ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕ ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿತ್ತು. ಕತಾರ್‌ನಲ್ಲಿರುವ ಅಮೆರಿಕ ವಾಯು ನೆಲೆಯ ಮೇಲೆ ಸೋಮವಾರ ರಾತ್ರಿ ಇರಾನ್ ದಾಳಿ ನಡೆಸಿತ್ತು. ಪರಿಣಾಮವಾಗಿ, ಕತಾರ್ ತನ್ನ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಹೀಗಾಗಿ, ಮಂಗಳೂರಿನಿಂದ ದಮಾಮ್ ಮತ್ತು ಅಬುಧಾಬಿಗೆ ಹೊರಟಿದ್ದ ಎರಡು ವಿಮಾನಗಳು ಭಾರತಕ್ಕೆ ಮರಳಿಬಂದಿವೆ. ಮಂಗಳೂರಿನಿಂದ ದಮಾಮ್‌ಗೆ ಹಾರಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮಸ್ಕತ್‌ನಲ್ಲಿ ಭೂಸ್ಪರ್ಶ ಮಾಡಿದ್ದರೆ, ಅಬುಧಾಬಿಗೆ ಹೊರಟಿದ್ದ ಇಂಡಿಗೋ ವಿಮಾನವು ಮುಂಬೈಯಲ್ಲಿ ಇಳಿದಿದೆ. ಮಾತ್ರವಲ್ಲದೆ, ಮಧ್ಯಪ್ರಾಚ್ಯಕ್ಕೆ ತೆರಳಬೇಕಿದ್ದ 48 ವಿಮಾನಗಳ ಹಾರಾಟವನ್ನು ಕೂಡ ರದ್ದುಗೊಳಿಸಲಾಗಿದೆ.
ಸಂಘರ್ಷ ಉಲ್ಬಣದ ನಡುವೆಯೂ ಮಂಗಳವಾರ ಮುಂಜಾನೆ ಇರಾನ್ ಮೇಲೆ ಅಮೆರಿಕದ ದಾಳಿ ಮಾಡಿತು. ದಾಳಿ ನಡೆಸಿದ ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಪಕ್ಷೀಯವಾಗಿ ಇಸ್ರೇಲ್-ಇರಾನ್ ನಡುವೆ ಮಂಗಳವಾರ ಮುಂಜಾನೆ ಕದನ ವಿರಾಮ ಘೋಷಿಸಿದ್ದರು. ಆದರೆ, ಈ ಬಗ್ಗೆ ತಮ್ಮೊಂದಿಗೆ ಯಾವುದೇ ಮಾತುಕತೆ-ಒಪ್ಪಂದ ಮಾಡಿಕೊಂಡಿಲ್ಲ ಎಂದಿದ್ದ ಇರಾನ್ ಟ್ರಂಪ್ ಘೋಷಿಸಿದ್ದ ಕದನ ವಿರಾಮವನ್ನು ಅಲ್ಲಗಳೆದಿತ್ತು. ಇದೀಗ, ಇಸ್ರೇಲ್ ಮೇಲೆ ದಾಳಿ ನಡೆಸಿರುವ ಇರಾನ್, ‘ಈಗ ಕದನ ವಿರಾಮ ಜಾರಿಯಾಗಿದೆ’ ಎಂದು ಹೇಳಿದೆ.
ಆದಾಗ್ಯೂ, ಮಧ್ಯಪ್ರಾಚ್ಯದ ಹಲವು ರಾಷ್ಟ್ರಗಳು ತಮ್ಮ ವಾಯು ಪ್ರದೇಶಗಳನ್ನು ಮುಚ್ಚಿವೆ. ಹೀಗಾಗಿ, ಭಾರತದ ರಾಜಧಾನಿ ದೆಹಲಿ ಮತ್ತು ಮಧ್ಯಪ್ರಾಚ್ಯದ ವಿವಿಧ ದೇಶಗಳ ನಡುವೆ ಹಾರಾಟ ನಡೆಸಬೇಕಿದ್ದ ವಿಮಾನಗಳ ರದ್ದಾಗಿವೆ. ಅವುಗಳಲ್ಲಿ, ದೆಹಲಿ ವಿಮಾನ ನಿಲ್ದಾಣಕ್ಕೆ ಮಧ್ಯಪ್ರಾಚ್ಯದಿಂದ ಬರಬೇಕಿದ್ದ 28 ಮತ್ತು ದೆಹಲಿಯಿಂದ ಹೊರಡಬೇಕಿದ್ದ 20 ವಿಮಾನಗಳು ಸೇರಿದಂತೆ ಒಟ್ಟು 48 ವಿಮಾನಗಳು ರದ್ದಾಗಿವೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ಭಾರತಕ್ಕೆ ಗಂಭೀರ ಸವಾಲುಗಳು, ಪರಿಣಾಮಗಳು
ದೆಹಲಿಗೆ ಬರಬೇಕಿದ್ದು ರದ್ದಾದ ವಿಮಾನಗಳಲ್ಲಿ ಏರ್ ಇಂಡಿಯಾದ 17, ಇಂಡಿಗೋದ 8 ಹಾಗೂ ಇತರ ವಿಮಾನಯಾನ ಸಂಸ್ಥೆಗಳ 3 ವಿಮಾನಳು ಸೇರಿವೆ.
ದೆಹಲಿಯಿಂದ ಹೊರಡಬೇಕಿದ್ದ ವಿಮಾನಗಳಲ್ಲಿ ಏರ್ ಇಂಡಿಯಾದ 10, ಇಂಡಿಗೋದ 7 ಮತ್ತು ಇತರ ವಿಮಾನಯಾನ ಸಂಸ್ಥೆಗಳ 3 ವಿಮಾನಗಳ ಹಾರಾಟ ರದ್ದಾಗಿದೆ.
“ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಸುರಕ್ಷಿತ ಮತ್ತು ತಡೆರಹಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಲಭ್ಯವಿರುವ ಸುರಕ್ಷಿತ ವಿಮಾನ ಮಾರ್ಗಗಳಿಗಾಗಿ ಎದುರು ನೋಡುತ್ತಿದ್ದೇವೆ. ದಯವಿಟ್ಟು ನಮ್ಮ ಮೊಬೈಲ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ಅಪ್‌ಡೇಟ್‌ಗಳನ್ನು ಪಡೆಯಿರಿ” ಎಂದು ಇಂಡಿಗೋ ಹೇಳಿದೆ.