ತಹಶೀಲ್ದಾರ್ ಕಛೇರಿಯನ್ನು ಎಪಿಎಂಸಿ ಆವರಣದಲ್ಲಿರುವ ಟೆಂಡರ್ ಹಾಲ್‌ಗೆ ಸ್ಥಳಾಂತರಿಸುವ ನಿರ್ಧಾರ ವಿರೋಧಿಸಿ ಸೋಮವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ದಾದಾಸಾಹೇಬ್ ಡಾ.ಎನ್.ಮೂರ್ತಿ ಸ್ಥಾಪಿತ) ಹಾಗೂ ಬಾಬು ಜಗಜೀವನ್ ರಾಮ್ ಆದಿ ಜಾಂಬವ ಯುವ ಬ್ರಿಗೇಡ್ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ಮಂಜುನಾಥ್ ಬುರಡಿ ಮಾತನಾಡಿ, “ನಾವು ಸ್ಥಳಾಂತರ ಮಾಡಬೇಕಾಗಿರುವದು ತಾಲ್ಲೂಕು ಪಂಚಾಯಿತಿ ಹೊರತು ತಹಶೀಲ್ದಾರ್ ಕಚೇರಿಯಲ್ಲ. ಸರ್ಕಾರಿ ಕೆಲಸ ಸಾರ್ವಜನಿಕ ಕೆಲಸ. ತಹಶೀಲ್ದಾರ್ ಕಚೇರಿ ಇದ್ದ ಸ್ಥಳದಲ್ಲೇ ಇರಬೇಕು. ಜಿಲ್ಲಾಧಿಕಾರಿಗಳು ಕೂಡಲೇ ತಮ್ಮ ಆದೇಶವನ್ನು ಮರಳಿ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಉಗ್ರ ಹೋರಾಟ ಮಾಡಲಾಗುವದು” ಎಂದು ಎಚ್ಚರಿಕೆ ನೀಡಿದರು.
“ಈ ಕಚೇರಿಯ ಸ್ಥಳಾಂತರದ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಾರ್ವಜನಿಕರ ಅನುಕೂಲ ಮರೆತು ಪ್ರಭಾವಿಗಳ ಮಾತು ಕೇಳಿ ಸ್ಥಳಾಂತರಿಸಿದ್ದೆ ಆದರೆ ಮುಂದಿನ ದಿನಮಾನಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ಈ ವಿಷಯವನ್ನು ತಿಳಿಸಿ ಬೃಹತ್ ಮಾಡಲಾಗುವುದು” ಎಂದರು.
“ಗಜೇಂದ್ರಗಡ ಪಟ್ಟಣ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಈಗಾಗಲೇ ತಾಲ್ಲೂಕು ಕಚೇರಿಗಳ ಕಟ್ಟಡಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಹೀಗಿರುವಾಗ ತಹಶೀಲ್ದಾರ್ ಕಚೇರಿಯನ್ನು ಎಪಿಎಂಸಿ ಆವರಣಕ್ಕೆ ಸ್ಥಳಾಂತರಿಸುವುದರಿಂದ ಹಲವು ತೊಂದರೆಗಳು ಉಂಟಾಗಲಿವೆ. ಕೂಡಲೇ ಕಚೇರಿ ಸ್ಥಳಾಂತರ ಬಿಡಬೇಕು” ಎಂದು ಸಂಘಟನೆ ಕಾರ್ಯಕರ್ತರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕುಕನೂರು | ಮಾನವೀಯ ಮೌಲ್ಯಗಳ ನಾಯಕ ಕೆ ಎಚ್ ಪಾಟೀಲ: ಗೃಹ ಸಚಿವ ಪರಮೇಶ್ವರ್
ಈ ಸಂದರ್ಭದಲ್ಲಿ ಶಿವಪ್ಪ ಮುಶಿಗೇರಿ, ಡಿ.ಜಿ. ಕಟ್ಟಿಮನಿ, ಡಿ.ಎಂ. ಸಂದಿಮನಿ, ರವಿ ಮಾದರ, ಯಮನೂರಪ್ಪ ಪುರ್ತಗೇರಿ, ಮಾರುತಿ ಹಾದಿಮನಿ, ಸಣ್ಣಪ್ಪ ಪೂಜಾರ, ಭೀಮಪ್ಪ ಹಿರೇಹಾಳ, ಯಲ್ಲಪ್ಪ ಶಾಂತಗೇರಿ, ರೋಣಪ್ಪ ಚಿಲಝರಿ, ಚನ್ನಪ್ಪ ಪೂಜಾರ, ದುರಗಪ್ಪ ಹಿರೇಮನಿ, ಶಿವು ಭೂಮದ, ಶರಣು ಅರಳಿಗಿಡದ, ಯಮನೂರ ಅಬ್ಬಿಗೇರಿ ಇದ್ದರು.