- ಬೆಂಗಳೂರು, ಮೈಸೂರಿನಲ್ಲಿ ಒಟ್ಟು 13 ಶಾಖೆ ಹೊಂದಿರುವ ಬ್ಯಾಂಕ್
- ಬ್ಯಾಂಕ್‌ನ ಪರವಾನಗಿ ರದ್ದುಗೊಳಿಸಿಲ್ಲ ಎಂದು ಸ್ಪಷ್ಟಪಡಿಸಿದ ಆರ್‍ಬಿಐ
ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತನ್ನದೇ ಹೆಸರು ಗಳಿಸಿಕೊಂಡಿದ್ದ ಬೆಂಗಳೂರಿನ ‘ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್’ ವ್ಯವಹಾರಕ್ಕೆ ನಿರ್ಬಂಧ ಹೇರಿ, ಆರು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಆರ್‌ಬಿಐ ಘೋಷಿಸಿದೆ.
ಈ ಬಗ್ಗೆ ಜುಲೈ 24ರಂದು ಹೇಳಿಕೆ ಹೊರಡಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ‘ಆರ್ಥಿಕ ಮುಗ್ಗಟ್ಟಿನಲ್ಲಿರುವ ಬೆಂಗಳೂರು ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಸಾಲ ನೀಡುವಂತಿಲ್ಲ. ಅಲ್ಲದೇ, ಗ್ರಾಹಕರಿಂದ ಹಣ ಜಮಾವಣೆ ಮಾಡಲು ಅನುಮತಿ ಪಡೆಯಬೇಕು. ಸದ್ಯ ಗ್ರಾಹಕರು 50,000 ರೂಪಾಯಿಯವರೆಗೆ ಮಾತ್ರ ಹಣ ಹಿಂಪಡೆಯಲು ಸಾಧ್ಯ’ ಎಂದು ತಿಳಿಸಿದೆ.
ಆರ್‍ಬಿಐ ಹೇಳಿಕೆ ಬಂದಿರುವ ಬೆನ್ನಲ್ಲೇ ಬ್ಯಾಂಕ್ ಗ್ರಾಹಕರ ಆತಂಕ ಹೆಚ್ಚಿಸಿದೆ. ವಿಷಯ ತಿಳಿದ ಹಿನ್ನೆಲೆಯಲ್ಲಿ ಬ್ಯಾಂಕ್ ಗ್ರಾಹಕರು ತಮ್ಮ ಹಣ ಕಳೆದುಕೊಳ್ಳುವ ಭೀತಿಯಲ್ಲಿ ಶಾಖೆಗಳಲ್ಲಿ ಸೇರತೊಡಗಿದ್ದಾರೆ.
ಬೆಂಗಳೂರು, ಮೈಸೂರಿನಲ್ಲಿ ಒಟ್ಟು 13 ಶಾಖೆಗಳನ್ನು ಹೊಂದಿರುವ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಲಕ್ಷಾಂತರ ಗ್ರಾಹಕರನ್ನು ಹೊಂದಿದೆ. ಈ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ ಗ್ರಾಹಕರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಗ್ರಾಹಕರು 5 ಲಕ್ಷ ರೂಪಾಯಿವರೆಗೆ ವಿಮಾ ಹಣ ಪಡೆಯಲು ಅವಕಾಶ ನೀಡಿರುವ ಆರ್‍ಬಿಐ, ಬ್ಯಾಂಕಿನ ಪರವಾನಗಿಯನ್ನು ರದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ವ್ಯವಹಾರ ಮುಂದುವರಿಸಲು ಅವಕಾಶ ನೀಡಿದ್ದು, ಬ್ಯಾಂಕ್‌ನ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಿದೆ. ಈಗಿನ ನಿರ್ದೇಶನವು ಆರು ತಿಂಗಳು ಚಾಲ್ತಿಯಲ್ಲಿರಲಿದೆ ಎಂದು ಆರ್‍ಬಿಐ ತಿಳಿಸಿದೆ.
ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿರುವ ಆರ್‌ಬಿಐ, ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಮುಂದಿನ ಎಲ್ಲ ವ್ಯವಹಾರ ಆರ್‌ಬಿಐ ನಿಗಾದಲ್ಲಿ ನಡೆಯಲಿದೆ. ಆರ್‌ಬಿಐ ಸೂಚನೆಯಂತೆ ಎಲ್ಲ ವ್ಯವಹಾರಗಳನ್ನು ಕೋ ಆಪರೇಟಿವ್ ಬ್ಯಾಂಕ್ ಮಾಡಲಿದೆ ಎಂದೂ ಕೂಡ ಮಾಹಿತಿ ನೀಡಿದೆ.
400 ಕೋಟಿ ಸಾಲ ವಸೂಲಿ ಬಾಕಿ
ಹೆಸರು ಹೇಳಲಿಚ್ಛಿಸದ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್‌ನ ಗ್ರಾಹಕರೊಬ್ಬರು ಈ ದಿನ.ಕಾಮ್ ಜೊತೆಗೆ ಮಾತನಾಡಿದ್ದು, ‘ಈಗಾಗಲೇ ಬ್ಯಾಂಕಿನಿಂದ ಸಾಲ ಪಡೆದವರು ಸರಿಯಾದ ಸಮಯಕ್ಕೆ ನೀಡುತ್ತಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಮಾರು 400 ಕೋಟಿ ಸಾಲ ವಸೂಲಿ ಬಾಕಿ ಇದೆ’ ಎಂದು ತಿಳಿಸಿರುವುದಾಗಿ ಮಾಹಿತಿ ನೀಡಿದ್ದಾರೆ.