ಈ ಅಣೆಕಟ್ಟೆಯ ಪ್ರಾಮುಖ್ಯತೆ ಸಿಎಂ ಸಿದ್ಧರಾಮಯ್ಯನವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೆ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಯೋಚನಾ ಲಹರಿ ಮಾತ್ರ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಕೃಷ್ಣರಾಜ ಸಾಗರದ ಸಮೀಪದಲ್ಲಿಯೇ 198 ಎಕರೆ ಪ್ರದೇಶದಲ್ಲಿ ಮೋಜಿನ ಪಾರ್ಕನ್ನು ನಿರ್ಮಿಸಲು ಅವರು ಯೋಜನೆಯನ್ನು ಮುಂದಿಟ್ಟಿದ್ದಾರೆ. ಈ ಯೋಜನೆಯ ಪ್ರಕಾರ 198 ಎಕರೆ ಪ್ರದೇಶದಲ್ಲಿ ಮೋಜಿನ ಪಾರ್ಕ್ ತಲೆ ಎತ್ತಲಿದೆ.
ಒಂದು ಶತಮಾನದ ಹಿಂದೆ ಮಂಡ್ಯ ಜಿಲ್ಲೆ ಇರಲಿಲ್ಲ. ಮೈಸೂರು ಜಿಲ್ಲೆಯಲ್ಲಿಯೇ ಇದು ಹುದುಗಿಕೊಂಡಿತ್ತು. ಮೈಸೂರು ರಾಜ್ಯ ಎಂಬುದು ಇತ್ತಾದರೂ, ಮೈಸೂರು ಅರಸರು ಬ್ರಿಟಿಷರ ಆಳ್ವಿಕೆಯನ್ನು ಒಪ್ಪಿಕೊಂಡು ಅವರ ಅಡಿಯಲ್ಲಿ ರಾಜ್ಯಭಾರ ಮಾಡುತ್ತಿದ್ದರು. ಆದರೂ ಮೈಸೂರು ಪ್ರತಿಭಾವಂತ ದಿವಾನರಿಂದ, ಬುದ್ಧಿಮತ್ತೆಯ ಎಂಜಿನಿಯರ್‌ಗಳಿಂದ, ದಕ್ಷ ಆಡಳಿತಗಾರರಿಂದ ತನ್ನ ಘನತೆಯನ್ನು ಕಾಯ್ದುಕೊಂಡಿತ್ತು.
1875-76ರ ಕಾಲಾವಧಿ. ಅತ್ಯಂತ ಭೀಕರ ಬರಗಾಲ ಬಡಿದು ಮೈಸೂರು ಸೀಮೆಯ ಜನ ಕಂಗಾಲಾದರು. ಮಳೆಯನ್ನೇ ನಂಬಿದ ರೈತರು ಕೈಚೆಲ್ಲಿ ಮುಗಿಲು ನೋಡಿದರೆ, ದುಡಿದು ತಿನ್ನುವ ಇತರ ವರ್ಗಗಳು ಹೊಟ್ಟೆಯನ್ನು ತುಂಬಿಸುವುದು ಹೇಗೆಂದು ಮೊರೆ ಇಟ್ಟರು. ಬದುಕಲು ಬೇರೆ ದಾರಿ ಕಾಣದ ಜನ ಹಿಂಡು ಹಿಂಡಾಗಿ ಗುಳೆ ಹೊರಟರು. ಅನ್ನ ನೀರು ಸಿಕ್ಕಲ್ಲಿಗೆ ನಮ್ಮ ಪಯಣ ಎಂದು ಕಂಗಾಲಾಗಿ ದಿಕ್ಕು ದಿಕ್ಕಿಗೆ ನಡೆದರು.
ಇದು ಮೈಸೂರು ಅರಸರನ್ನು ಚಿಂತೆಗೀಡುಮಾಡಿತು. ನಮ್ಮ ಜನರನ್ನು ಈ ಸಂಕಷ್ಟದಿಂದ ಪಾರು ಮಾಡುವುದು ಹೇಗೆ, ಗುಳೆ ಹೊರಟವರನ್ನು ತಡೆಯುವುದು ಹೇಗೆ ಎಂದು ಸಮಾಲೋಚಿಸಿದರು. ದಿವಾನರು, ಅಧಿಕಾರಿಗಳು ಹೀಗೆ ಎಲ್ಲರ ಚಿಂತೆಯೂ ಇದೇ ಆಯಿತು.

ಜೀವ ವಾಹಿನಿಯಾಗಿ ಕಾವೇರಿ ನದಿಯೇನೋ ಹರಿಯುತ್ತಿತ್ತು. ಆದರೆ ಆ ನೀರಿನ ಪ್ರಯೋಜನ ಪಡೆಯುವ ಅವಕಾಶಗಳನ್ನೇ ಮೈಸೂರು ರಾಜ್ಯ ಕಂಡುಕೊಂಡಿರಲಿಲ್ಲ. ಆಗ ಸರ್ ಎಂ ವಿಶ್ವೇಶ್ವರಯ್ಯ ಮೈಸೂರು ರಾಜ್ಯದ ದಿವಾನರಾಗಿದ್ದರು. (1912-18) ರಾಜ್ಯದ ಜನರ ಸ್ಥಿತಿಗತಿಯನ್ನು ಗಮನಿಸಿದ ಅವರು ರೈತರು ಕಾವೇರಿ ನೀರನ್ನು ಬಳಸುವ ದಿಕ್ಕಿನಲ್ಲಿ ಚಿಂತಿಸಿದರು. ಅವರಿಗೆ ಕನ್ನಂಬಾಡಿ ಕಟ್ಟೆಯನ್ನು ನಿರ್ಮಿಸುವ ಕನಸು ಮೂಡಿತು. ಆಗ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರಿನ ಸಿಂಹಾಸನದ ಮೇಲ್ಲಿದ್ದರು.
ಅವರಿಗೆ ವಿಶ್ವೇಶ್ವರಯ್ಯನವರ ಕನಸು ಅರ್ಥವಾಯಿತು. ಕನ್ನಂಬಾಡಿಗೆ ಮುಂದಾದರು. 1911ರಲ್ಲಿ ಈ ಕಟ್ಟೆಯ ನಿರ್ಮಾಣ ಆರಂಭವಾಯಿತು. ಮುಂದೆ ಹಣದ ಮುಗ್ಗಟ್ಟು ಎದುರಾಯಿತು. ಹಣ ಸಂಗ್ರಹಕ್ಕೆ ಬೇರೆಯ ದಾರಿಯೇ ಇಲ್ಲ ಎಂದಾದಾಗ ಕೃಷ್ಣರಾಜ ಒಡೆಯರ್ ತಮ್ಮ ಚಿನ್ನದ ಆಭರಣಗಳನ್ನು ಮಾರಿದರು. ಇದನ್ನು ಕಂಡ ಮೈಸೂರು ರಾಜ್ಯದ ಜನತೆ ಉದಾರವಾಗಿ ದೇಣಿಗೆ ನೀಡಲು ಮುಂದಾದರು. ಹತ್ತು ಸಾವಿರ ಜನ ದುಡಿಯುತ್ತಿದ್ದ ಈ ಯೋಜನೆ ಪೂರ್ಣಗೊಂಡದ್ದು 1931ರಲ್ಲಿ. ವಿಶ್ವೇಶ್ವರಯ್ಯನವರ ಇಂಜಿನಿಯರಿಂಗ್ ಕೌಶಲ ಕೂಡಾ ಅತ್ಯಂತ ಪ್ರತಿಭಾಪೂರ್ಣವಾಗಿತ್ತು. ಸಿಮೆಂಟ್ ಅಪರೂಪವಾಗಿದ್ದ ಕಾಲದಲ್ಲಿ ಕೇವಲ ಸುಣ್ಣಕಲ್ಲು ಮತ್ತು ಸುರ್ಕಿಯನ್ನು ಬಳಸಿ ಈ ಅಣೆಕಟ್ಟನ್ನು ಕಟ್ಟಲಾಯಿತು. ಹಾಗೆಯೇ ಅಣೆಕಟ್ಟೆಯ ಗೇಟುಗಳನ್ನು ರೂಪಿಸುವಲ್ಲಿಯೂ ವಿಶ್ವೇಶ್ವರಯ್ಯನವರ ಜಾಣ್ಮೆ, ಪ್ರತಿಭೆ ಕೆಲಸ ಮಾಡಿದವು.
ಕನ್ನಂಬಾಡಿ ಕೃಷ್ಣರಾಜ ಸಾಗರವಾಯಿತು. ಮಂಡ್ಯ ಜಿಲ್ಲೆಯ ರೈತರು ಹಸಿರನ್ನು ಕಣ್ತುಂಬಿಕೊಂಡರು. ಗುಳೆ ನಿಂತು ಹೋಯಿತು. ದುಡಿಯುವ ರಟ್ಟೆಗಳಿಗೆ ವರ್ಷವಿಡೀ ಕೆಲಸ. ಹಸಿದ ಹೊಟ್ಟೆಗಳು ತೃಪ್ತಿಯಲ್ಲಿ ಉಂಡು ಬೀಗಿದವು. ಈ ಅಣೆಕಟ್ಟೆಯ ಬೆನ್ನಿಗೇ ಜಗದ್ವಿಖ್ಯಾತವಲ್ಲದಿದ್ದರೂ, ಭಾರತದಲ್ಲಿ ಹೆಸರಾದ ಬೃಂದಾವನ ಗಾರ್ಡನ್ ಹುಟ್ಟಿಕೊಂಡು ಪ್ರವಾಸಿಗರನ್ನು ದೊಡ್ಡ ಸಂಖ್ಯೆಯಲ್ಲಿ ಬರಮಾಡಿಕೊಂಡಿತು.
ಇವತ್ತು ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಮೈಸೂರಿನ ಕೆಲವು ಭಾಗಗಳೂ ಹಸಿರನ್ನು ತುಳುಕಿಸುತ್ತಿವೆ. ಮಂಡ್ಯ, ಮೈಸೂರು ಹಾಗೆಯೇ ಬೆಂಗಳೂರು ನಗರಗಳು ಕುಡಿಯುವುದು ಕಾವೇರಿಯ ನೀರನ್ನೇ. ಕೃಷ್ಣರಾಜ ಸಾಗರ ಈ ಕಾರಣಕ್ಕಾಗಿ ಇಡೀ ರಾಜ್ಯಕ್ಕೆ ಬಹಳ ಮುಖ್ಯವಾದ ಅಣೆಕಟ್ಟೆಯಾಗಿದೆ.
ಈ ಅಣೆಕಟ್ಟೆಗೆ ಅಪಾಯ ಒಡ್ಡುವ ಗಣಿಗಾರಿಕೆ ಕೂಡಾ ಅಣೆಕಟ್ಟೆಯ ಸಮೀಪದಲ್ಲೇ ನಡೆಯುತ್ತಿತ್ತು. ಸ್ಥಳೀಯರ ಮತ್ತು ಮಂಡ್ಯ ಜಿಲ್ಲೆಯ ಹೋರಾಟದಿಂದಾಗಿ ಅದು ತಾತ್ಕಾಲಿಕವಾಗಿಯಾದರೂ ನಿಂತು ಹೋಗಿದೆ.

ಈ ಅಣೆಕಟ್ಟೆಯ ಪ್ರಾಮುಖ್ಯತೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಿಳಿಯದ ಸಂಗತಿಯೇನೂ ಅಲ್ಲ. ಆದರೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಯೋಚನಾ ಲಹರಿ ಮಾತ್ರ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿಲ್ಲ. ಕೃಷ್ಣರಾಜ ಸಾಗರದ ಸಮೀಪದಲ್ಲಿಯೇ 198 ಎಕರೆ ಪ್ರದೇಶದಲ್ಲಿ ಮೋಜಿನ ಪಾರ್ಕನ್ನು ನಿರ್ಮಿಸಲು ಅವರು ಯೋಜನೆಯನ್ನು ಮುಂದಿಟ್ಟಿದ್ದಾರೆ. ಈ ಯೋಜನೆಯ ಪ್ರಕಾರ 198 ಎಕರೆ ಪ್ರದೇಶದಲ್ಲಿ ಮೋಜಿನ ಪಾರ್ಕ್ ತಲೆ ಎತ್ತಲಿದೆ. ಇದಕ್ಕಾಗಿ ವೆಚ್ಚವಾಗುವ ಹಣ 2,663ಕೋಟಿ ರೂಪಾಯಿ. ಇದನ್ನು ಖಾಸಗಿಯವರಿಗೆ 30 ವರ್ಷಗಳ ಗುತ್ತಿಗೆ ಆಧಾರದಲ್ಲಿ ನೀಡಲಾಗಿದೆ.
ಪ್ರವಾಸೋದ್ಯಮ ಇಂದಿನ ಸಂದರ್ಭದಲ್ಲಿ ಕಡೆಗಣಿಸುವಂಥದ್ದಲ್ಲ. ಅದು ತರುವ ಹಣಕಾಸು, ಉದ್ಯೋಗಾವಕಾಶಗಳು, ಬಗೆಬಗೆಯ ವ್ಯವಹಾರ ಬದುಕಿಗೆ ನೆರವನ್ನು ಒದಗಿಸಬಲ್ಲದು. ಆದರೆ ಸರ್ಕಾರ ತನ್ನ ಆದ್ಯತೆಗಳನ್ನು ಮೊದಲು ಗಮನಿಸಬೇಕು. ಇವತ್ತಿಗೂ ಬೆಂಗಳೂರಿನ ನೀರಿನ ಪೂರೈಕೆ ಸಮರ್ಪಕವಾಗಿಲ್ಲ. ದಿನದಿಂದ ದಿನಕ್ಕೆ ನೀರಿನ ಬೇಡಿಕೆ ಹೆಚ್ಚುತ್ತಲೇ ಇದೆ. ಮೈಸೂರು, ಬೆಂಗಳೂರು, ಮಂಡ್ಯ ಸೇರಿದಂತೆ ಕುಡಿಯುವ ನೀರಿಗಾಗಿ ಕಾದಿರುವವರ ಸಂಖ್ಯ ಸಣ್ಣದೇನಲ್ಲ. ಕೃಷ್ಣರಾಜ ಸಾಗರಕ್ಕೆ ಒಂದಿಷ್ಟು ಅಪಾಯವಾದರೂ ಅದನ್ನು ರಾಜ್ಯ ಭರಿಸಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಮಂಡ್ಯ ಜಿಲ್ಲೆಯ ಕೃಷಿಕರು ಈಗಲೂ ಜನವರಿಯಿಂದ ಜೂನ್ ತಿಂಗಳವರೆಗೆ ನೀರಿನ ಕೊರತೆಯನ್ನು ಅನುಭವಿಸುತ್ತಲೇ ಇದ್ದಾರೆ. ಕುಡಿಯುವ ನೀರು, ಕೃಷಿಯ ನೀರು, ಕೈಗಾರಿಕೆಗೆ ನೀರು, ಹೋಟೆಲ್ ಉದ್ಯಮಕ್ಕೆ ನೀರು, ಹೈನುಗಾರಿಕೆಗೆ ನೀರು, ಎಲ್ಲರ ನಿತ್ಯ ಬಳಕೆಯ ನೀರು- ಹೀಗೆ ನೀರು ಬಹುದೊಡ್ಡ ಬೇಡಿಕೆಯಾಗಿದೆ. ಸರ್ಕಾರ ರೂಪಿಸುತ್ತಿರುವ ಮೋಜಿನ ಪಾರ್ಕ್ ಕೂಡಾ ಸಾಕಷ್ಟು ನೀರನ್ನು ಬೇಡುತ್ತಿದೆ. ಜೊತೆಗೆ ಈ ಪಾರ್ಕಿನ ಆಕರ್ಷಣೆ ನಿತ್ಯವೂ ಸೆಳೆಯುವ ಸಾವಿರಾರು ವಾಹನಗಳು, ಹಿಂಡು ಹಿಂಡು ಜನ. ಇದೆಲ್ಲ ಕಣ್ಮುಂದೆ ಇರುವಾಗಲೂ ಸರ್ಕಾರ ಬೃಹತ್ ಪ್ರಮಾಣದ ಮನರಂಜನಾ ಪಾರ್ಕ್ ರೂಪಿಸುತ್ತಿರುವುದರ ಹಿಂದಿನ ಉದ್ದೇಶವಾದರೂ ಏನು?
ನೀರಿನ ಬಳಕೆದಾರರೇ ಹೆಚ್ಚು ವಿವೇಕಿಗಳಾಗಿ ಕಾಣುತ್ತಿದ್ದಾರೆ. ಇದು ಸಹಜ ಕೂಡಾ. ಯಾಕೆಂದರೆ ಅವರಿಗೆ ನೀರಿನ ಮಹತ್ವ ಗೊತ್ತು. ಈ ಕಾರಣದಿಂದಾಗಿಯೇ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ರೂಪಗೊಂಡು ಅದು ಸರ್ಕಾರದ ಈ ಮೋಜಿನ ಪಾರ್ಕ್ ಯೋಜನೆಯನ್ನು ಬಲವಾಗಿ ವಿರೋಧಿಸುತ್ತಿದೆ. ಈ ಹಿತರಕ್ಷಣಾ ಸಮಿತಿಯಲ್ಲಿ ಮಂಡ್ಯ ಮೈಸೂರು ಜಿಲ್ಲೆಗಳ ಎಲ್ಲ ಪ್ರಗತಿಪರ ಚಿಂತಕರು, ಹೋರಾಟಗಾರರು, ಕನ್ನಡಪರ ಚಳವಳಿಗಾರರು, ರೈತರು ಸೇರಿದ್ದಾರೆ. ಅವರ ನೀರಿನ ಚಿಂತನೆ ಸರಿಯಾಗಿಯೇ ಇದೆ. ಅವರ ಹೋರಾಟವೂ ನ್ಯಾಯಬದ್ಧವಾಗಿಯೇ ಇದೆ. ಸರ್ಕಾರ ಇದನ್ನು ಮನಗಾಣಬೇಕು. ತಾನಿಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ನೀರು ನಿಜಕ್ಕೂ ಎಲ್ಲರಿಗೂ ಬೇಕಾದದ್ದೇ; ರಾಜ್ಯದ ಪ್ರಗತಿಗೆ ಅತ್ಯಂತ ಅಗತ್ಯವಾದದ್ದು. ಮೊದಲು ನೀರನ್ನು ಪೊರೆಯಬೇಕು; ನಂತರ ಪ್ರವಾಸ, ಮೋಜು ಇತ್ಯಾದಿ.

ಪ್ರವಾಸೋದ್ಯಮಕ್ಕೆ ಬೆಂಬಲ ಕೊಡುವುದೇ ರಾಜ್ಯ ಸರ್ಕಾರದ ಉದ್ದೇಶವಾದರೆ, ಈಗಾಗಲೇ ಇರುವ ಬೃಂದಾವನ್ ಗಾರ್ಡನ್‌ಗೆ ಹೊಸ ಮೆರುಗು ಕೊಡಬಹುದು. ಅಲ್ಲಿನ ಸೌಲಭ್ಯಗಳನ್ನು ಹೆಚ್ಚಿಸಬಹುದು; ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಬಹುದು. ಈಗಿರುವ ಅನೇಕ ಬೇಕಾಬಿಟ್ಟಿ ಚಟುವಟಿಕೆಗಳನ್ನು ತಡೆದು, ಪ್ರವಾಸಿಗರು ಖಷಿಯಿಂದ, ತೊಂದರೆ ಇಲ್ಲದ ಬೃಂದಾವನದ ಸೊಬಗನ್ನು ಕಣ್ತುಂಬಿಸಿಕೊಂಡು ಹೋಗುವಂತೆ ಮಾಡಬಹುದು. ಪ್ರವಾಸದ ಕೊಂಡಿಯಲ್ಲಿಯೇ ಬರುವ ರಂಗನತಿಟ್ಟು, ಶ್ರೀರಂಗಪಟ್ಟಣ, ನಾಗರಹೊಳೆ, ಬಂಡೀಪುರ, ಮಹದೇಶ್ವರಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಚಾಮುಂಡಿಬೆಟ್ಟ, ಮೈಸೂರಿನ ಮೃಗಾಲಯ, ಕಾರಂಜಿಕೆರೆ, ಕುಕ್ಕನಹಳ್ಳಿ ಕೆರೆ, ಅರಮನೆ ಮೊದಲಾದ ತಾಣಗಳಿಗೆ ಇನ್ನೂ ಹೆಚ್ಚಿನ ಜೀವಂತಿಕೆಯನ್ನು ತುಂಬಬಹುದು. ಈ ಎಲ್ಲ ತಾಣಗಳಿಗೂ ಈಗಾಗಲೇ ಸಾವಿರಾರು ಪ್ರವಾಸಿಗರೂ ನಿತ್ಯವೂ ಧಾವಿಸುತ್ತಿದ್ದಾರೆ. ಸುಗಮವಾಗಿ ಈ ಪ್ರವಾಸಿಗರು ಬಂದು ಹೋಗಲು ಇನ್ನೂ ಅಗತ್ಯವಾಗಿ ಆಗಬೇಕಾಗಿರುವ ಸೌಲಭ್ಯಗಳೇ ಆಗದೇ ಇರುವಾಗ ಸರ್ಕಾರ ಹೊಸ ಯೋಜನೆಗೆ ಕೈಹಾಕಬಾರದು. ಕೃಷ್ಣರಾಜ ಸಾಗರ ಅಣೆಕಟ್ಟಿನ ಬಳಿಗಂತೂ ಹೋಗಲೇಬಾರದು. ಇದು ಸಾಮಾನ್ಯ ವಿವೇಕಕ್ಕೂ ಸಿಕ್ಕುವ ಸಂಗತಿ.
ಸರ್ಕಾರ ಯಾಕೆ ದಿಕ್ಕುತಪ್ಪಿದೆ? ಇದರ ಹಿಂದೆ ಯಾರು ಇದ್ದಾರೆ? ಅವರ ಉದ್ದೇಶಗಳೇನು? ಇವೆಲ್ಲ ಬಹಿರಂಗವಾಗಬೇಕು. ಮಂಡ್ಯ ಜಿಲ್ಲಾ ಹೋರಾಟಗಾರರು ಬಹಳ ಬಿರುಸಿನಿಂದಲೇ ಹೋರಾಟ ಮಾಡುತ್ತಿದ್ದಾರೆ. ಹೈಕೋರ್ಟಿನ ಮೆಟ್ಟಿಲನ್ನೂ ಹತ್ತಿ ನ್ಯಾಯ ಕೇಳುತ್ತಿದ್ದಾರೆ. ಸರ್ಕಾರ ಇದನ್ನೆಲ್ಲ ಗಮನಿಸಬೇಕು. ಹೋರಾಟಗಾರರ ಹಿಂದಿನ ಜನಪರ ಕಾಳಜಿಯನ್ನು ಅರ್ಥಮಾಡಿಕೊಳ್ಳಬೇಕು. ನ್ಯಾಯಾಲಯದಿಂದ ನಿರ್ದೇಶನ ಬರುವ ಮುನ್ನವೇ ತನ್ನನ್ನು ತಾನು ಸರಿಪಡಿಸಿಕೊಳ್ಳಬೇಕು.
ಇದನ್ನೂ ಓದಿ ರಾಯಭಾರ | ಬಿಜೆಪಿ ಏಕೆ ಸಂವಿಧಾನದ ಬಗ್ಗೆ ಮಾತನಾಡಬಾರದು?
ನೂರಾರು ಎಕರೆ ಕೃಷಿಭೂಮಿಯನ್ನು ನಾಶಮಾಡುವುದು, ನೀರಿನ ಬಳಕೆಯನ್ನು ಬೇಕಾಬಿಟ್ಟಿಯಾಗಿ ಮಾಡುವುದು ಕೈಬಿಡಬೇಕು. ಈಗಾಗಲೇ ರಾಜ್ಯದ ತುಂಬ ಹರಿದಾಡಿರುವ ಹೆದ್ದಾರಿಗಳು, ನೈಸ್ ರಸ್ತೆಗಳು ಕೃಷಿಯನ್ನು ಹಾಳುಮಾಡಿವೆ, ಮಾಡುತ್ತಿವೆ. ಇಂಥ ಯೋಜನೆಗಳನ್ನು ಬೆಂಬಲಿಸುವಂತೆ ಸರ್ಕಾರ ನಡೆದುಕೊಂಡರೆ ಕೃಷಿ ಸಂಪೂರ್ಣವಾಗಿ ನೆಲಕಚ್ಚುತ್ತದೆ.
ಪ್ರವಾಸೋದ್ಯಮವೇ ಅನೇಕ ರಾಷ್ಟ್ರಗಳ ಜೀವಾಳವಾಗಿರಬಹುದು. ಆದರೆ ಕರ್ನಾಟಕದಲ್ಲಿ ಹಾಗಾಗಲು ಅವಕಾಶವೇ ಇಲ್ಲ. ಕೃಷಿ ಈ ರಾಜ್ಯದ ದೇಹವೂ ಹೌದು, ಆತ್ಮವೂ ಹೌದು. ಸರ್ಕಾರ ಇದನ್ನು ಮನಗಾಣಬೇಕು.
