ಕ್ಯಾನ್ಸರ್ ಪೀಡಿತ ಅಜ್ಜಿಯೊಬ್ಬರನ್ನು ಆಕೆಯ ಸ್ವಂತ ಮೊಮ್ಮಗನೇ ಕಸದ ರಾಶಿಗೆ ಎಸೆದು ಹೋಗಿರುವ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದೆ.
60 ವರ್ಷದ ಯಶೋಧಾ ಗಾಯಕ್ವಾಡ್ ಅವರು ಚರ್ಮದ ಕ್ಯಾನ್ಸರ್ನಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಎರಡು ದಿನಗಳ ಹಿಂದೆ ಮುಂಬೈನ ಆರ್ ಕಾಲೋನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ವೃದ್ಧರೊಬ್ಬರು ದುರ್ಬಲ ಸ್ಥಿತಿಯಲ್ಲಿ ಮಲಗಿರುವುದನ್ನು ಸ್ಥಳೀಯರೊಬ್ಬರು ನೋಡಿದ್ದಾರೆ. ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ವೃದ್ಧೆಯ ಕುಟುಂಬದವರನ್ನು ಹುಡುಕಲು ಪೊಲೀಸರು ಮುಂದಾಗಿದ್ದಾರೆ.
ಬೆಳಗ್ಗೆ ಮಹಿಳೆ ಪತ್ತೆಯಾಗಿದ್ದರೂ ಸಂಜೆ 5.30ರ ಹೊತ್ತಿಗೆ ಮಾತ್ರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಯಿತು. ಮಹಿಳೆ ತನ್ನ ಕುಟುಂಬ ಸದಸ್ಯರ ಎರಡು ನಿವಾಸಗಳ ವಿಳಾಸವನ್ನು ಹಂಚಿಕೊಂಡಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | 1180 ದಿನಗಳ ಚನ್ನರಾಯಪಟ್ಟಣ ಚಳವಳಿಗೆ ಸರ್ಕಾರ ಸ್ಪಂದಿಸಲಿ
ಸಂಬಂಧಿಕರನ್ನು ಪತ್ತೆಹಚ್ಚಲು ಆಕೆಯ ಚಿತ್ರವನ್ನು ಎಲ್ಲ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ. ಮೊಮ್ಮಗ ಈ ರೀತಿಯ ಅಮಾನವೀಯ ಕೆಲಸವನ್ನು ಏಕೆ ಮಾಡಿದನೆಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಮಂಡ್ಯದಲ್ಲೂ ನಡೆದ ಘಟನೆ
ಮಂಡ್ಯದಲ್ಲೂ ಕೂಡ ಇದೇ ರೀತಿಯಾದ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋಗಿರುವ ಘಟನೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ. ವೃದ್ಧೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಬರುತ್ತೇನೆ, ಇಲ್ಲೇ ಇರು’ ಎಂದು ರಸ್ತೆಯಲ್ಲಿ ತಾಯಿಯನ್ನು ಬಿಟ್ಟು ಮಗ ಹೋಗಿದ್ದ ಎನ್ನಲಾಗಿದೆ.
ಮಗನ ಬರುವಿಕೆಗಾಗಿ ಕಾಯುತ್ತಿದ್ದ ತಾಯಿ, ‘ನನ್ನ ಮಗ ಬಂದು ಕರೆದುಕೊಂಡು ಹೋಗುತ್ತಾನೆ’ ಎನ್ನುತ್ತಿದ್ದರು. ಸುಮಾರು 70 ರಿಂದ 80 ವರ್ಷದ ವೃದ್ಧೆಗೆ ಸ್ಥಳೀಯರು ಆಹಾರ ನೀಡಿ ರಕ್ಷಿಸಿದ್ದಾರೆ. ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ವೃದ್ಧೆಯನ್ನು ರಕ್ಷಿಸಿ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದಾರೆ.