರಾ ಅವರಿಗೆ ತಮ್ಮ ತಪ್ಪಿನ ಅರಿವಾಗುವುದರೊಳಗೆ ಅವರು ಸರ್ವಾಧಿಕಾರಿಯಾಗಿ ಬಹುದೂರ ಸಾಗಿಯಾಗಿತ್ತು.

ತುರ್ತು ಪರಿಸ್ಥಿತಿಯ ಭರಪೂರ ರಾಜಕೀಯ ಲಾಭ ಪಡೆದವರೆಂದರೆ ಅದು ಗಾಂಧಿ ಹತ್ಯೆಯ ಪಾತಕದ ನೆತ್ತರನ್ನು ತನಗೆ ಅಂಟಿಸಿಕೊಂಡು ಮುಖೇಡಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಜೆಪಿಯವರ ಬೆನ್ನಿಗೆ ಆತುಕೊಂಡು ಮೆಲ್ಲಗೆ ಮುಖ್ಯವಾಹಿನಿಗೆ ನುಸುಳುವಲ್ಲಿ ಆರ್‌ಎಸ್‌ಎಸ್‌ ಯಶಸ್ವಿಯಾಯಿತು. ತನಗೆ ಅಂಟಿದ್ದ ಕಳಂಕವನ್ನು ದೇಶದಲ್ಲಿ ಹಬ್ಬಿದ್ದ “ಸಂಪೂರ್ಣ ಕ್ರಾಂತಿಯ” ಆವೇಶದಲ್ಲಿ ಮೆಲ್ಲಗೆ ವಿಸ್ಮೃತಿಗೆ ಸರಿಸುವಲ್ಲಿಯೂ ಭಾಗಶಃ ಯಶಸ್ಸು ಕಂಡಿತು. ವಿಪರ್ಯಾಸವೆಂದರೆ, ಇದೇ ಆರ್‌ಎಸ್‌ಎಸ್‌ನ ಮತ್ತೊಂದು  ಬಣದ ನಾಯಕರು ಇಂದಿರೆಯವರ ಕ್ಷಮೆಯನ್ನು ಕೇಳಿ ತಮ್ಮನ್ನು ಬಂಧ ವಿಮುಕ್ತಗೊಳಿಸುವಂತೆ ಬೇಡಲು ಮುಂದಾದ ಪ್ರಸಂಗವೂ ನಡೆಯಿತು.

ಬಾಳಾಸಾಹೇಬ್ ದಿಯೋರಸ್
ಬಾಳಾಸಾಹೇಬ್‌‌ ದಿಯೋರಸ್‌

ಬಹುಮುಖ್ಯವಾಗಿ ಆರ್‌ಎಸ್‌ಎಸ್‌‌‌ ಮುಖಂಡ ಬಾಳಾಸಾಹೇಬ್‌‌ ದಿಯೋರಸ್‌ ಹಾಗೂ ಜನಸಂಘದ ಪ್ರಮುಖ ನೇತಾರರಾಗಿ ಅದಾಗಲೇ ಹೊರಹೊಮ್ಮಿದ್ದ, ಬಂಗಾಳದ ವಿಮೋಚನೆಯ ನಂತರ ಇಂದಿರಾ ಗಾಂಧಿಯವರನ್ನು ದುರ್ಗೆಯೆಂದು ಬಹಿರಂಗವಾಗಿ ಕರೆದು ಅವರೊಂದಿಗೆ ಐಕ್ಯಮತವಿದೆ ಎಂದು ಸಾರಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ತಮಗೆ ಇಂದಿರಾ ಅವರ ನಡೆಗಳ ವಿರುದ್ಧ ತಕರಾರಿಲ್ಲವೆನ್ನುವ ಸಂದೇಶಗಳನ್ನು ರವಾನಿಸಿದ್ದರು. ಆರೋಗ್ಯ ಹದಗೆಟ್ಟಿದ್ದ ವಾಜಪೇಯಿ ಇಂದಿರೆಯವರ ಕೃಪಾಕಟಾಕ್ಷದಿಂದ ಪೆರೋಲ್‌ ಮೇಲೆ ಗೃಹಬಂಧನದಲ್ಲಿ ಉಳಿದಿದ್ದರೂ ಕೂಡ. ಅಷ್ಟೇ ಅಲ್ಲ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದ ವೇಳೆ ಜೈಲಿನಲ್ಲಿ ಬಂಧಿಯಾಗಿದ್ದ ಸುಮಾರು 30 ಪ್ರಮುಖ ಆರ್‌ಎಸ್‌ಎಸ್‌‌ ನಾಯಕರು ಒಂದೊಮ್ಮೆ ಜೈಲಿನಲ್ಲಿರುವ ಎಲ್ಲಾ ಆರ್‌ಎಸ್‌ಎಸ್‌‌ ಬಂಧಿಗಳನ್ನು ಬಿಡುಗಡೆ ಮಾಡಿದರೆ ತಾವು ಇಂದಿರೆಯವರ ಕಾರ್ಯಕ್ರಮಗಳನ್ನು ಒಪ್ಪಿಕೊಂಡು, ತುರ್ತುಪರಿಸ್ಥಿತಿಯನ್ನು ಬೆಂಬಲಿಸುವುದಾಗಿ ತಿಳಿಸಿ ಶರಣಾಗತಿ ಪತ್ರವನ್ನೂ ಬರೆದಿದ್ದರು.

ಹೀಗೆ, ಇತಿಹಾಸದುದ್ದಕ್ಕೂ ಸದಾಕಾಲ ತಮಗೆ ತಾವೇ ಢಿಕ್ಕಿ ಹೊಡೆದುಕೊಳ್ಳುತ್ತಾ ಬಂದಿರುವ ಆರ್‌ಎಸ್‌ಎಸ್‌‌ ಹಾಗೂ ಅದರ ರಾಜಕೀಯ ಅಂಗವಾದ ಬಿಜೆಪಿಯ ನಾಯಕರು ಇಂದಿರೆಯನ್ನು ಗುಪ್ತವಾಗಿ ಆರಾಧಿಸುತ್ತಲೂ, ಬಹಿರಂಗವಾಗಿ ತುರ್ತುಪರಿಸ್ಥಿತಿಯನ್ನು ವಿರೋಧಿಸುತ್ತಲೂ ತಮಗೆ ತಾವೇ ವೈರುಧ್ಯಗಳಲ್ಲಿ ಮುಳುಗಿರುತ್ತಾರೆ. ಜೆಪಿಯ ಸಂಗಡ ನಿಂತು ಪೊಲೀಸರ ಲಾಠಿಯೇಟು ಭರಪೂರ ಉಂಡ ನಾನಾಜಿ ದೇಶ್‌ಮುಖ್‌ ಅವರಂತವರದ್ದು ಒಂದು ಪಡೆಯಾದರೆ‌, ಇಂದಿರೆಯನ್ನು ದುರ್ಗೆಯೆಂದು ಒಪ್ಪಿಕೊಂಡವರು, ಸಂಜಯನ ಬ್ರಿಗೇಡಿಗೆ ಕಾಲಾಳುಗಳಾಗೋಣವೆಂದು ಹೊರಟವರು ಇನ್ನೊಂದೆಡೆ…

ಚರಿತ್ರೆಯನ್ನು ದಿಟ್ಟಿಸಿದರೆ ಆರ್‌ಎಸ್‌ಎಸ್‌ ಹಾಗೂ ಬಿಜೆಪಿ/ಜನಸಂಘದ ಅನೇಕ ನಾಯಕರಿಗೆ ಕಾಂಗ್ರೆಸ್‌ ಜೊತೆಗೆ ಪ್ರೀತಿ-ದ್ವೇಷದ ಸಂಬಂಧ ಇರುವುದು ಕಂಡು ಬರುತ್ತದೆ. ಕಾಂಗ್ರೆಸ್‌ನ ಅನೇಕ ಹಿರಿಯ ನಾಯಕರಿಗೂ ಸಹ ಆರ್‌ಎಸ್‌ಎಸ್‌‌ ಜೊತೆಗೆ ಇದೇ ರೀತಿಯ ಭಾವನೆ ಇದ್ದದ್ದು ಸುಳ್ಳಲ್ಲ. ಗಾಂಧಿ ಹತ್ಯೆಯ ನಂತರ ಆರ್‌ಎಸ್‌ಎಸ್‌ ನಿಷೇಧಿಸಿದ್ದ ಅಂದಿನ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರೇ, ಮುಂದೆ ಕೆಲವೇ ತಿಂಗಳಲ್ಲಿ ಆರ್‌ಎಸ್‌ಎಸ್‌‌ ಕಾಂಗ್ರೆಸ್‌ನೊಳಗೆ ವಿಲೀನಗೊಂಡು, ತನ್ನ ದೇಶಪ್ರೇಮದ ಕೆಲಸವನ್ನು ಮುಂದುವರೆಸಿಕೊಂಡು ಹೋಗುವಂತೆ ಎಂ ಎಸ್‌ ಗೋಳ್ವಾಲ್ಕರ್‌ ಅವರಿಗೆ ಬರೆದ ಪತ್ರವೊಂದರಲ್ಲಿ ಸಲಹೆ ನೀಡಿರುತ್ತಾರೆ. ಆದರೆ, ಅಂದಿನ ಪ್ರಧಾನಿ  ಜವಾಹರಲಾಲ್ ನೆಹರೂ ಅವರಿಗೆ ಕಾಂಗ್ರೆಸ್‌ನ ಸಿದ್ಧಾಂತದ ಬಗ್ಗೆ ಇದ್ದ ಖಚಿತತೆ, ಆರ್‌ಎಸ್‌ಎಸ್‌‌ ಬಗ್ಗೆ ಇದ್ದ ದಟ್ಟ ಅನುಮಾನಗಳು ಇಂತಹ ಪ್ರಯತ್ನಗಳನ್ನು ನಿಷ್ಫಲಗೊಳಿಸುತ್ತವೆ. ಇದೇ ಅನುಮಾನವನ್ನು ಇಂದಿರಾ ಗಾಂಧಿಯವರು ಸಹ ಆರ್‌ಎಸ್‌ಎಸ್‌ ನೊಂದಿಗೆ ಹೊಂದಿದ್ದರು.

images 23

ಇಂದಿರಾರ ಮೊಮ್ಮಗ ರಾಹುಲ್‌ ಗಾಂಧಿಯಲ್ಲಿಯೂ ಆರ್‌ಎಸ್‌ಎಸ್‌‌ ಬಗ್ಗೆ ತನ್ನ ಮುತ್ತಾತ ನೆಹರೂ ಹೊಂದಿದ್ದ ಖಚಿತತೆ ಕಾಣುತ್ತಿದೆ. ರಾಹುಲ್‌ ಗಾಂಧಿಯವರ ಚಿಂತನಾಕ್ರಮದಲ್ಲಿ ನೆಹರೂ, ಅಂಬೇಡ್ಕರ್‌ ಇಬ್ಬರೂ ಜೊತೆಜೊತೆಯಾಗಿ ಸಾಗುತ್ತಿದ್ದಾರೆ. ರಾಹುಲ್ ಗಾಂಧಿಯನ್ನು ಹುಡುಗಾಟಿಕೆಯ ಹುಡುಗನೆಂದೂ, ದಡ್ಡನೆಂದೂ, ಹವ್ಯಾಸಿ ರಾಜಕಾರಣಿ ಎಂದೂ ಸದಾಕಾಲ ಟೀಕಿಸುತ್ತಿದ್ದವರು ಆತ ಸಂವಿಧಾನವನ್ನು ಭಾರತದ ರಾಜಕಾರಣದ ಚರ್ಚೆಯ ಕೇಂದ್ರಕ್ಕೆ ತಂದಿರುವುದನ್ನು ಬೇಕೆಂದೇ ಉಪೇಕ್ಷಿಸುತ್ತಾರೆ.

ಬಹುಶಃ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಇಂದು ಮೋದಿಯವರ ನಂತರದ ಪ್ರಭಾವಿ ಸ್ಥಾನದಲ್ಲಿ ಯಾರಾದರೂ ಇದ್ದರೆ ಅದು ರಾಹುಲ್‌ ಗಾಂಧಿ ಎನ್ನಬೇಕು! ಕಾರಣ ಸ್ಪಷ್ಟ, ರಾಹುಲ್‌ ದೊಡ್ಡ ಮಟ್ಟದ ಚುನಾವಣಾ ಯಶಸ್ಸುಗಳನ್ನು ಗಳಿಸಿಲ್ಲವಾದರೂ, ಬಹುಶಃ ಅವರುಷ್ಟು ಸಲೀಸಾಗಿ ಬಿಜೆಪಿಯು ತನ್ನ ನಿಲುವುಗಳನ್ನು ಸದಾಕಾಲ ಬದಲಿಸುವಂತೆ ಮಾಡಬಲ್ಲ ಇನ್ನೊಬ್ಬ ನಾಯಕ ಸದ್ಯದ ಮಟ್ಟಿಗೆ ಭಾರತದಲ್ಲಿಲ್ಲ. ರಾಹುಲ್‌ ಎತ್ತಿದ ಯಾವೆಲ್ಲಾ ವಿಷಯಗಳ ಬಗ್ಗೆ ಮೊದಲು ಬಿಜೆಪಿ ತಕರಾರು ತೆಗೆದು ಬಳಿಕ ಅದನ್ನು ಒಪ್ಪಿಕೊಂಡು ಯುಟರ್ನ್‌ ಹೊಡೆಯುತ್ತದೆ ಎನ್ನುವ ಬಗ್ಗೆ ಕಾಂಗ್ರೆಸ್‌ನ ವಕ್ತಾರರು‌ ದೊಡ್ಡದೊಂದು ಪಟ್ಟಿಯನ್ನು ನೀಡುತ್ತಿರುತ್ತಾರೆ. ಅದೇನೇ ಇರಲಿ, ರಾಹುಲ್‌ ಸಂವಿಧಾನದ ಬಗ್ಗೆ ಸ್ಪಷ್ಟವಾಗಿ, ಗಟ್ಟಿಯಾಗಿ, ದಿಟ್ಟವಾಗಿ ಮಾತನಾಡತೊಡಗಿದ ಮೇಲೆ, ಬಿಜೆಪಿ ತಾನೂ ಸಂವಿಧಾನಕ್ಕೆ ತಲೆಬಾಗತೊಡಗಿತು ಎನ್ನುವುದು ಸುಳ್ಳಲ್ಲ! ಸಂವಿಧಾನ ಹಾಗೂ ಬಿಜೆಪಿ ಎರಡೂ ವಿರುದ್ಧ ಧ್ರುವಗಳು ಎಂದು ರಾಹುಲ್‌ ಅವರು ವಿಶೇಷವಾಗಿ ದೇಶದ ಹಿಂದುಳಿದ, ದಮನಿತ ವರ್ಗಗಳಲ್ಲಿ ಮೂಡಿಸಿದ ಜಾಗೃತಿ ಚುನಾವಣೆಗಳ ಮೇಲೆ ಏನು ಪರಿಣಾಮ ಬೀರಬಲ್ಲದು ಎನ್ನುವುದನ್ನು ಬಿಜೆಪಿ ತ್ವರಿತವಾಗಿ ಅರಿಯತೊಡಗಿತು. ಅಷ್ಟೇ ವೇಗವಾಗಿ, ತಾನು ಸಹ ಸಂವಿಧಾನವನ್ನು ಹಣೆಗೊತ್ತಿಕೊಳ್ಳುವ ನಾಟಕವಾಡಿತು. ಸಂವಿಧಾನವನ್ನು ಬದಲಾಯಿಸುವ ತನ್ನವರ ಖಾಯಿಲೆಯ ಹಾಗೂ ಖಯಾಲಿಯ ಮಾತುಗಳಿಂದ ಹೊರನೋಟಕ್ಕಾದರೂ ಅಂತರ ಕಾಯ್ದುಕೊಳ್ಳತೊಡಗಿತು. ಈ ವಿಚಾರದಲ್ಲಿ ಬಿಜೆಪಿ ಇಷ್ಟಕ್ಕೇ ಸೀಮಿತಗೊಂಡಿದ್ದರೆ ಉತ್ತಮವಿರುತ್ತಿತ್ತೇನೋ. ಆದರೆ, ಅದು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಇದೀಗ ಕಾಂಗ್ರೆಸ್‌ ಹಾಗೂ ಸಂವಿಧಾನ ಈ ಎರಡೂ ವಿರುದ್ಧಾರ್ಥಕ ಶಬ್ದಗಳು ಎಂದು ಧ್ವನಿಸಲು ಬಿಜೆಪಿ  “ಸಂವಿಧಾನ ಹತ್ಯಾ ದಿವಸ”ದ ನಾಟಕಕ್ಕೆ ಮುಂದಾಗಿದೆ. ಅಸಲಿಗೆ, ಇದರಿಂದ ತನಗೆ ಏನಾದರೂ ಲಾಭವಾಗಲಿದೆಯೇ ಎನ್ನುವ ಬಗ್ಗೆ ಬಿಜೆಪಿ ನಾಯಕರು ಯೋಚಿಸಿದಂತೆ ತೋರುತ್ತಿಲ್ಲ.

ANI 20240422201 0 1713853432900 1713853458225

ಸಂವಿಧಾನದ ಬಗ್ಗೆ ಬಿಜೆಪಿ ಹೆಚ್ಚೆಚ್ಚು ಚರ್ಚಿಸತೊಡಗಿದಂತೆಲ್ಲಾ, ಅದು ಪರೋಕ್ಷವಾಗಿ ಸಂವಿಧಾನದ ಆಶಯಗಳೆಡೆಗೆ ಜನರ ಗಮನವನ್ನು, ವಿಶೇಷವಾಗಿ ಯುವಪೀಳಿಗೆಯ ಗಮನವನ್ನು ಸೆಳೆಯತೊಡಗುತ್ತದೆ. ಬಹುಮುಖ್ಯವಾಗಿ, ಸಮಾನತೆ, ಭ್ರಾತೃತ್ವ, ಧಾರ್ಮಿಕ ಸಾಮರಸ್ಯ, ಬಹುತ್ವ ಮುಂತಾದ ಸಾಂವಿಧಾನಿಕ ಆಶಯಗಳ ಬಗ್ಗೆ ಯುವಪೀಳಿಗೆ ತಿಳಿದುಕೊಳ್ಳಲು ಪ್ರೇರೇಪಿಸತೊಡಗುತ್ತದೆ. ಅಷ್ಟೇ ಅಲ್ಲ, ಅಂದು ಇಂದಿರಾ ಅವರು ಇರಿಸಿದ ಹೆಜ್ಜೆ ಘೋಷಿತ ಸರ್ವಾಧಿಕಾರವಾದರೆ ಇಂದು ದೇಶದಲ್ಲಿರುವುದು ಅಘೋಷಿತ ಸರ್ವಾಧಿಕಾರ ಎನ್ನುವುದನ್ನು ಜನತೆ ಅರಿಯಲು ಅವಕಾಶ ಕಲ್ಪಿಸಿಕೊಡುತ್ತದೆ. ಈ ಚರ್ಚೆ, ಸಂವಿಧಾನದ ಆಶಯಗಳನ್ನು, ಸಾಂವಿಧಾನಿಕ ಸಂಸ್ಥೆಗಳ ಸ್ವರೂಪವನ್ನು ಹೇಗೆ ಕೇಂದ್ರ ಸರ್ಕಾರವು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ತಿರುಚಿದೆ ಎನ್ನುವುದನ್ನು ಜನತೆ ಮನಗಾಣಲು ಅವಕಾಶ ಮಾಡಿಕೊಡುತ್ತದೆ.

ಮುಂದುವರೆದು, ದೇಶದ ವೈವಿಧ್ಯತೆಯ ಜಾಗದಲ್ಲಿ ಏಕರೂಪತೆಯನ್ನೂ, ವಿಕೇಂದ್ರೀಕರಣದ ಜಾಗದಲ್ಲಿ ಅಧಿಕಾರದ ಕೇಂದ್ರೀಕರಣವನ್ನೂ, ಚರ್ಚೆ, ಅಭಿಪ್ರಾಯಭೇದಗಳ ಜಾಗದಲ್ಲಿ ಹೇರಿಕೆ, ಒತ್ತಾಯಗಳನ್ನು ತಂದಿದೆ ಎನ್ನುವುದು ಬಹಿರಂಗಗೊಳ್ಳುತ್ತದೆ. ಈ ದೇಶದ ಸಾಮರಸ್ಯದ ಹೆಣಿಗೆಗಳನ್ನು ಕತ್ತರಿಸುವ ಶಕ್ತಿಗಳಿಗೆ ಹೇಗೆ ಕುಮ್ಮಕ್ಕು ನೀಡುತ್ತಿದೆ, ನ್ಯಾಯಾಂಗವನ್ನು ಗೌಣವಾಗಿಸಲು ಶ್ರಮಿಸುತ್ತಾ ಆ ಜಾಗದಲ್ಲಿ ತನ್ನ ಆಜ್ಞಾವರ್ತಿಯಾದ ಕಾರ್ಯಾಂಗ, ತನಿಖಾ ಸಂಸ್ಥೆಗಳನ್ನು ತರಲು ಹವಣಿಸುತ್ತಿದೆ ಎನ್ನುವುದು ತಿಳಿಯುತ್ತದೆ. ಮಾಧ್ಯಮಗಳನ್ನು ತನ್ನ ತೆಕ್ಕೆಯಲ್ಲಿ ಪಳಗಿಸಿ ಇರಿಸಿಕೊಂಡಿರುವುದು, ಸ್ವತಂತ್ರ ದನಿಗಳನ್ನು ಬೆದರಿಸಿ, ಕಳಂಕಿತಗೊಳಿಸಿ ಹತ್ತಿಕ್ಕುತ್ತಿರುವುದು ಗೋಚರಿಸುತ್ತದೆ. ದೇಶವನ್ನು ಬೆರಳೆಣಿಕೆಯ ಉದ್ಯಮಿಗಳಿಗೆ ಅಡವಿರಿಸಿರುವುದು ದೃಗ್ಗೋಚರವಾಗುತ್ತದೆ. ವಾಸ್ತವಾಂಶಗಳ ಆಧಾರದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ತುಲನೆ ನಡೆಯುತ್ತದೆ. ವ್ಯಾಪಕ ಸೈದ್ಧಾಂತಿಕ ಚರ್ಚೆಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಸಂವಿಧಾನದ ಬಗ್ಗೆ ಬಿಜೆಪಿ ಹೆಚ್ಚೆಚ್ಚು ಮಾತನಾಡಿದಷ್ಟೂ ಅದು ತನ್ನ ನೈಜ ಬಣ್ಣವನ್ನು ಹೊರಹಾಕತೊಡಗುತ್ತದೆ.

ಇದನ್ನೂ ಓದಿ ವಿಷಮ ಭಾರತ | ಶೂದ್ರ-ದಲಿತರ ಬಿಡುಗಡೆಯ ಭಾಷೆ ಇಂಗ್ಲಿಷು- ಕಲಿತರೆ ತಲೆ ತಗ್ಗಿಸಬೇಕಿಲ್ಲ!

ಮೇಲೆ ತಿಳಿಸಿದ ಎಲ್ಲಾ ವಿಚಾರಗಳು ಪಾರಂಪರಿಕವಾಗಿ ಬಿಜೆಪಿಯು ಹೆಣೆದುಕೊಂಡು ಬಂದಿರುವ ಕೋಮುವಾದ, ಹಿಂದುತ್ವವಾದಿ ರಾಷ್ಟ್ರೀಯತೆಯ ಪರಿಧಿಗೆ ಹೊರತಾದ ವಿಚಾರಗಳು. ಒಮ್ಮೆ ಬಿಜೆಪಿ ತನ್ನ ಈ ಪರಿಧಿಯನ್ನು ದಾಟಿ ಹೊರಬಂತೆಂದರೆ ಅದು ದೇಶದ ಸೆಕ್ಯುಲರ್‌ ಅಖಾಡಕ್ಕೆ ಇಳಿದು ತೊಡೆತಟ್ಟಿದಂತೆಯೇ ಸರಿ. ಈ ಸೆಕ್ಯುಲರ್‌ ಅಖಾಡದಲ್ಲಿ ಕೇವಲ ಕಾಂಗ್ರೆಸ್‌ ಮಾತ್ರವೇ ಇಲ್ಲ, ಬದಲಿಗೆ ದೇಶದ ಸಂವಿಧಾನವನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸಿಕೊಳ್ಳಲೇಬೇಕು ಎಂದು ಶ್ರಮಿಸುತ್ತಿರುವ ಊಹೆಗೂ ನಿಲುಕದ, ಬರಿಯ ಕಣ್ಣಿಗೆ ಸಿಲುಕದ ದೊಡ್ಡದೊಂದು ವೈಚಾರಿಕ, ಸೈದ್ಧಾಂತಿಕ ಪಡೆಯಿದೆ. ಬಹುಮುಖ್ಯವಾಗಿ ಇವೆರಡನ್ನೂ ಮೀರಿದ ಸಾಮರಸ್ಯವನ್ನೇ ಉಸಿರಾಡುವ ಅಸೀಮ ಸಮೂಹವಿದೆ. ಈ ಸಮೂಹ, ಸಮುದಾಯಗಳಿಗೆ ನಿರ್ದಿಷ್ಟ ಹೆಸರಿಲ್ಲ. ಇವುಗಳು ಸಂವಿಧಾನದ ಬಲಕ್ಕಿಂತಲೂ ಹೆಚ್ಚಾಗಿ, ಈ ನೆಲದ ವಿವೇಕದ ಬಲದಿಂದ, ಸಂತರು ಸೂಫಿಗಳ ತತ್ವಗಳಿಂದ ಬೆಸೆದುಕೊಂಡಿವೆ.

1695191712 adhir preamble

ಹಿಂದುತ್ವ ಬಲ ಮಾತ್ರದಿಂದಲೇ ಈ ಸಂತರು, ಸೂಫಿಗಳು ದಾಟಿಸಿರುವ ವಿವೇಕವನ್ನು ಕರಗಿಸಲು ಸಾಧ್ಯವಾಗಿದ್ದರೆ ಬಿಜೆಪಿಯು ತನ್ನ ಸುವರ್ಣ ಕಾಲವೆಂದೇ ಭಾವಿಸಿರುವ ಈ ಹನ್ನೊಂದು ವರ್ಷಗಳ ಅವಧಿಯಲ್ಲಿ ದೇಶದ ಮೂಲೆಮೂಲೆಗಳಲ್ಲಿರುವ ಸಂತರ, ಸೂಫಿಗಳ ನೆಲೆಗಳು ಮುಕ್ಕಾಗಿ ಹೋಗಿರಬೇಕಿತ್ತು, ಆದರೆ ಹಾಗಾಗಿಲ್ಲ. ಸಂವಿಧಾನದ ಅರಿವು, ಈ ನೆಲದ ತಿಳಿವು, ಭಕ್ತಿ, ಭಾವಬೆಸುಗೆಗಳು ಈ ಶ್ರದ್ಧಾಕೇಂದ್ರಗಳನ್ನು ಜನಮನದಲ್ಲಿ ಇನ್ನಷ್ಟು ಹರಳುಗಟ್ಟಿಸುತ್ತಿವೆ.

ಒಂದೊಮ್ಮೆ ಕಾಂಗ್ರೆಸ್‌ ಆರಂಭಿಸಿರುವ ಸಂವಿಧಾನದ ಜಾಗೃತಿಯು ಯಾಂತ್ರಿಕವಾಗಿ ನಡೆಯದೆ ಸರಿದಾರಿಯಲ್ಲಿ ಮುನ್ನೆಡೆದು ಈ ದೇಶದ ಸೂಫಿಸಂತರ ವಿವೇಕದ ತೆಕ್ಕೆಗೆ ಯುವಪೀಳಿಗೆಯನ್ನು, ವಿಭಿನ್ನ ಒಯ್ಯತೊಡಗಿದರೆ ಆಗ ಬಿಜೆಪಿಯ ಪಾಡು ಏನಾಗಲಿದೆ? “ಸಂವಿಧಾನ ಹತ್ಯಾ ದಿವಸ”ದ ಹೆಸರಲ್ಲಿ ನಾಟಕವಾಡುತ್ತಿರುವ ಬಿಜೆಪಿ ಬಹುತ್ವದ ನೆಲದಲ್ಲಿ ತನ್ನ ನೆಲೆ ಕಳೆದುಕೊಳ್ಳಲಿದೆ. ಬಿಜೆಪಿ ಸಂವಿಧಾನದ ಬಗ್ಗೆ ಕಡಿಮೆ ಮಾತನಾಡಿದಷ್ಟೂ ಅದರ ಪಾಲಿಗೆ ಉತ್ತಮ. ಅದು ಸಂವಿಧಾನದ ಬಗ್ಗೆ ಹೆಚ್ಚೆಚ್ಚು ಮಾತನಾಡಿದಷ್ಟೂ ಅದರ ಗುಪ್ತ ಅಜೆಂಡಾಗಳು, ವೈರುಧ್ಯಗಳು, ಪೊಳ್ಳುತನ ಜಗಜ್ಜಾಹೀರಾಗುತ್ತಲೇ ಹೋಗುತ್ತದೆ. ವಿವೇಕಾನಂದರ ಹೆಸರಿನಲ್ಲಿ, ಅಂಬೇಡ್ಕರ್‌ ಹೆಸರಿನಲ್ಲಿ ಏನನ್ನೋ ಮಾಡಲು ಹೋಗಿ ಇದಾಗಲೇ ಬಿಜೆಪಿ ಒಂದು ಸುತ್ತು ಒದೆ ತಿಂದಿದೆ. ಸಂವಿಧಾನದ ಹೆಸರಿನಲ್ಲಿ ನಾಟಕವಾಡಲು ಹೋದರೆ ಇನ್ನಷ್ಟು ಪೆಟ್ಟು ತಿನ್ನಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

?s=150&d=mp&r=g
ನಿಶಾನ್‌ ರಾಜ್‌
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭೂಮ್ತಾಯಿ | ವಿಮಾ ರಕ್ಷಣೆಗೆ ಸವಾಲೆಸೆದ ಹವಾಮಾನ ವೈಪರೀತ್ಯ

ಹವಾಮಾನ ಬದಲಾವಣೆಯ ವೈಪರೀತ್ಯಗಳು ಇಂದು ಕೇವಲ ಭೂಮಿ, ಸಮುದ್ರ, ವಾಯುಮಂಡಲಕ್ಕೆ ಮಾತ್ರ...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅಘಟಿತ ಘಟಿತ

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಜೋಳಿಗೆ | ನಮ್ಮ ಹೊಸ ʻಪಕ್ಷʼ ಬೆಳೆಸುವ ಪ್ರಯತ್ನಗಳು – ಭಾಗ 2

ಆಗ ಸಾಕಷ್ಟು ಪ್ರಾಬಲ್ಯ ಹೊಂದಿದ್ದ ಸಿಪಿಐ ಪಕ್ಷಕ್ಕೆ ಸೇರಿದ ಎಐಟಿಯುಸಿ ಕಾರ್ಮಿಕ...

ನುಡಿಯಂಗಳ | ನುಡಿದಂತೆ ಬರೆವ, ಬರೆದಂತೆ ನುಡಿವ ಭಾಷೆ ʼಕನ್ನಡʼ

‘ನುಡಿದಂತೆ ಬರೆವ, ಬರೆದಂತೆ ನುಡಿವ’ ಕನ್ನಡ ಭಾಷೆಯ ಒಂದು ವಿಶಿಷ್ಟ ಸಮಸ್ಯೆ...

Download Eedina App Android / iOS

X