ಮಣಿಪುರದಲ್ಲಿ ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿದವರನ್ನು ಬಂಧಿಸುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ದಲಿತ ಸಂಘರ್ಷ ಸಮಿತಿ (ದಸಂಸ-ಭೀಮವಾದ) ಆಗ್ರಹಿಸಿದೆ.
ರಾಯಚೂರಿನಲ್ಲಿ ಪ್ರತಿಭಟನೆ ನಡೆಸಿದ ದಸಂಸ ಕಾರ್ಯಕರ್ತರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಮಣಿಪುರದಲ್ಲಿ ಮೇ 4ರಂದು ಮಹಿಳೆಯರ ಮೇಲೆ ದುಷ್ಕರ್ಮಿಗಳ ಗುಂಪು ದೌರ್ಜನ್ಯವೆಸಗಿದೆ. ಪ್ರಕರಣ ನಡೆದು ಒಂದೂವರೆ ತಿಂಗಳಾಗಿದೆ. ಎಫ್‌ಐಆರ್ ಕೂಡ ದಾಖಲಾಗಿದೆ. ಆದರೂ, ಆರೋಪಿಗಳನ್ನು ಬಂಧಿಸಲಾಗಿಲ್ಲ. ದುಷ್ಕರ್ಮಿಗಳನ್ನು ಸೆರೆಹಿಡಿಯುವಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ವಿಫಲವಾಗಿದೆ” ಎಂದು ಕಿಡಿಕಾರಿದ್ದಾರೆ.
“ಹಿಂಸಾಚಾರ ಆರಂಭವಾಗಿ ಮೂರು ತಿಂಗಳು ಕಳೆಯುತ್ತಿವೆ. ಆದರೂ, ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿಲ್ಲ. ಅವರ ‘ಭೇಟಿ ಬಚಾವೋ, ಭೇಟಿ ಪಡಾವೋ’ ಎಂಬ ಹೇಳಿಕೆ ಹೆಸರಿಗೆ ಮಾತ್ರಸಿಮಿತವಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯಲ್ಲಿ ಎನ್.ನರಸಿಂಹಲು, ಎಂ.ಬಾಬುಹರಿಜನವಾಡ, ಹನುಮೇಶ ಅರೋಲಿ, ಫಕ್ರುದ್ದೀನ್ ಅಲಿ ಅಹ್ಮದ್, ಸೈಯದ್ ವಾಹೀದು ಸೇರಿದಂತೆ ಹಲವರು ಇದ್ದರು.