ಕಳೆದ 12 ದಿನಗಳಿಂದ ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿದೆ. ಇಸ್ರೇಲ್ ಆರಂಭಿಸಿದ ದಾಳಿಗೆ ಇರಾನ್ ತೀವ್ರವಾಗಿ ಪ್ರತಿಕ್ರಿಯಿಸುತ್ತಾ ಬಂದಿದೆ. ಇರಾನ್ನ ಪ್ರತಿದಾಳಿಯಿಂದ ಇಸ್ರೇಲ್ ತತ್ತರಿಸಿದ್ದು, ಕದನ ವಿರಾಮಕ್ಕಾಗಿ ಎದುರು ನೋಡುತ್ತಿತ್ತು. ಈ ನಡುವೆ, ಉಭಯ ರಾಷ್ಟ್ರಗಳ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಆದರೆ, ನಮ್ಮೊಂದಿಗೆ ಯಾವುದೇ ಮಾತುಕತೆ-ಒಪ್ಪಂದಗಳು ನಡೆದಿಲ್ಲ ಎಂದು ಇರಾನ್ ಹೇಳಿದೆ. ಕದನ ವಿರಾಮವನ್ನು ವಿರೋಧಿಸಿವ ಸಾಧ್ಯತೆ ಇದೆ.
ಶನಿವಾರ ಮುಂಜಾನೆ ಇರಾನ್ ಮೂರು ಪರಮಾಣು ಸೌಕರ್ಯಗಳ ಮೇಲೆ ಅಮೆರಿಕ ದಾಳಿ ಮಾಡಿದ ಬಳಿಕ, ಇಲ್ಲಿಗೆ ಯುದ್ಧ ಮುಗಿಯುತ್ತದೆ ಎಂದು ಟ್ರಂಪ್ ಹೇಳಿದ್ದರು. ಅಮೆರಿಕ ದಾಳಿ ಸೋಮವಾರ ರಾತ್ರಿ ಪ್ರತ್ಯುತ್ತರವಾಗಿ ಇರಾನ್ ಕತಾರ್ನಲ್ಲಿರುವ ಅಮೆರಿಕ ವಾಯುನೆಲೆಯ ಮೇಲೆ ದಾಳಿ ಮಾಡಿತು. ಇದಾದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಆದರೆ, ಈ ಘೋಷಣೆಗೂ ಮುನ್ನ ಇರಾನ್ ಮೇಲೆ ಭಾರೀ ದಾಳಿಗಳು ನಡೆದಿವೆ ಎಂದು ವರದಿಯಾಗಿದೆ.
ಕದನ ವಿರಾಮ ಘೋಷಿಸಿರುವ ಟ್ರಂಪ್, ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ. 12 ನೇ ದಿನದ ಯುದ್ಧವು ಕೊನೆಗೊಂಡಿದೆ. ಇದನ್ನು ಜಗತ್ತು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು” ಎಂದಿದ್ದಾರೆ.
“ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ. ಈ ಯುದ್ಧ ವರ್ಷಗಳ ಕಾಲ ನಡೆಯುತ್ತಿತ್ತು. ಇಡೀ ಮಧ್ಯಪ್ರಾಚ್ಯವನ್ನು ನಾಶಮಾಡಬಹುದಿತ್ತು. ಆದರೆ, ಆ ರೀತಿ ಆಗುವುದಿಲ್ಲ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಆದರೆ, ಟ್ರಂಪ್ ಹೇಳಿಕೆಗಳನ್ನು ಅಲ್ಲಗಳೆದಿರುವ ಇರಾನ್, “ಕದನ ವಿರಾಮ ಅಥವಾ ಮಿಲಿಟರಿ ಕಾರ್ಯಾಚರಣೆ ನಿಲುಗಡೆ ಸಂಬಂಧ ನಮ್ಮೊಂದಿಗೆ ಯಾವುದೇ ಮಾತುಕತೆ-ಒಪ್ಪಂದಗಳು ನಡೆದಿಲ್ಲ. ಇಸ್ರೇಲ್ ತನ್ನ ದಾಳಿಯನ್ನು ನಿಲ್ಲಿಸಿದರೆ,ನಾವು ಯಾವುದೇ ದಾಳಿ ಮಾಡುವುದಿಲ್ಲ. ದಾಳಿ ಮಾಡುವ ಉದ್ದೇಶ ನಮಗಿಲ್ಲ” ಎಂದು ಹೇಳಿದೆ.