ಶಿವಮೊಗ್ಗದಲ್ಲಿ ಇಂದು ವಸತಿ ಹಂಚಿಕೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ವಸತಿ ಸಚಿವರು ರಾಜೀನಾಮೆ ನೀಡಬೇಕೆಂದು ಸಾಗರ ಶಾಸಕರು ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆಗ್ರಹಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೂಂದಿಗೆ ಮಾತನಾಡಿದ ಅವರು, ವಸತಿ ಸಚಿವರ ವಿರುದ್ಧ ಮನೆ ಹಂಚಿಕೆ ವಿಚಾರದಲ್ಲಿ ಹಣ ಕೇಳಿದ್ದಾರೆಂಬ ಆರೋಪ ಕೇಳಿ ಬಂದಿದೆ. ಇದರಿಂದ ವಸತಿ ಸಚಿವ ಜಮೀರ್ ಅಹ್ಮದ್ಖಾನ್ ಅವರು ತಕ್ಷಣ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ತನಿಖೆ ಎದುರಿಸಲಿ. ಅವರು ಭ್ರಷ್ಟಾಚಾರ ಮಾಡಿಲ್ಲ ಎಂದು ಸಾಬೀತಾದರೆ ಮತ್ತೆ ತಮ್ಮ ಮಂತ್ರಿ ಸ್ಥಾನಕ್ಕೆ ಬರಲಿ ಎಂದರು.
ಈ ಹಿಂದೆ ಅನೇಕ ಸಚಿವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಾಗ ಅವರು ರಾಜೀನಾಮೆ ನೀಡಿದ್ದ ಉದಾಹರಣೆಗಳಿವೆ ಎಂದರು. ಇದರಿಂದ ವಸತಿ ಸಚಿವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎನ್ನುವ ಮೂಲಕ ಸ್ವಪಕ್ಷದವರೇ ವಸತಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಶಾಸಕರ ಅನುದಾನಕ್ಕೆ ಕಮಿಷನ್ ಪಡೆಯುತ್ತಾರೆಂಬ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಗೋಪಾಲಕೃಷ್ಣ ಬೇಳೂರು ಅವರು, ಕುಮಾರಸ್ವಾಮಿ ಅವರ ಆರೋಪ ನನಗೆ ಗೊತ್ತಿಲ್ಲ. ನಾವು ಅನುದಾನ ತಂದಾಗ ಯಾರೂ ಸಹ ಕಮಿಷನ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ರೈತರಿಗೆ ಅತಿ ಅವಶ್ಯಕವಾದ ರಸಗೊಬ್ಬರದ ದರವನ್ನು ಪ್ರತಿ ಪ್ಯಾಕೇಟ್ ಮೇಲೆ 180 ರೂಪಾಯಿ ತನಕ ಕೇಂದ್ರ ಸರ್ಕಾರ ಏರಿಕೆ ಮಾಡಿದೆ. ಇದರಿಂದ ರೈತಾಪಿ ವರ್ಗಕ್ಕೆ ಹೊರೆಯಾಗಲಿದೆ. ಹಿಂದೆ ಹಾಲಿಗೆ ಕೇವಲ ಒಂದು ರೂಪಾಯಿ ಏರಿಕೆ ಮಾಡಿದಾಗ ಬಿಜೆಪಿಗರು ದೊಡ್ಡ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈಗ ಅವರೆಲ್ಲಾ ಯಾಕೆ ಸುಮ್ಮನಿದ್ದಾರೆ? ಎಂದು ಬೇಳೂರು ಪ್ರಶ್ನಿಸಿದರು.
ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಪರವಾಗಿ ಇದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಾರೆ. ದರ ಏರಿಕೆ ಮಾಡುವುದೇ ರೈತರ ಪರವಾಗಿ ಇರೋದಾ ಎಂದು ಅವರು ಕೇಳಿದರು.
ರಾಷ್ಟ್ರಧ್ವಜವನ್ನು ಕೇಸರಿ ಮಾಡಲು ಹೊರಟ ಬಿಜೆಪಿಯವರು ರಾಷ್ಟ್ರದ್ರೋಹಿಗಳು. ರಾಷ್ಟ್ರಧ್ವಜ ಹಾಗೂ ಸಂವಿಧಾನ ಬದಲು ಮಾಡಬೇಕು ಎನ್ನುವವರನ್ನು ನೇಣಿಗೆ ಹಾಕಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.