ಕೆಲವೇ ವರ್ಷಗಳ ಹಿಂದೆ ಅವಿವೇಕಿ ಅಮೆರಿಕ, ಇರಾಕ್ ಎಂಬ ಪುಟ್ಟ ದೇಶವನ್ನು ಭೂಮಿ ಮೇಲಿನ ನರಕವನ್ನಾಗಿಸಿತು. ಈಗ ಇಸ್ರೇಲ್ ಪರ ನಿಂತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್, ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡುತ್ತಿದ್ದಂತೆ, ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ.
2003ರಲ್ಲಿ ಅಮೆರಿಕವು ಇರಾಕ್ ಮೇಲೆ ದಾಳಿ ಮಾಡಲು ನಿರ್ಧರಿಸಿತು. ಆ ದಾಳಿಗೆ ಅಮೆರಿಕ ಕೊಟ್ಟ ಕಾರಣ- ‘ಇರಾಕ್‌ನ ಆಡಳಿತಗಾರ ಸದ್ದಾಂ ಹುಸೇನ್ ರಾಸಾಯನಿಕ, ಜೈವಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದಾರೆ’ ಎಂಬುದಾಗಿತ್ತು.
2025ರಲ್ಲಿ ಅಮೆರಿಕ, ಇರಾನ್‌ನ ಫೋರ್ಡೊ, ನತಾಂಜ್ ಮತ್ತು ಇಸ್‌ಫಹಾನ್ ಪರಮಾಣು ಕೇಂದ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಈಗ ಅಮೆರಿಕ ಕೊಡುತ್ತಿರುವ ಕಾರಣ- ‘ಖಮೇನಿ ಸರ್ವಾಧಿಕಾರಿಯಂತಾಗಿದ್ದಾರೆ, ಇರಾನ್ ಅಣ್ವಸ್ತ್ರಗಳನ್ನು ಹೊಂದುವುದನ್ನು ತಡೆಯಲು ದಾಳಿ ನಡೆಸಲಾಗಿದೆ’ ಎಂದಿದೆ.
ಅಂದರೆ ಅಮೆರಿಕದ್ದು ಆಗಲೂ ಅದೇ ರಾಗ, ಈಗಲೂ ಅದೇ ರಾಗ. ಅಂದರೆ ಅಣ್ವಸ್ತ್ರಗಳನ್ನು ಹೊಂದುವುದು ಮತ್ತು ಪ್ರಯೋಗಿಸುವುದು ಬಲಿಷ್ಠ ರಾಷ್ಟ್ರಗಳಿಗಷ್ಟೇ ಸೀಮಿತವೇ? ಈಗ ನಡೆಸಿರುವ ದಾಳಿ ಯುದ್ಧಕ್ಕಾಗಿಯೇ ರೂಪಿಸಿರುವ ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳಿಂದ ಕೂಡಿದ ಜಿನೇವಾ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಲ್ಲವೇ?
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | 1180 ದಿನಗಳ ಚನ್ನರಾಯಪಟ್ಟಣ ಚಳವಳಿಗೆ ಸರ್ಕಾರ ಸ್ಪಂದಿಸಲಿ
ಅಸಲಿಗೆ ಸದ್ದಾಂ ಹುಸೇನ್ ಬೆಳೆಸಿದ್ದು, ಕೆಮಿಕಲ್ ವೆಪನ್‌ಗಳನ್ನು ಕೊಟ್ಟಿದ್ದು, ಇರಾನ್ ವಿರುದ್ಧ ಎತ್ತಿಕಟ್ಟಿದ್ದು ಅಮೆರಿಕ. ಆದರೆ ಆತ ಅಧಿಕಾರದಲ್ಲಿ ಗಟ್ಟಿಗೊಳ್ಳುತ್ತಿದ್ದಂತೆ, ತನ್ನ ದೇಶವನ್ನು ಬಲಿಷ್ಠಗೊಳಿಸುತ್ತಿದ್ದಂತೆ, ಅಮೆರಿಕ ಚಡಪಡಿಸತೊಡಗಿತು. ಆತನನ್ನು ಮುಗಿಸಲು ಯೋಜಿಸಿತು. ಆಗ ಅಮೆರಿಕ, ‘ಸದ್ದಾಂ ಸರ್ವಾಧಿಕಾರಿಯಾಗಿದ್ದಾನೆ, ಇರಾಕ್‌ನಲ್ಲಿ ಪ್ರಜಾಪ್ರಭುತ್ವವನ್ನು ಸ್ಥಾಪಿಸಬೇಕಿದೆ’ ಎಂಬ ಕಾರಣವನ್ನು ಜಗತ್ತಿನ ಮುಂದಿಟ್ಟು; ಆತನ ಮೇಲೆ ಅಣ್ವಸ್ತ್ರದ ಆರೋಪ ಹೊರಿಸಿ, ‘ಹೋಗ್ತೀವಿ, ಹೊಸಕಿಹಾಕಿ ಬರ್ತಿವಿ’ ಎಂದು ಹೂಂಕರಿಸಿತು. ಅಮೆರಿಕ 2003ರಲ್ಲಿ ಇರಾಕಿನತ್ತ ತನ್ನ ಮಿಲಿಟರಿ ಪಡೆ ರವಾನಿಸಿತು. ತನ್ನಲ್ಲಿದ್ದ ಶಕ್ತಿಯುತ ಶಸ್ತ್ರಾಸ್ತಗಳನ್ನೆಲ್ಲ ಇರಾಕಿನ ಮೇಲೆ ಮಳೆಗಿಂತಲೂ ಹೆಚ್ಚಾಗಿ ಸುರಿಯಿತು. ಆದರೆ, ಅವರು ಅಂದುಕೊಂಡಂತೆ ಆಗದೆ, ಸತತ ಐದು ವರ್ಷಗಳ ನಿರಂತರ ಇರಾಕ್-ಅಮೆರಿಕ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು.
2006ರಲ್ಲಿ ಸದ್ದಾಂ ಶರಣಾದ, ಆತನಿಗೆ ಮರಣದಂಡನೆ ವಿಧಿಸಲಾಯಿತು. ಆದರೆ, ಇರಾಕ್‌ನಲ್ಲಿ ಪ್ರಜಾಪ್ರಭುತ್ವ ಸ್ಥಾಪನೆ ಎಂಬ ಅಮೆರಿಕದ ನಾಟಕ ಬಯಲಾಗಿತ್ತು. ಅಮೆರಿಕ ನಿಯೋಜಿತ ಹೊಸ ಸರ್ಕಾರ ದುರ್ಬಲವಾಗಿತ್ತು. ಸದ್ದಾಂನ ಸುನ್ನಿ ಆಡಳಿತದ ನಂತರ ಶಿಯಾ ಕೇಂದ್ರಿತ ಸರ್ಕಾರ ಅಧಿಕಾರಕ್ಕೆ ಬಂದಾಗ, ಶಿಯಾ-ಸುನ್ನಿ ಗುಂಪುಗಳ ನಡುವಿನ ಭಿನ್ನಾಭಿಪ್ರಾಯ ತೀವ್ರಗೊಂಡಿತು. ಇದು ದೀರ್ಘಕಾಲದ ಆಂತರಿಕ ಸಂಘರ್ಷಕ್ಕೆ ಕಾರಣವಾಯಿತು. ಯುದ್ಧದಿಂದ ಉಂಟಾದ ರಾಜಕೀಯ ಅಸ್ಥಿರತೆ, ಇಸ್ಲಾಮಿಕ್ ಸ್ಟೇಟ್ (ISIS) ಸಂಘಟನೆ ಹುಟ್ಟಿಗೆ ಕಾರಣವಾಯಿತು. ಇದು 2014ರಲ್ಲಿ ಇರಾಕ್ ಮತ್ತು ಸಿರಿಯಾದ ದೊಡ್ಡ ಭಾಗಗಳನ್ನು ವಶಪಡಿಸಿಕೊಂಡಿತು. ಅಲ್ ಖೈದಾದಂತಹ ಜಾಗತಿಕ ಭಯೋತ್ಪಾದನೆ ಏರಿಕೆಗೂ ಕಾರಣವಾಯಿತು.
ಅಷ್ಟೇ ಮುಖ್ಯವಾದ ಮತ್ತೊಂದು ವಿಚಾರವೆಂದರೆ, ಯುದ್ಧಾನಂತರ ಇರಾಕ್‌ನಲ್ಲಿ ಯಾವುದೇ ರಾಸಾಯನಿಕ, ಜೈವಿಕ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವೇನೂ ಸಿಗಲಿಲ್ಲ.
ಇನ್ನು ಇರಾಕಿನ ಸಾಮಾನ್ಯ ಜನರ ಸ್ಥಿತಿ ಹೇಳತೀರದಾಯಿತು. ಯುದ್ಧದಿಂದಾಗಿ 10 ಲಕ್ಷ ಜನ ಸಾವನಪ್ಪಿದರು. ಮನೆ-ಮಠ ಕಳೆದುಕೊಂಡ ಸುಮಾರು 47 ಲಕ್ಷ ಜನ ನಿರಾಶ್ರಿತರಾದರು. ಅಂದಾಜು 15 ಲಕ್ಷ ಜನರು ಅಕ್ಕ-ಪಕ್ಕದ ದೇಶಗಳಿಗೆ ವಲಸೆ ಹೋದರು. ಇರಾಕಿನ ಮೂಲಸೌಕರ್ಯಗಳಾದ ರಸ್ತೆಗಳು, ಆಸ್ಪತ್ರೆಗಳು, ವಿದ್ಯುತ್, ನೀರು- ದಾಳಿಗಳಿಂದ ತೀವ್ರ ಹಾನಿಗೊಳಗಾಗಿ, ಜನರ ಕೈಗೆಟಕದಂತಾಯಿತು. ಹಸಿವು, ಬಡತನ, ರೋಗರುಜಿನಗಳ ತಾಣವಾಯಿತು. ಇರಾಕ್‌ನ ಆರ್ಥಿಕತೆ ಅಸ್ಥಿರಗೊಂಡು, ತೈಲ ಉತ್ಪಾದನೆಗೆ ತೊಡಕಾಯಿತು.
ಇದಕ್ಕಿಂತ ಇನ್ನೂ ಭೀಕರ ಮತ್ತು ಭಯಾನಕವಾದದ್ದೆಂದರೆ, ಸುಮಾರು 30 ಲಕ್ಷ ಮಹಿಳೆಯರು ಅಮೆರಿಕ ಮಿಲಿಟರಿ ಯೋಧರ ಕಾಮಕ್ಕೆ, ಅತ್ಯಾಚಾರಕ್ಕೆ ಬಲಿಯಾಗಿದ್ದು. ಅವರೆಲ್ಲ ಇಂದು ವಿಧವೆಯರಾಗಿದ್ದಾರೆ. ಸೆರೆಸಿಕ್ಕ ಸೈನಿಕರಿಗೆ ಅಮೆರಿಕ ಯೋಧರು ಇಲ್ಲಿಯವರೆಗೆ ಕಂಡುಕೇಳರಿಯದ- ಅಬು ಗ್ರೈಬ್- ಪೈಶಾಚಿಕ ಕೃತ್ಯದಂತಹ ಚಿತ್ರಹಿಂಸೆ ನೀಡಿದ್ದಾರೆ. ಲೆಕ್ಕವಿಲ್ಲದಷ್ಟು ಮಕ್ಕಳು ಅಂಗವಿಕಲರಾಗಿದ್ದಾರೆ. ಅಷ್ಟೇ ಅಲ್ಲ, ಇರಾಕ್ ಜೊತೆಗಿನ ಸಂಘರ್ಷದಲ್ಲಿ ಅಮೆರಿಕ ಬಳಸಿದ ಶಸ್ತ್ರಾಸ್ತ್ರಗಳಿಂದ- ಯುರೇನಿಯಂ ವಿಕಿರಣದಿಂದ- ಈಗ ಹುಟ್ಟುತ್ತಿರುವ ಐದು ಮಕ್ಕಳಲ್ಲಿ, ಒಂದು ಮಗು ಲ್ಯುಕೇಮಿಯಾ ಕ್ಯಾನ್ಸರ್ ಕಾಯಿಲೆಯೊಂದಿಗೇ ಹುಟ್ಟುತ್ತಿದೆ.
1995ರಲ್ಲಿ ಇರಾಕಿನ ಒಂದು ಲಕ್ಷ ಜನರಲ್ಲಿ 40 ಜನಕ್ಕೆ ಕ್ಯಾನ್ಸರ್ ಇತ್ತು. ಅದು 2003ರಲ್ಲಿ 800 ಜನಕ್ಕೆ, 2008ರಲ್ಲಿ 1600 ಜನಕ್ಕೆ ಏರಿಕೆಯಾಯಿತು. ಅಂದರೆ, ಹಿರೋಶಿಮಾ ನಾಗಸಾಕಿಯಲ್ಲಿ ಬಾಂಬ್ ಹಾಕಿದಾಗ ಮಾನವ ಕುಲದ ಮೇಲೆ ಎಷ್ಟು ಭಯಾನಕ ಪರಿಣಾಮ ಬೀರಿತ್ತೋ, ಅದರ 14 ಪಟ್ಟು ಹೆಚ್ಚು ಪರಿಣಾಮ ಈಗ ಇರಾಕಿನಲ್ಲಿ ಉಂಟಾಗಿದೆ. ನಿರಾಶ್ರಿತರು, ವಿಧವೆಯರು, ಅಂಕವಿಕಲರು, ಕ್ಯಾನ್ಸರ್ ಪೀಡಿತ ಮಕ್ಕಳೇ ತುಂಬಿಹೋಗಿರುವ ಇರಾಕ್- ಭೂಮಿ ಮೇಲಿನ ನರಕದಂತಿದೆ. ಅಂತಹ ನರಕವನ್ನು ಸೃಷ್ಟಿಸಿದ ಕೀರ್ತಿ ಅಮೆರಿಕದ್ದಾಗಿದೆ.
ಇದನ್ನು ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ಭಾರತಕ್ಕೆ ಗಂಭೀರ ಸವಾಲುಗಳು, ಪರಿಣಾಮಗಳು
ಇನ್ನು, ಬೆಟ್ಟ ಅಗೆದು ಇಲಿ ಹಿಡಿದ ಅಮೆರಿಕ, ಸದ್ದಾಂ ಎಂಬ ಇಲಿ ಹಿಡಿಯಲು ಅಪಾರ ಶ್ರಮ, ಸಮಯ, ಸೇನೆ, ಶಸ್ತ್ರಾಸ್ತ್ರಗಳನ್ನು ಖರ್ಚು ಮಾಡಿದೆ. ಒಂದು ಅಂದಾಜಿನ ಪ್ರಕಾರ ಅಮೆರಿಕ 3 ಲಕ್ಷ ಕೋಟಿ ಹಣ ವ್ಯಯ ಮಾಡಿದೆ. 4 ಸಾವಿರಕ್ಕೂ ಹೆಚ್ಚು ಮಿಲಿಟರಿ ಯೋಧರನ್ನು ಕಳೆದುಕೊಂಡಿದೆ. 32 ಸಾವಿರ ಯೋಧರು ಗಾಯಾಳುಗಳಾಗಿದ್ದಾರೆ. ಇವರಲ್ಲಿ ಹೆಚ್ಚಿನವರು ಈ ಕ್ಷಣಕ್ಕೂ ಶೆಲ್ ಶಾಕ್‌ಗೆ- ಯುದ್ಧಾನಂತರ ಆಘಾತಕಾರಿ ಒತ್ತಡದ ಅಸ್ವಸ್ಥತೆ(post traumatic stress disorder)ಗೆ ಒಳಗಾಗಿದ್ದಾರೆ. ಜೀವಂತ ಹೆಣವಾಗಿದ್ದಾರೆ.
ಇದೆಲ್ಲವೂ ಕೆಲವೇ ವರ್ಷಗಳ ಹಿಂದೆ ಅವಿವೇಕಿ ಅಮೆರಿಕ, ತೈಲ ಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಇರಾಕ್ ಎಂಬ ಪುಟ್ಟ ದೇಶದ ಮೇಲೆ ಮಾಡಿದ ಘನಘೋರ ಕೃತ್ಯಗಳು. ಈಗ ಇಸ್ರೇಲ್ ಪರ ನಿಂತಿರುವ ಅಮೆರಿಕದ ಅಧ್ಯಕ್ಷ ಟ್ರಂಪ್ ಎಂಬ ಯುದ್ಧದಾಹಿ-ರಕ್ತದಾಹಿ ಇರಾನ್ ಮೇಲೆ ದಾಳಿ ಮಾಡಿದ್ದಾರೆ. ಅಮೆರಿಕ ಸೇನಾ ನೆಲೆಗಳ ಮೇಲೆ ಇರಾನ್ ದಾಳಿ ಮಾಡತೊಡಗಿದಾಗ, ಟ್ರಂಪ್ ಕದನ ವಿರಾಮ ಘೋಷಿಸಿದ್ದಾರೆ. ಟ್ರಂಪ್‌ನ ಈ ನವರಂಗಿ ನಾಟಕವನ್ನು ಮತ್ತು ಅಮೆರಿಕದ ಸಾಮ್ರಾಜ್ಯಶಾಹಿ ವಿಸ್ತರಣಾವಾದವನ್ನು ಪ್ರಧಾನಿ ಮೋದಿ ಉಗ್ರವಾಗಿ ಖಂಡಿಸಬೇಕು. ಅಮೆರಿಕದ ಹಿಡಿತದಿಂದ ಬಿಡಿಸಿಕೊಂಡು ಹೊರಬರಬೇಕು. ಗಾಂಧಿ ನೆಲದ ನಿಲುವನ್ನು ಎತ್ತಿಹಿಡಿಯಬೇಕು.
