ಇರಾನ್- ಇಸ್ರೇಲ್ ಕದನ; ಭಾರತದ ತಟಸ್ಥ ನಿಲುವು ಸರಿಯೇ?

Date:

Advertisements

ಜಗತ್ತು ಮೂರನೇ ಮಹಾಯುದ್ಧದಂಚಿನಲ್ಲಿದೆ ಎಂಬ ಆತಂಕದ ಸುದ್ದಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ ಮಧ್ಯಪ್ರಾಚ್ಯವು ಇಸ್ರೇಲ್ ಮತ್ತು ಇರಾನ್ ನಡುವೆ ನಡೆತ್ತಿರುವ ದಾಳಿ-ಪ್ರತಿದಾಳಿಗಳಿಂದ ಹೊತ್ತಿ ಉರಿಯುತ್ತಿದೆ. ಈ ಸಂಘರ್ಷವು ಕೇವಲ ಆ ರಾಷ್ಟ್ರಗಳಲ್ಲ, ಜಾಗತಿಕ ರಾಜಕೀಯದ ಮೇಲೂ ತೀವ್ರ ಪರಿಣಾಮ ಬೀರುತ್ತಿದೆ. ಇಸ್ರೇಲ್‌ನೊಂದಿಗೆ ಭಾರತ ಭದ್ರತೆ, ತಂತ್ರಜ್ಞಾನ ಹಾಗೂ ರಕ್ಷಣಾ ವಸ್ತುಗಳ ಖರೀದಿಯಲ್ಲಿ ಆಳವಾದ ಸಂಬಂಧ ಹೊಂದಿದೆ. ಜೊತೆಗೆ, ಇರಾನ್‌ನೊಂದಿಗೆ ಚಾಬಹಾರ್ ಬಂದರು ಅಭಿವೃದ್ದಿ ಸೇರಿದಂತೆ ಸಾಂಪ್ರದಾಯಿಕ ಸಂಬಂಧ ಹೊಂದಿದೆ. ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧ ಹೊಂದಿರುವ ಭಾರತ ಈಗ ಸಂಕಷ್ಟದ ಸಂದರ್ಭದಲ್ಲಿದೆ. ಈ ಪರಿಸ್ಥಿತಿಯಲ್ಲಿ ಭಾರತ ಯಾರ ಪರ ನಿಲ್ಲಲಿದೆ ಎಂಬ ಪ್ರಶ್ನೆ ಮಹತ್ತರವಾಗಿದೆ.

ಇರಾನ್–ಇಸ್ರೇಲ್ ಸಂಘರ್ಷಕ್ಕೆ ಕಾರಣಗಳೇನು?

1979ರ ಇಸ್ಲಾಮಿಕ್‌ ಕ್ರಾಂತಿಗೂ ಮೊದಲು ಅಧಿಕಾರದಲ್ಲಿದ್ದ ಮೊಹಮ್ಮದ್ ರಾಜಾ ಷಾ ಪಹ್ಲವಿಯ ಏಕಪಕ್ಷೀಯ ಆಡಳಿತ ಮತ್ತು ರಾಜಕೀಯ ದಬ್ಬಾಳಿಕೆಗಳು ಜನರ‌ ಅಸಮಾಧಾನಕ್ಕೆ ಕಾರಣವಾದವು. ಪಾಶ್ಚಿಮಾತ್ಯ ಪರವಾದ ನೀತಿಗಳು ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ಬಲವಂತವಾಗಿ ಹೇರಲಾಯಿತು. ಇದು ಕಟ್ಟಾ ಇಸ್ಲಾಮಿಕ್ ಪುರಾತನ ಸಂಸ್ಕೃತಿಯ ಆರಾಧಕರಲ್ಲಿ ಆಕ್ರೋಶ ಹುಟ್ಟಲು ಪ್ರಮುಖ ಕಾರಣವಾಯಿತು. ಅಮೆರಿಕದ ಚೇಲಾನಂತಿದ್ದ ಪಹ್ಲವಿಯ ವಿರೋಧಿಗಳನ್ನು, ಪ್ರಶ್ನೆ ಮಾಡುವವರನ್ನು ಬಂಧಿಸುವ, ಕಿರುಕುಳ ನೀಡುವ, ಕೊಲೆಗಳನ್ನೂ ಸಹ ಮಾಡುವ ಸರ್ವಾಧಿಕಾರಿ ಧೋರಣೆಗಳು ವಿಪರೀತವಾದವು. ಇರಾನೀ ಧಾರ್ಮಿಕ ಮುಖಂಡರು, ಸಾಮಾನ್ಯ ಜನರೂ ಈ ಧೋರಣೆಗಳನ್ನು ಇಸ್ಲಾಂ ವಿರೋಧಿ ಎಂದು ಪರಿಗಣಿಸಿದರು. ಎರಡೂ ದೇಶಗಳ ನಡುವಿನ ಇಸ್ಲಾಮಿಕ್‌ ಅಂಶಗಳು ಮತ್ತು ಇರಾನ್‌ ಪ್ಯಾಲೆಸ್ತೀನ್‌ ಪರ ವಕಾಲತ್ತು ವಹಿಸಿದ್ದು ಇಬ್ಬರ ನಡುವೆ ಹಗೆತನಕ್ಕೆ ಕಾರಣವಾಯಿತು. ಇದು ಕ್ರಾಂತಿಗೆ ಮುನ್ನುಡಿ ಬರೆಯಿತು.

Advertisements
WhatsApp Image 2025 06 25 at 4.27.50 PM
1979ರ ಇರಾನ್‌ ಇಸ್ಲಾಮಿಕ್‌ ಕ್ರಾಂತಿ

1979ರಲ್ಲಿ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್ ಕ್ರಾಂತಿಯಲ್ಲಿ ರಾಜಾ ಷಾ ಪಹ್ಲವಿಯನ್ನು ಕೆಳಗಿಳಿಸಿ ಆಯತೊಲ್ಲಾ ರುಹೊಲ್ಲಾ ಖೊಮೇನಿ ಅಧಿಕಾರಕ್ಕೆ ಬಂದರು. ಅವರ ನೇತೃತ್ವದಲ್ಲಿ ಇರಾನ್ ಪಶ್ಚಿಮ ರಾಷ್ಟ್ರಗಳ ವಿರುದ್ಧ ಗಂಭೀರ ಧೋರಣೆಯನ್ನು ತಾಳಲಾರಂಭಿಸಿತು ಮತ್ತು ಇಸ್ರೇಲ್‌ನೊಂದಿಗೆ ಸಂಬಂಧವನ್ನು ಸಂಪೂರ್ಣವಾಗಿ ಕಡಿತಗೊಳಿಸಿತು. ಬಳಿಕ ಇಸ್ರೇಲ್‌ ಸೇರಿದಂತೆ ಪಶ್ಚಿಮ ರಾಷ್ಟ್ರಗಳು ಹಾಗೂ ಇರಾನ್ ನಡುವಿನ ಸಂಬಂಧದ ಚಿತ್ರಣ ಸಂಪೂರ್ಣ ಬದಲಾಯಿತು.

ಕ್ರಾಂತಿಯ ಬಳಿಕ ಇರಾನ್‌ನಲ್ಲಿ ಇಸ್ಲಾಮಿಕ್ ಗಣರಾಜ್ಯವನ್ನು ಸ್ಥಾಪಿಸಲಾಯಿತು. ಪಾಶ್ಚಿಮಾತ್ಯ ದೇಶಗಳ ವಿರುದ್ಧ ತಿರುಗಿಬಿದ್ದ ಖೊಮೇನಿ ಪ್ರಭುತ್ವ ಇಸ್ಲಾಮಿಕ್ ತತ್ವಗಳ ಆಧಾರದ ಮೇಲೆ ವಿದೇಶಾಂಗ ನೀತಿ ರೂಪಿಸಿತು. ಅಲ್ಲಿಂದ ಪಾಶ್ಚಿಮಾತ್ಯ ರಾಷ್ಟಗಳೊಂದಿಗಿನ ಇರಾನಿನ ಹಗೆತನ ಶುರುವಾಯಿತು. 2020ರ ಡಿಸೆಂಬರ್‌ನಲ್ಲಿ ಖೊಮೇನಿ, ಇಸ್ರೇಲ್ಅನ್ನು “ಕ್ಯಾನ್ಸರ್ ಗಡ್ಡೆ” ಎಂದು ಬಣ್ಣಿಸಿ, ಅದನ್ನು ತೆಗೆದುಹಾಕಬೇಕೆಂದು ಕರೆ ನೀಡಿದರು. ಯಾವುದೇ ಅರಬ್ ದೇಶ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬುದು ಇಸ್ರೇಲ್‌ನ ನೀತಿ. ಇದು ತನ್ನ ಅಸ್ತಿತ್ವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಇಸ್ರೇಲ್‌ ನಂಬುತ್ತದೆ. ಈ ನೀತಿಗೆ ವಿರುದ್ಧವಾಗಿ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಿದೆ ಎಂಬುದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರ ಆರೋಪ. ಆದರೆ, ಇರಾನ್‌ ಪರಮಾಣು ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳಿಂದ ದೂರವಿದೆ. ಪರಮಾಣು ಬಾಂಬ್‌ಗಳನ್ನು ತಯಾರಿಸುವ ಉದ್ದೇಶ ತಮಗಿಲ್ಲ ಎಂದು ಇರಾನ್ ಪ್ರತಿಪಾದಿಸುತ್ತಲೇ ಬಂದಿದೆ. ಆದರೂ, ಇಸ್ರೇಲ್ ತನ್ನ ವಾಗ್ದಾಳಿ ಮುಂದುವರೆಸಿದೆ.

ಜಾಗತಿಕ ಸರ್ವಾಧಿಕಾರಿ ಅಮೆರಿಕದ ಕುತಂತ್ರ…

ತಾನು ವಿಶ್ವದ ದೊಡ್ಡಣ್ಣ ಎಂದು ಹೇಳಿಕೊಳ್ಳುವ ಅಮೆರಿಕದ ಕುತಂತ್ರಗಾರಿಕೆ ದಶಕಗಳಿಂದಲೂ ನಡೆಯುತ್ತಲೇ ಇದೆ. ವಿಶ್ವಸಂಸ್ಥೆಯ ಚಾರ್ಟರ್ ಮತ್ತು ಪರಮಾಣು ಪ್ರಸರಣ ನಿಷೇಧ ಒಪ್ಪಂದ(ಎನ್‌ಪಿಟಿ)ವನ್ನು ಉಲ್ಲಂಘಿಸಿರುವ ಅಮೆರಿಕ ಇರಾನ್‌ನ ಪರಮಾಣು ನೆಲೆಗಳ ಮೇಲೆ ದಾಳಿ ನಡೆಸಿ ತಾನು ವಿಶ್ವದಲ್ಲೇ ಅತಿ ಕ್ರೂರ ಸರ್ವಾಧಿಕಾರಿ ರಾಷ್ಟ್ರ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಂಡಿದೆ. ಕಳೆದ 50 ವರ್ಷಗಳ ಜಗತ್ತಿನ ರಾಜಕೀಯ ಇತಿಹಾಸದಲ್ಲೇ ಅಮೆರಿಕದಷ್ಟು ಬೇರೆ ಯಾವ ರಾಷ್ಟ್ರವೂ ಇತರ ದೇಶಗಳ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿಲ್ಲ. ಸೋವಿಯತ್‌ ರಷ್ಯಾ ಒಕ್ಕೂಟದ ಪತನದ ನಂತರ ತನ್ನ ಹಿತಾಸಕ್ತಿಗೆ ವಿರುದ್ಧವಿರುವ ಅಥವಾ ತನ್ನ ಆಜ್ಞೆಗೆ ತಲೆಭಾಗದ ದೇಶಗಳನ್ನು ಎಡೆಮುರಿಕಟ್ಟಲು ಅಮೆರಿಕ ನಿರಂತರವಾಗಿ ಹವಣಿಸುತ್ತಿದೆ. ಈಗ ತನ್ನ ಸಾಕು ನಾಯಿ ಎಂಬಂತೆ ನೋಡುತ್ತಿರುವ ಇಸ್ರೇಲ್‌ಅನ್ನು ದಾಳವಾಗಿಸಿಕೊಂಡು ಇರಾನ್‌ ಮೇಲೆ ದಾಳಿ ನಡೆಸಿದೆ. ಇದೇ ರೀತಿ, 20 ವರ್ಷಗಳ ಹಿಂದೆ ಇರಾಕ್‌ ಮೇಲೆಯೂ ದಾಳಿ ನಡೆಸಿ ಇಡೀ ದೇಶವನ್ನು ಸಂಪೂರ್ಣ ಹಾಳುಗೆಡವಿತ್ತು ಇದೇ ಅಮೆರಿಕ.

ಇರಾಕ್‌ನ ಮೇಲೆ ಅಮೆರಿಕ ಮಾಡಿದ ರಾಕ್ಷಸಿ ಕೃತ್ಯದಿಂದಾಗಿ ಅಲ್ಲಿನ ಸರ್ಕಾರದ ವರದಿಯಂತೆ ಸುಮಾರು 30 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಮಹಿಳೆಯರ ಮೇಲಿನ ಹಿಂಸೆ, ಮರ್ಯಾದಾ ಹತ್ಯೆಗಳು, ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳ ತೀವ್ರ ಏರಿಕೆಯಾಗಿದೆ.

ಇದು ಕೇವಲ ಇರಾಕ್‌ಗೆ ಸೀಮಿತವಾಗಿರದೆ, ನಂತರದ ದಶಕಗಳಲ್ಲಿ ಲಿಬಿಯಾ, ಸಿರಿಯಾ, ಸೊಮಾಲಿಯಾ, ಅಫ್ಘಾನಿಸ್ತಾನ, ಲೆಬನಾನ್‌ ಸೇರಿದಂತೆ ಹಲವು ದೇಶಗಳ ಮಧ್ಯೆ ಅಮೆರಿಕ ಹಸ್ತಕ್ಷೇಪ ಹೆಚ್ಚಾಯಿತು. ಚೀನಾ ಮತ್ತು ರಷ್ಯಾಗೆ ಆಪ್ತವಾಗಿರುವ ದೇಶಗಳು, ನೈಸರ್ಗಿಕ ಸಂಪನ್ಮೂಲ ಹೊಂದಿರುವ ದೇಶಗಳನ್ನು ಅಮೆರಿಕ ಸದಾ ಗುರಿ ಮಾಡುತ್ತಲೇ ಬಂದಿದೆ. ಈಗ ಇರಾನ್‌ ಸರದಿ. ಅಮೆರಿಕದ ಯುದ್ಧದಾಹ ಹಾಗೂ ಸಂಪನ್ಮೂಲ ದಾಹಕ್ಕೆ ವಿಯೆಟ್ನಾಂ, ಚಿಲಿ, ಲಿಬಿಯಾ, ಸಿರಿಯಾ, ಅಫ್ಘಾನಿಸ್ತಾನ, ಯಮನ್‌ ಅಲ್ಲದೆ ಲ್ಯಾಟಿನ್‌ ಅಮೆರಿಕ ದೇಶಗಳು ಹಾಗೂ ಮಧ್ಯ ಪ್ರಾಚ್ಯ ರಾಷ್ಟ್ರಗಳು ಹಲವು ಬಾರಿ ತೊಂದರೆಗೊಳಗಾಗಿವೆ.

ದಶಕಗಳಿಂದಲೂ ಇರಾನ್‌ ಮೇಲೆ ತನ್ನ ಪಾರುಪತ್ಯ ಸಾಧಿಸಲು ಅಮೆರಿಕ ಹವಣಿಸುತ್ತಿದೆ. 1953ರಲ್ಲಿ ಇರಾನ್‌ನ ಜನರಿಂದ ಆಯ್ಕೆಯಾದ ಪ್ರಧಾನಿ ಮೊಸದ್ದಿಕ್ ಅವರನ್ನು ಕೆಳಗಿಳಿಸಿದ ನಂತರ, 1979ರ ಇಸ್ಲಾಮಿಕ್ ಕ್ರಾಂತಿಯಲ್ಲಿ ತನ್ನ ಪ್ರಭಾವಿತ ಷಾ ಆಳ್ವಿಕೆಯನ್ನೂ ಕಳೆದುಕೊಂಡು ಕಂಗೆಟ್ಟ ಅಮೆರಿಕ ಮತ್ತೆ ಟೆಹ್ರಾನ್‌ನಲ್ಲಿ ತನ್ನ ಹಿಡಿತವನ್ನು ಪುನಃಸ್ಥಾಪಿಸಬೇಕೆಂದು ಹೊಂಚುಹಾಕಿತ್ತು.

WhatsApp Image 2025 06 25 at 4.25.57 PM
ಇಸ್ರೇಲ್‌ ದಾಳಿ ನಂತರದ ಇರಾನ್

ಇದನ್ನೂ ಓದಿ: ಇರಾಕ್ ವಿರುದ್ಧ ಸುಳ್ಳು ಹೇಳುತ್ತಲೇ ದಾಳಿ ಮಾಡಿದ್ದ ಜಗತ್ತಿನ ಸರ್ವಾಧಿಕಾರಿ ದೇಶ ಅಮೆರಿಕ

ಜಾರ್ಜ್‌ಟೌನ್ ಯೂನಿವರ್ಸಿಟಿ ಖತಾರ್ ಶಾಖೆಯ ಪ್ರೊಫೆಸರ್ ಮೆಹ್ರಾನ್ ಕಾಮ್ರವಾ ಹೇಳುವಂತೆ, “ಶಾಸಕ ಬದಲಾವಣೆ ಎಂಬ ಕಲ್ಪನೆ ಅಮೆರಿಕದ ಮನಸ್ಸಿನಲ್ಲಿ ಯಾವಾಗಲೋ ಆಗಿದೆ… ಇರಾನ್‌ನ ಅಣು ಕಾರ್ಯಕ್ರಮವನ್ನು ಈ ಬದಲಾವಣೆಗೆ ಉತ್ತಮ ಆಧಾರವಾಗಿ ಬಳಸಲಾಗಿದೆ”. ಬಳಿಕ 1979ರ ಫೆಬ್ರವರಿಯಲ್ಲಿ ಕ್ರಾಂತಿಯ ನಂತರ ಇರಾನ್‌ನ $8.1 ಬಿಲಿಯನ್ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಅಮೆರಿಕ, ಇರಾನ್‌ ಮೇಲೆ ವ್ಯಾಪಾರ ನಿರ್ಬಂಧ ವಿಧಿಸಿತು. 1980–88ರ ಇರಾನ್–ಇರಾಕ್ ಯುದ್ಧದ ಸಮಯದಲ್ಲಿ ರೋನಾಲ್ಡ್ ರೆಗನ್, ಇರಾಕ್‌ಗೆ ಗುಪ್ತಚರ ಮಾಹಿತಿ ಮತ್ತು ನೆರವು ನೀಡಿದರು. 1984ರಲ್ಲಿ ಇರಾನ್‌ನನ್ನು “ಆತಂಕದ ಬೆಂಬಲಕೋರ ರಾಷ್ಟ್ರ” ಎಂದು ಘೋಷಿಸಿದರು. 1988ರಲ್ಲಿ ಸಿಐಎ ಮಾಹಿತಿಯಂತೆ ಇರಾಕಿ ಪಡೆಗೆ ಇರಾನಿ ಸೈನಿಕರ ಸ್ಥಳ ವಿವರವನ್ನು ನೀಡಿ, ಆ ಸ್ಥಳಗಳಲ್ಲಿ ರಾಸಾಯನಿಕ ದಾಳಿಗಳು ನಡೆಯುವಂತೆ ಮಾಡಿದರು. ಒಟ್ಟಾರೆ, ಪರದೇಶದಲ್ಲಿರುವ ಇರಾನಿ ವಿರೋಧಿಗಳನ್ನು ರಹಸ್ಯವಾಗಿ ಬೆಂಬಲಿಸಿದರು.

1995ರಲ್ಲಿ ಬಿಲ್ ಕ್ಲಿಂಟನ್ ಇರಾನ್ ಅಸ್ತ್ರಸಾಮರ್ಥ್ಯ ಬೆಳೆಸುತ್ತಿದೆ ಎಂದು ಆರೋಪಿಸಿದರು. 1996ರಲ್ಲಿ ಇರಾನ್‌ಅನ್ನು ಮತ್ತೆ “ಅತ್ಯಂತ ಭೀಕರತೆ ಬೆಂಬಲಿಸುವ ರಾಷ್ಟ್ರ” ಎಂದು ತೀರ್ಮಾನಿಸಿಬಿಟ್ಟರು. 1996ರಲ್ಲಿ ಇರಾನ್ ನಿಗ್ರಹ ಕಾಯಿದೆ ತರುವ ಮೂಲಕ ಆರ್ಥಿಕ ಒತ್ತಡ ಹೆಚ್ಚಿಸಿದರು. ಜಾರ್ಜ್ ಡಬ್ಲ್ಯೂ ಬುಶ್, 2002ರ ತಮ್ಮ ರಾಷ್ಟ್ರ ಭಾಷಣದಲ್ಲಿ ಇರಾನ್ ಅನ್ನು “ದೋಷಿಗಳ ಎಕ್ಸಿಸ್” (Axis of Evil), 2003ರಲ್ಲಿ, “ಇರಾನ್ ಅಣ್ವಸ್ತ್ರ ಹೊಂದಿದರೆ ಅದು ಅಪಾಯಕಾರಿ” ಎಂದೆಲ್ಲಾ ಹೇಳಿದರು. ಮುಂದುವರೆದು Iran Freedom Support Act (2006) ಮೂಲಕ ಇರಾನ್‌ನ ಆಂತರಿಕ ವಿರೋಧಿಗಳಿಗೆ $10 ಮಿಲಿಯನ್ ನೆರವಿನ ವ್ಯವಸ್ಥೆ ಮಾಡಿದ್ದರು. ಉಪಾಧ್ಯಕ್ಷ ಡಿಕ್ ಚೆನಿ ಮತ್ತು ಯುಎನ್ ರಾಯಭಾರಿ ಜಾನ್ ಬೋಲ್ಟನ್, ಶಾಸಕರ ಬದಲಾವಣೆಗಾಗಿ ಬಹಿರಂಗ ಬೆಂಬಲ ವ್ಯಕ್ತಪಡಿಸಿದರು. ಇನ್ನು ಟ್ರಂಪ್‌ ತನ್ನ ಮೊದಲ ಅವಧಿಯಲ್ಲಿ 2015ರ ಅಣು ಒಪ್ಪಂದವನ್ನು ರದ್ದು ಮಾಡಿ, “ಮ್ಯಾಕ್ಸಿಮಮ್ ಪ್ರೆಶರ್” ನೀತಿ ಜಾರಿಗೆ ತಂದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಬೋಲ್ಟನ್, ಬಹಿರಂಗವಾಗಿ ಶಾಸಕರ ಬದಲಾವಣೆಗಾಗಿ ಕರೆ ನೀಡಿದರು. ಎರಡನೇ ಅವಧಿಯಲ್ಲಿ ಇಸ್ರೇಲ್ ನಡೆಸುವ ದಾಳಿಗಳಿಗೆ ಬೆಂಬಲ ನೀಡಿ, ಇರಾನ್ ವಿರುದ್ಧದ ಯುದ್ಧಗಳಿಗೆ ಎಲ್ಲಾ ರೀತಿಯ ಬೆಂಬಲ ಕೊಟ್ಟರು. ಇವೆಲ್ಲವೂ ಅಮೆರಿಕ ತನ್ನ ಸರ್ವಾಧಿಕಾರಿ ಧೋರಣೆಯಿಂದ, ಅಧಿಕಾರ ಶಾಹಿ ಅಮಲಿನಿಂದ, ಪರ್ಷಿಯನ್ ರಾಷ್ಟ್ರಗಳಲ್ಲಿ ಜಾಗತಿಕವಾಗಿ ತನ್ನ ಪಾರುಪತ್ಯ ಸಾಧಿಸುವ ದುರಾಲೋಚನೆಯಿಂದ ಮಾಡಿದ ಕುತಂತ್ರಗಳು, ಕುಕೃತ್ಯಗಳು.

ಭಾರತ ಹಾಗೂ ಇಸ್ರೇಲ್‌ ಸಂಬಂಧ ಹೇಗಿದೆ?

ಪ್ರಸ್ತುತ ಇಸ್ರೇಲ್‌ನಿಂದ ಅತಿ ಹೆಚ್ಚು ಶಸ್ತ್ರಾಸ್ತ್ರಗಳನ್ನು ಖರೀದಿಸುವ ದೇಶಗಳಲ್ಲಿ ಭಾರತವೂ ಒಂದು. ತಂತ್ರಜ್ಞಾನ, ಅತ್ಯಾಧುನಿಕ ಡ್ರೋನ್‌ಗಳು, ಮಿಸೈಲ್‌ ಡಿಫೆನ್ಸ್‌ ಸಿಸ್ಟಮ್‌, ಗಡಿ ಭದ್ರತಾ ತಂತ್ರಜ್ಞಾನ, ಭಯೋತ್ಪಾದನಾ ನಿಗ್ರಹ ತಂತ್ರಗಾರಿಕೆ ಸೇರಿದಂತೆ ರಕ್ಷಣಾ ಕ್ಷೇತ್ರದಲ್ಲಿ ಭಾರತ ಇಸ್ರೇಲ್‌ ಅವಲಂಬಿಸಿದೆ. ಇಸ್ರೇಲ್‌ ಮೇಲೆ ಹಮಾಸ್‌ ಉಗ್ರದಾಳಿಯಾದಾಗಲೂ ಇಸ್ರೇಲ್‌ ಜೊತೆ ನಿಲ್ಲುವುದಾಗಿ ಪ್ರಧಾನಿ ಮೋದಿ ಹೇಳಿದ್ದರು.

ಭಾರತ ಹಾಗೂ ಇರಾನ್‌ ಸಂಬಂಧ ಹೇಗಿದೆ?

ಭಾರತ ಇರಾನ್‌ ಜೊತೆ ಶತಮಾನಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಂಟು ಹೊಂದಿದೆ. ಇರಾನಿನ ಪರಮೋಚ್ಚ ನಾಯಕ ಖೊಮೇನಿ ಕಾಶ್ಮೀರ ವಿಚಾರ ಮತ್ತು ಅಲ್ಪಸಂಖ್ಯಾತರ ವಿಚಾರದಲ್ಲಿ ಭಾರತವನ್ನು ಟೀಕಿಸಿದ್ದರೂ, ಭಾರತದ ಹಿತಾಸಕ್ತಿಗೆ ಹಾನಿ ಉಂಟುಮಾಡುವ ಯಾವುದೇ ನಿರ್ಧಾರಗಳನ್ನು ಇರಾನ್ ತೆಗೆದುಕೊಂಡಿಲ್ಲ ಎಂಬುದು ಗಮನಾರ್ಹ. ಟೀಕೆಗಳು ರಾಜಕೀಯ ದೃಷ್ಠಿಯಿಂದ ಆಗಿರಬಹುದು. ಆದರೆ, ಸಂಬಂಧದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಯೇನೂ ಆಗಿಲ್ಲ.

1. ಚಾಬಹಾರ್‌ ಬಂದರು: ಚಾಬಹಾರ್ ಬಂದರು ಯೋಜನೆ ಭಾರತಕ್ಕೆ ಬಹಳ ಮುಖ್ಯವಾಗಿದೆ. ಬಂದರು ವ್ಯಾಪಾರ ಮಾರ್ಗಗಳನ್ನು ಅಭಿವೃದ್ಧಿ ಪಡಿಸುವ ಭಾರತದ ಯೋಜನೆಗಳಲ್ಲಿ ಮತ್ತು ಮಧ್ಯ ಏಷ್ಯಾ ಮೇಲೆ ಪ್ರಭಾವ ಬೀರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪಾಕಿಸ್ತಾನದ ಮೂಲಕ ಸಾಗದೆಯೇ, ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ದೇಶಗಳೊಡನೆ ವ್ಯಾಪಾರ ಸಂಬಂಧ ಗಟ್ಟಿ ಮಾಡಿಕೊಳ್ಳಲು ಈ ಬಂದರು ಅತ್ಯಂತ ಪ್ರಮುಖವಾಗಿದೆ. ಭಾರತ ಚಾಬಹಾರ್ ಬಂದರು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಇರಾನ್ ಜೊತೆಗೆ 10 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಬಂದರು ಇಂಟರ್‌ ನ್ಯಾಷನಲ್ ನಾರ್ತ್ ಸೌತ್ ಟ್ರಾನ್ಸ್‌ಪೋರ್ಟ್‌ ಕಾರಿಡಾರಿನ (ಐಎನ್ಎಸ್‌ಟಿಸಿ) ಸಂಪರ್ಕ ಕೇಂದ್ರವಾಗಿರಲಿದೆ. ಈ ಮಾರ್ಗ ಭಾರತಕ್ಕೆ ಯುರೋಪಿಗೆ ವ್ಯಾಪಾರ ಸಂಪರ್ಕ ವೃದ್ಧಿಸಲು ನೆರವಾಗಲಿದೆ.‌ ಚಾಬಹಾರ್ ಬಂದರು ಹೊರ್ಮು ಜಲಸಂಧಿಯ ಬಳಿ ಇದ್ದು, ಈ ಜಲಸಂಧಿ ಜಗತ್ತಿನ 20% ತೈಲ ಸಾಗಾಣಿಕೆಯ ಮಾರ್ಗವಾಗಿದೆ. ಈ ಮಾರ್ಗ ಕಾರ್ಯತಂತ್ರ ಮತ್ತು ವ್ಯಾಪಾರ ಉದ್ದೇಶಗಳೆರಡಕ್ಕೂ ಪೂರಕವಾಗಿದೆ.

WhatsApp Image 2025 06 25 at 4.29.38 PM
ಚಾಬಹಾರ್‌ ಬಂದರುಇ

2. ಇಂಧನ ಭದ್ರತೆ: ಭಾರತಕ್ಕೆ ಬೇಕಾದ ಬಹುಪಾಲು ಕಚ್ಚಾ ತೈಲ ಪರ್ಷಿಯನ್‌ ಗಲ್ಫ್‌ ರಾಷ್ಟ್ರಗಳಿಂದಲೇ ಬರಬೇಕು. ಈ ಸಮುದ್ರ ಮಾರ್ಗ ಇರಾನ್‌ ಸಮೀಪದಲ್ಲಿದೆ. ಒಂದು ವೇಳೆ ಇರಾನ್‌ ಜೊತೆ ಸಂಬಂಧ ಹಾಳಾಗಿ, ಯುದ್ಧದ ಕಾರಣದಿಂದ ಇರಾನ್‌ ಸುತ್ತಲಿನ ಪ್ರದೇಶಗಳಲ್ಲಿ ಅಸ್ಥಿರತೆ ಉಂಟಾದರೆ ಭಾರತದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಅಲ್ಲದೆ ಇರಾನ್‌ನಲ್ಲಿ ಸುಮಾರು 11 ಸಾವಿರಕ್ಕೂ ಅಧಿಕ ಮಂದಿ ಭಾರತೀಯರಿದ್ದಾರೆ.

ಇರಾನಿನ ಸಹಾಯವನ್ನು ಭಾರತ ಮರೆಯುವಂತಿಲ್ಲ…

ಇರಾನ್ ಹಲವಾರು ಪ್ರಮುಖ ನಿರ್ಣಾಯಕ ಸಂದರ್ಭಗಳಲ್ಲಿ ಭಾರತದ ಪರವಾಗಿ ನಿಂತಿದೆ. ಉದಾಹರಣೆಗೆ, 1994ರಲ್ಲಿ, ಇರಾನ್ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗ (ಯುಎನ್‌ಸಿಎಚ್ಆರ್) ಕಾಶ್ಮೀರ ವಿಚಾರದ ಕುರಿತು ಭಾರತವನ್ನು ಟೀಕಿಸುವ ನಿರ್ಣಯವನ್ನು ತಡೆಹಿಡಿಯಲು ನೆರವಾಗಿತ್ತು.

1994ರಲ್ಲಿ, ಭಾರತದ ವಿರುದ್ಧ ಕೈಗೊಳ್ಳ ಹೊರಟ ನಿರ್ಣಯಕ್ಕೆ ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕಂಟ್ರೀಸ್ (ಒಐಸಿ) ಬೆಂಬಲವಿದ್ದು, ಹಲವಾರು ಶಕ್ತಿಶಾಲಿ ಪಾಶ್ಚಾತ್ಯ ದೇಶಗಳೂ ಪಾತ್ರ ವಹಿಸಿದ್ದವು. ಒಂದು ವೇಳೆ ಈ ನಿರ್ಣಯ ಏನಾದರೂ ಅನುಮೋದನೆ ಪಡೆದುಕೊಂಡಿದ್ದರೆ, ಭಾರತದ ವಿರುದ್ಧ ಆರ್ಥಿಕ ನಿರ್ಬಂಧಗಳು ಜಾರಿಯಾಗುತ್ತಿದ್ದವು. ಭಾರತದ ವಿರುದ್ಧ ಇಂತಹ ನಿರ್ಣಯ ಜಾರಿಗೆ ಬರದಂತೆ ತಡೆಯುವಲ್ಲಿ ಇರಾನ್ ಪಾತ್ರ ನಿರ್ಣಾಯಕವಾಗಿತ್ತು.

ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ಇರಾನ್‌ ಪರ ನಿಲ್ಲಬೇಕು ಯಾಕೆ?

ಇರಾನ್‌ ಅಣ್ವಸ್ತ್ರ ಅಭಿವೃದ್ಧಿಪಡಿಸಿಕೊಂಡು ನಿಯಮ ಮೀರಿದೆ. ಇದರಿಂದ ತಮ್ಮ ವಿನಾಶವಾಗಲಿದೆ ಎಂದು ಆರೋಪಿಸಿ ಇರಾನ್‌ ಮೇಲೆ ಇಸ್ರೇಲ್‌ ಮತ್ತು ಅಮೆರಿಕ ದಾಳಿ ಮಾಡುತ್ತಿವೆ. ಆದರೆ, ಅಂತಾರಾಷ್ಟ್ರೀಯ ಅಣು ಶಕ್ತಿ ಆಯೋಗವಾಗಲಿ ಅಥವಾ ಇನ್ನಾವುದೇ ವಿಶ್ವಸಂಸ್ಥೆಯಾಗಲಿ ಇರಾನ್ ಅಣ್ವಸ್ತ್ರ ನಿಯಮವನ್ನು ಉಲ್ಲಂಘಿಸಿದೆ ಎಂದು ಹೇಳಿಲ್ಲ. ಹೀಗಿದ್ದರೂ ದಾಳಿ ನಡೆಸಿರುವುದು ದಬ್ಬಾಳಿಕೆಯೇ ಆಗಿದೆ.

ಇನ್ನು ಗಾಜಾದಲ್ಲಿ ಇಸ್ರೇಲ್‌ ದೊಡ್ಡ ನರಮೇಧವನ್ನೇ ನಡೆಸುತ್ತಿದೆ. ಇಲ್ಲಿವರೆಗೆ 60,000ಕ್ಕೂ ಹೆಚ್ಚು ನಾಗರಿಕರು ಕೊಲ್ಲಲ್ಪಟ್ಟಿದ್ದಾರೆ. ಮಕ್ಕಳು ಸೇರಿದಂತೆ ಗಾಜಾದ ಲಕ್ಷಾಂತರ ಜನರು ಹಸಿವಿನಿಂದ ನರಳುತ್ತಿದ್ದಾರೆ. ಆದರೂ ನಿರಂತರ ಬಾಂಬ್ ದಾಳಿ ಮಾತ್ರ ನಿಂತಿಲ್ಲ.

WhatsApp Image 2025 06 25 at 4.31.17 PM
ಇಂದಿನ ಗಾಜಾ

ಇದನ್ನೂ ಓದಿ: ತುರ್ತುಪರಿಸ್ಥಿತಿ | ಕತ್ತಲೆಯ ಕಾಲದಲ್ಲಿ ವ್ಯಂಗ್ಯದ ಬೆಳಕು

ಇತ್ತೀಚೆಗೆ ಭಾರತವು ಇಸ್ರೇಲ್ ಪರ ನಿಲುವು ತಾಳುತ್ತಿದೆ ಎನ್ನಲಾಗುತ್ತಿದೆ. ಇಸ್ರೇಲ್‌ನ ನಾಯಕರ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಯುದ್ಧಾಪರಾಧಗಳ ವಿಚಾರಣೆಯೂ ನಡೆಯುತ್ತಿದೆ. ಅಂತೆಯೇ, ಇಸ್ರೇಲ್‌ನ ನರಮೇಧದ ಆರೋಪಗಳು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ. ಕೆಲವೊಂದು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಹೊರತುಪಡಿಸಿದರೆ ಇಡೀ ಜಗತ್ತು ಇಸ್ರೇಲ್ ದೌರ್ಜನ್ಯವನ್ನು ವಿರೋಧಿಸುತ್ತಿದೆ. ಅಚ್ಚರಿಯ ಸಂಗತಿಯೆಂದರೆ, ಪ್ಯಾಲೆಸ್ತೀನ್ ಕುರಿತು ಈ ಹಿಂದೆ ತಟಸ್ಥ ನಿಲುವು ಹೊಂದಿದ್ದ ಫ್ರಾನ್ಸ್ ಮತ್ತು ಬ್ರಿಟನ್ ಕೂಡ ಈ ಬಾರಿ ಕದನ ವಿರಾಮ ನಿರ್ಣಯಕ್ಕೆ ಬೆಂಬಲ ನೀಡಿವೆ. ಇಸ್ರೇಲ್‌ ಕ್ರೂರ ಹತ್ಯಾಕಾಂಡ, ಯುದ್ಧ ಅಪರಾಧ ಮತ್ತು ಸಾವಿರಾರು ಜನರ ಮೇಲೆ ದಮನಕಾರಿ ಕ್ರಮ ನಡೆಸುತ್ತಿದೆ. ಇಸ್ರೇಲ್‌ನ ಶಸ್ತ್ರಾಸ್ತ್ರಗಳ ಅತಿದೊಡ್ಡ ಖರೀದಿದಾರರಲ್ಲಿ ಭಾರತವೂ ಸೇರಿದೆ. ಈ ಶಸ್ತ್ರಾಸ್ತ್ರಗಳು ಪ್ಯಾಲೆಸ್ತೀನಿಯನ್ನರ ವಿರುದ್ಧ “ಪರೀಕ್ಷಿಸಲ್ಪಟ್ಟ” ನಂತರ ಭಾರತಕ್ಕೆ ಮಾರಾಟವಾಗುತ್ತವೆ ಎಂಬ ಆರೋಪಗಳೂ ಇವೆ.

ಈ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಶಾಂತಿ ನಿರ್ಣಯದಿಂದ ಭಾರತ ಹಿಂದೆ ಸರಿದಿರುವುದು ಅಥವಾ ತಟಸ್ಥ ನಿಲುವು ತಳೆದಿರುವುದು ನೈತಿಕತೆಯ ಮಾನದಂಡಕ್ಕೆ ವಿರುದ್ಧವಾಗಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಇಂತಹ ನಿರ್ಣಯಗಳಲ್ಲಿ ದೃಢ ನಿಶ್ಚಿತ ನಿಲುವು ತೆಗೆದುಕೊಳ್ಳುವುದು ಅಗತ್ಯವಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು, “ಉಲ್ಬಣಗೊಳ್ಳುವ ಯಾವುದೇ ಕ್ರಮಗಳನ್ನು ತಪ್ಪಿಸಬೇಕು” ಮತ್ತು “ಉಲ್ಬಣಗೊಳ್ಳುವಿಕೆಯನ್ನು ಶಮನಗೊಳಿಸಲು” ಸಂವಾದ ಮತ್ತು ರಾಜತಾಂತ್ರಿಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದ್ದನ್ನು ಹೊರತುಪಡಿಸಿ ಭಾರತ ಯಾವುದೇ ನಿಲುವು ತಳೆದಿಲ್ಲ. ಮಾನವೀಯ ದೃಷ್ಟಿಕೋನದಿಂದಲೂ ಭಾರತ ಇರಾನ್‌ ಬೆಂಬಲಿಸಿ ಒಂದೇ ಒಂದು ಹೇಳಿಕೆ ನೀಡಿಲ್ಲ. ಬದಲಾಗಿ ಬ್ಯಾಲೆನ್ಸ್‌ ನೀತಿ ಅನುಸರಿಸುತ್ತಿದೆ.

ಇರಾನ್ ವಿರುದ್ಧ ಇಸ್ರೇಲ್‌ನ ಬೆತ್ತಲೆ ಆಕ್ರಮಣದ ಮುಂದೆ ಸರ್ಕಾರ ಮೌನವಾಗಿರುವುದು ಸರಿಯಂತೂ ಅಲ್ಲ. ವಿಶ್ವಸಂಸ್ಥೆಯ ಚಾರ್ಟರ್‌ನ 51 ನೇ ವಿಧಿಯ ಅಡಿಯಲ್ಲಿ, ಇಸ್ರೇಲ್ ಅತ್ಯಂತ ಆಕ್ರಮಣಕಾರಿ. ಅದು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸುತ್ತದೆ. ಇಲ್ಲಿ ಇರಾನ್ ಬಲಿಪಶು. ಇರಾನ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ.

ಇರಾನ್ ಕೆಲವು ನಿರ್ಣಾಯಕ ಸಮಯದಲ್ಲಿ ಭಾರತವನ್ನು ಬೆಂಬಲಿಸಿದ್ದು, ಈಗ ಭಾರತ ಸರ್ಕಾರ ಇರಾನ್ ರಾಷ್ಟ್ರವನ್ನು ಬೆಂಬಲಿಸಬೇಕು ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 639 ಜನರು ಸಾವನ್ನಪ್ಪಿದ್ದಾರೆ ಮತ್ತು 1,329 ಜನರು ಗಾಯಗೊಂಡಿದ್ದಾರೆ. ಇರಾನಿನ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್‌ನಲ್ಲಿ 24 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ʼಅರಬ್‌ ನ್ಯೂಸ್‌ʼ ವರದಿ ಮಾಡಿದೆ. ದಾಳಿ ಪ್ರತಿದಾಳಿಗಳ ಬಳಿಕ ಎರಡೂ ದೇಶಗಳು ಕದನ ವಿರಾಮ ಘೋಷಿಸಿಕೊಂಡಿವೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಸಂಘರ್ಷ | ಟ್ರಂಪ್‌ ಹುಚ್ಚಾಟ ಅನಾವರಣ

ಈ ಸಂಘರ್ಷದ ಹಿನ್ನೆಲೆಯಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸುವ ಅಗತ್ಯವಿದೆ. ಇಸ್ರೇಲ್‌ನ ದಮನಕಾರಿ ಕ್ರಮಗಳು, ಪ್ಯಾಲೆಸ್ತೀನ್‌ನಲ್ಲಿ ನಡೆಸುತ್ತಿರುವ ನರಮೇಧ, ಇರಾನ್ ಮೇಲಿನ ದಾಳಿ ಇವುಗಳೆಲ್ಲವೂ ಅಂತಾರಾಷ್ಟ್ರೀಯ ಕಾನೂನುಗಳ ಉಲ್ಲಂಘನೆಯಂತಾಗಿರುವ ಈ ಸಂದರ್ಭದಲ್ಲಿ, ಸರಿ ತಪ್ಪುಗಳ ಅರ್ಥವಿಲ್ಲದೆ “ತಟಸ್ಥತೆಯ ನಿಲುವು” ತಳೆದಿರುವುದು, ಅಂತಿಮವಾಗಿ ಮಾನವೀಯತೆಯ ವಿರುದ್ಧ ತೋರುವ ನಿಶಬ್ದತೆ ಎಂಬ ಶಂಕೆಯನ್ನು ಹುಟ್ಟಿಸುತ್ತಿದೆ.

ಇರಾನ್ ಇತಿಹಾಸದಲ್ಲಿ ಭಾರತಕ್ಕೆ ನೀಡಿದ ನೆರವು ಮತ್ತು 1994ರಂತಹ ರಾಜತಾಂತ್ರಿಕ ಒತ್ತಡದ ಸಂದರ್ಭಗಳಲ್ಲಿ ತೆಗೆದುಕೊಂಡ ಧೈರ್ಯದ ನಿಲುವುಗಳನ್ನು ಭಾರತ ಮರೆಯಬಾರದು. ಭಾರತ ತನ್ನ ಅಂತಾರಾಷ್ಟ್ರೀಯ ಸ್ಥಾನಮಾನವನ್ನು ನೈತಿಕತೆಯ, ಮಾನವೀಯತೆಯ ಪ್ರತೀಕವಾಗಿ ಬಳಸಬೇಕಾಗಿದೆ. ಸದ್ಯಕ್ಕೆ ಯುದ್ಧ ತಣ್ಣಗಾಗಿದೆ. ಆದರೆ, ಮತ್ತೆ ಯಾವಾಗ ಬೇಕಾದರೂ ಭುಗಿಲೇಳಬಹುದು. ಭಾರತ ಮಾನವೀಯ ನಿಲುವು ತಾಳಿ, ಚಾರಿತ್ರಿಕ ಸತ್ಯಗಳ ಪರ ನಿಲ್ಲುವ ಅಗತ್ಯವಿದೆ.

WhatsApp Image 2025 05 16 at 6.54.26 PM
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Very Good Article.. ತುಂಬಾ ಮಹತ್ವದ ವಿವರಗಳು, ಮಾಹಿತಿಗಳು, ಅರ್ಥಪೂರ್ಣ ಅಭಿಪ್ರಾಯಗಳು ಈ ಲೇಖನದಲ್ಲಿವೆ..

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ರಸ್ತೆ ತುಂಬಾ ತಗ್ಗು ಗುಂಡಿಗಳದ್ದೇ ಕಾರುಬಾರು; ಸವಾರರ ಜೀವಕ್ಕೆ ‘ಗ್ಯಾರಂಟಿ’ಯೇ ಇಲ್ಲ!

ರಾಯಚೂರಿನ ಅನ್ವರಿ - ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ಹೋಗುವ ಮುಖ್ಯ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

Download Eedina App Android / iOS

X