ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆ 2025 ಅಸಂವಿಧಾನಿಕವಾಗಿದ್ದು, ಅದನ್ನು ತಿರಸ್ಕರಿಸುವ ನಿರ್ಣಯವನ್ನು ಸೋಮವಾರ ಆಲ್ ಇಂಡಿಯಾ ಪರ್ಸನಲ್ ಲಾ ಬೋರ್ಡ್ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಕೈಗೊಳ್ಳಲಾಯಿತು.
ಚಿಂತಕ ಶಿವಸುಂದರ್ ಅವರು ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ನ್ಯೂನತೆಗಳ ಬಗ್ಗೆ ಸವಿವರವಾಗಿ ಮಾತನಾಡಿದರು. 2013ರಿಂದ ದೇಶದಲ್ಲಿ ವಕ್ಫ್ ಆಸ್ತಿ ಏಕಾಏಕಿ ಹೆಚ್ಚಾಗಿದೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ವಾಸ್ತವ ಏನೆಂದರೆ 2013ರಲ್ಲಿ ಒಂದು ಪೋರ್ಟಲ್ ಮಾಡಿ ಅದರಲ್ಲಿ ದಾಖಲಿಸಲು ಶುರು ಮಾಡಲಾಗಿದೆ. ಬಿಜೆಪಿಯವರು ವಕ್ಫ್ ತಿದ್ದುಪಡಿ ಕಾಯ್ದೆ ಮೂಲಕ ವಕ್ಫ್ ಆಸ್ತಿಯನ್ನು ಡಿ ಇಸ್ಲಾಮೈಸ್ ಮಾಡುತ್ತಿದ್ದಾರೆ. ಮುಸ್ಲಿಮರ ನಂತರ ಕ್ರೈಸ್ತರು, ಬೌದ್ಧರನ್ನು ಗುರಿಯಾಗಿಸಿಕೊಳ್ಳುವ ಹುನ್ನಾರ ಅಡಗಿದೆ. ವಕ್ಫ್ ಅನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಬೇರೆಯವರ ಆಸ್ತಿಯನ್ನು ವಕ್ಫ್ ಮಾಡಲು ಸಾಧ್ಯವಿಲ್ಲ. ಅನೇಕ ರಾಜಮಹಾರಾಜರು ವಕ್ಫ್ ಮಾಡಿದ್ದಾರೆ. ಕೋಟ್ಯಾಂತರ ರೂ. ವಕ್ಫ್ ಆಸ್ತಿ ಆದಾಗ ಅದಕ್ಕೆ ಒಂದು ನಿಗದಿತ ವಕ್ಫ್ ಮಂಡಳಿಯನ್ನು ಮಾಡಲಾಯಿತು. 1995ರ ವಕ್ಫ್ ಬೋರ್ಡ್ ಕಾಯ್ದೆ ಸ್ಪಷ್ಟವಾಗಿ ಹೇಳಿದೆ. ವಕ್ಫ್ ಮಂಡಳಿ ಧಾರ್ಮಿಕ ಸಂಸ್ಥೆಯಾಗಿರುವುದರಿಂದ ಸಂವಿಧಾನದ ಪ್ರಕಾರ ಅದನ್ನು ಆ ಧರ್ಮದವರೇ ನಿರ್ವಹಣೆ ಮಾಡಬೇಕು. ಇದು ಸಂವಿಧಾನಾತ್ಮಕ ಹಕ್ಕು ಎಂದರು.
2025ರ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ 2025ರ ತಿದ್ದುಪಡಿಯಾದ ಮೇಲೆ ಕೂಡ ಇದುವರೆಗೂ ನೋಂದಣಿಯಾಗಿರುವ ವಕ್ಫ್ ಆಸ್ತಿಯನ್ನು ರದ್ದುಗೊಳಿಸುವುದಿಲ್ಲ. ನಂತರ ನೋಂದಣಿ ಮಾಡಲು ಮುತಾವಲ್ಲಿಗಳು ಯಾರು ವಕ್ಫ್ ಮಾಡಿದ್ದಾರೆ ಮತ್ತು ಯಾವಾಗ ವಕ್ಫ್ ಮಾಡಿದ್ದಾರೆ ಎನ್ನುವ ದಿನಾಂಕವನ್ನು ನೀಡಬೇಕು ಎಂಬ ನಿಬಂಧನೆಗಳಿವೆ. 800 ವರ್ಷಗಳ ಹಿಂದೆ ಯಾರು ವಕ್ಫ್ ಮಾಡಿದ್ದು ಎಂದು ಯಾರಿಗೆ ಗೊತ್ತಿರುತ್ತದೆ ಎಂದು ಪ್ರಶ್ನಿಸಿದರು.
ವಕೀಲ ಎಂ ಮೇತ್ರಿ ಅವರು ವಕ್ಫ್ ಅಂದ್ರೇನು, ಯಾರೆಲ್ಲ ದಾನ ಮಾಡಬಹುದು, ಯಾವುದನ್ನು ದಾನ ಮಾಡಬಹುದು ಎಂಬ ಬಗ್ಗೆ ವಿವರಿಸಿದರು. ವಕ್ಫ್ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕೂತರೆ ವಶಕ್ಕೆ ಪಡೆಯದೇ ಬಿಡಲಾಗದು. ಮನೆ ಇಲ್ಲದವರಿಗೆ ಮನೆ ಕೊಡುವುದು ಸರ್ಕಾರದ ಕರ್ತವ್ಯ ಎಂದರು.
ಹೈದರಾಬಾದಿನ ವಕೀಲರಾದ ಅಫ್ಸರ್ ಝಹಾನದ ಹಿಂದೂ ಧಾರ್ಮಿಕ ದತ್ತಿ ಮತ್ತು ವಕ್ಫ್ ಮಂಡಳಿಯಲ್ಲಿರುವ ಅಸಮಾನತೆಯ ಬಗ್ಗೆ ವಿವರಿಸಿದರು. ಹಿಂದೂ ಧಾರ್ಮಿಕ ದತ್ತಿಯ ಸಮಿತಿಯಲ್ಲಿ ಹಿಂದೂಯೇತರರಿಗೆ ಅವಕಾಶ ಇಲ್ಲ. ಅಷ್ಟೇ ಅಲ್ಲ ಸರ್ಕಾರದ ನಿಯುಕ್ತ ಅಧಿಕಾರಿಗೆ ಹೆಚ್ಚು ಅಧಿಕಾರ ಇಲ್ಲ. ಆದರೆ ವಕ್ಫ್ ಮಂಡಳಿಯಲ್ಲಿ ಅಧಿಕಾರಿಗೆ ಹೆಚ್ಚು ಅಧಿಕಾರ ನೀಡಲಾಗಿದೆ. ಮುಖ್ಯ ಸ್ಥಾನದಲ್ಲೂ ಮುಸ್ಲಿಮೇತರರಿಗೆ ಅವಕಾಶ ಇದೆ. ಇದು ಮುಸ್ಲಿಮರ ಹಕ್ಕುಗಳ ದಮನಕ್ಕೆ ಮಾಡಲಾಗಿರುವ ತಿದ್ದುಪಡಿ. ಸಂವಿಧಾನಬಾಹಿರ ಕ್ರಮ. ಇದನ್ನು ಎಲ್ಲರೂ ಸೇರಿ ವಿರೋಧಿಸಬೇಕು ಎಂದರು.
ಸಭೆಯಲ್ಲಿ ಸಿಖ್ ವೈಯಕ್ತಿಕ ಕಾನೂನು ಮಂಡಳಿಯ ಅಧ್ಯಕ್ಷ ಜಗಮೋಹನ್ ಸಿಂಗ್ ಮಾತನಾಡಿ, ಕೇಂದ್ರ ಸರ್ಕಾರದ ಮುಂದೆ ನಾವು ಮನವಿ ಮಾಡುವುದು, ಬೇಡಿಕೊಳ್ಳುವುದು ಏನೂ ಇಲ್ಲ. ಸಂಘಟಿತವಾಗಿ ದೊಡ್ಡ ಮಟ್ಟದ ಹೋರಾಟ ನಡೆಸಬೇಕಿದೆ ಎಂದರು.
ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ವೀರಸಂಗಯ್ಯ, ಸಾಮಾಜಿಕ ಕಾರ್ಯಕರ್ತರಾದ ನೂರ್ ಶ್ರೀಧರ್, ಮಲ್ಲಿಗೆ ಸಿರಿಮನೆ, ಸುಹೈಲ್ ಅಹಮದ್, ವಿನಯ್ ಶ್ರೀನಿವಾಸ್, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ ಮುಹಮ್ಮದ್ ಸಾದ್ ಬೆಲ್ಗಾಮಿ ಮಾತನಾಡಿದರು. ಮುಸ್ಲಿಂ ಮುಖಂಡ ಯೂಸುಫ್ ಕನ್ನಿ ಸೇರಿದಂತೆ ಹಲವು ಮುಖಂಡರ ಉಪಡ್ಥಿತರಿದ್ದರು.
ವಿವಿಧ ಸಂಘಟನೆಗಳ ಮುಖಂಡರು ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಪ್ರಮುಖ ನಿರ್ಣಯಗಳು
1.ಭಾರತೀಯ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿರುವ ವಿವಾದಾತ್ಮಕ ವಕ್ಫ್ ತಿದ್ದುಪಡಿ ಕಾಯ್ದೆಗಳು ಕೇವಲ ಭೇದಭಾವ ಹಾಗೂ ವಿಭಜನ ಸ್ವರೂಪದ್ದಾಗಿದೆಯಲ್ಲದೇ ಭಾರತದ ಸಂವಿಧಾನದ ಮೂಲಭೂತ ಆಶಯಗಳಿಗೆ ನೇರವಾಗಿ ವಿರುದ್ಧವಾಗಿವೆ
2.ಈ ತಿದ್ದುಪಡಿಯು ಭಾರತ ಸಂವಿಧಾನದ ಮೂಲಭೂತ ಹಕ್ಕುಗಳಾದ ಕಲಂ 14,25,26,29,30 ಅನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ.
3.ಈ ತಿದ್ದುಪಡಿಗಳು ಮುಸ್ಲಿಂ ಸಮುದಾಯದ ವಕ್ಫ್ ಆಸ್ತಿಗಳಿಂದ ಹಿಂದೂ, ಸಿಖ್, ಕ್ರಿಶ್ಚಿಯನ್ ಮತು ಬೌದ್ಧ ಮುಂತಾದ ಇತರೆ ಧಾರ್ಮಿಕ ಸಮುದಾಯಗಳ ದತ್ತಿ ಆಸ್ತಿಗಳಿಗೆ ನೀಡಿರುವ ಸಂರಕ್ಷಣೆಯಲ್ಲಿ ವಂಚಿಸುತ್ತದೆ. ಇದು ಸ್ಪಷ್ಟವಾಗಿ ವಕ್ಫ್ ಆಸ್ತಿಯನ್ನು ಅತಿಕ್ರಮಿಸುತ್ತದೆ.
4.ಇವು ಮುಸ್ಲಿಮರಿಂದ ಅವರ ಧಾರ್ಮಿಕ ಸ್ವಾತಂತ್ರ್ಯ ಹಾಗೂ ಧಾರ್ಮಿಕ ಮತ್ತು ದತ್ತಿ ಸಂಸ್ಥೆಗಳ ವ್ಯವಸ್ಥಾಪನೆ ಮತ್ತು ಆಡಳಿತದ ಹಕ್ಕನ್ನು ಹರಣ ಮಾಡುತ್ತದೆ.
5.ಯಾವುದೇ ಮುಸ್ಲಿಂ ವ್ಯಕ್ತಿಯು ತನ್ನ ವೈಯಕ್ತಿಕ ಆಸ್ತಿಯನ್ನು ವಕ್ಫ್‌ಗೆ ಸಮರ್ಪಿಸಲು ಹೊಂದಿರುವ ಧಾರ್ಮಿಕ ಮತ್ತು ಸಾಂವಿಧಾನಿಕ ಸ್ವಾತಂತ್ರ್ಯವನ್ನು ಈ ತಿದ್ದುಪಡಿ ಕ್ಷೀಣಗೊಳಿಸುತ್ತದೆ. ವಿಶೇಷವಾಗಿ ಆ ವ್ಯಕ್ತಿ ನಿರಂತರ ಐದು ವರ್ಷಗಳ ಕಾಲ ನಿಷ್ಠಾವಂತ ಮುಸ್ಲಿಂ ಆಗಿರಬೇಕು ಎಂಬ ಷರತ್ತನ್ನು ವಿಧಿಸುತ್ತದೆ.
6.ಯಾವುದೇ ವಕ್ಫ್ ಆಸ್ತಿಯ ಮೇಲೆ ಸರ್ಕಾರದ ಹಕ್ಕು ಅಥವಾ ಮಾಲೀಕತ್ವದ ಕುರಿತು ವಿವಾದದ ನಿರ್ಣಯವನ್ನು ವಕ್ಫ್ ಮಂಡಳಿ ನಿರ್ಧರಿಸುವ ಬದಲಿಗೆ ಸರ್ಕಾರದ ನಿಯುಕ್ತ ಅಧಿಕಾರಿ ನಿರ್ಧರಿಸುತ್ತಾನೆ.
7.ವಕ್ಫ್ ಮಂಡಳಿ ಹಾಗೂ ಕೇಂದ್ರ ವಕ್ಫ್ ಕೌನ್ಸಿಲ್‌ನ ಸದಸ್ಯತ್ವಕ್ಕೆ ಮುಸ್ಲಿಮನಾಗಿರಬೇಕೆಂಬ ಷರತ್ತನ್ನು ಈಗ ರದ್ದುಪಡಿಸಲಾಗಿದೆ. ಇದಲ್ಲದೇ ಕೇಂದ್ರ ವಕ್ಫ್ ಕೌನ್ಸಿಲ್ ಮತ್ತು ರಾಜ್ಯ ವಕ್ಫ್ ಮಂಡಳಿಗಳ ಚುನಾವಣಾ ಪ್ರಕ್ರಿಯೆಯನ್ನು ನಾಮನಿರ್ದೇಶನದಿಂದ ಬದಲಾಯಿಸಲಾಗಿದೆ.
8.ಬಳಕೆಯಿಂದ ವಕ್ಫ್ ಆಸ್ತಿಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಅಂತಹ ಆಸ್ತಿಗಳ ಕುರಿತು ಯಾವುದೇ ವಿವಾದವೆದ್ದರೆ ಆ ಆಸ್ತಿಗಳು ತಮ್ಮ ವಕ್ಫ್ ಸ್ಥಾನಮಾನವನ್ನು ಕಳೆದುಕೊಳ್ಳುತ್ತವೆ.
9.ಈ ತಿದ್ದುಪಡಿಗಳ ಅನ್ವಯ ಯಾವುದೇ ಆದಿವಾಸಿ ಮುಸ್ಲಿಂ ತನ್ನ ವೈಯಕ್ತಿಕ ಆಸ್ತಿಯನ್ನು ವಕ್ಫ್‌ಗೆ ಸಮರ್ಪಿಸಲು ಅವಕಾಶವಿರುವುದಿಲ್ಲ.
10.ವಕ್ಫ್ ತಿದ್ದುಪಡಿ ಕಾಯ್ದೆ-2025, ಮುಸ್ಲಿಮರಿಗೆ ತಮ್ಮ ಸಂಸ್ಥೆಗಳನ್ನು ಸ್ಥಾಪಿಸಲು ನಿರ್ವಹಿಸಲು ಮತ್ತು ಆಡಳಿತ ನಡೆಸಲು ಇರುವ ಮೂಲಭೂತ ಸಾಂವಿಧಾನಿಕ ಹಕ್ಕಿನ ಮೇಲೆ ನಿರ್ಬಂಧ ಹೇರುವಂತಿದೆ.
ಕರ್ನಾಟಕ ಸರ್ಕಾರ ಈ ವಿವಾದಾತ್ಮಕ ಕಾಯ್ದೆಯ ವಿರುದ್ಧ ನಿರ್ಣಯ ಕೈಗೊಳ್ಳಬೇಕು ಎಂದು ಬೋರ್ಡ್ ಒತ್ತಾಯಿಸಿದೆ.