ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿದವು. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಟ್ರಂಪ್, ಇಸ್ರೇಲ್ ಮತ್ತು ಇರಾನ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದರು. ಆದರೆ ಇರಾನ್ ಅಲ್ಲಗಳೆಯಿತು. ಇಸ್ರೇಲ್ ಮೇಲಿನ ದಾಳಿಯ ನಂತರ ಒಪ್ಪಿಕೊಂಡಿತು. ಹಾಗಾಗಿ ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಇನ್ನೂ ಕೊನೆಗೊಂಡಿಲ್ಲ...
ಒಂದೆಡೆ, ಕಳೆದ 12 ದಿನಗಳಿಂದ ಭುಗಿಲೆದ್ದಿದ್ದ ಇಸ್ರೇಲ್-ಇರಾನ್ ನಡುವಿನ ಸಂಘರ್ಷಕ್ಕೆ ವಿರಾಮ ದೊರೆತಿದೆ, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಮತ್ತೊಂದೆಡೆ, ಸಂಘರ್ಷಗಳು, ಸುಂಕ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ವಿಚಿತ್ರ ನಿಲುವುಗಳನ್ನು ತೆಗೆದುಕೊಳ್ಳುತ್ತಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಹುಚ್ಚಾಟವೂ ಅನಾವರಣಗೊಳ್ಳುತ್ತಿದೆ. ಜಾಗತಿಕವಾಗಿ ಟ್ರಂಪ್ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಆದರೂ, ನನ್ನ ಮಾತೇ ನಡೆಯಬೇಕು, ನನ್ನ ಮೂಗಿನ ನೇರಕ್ಕೆ ಎಲ್ಲವೂ ಇರಬೇಕು ಎಂಬ ಅಹಂ ಜೊತೆಗೆ ಟ್ರಂಪ್ ಹುಚ್ಚಾಟ ಮಿತಿಮೀರುತ್ತಿದೆ.
ಕಳೆದ ವಾರ, ಜೂನ್ 12ರಂದು ಇರಾನ್ ಮೇಲೆ ಇಸ್ರೇಲ್ ‘ಆಪರೇಷನ್ ರೈಸಿಂಗ್ ಲಯನ್’ ಎಂಬ ಹೆಸರಿನಲ್ಲಿ ದಾಳಿ ಆರಂಭಿಸಿತು. ಇರಾನ್‌ನ ಪರಮಾಣು ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಯಿತು. ಅಮೆರಿಕದ ಬೇಟೆ ನಾಯಿಯಂತೆ ವರ್ತಿಸುತ್ತಿರುವ ಇಸ್ರೇಲ್, ”ಇರಾನ್ ಶೀಘ್ರವೇ ನ್ಯೂಕ್ಲಿಯರ್ ಬಾಂಬ್ (ಅಣು ಬಾಂಬ್) ತಯಾರಿಸಲಿದೆ. ಅದಕ್ಕಾಗಿ, ತಯಾರಿ ನಡೆಸುತ್ತಿದೆ. ಅದನ್ನು ತಡೆಯುವುದಕ್ಕಾಗಿಯೇ ಈ ದಾಳಿ” ಎಂದು ಹೇಳಿಕೊಂಡಿತು.
ಆದರೆ, ಇಸ್ರೇಲ್‌ನ ಆರೋಪವನ್ನು ಇರಾನ್ ನಿರಾಕರಿಸಿತು. ಜೊತೆಗೆ, ಪ್ರತೀಕಾರವಾಗಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿತು. ದಾಳಿ-ಪ್ರತಿದಾಳಿಯಿಂದ ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಉಲ್ಬಣಗೊಂಡಿತು. ಇಸ್ರೇಲ್ ಪರವಾಗಿ ಧೋರಣೆ ತಳೆದಿರುವ ಟ್ರಂಪ್ ಅವರ ಅಮೆರಿಕವು ಇರಾನ್‌ನ ಮೂರು ಪರಮಾಣು ಸೌಕರ್ಯಗಳ ಮೇಲೆ ಶನಿವಾರ ‘GBU-57 ಬಂಕರ್ ಬಸ್ಟರ್’ ಬಾಂಬ್‌ಗಳ ಮೂಲಕ ದಾಳಿ ಮಾಡಿತು. ಈ ದಾಳಿಯು ಸಂಘರ್ಷವನ್ನು ತೀವ್ರಗೊಳಿಸಿತು. ಸೋಮವಾರ ರಾತ್ರಿ, ಇರಾನ್ ಕೂಡ ಕತಾರ್‌ನಲ್ಲಿರುವ ಅಮೆರಿಕ ವಾಯು ನೆಲೆಗಳ ಮೇಲೆ ದಾಳಿ ಮಾಡಿತು. ಸದ್ಯ, ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ.
ಆದಾಗ್ಯೂ, ಈ ಕದನ ವಿರಾಮ ಘೋಷಣೆ ವಿಚಾರದಲ್ಲಿ ಟ್ರಂಪ್ ಹುಚ್ಚಾಟ ಎದ್ದುಕಾಣಿಸಿತು. ಮಂಗಳವಾರ (ಜೂನ್ 24) ಮುಂಜಾನೆ, ಮೊದಲಿಗೆ ಇರಾನ್ ಮೇಲೆ ಇಸ್ರೇಲ್-ಅಮೆರಿಕ ದಾಳಿ ನಡೆಸಿದವು. ಬಳಿಕ, ದಿಢೀರನೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಟ್ರಂಪ್, ”ಇಸ್ರೇಲ್ ಮತ್ತು ಇರಾನ್ ಪೂರ್ಣ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇದನ್ನು ಜಗತ್ತು ಸ್ವಾಗತಿಸುತ್ತದೆ. ಕದನ ವಿರಾಮದ ಸಮಯದಲ್ಲಿ ಎರಡು ದೇಶಗಳು ಶಾಂತಿ ಮತ್ತು ಗೌರವದಿಂದ ಇರಬೇಕು. ಇರಾನ್ ಮೊದಲು ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 12 ಗಂಟೆಗಳ ನಂತರ ಇಸ್ರೇಲ್ ಕದನ ವಿರಾಮವನ್ನು ಪ್ರಾರಂಭಿಸುತ್ತದೆ. 24 ಗಂಟೆಗಳ ನಂತರ, 12 ದಿನಗಳ ಯುದ್ಧವು ಅಧಿಕೃತವಾಗಿ ಕೊನೆಗೊಳ್ಳುತ್ತದೆ” ಎಂದು ಹೇಳಿದ್ದರು.
ಆದರೆ, ಟ್ರಂಪ್ ಘೋಷಣೆಗೆ ಇಸ್ರೇಲ್ ಮತ್ತ ಇರಾನ್‌ನಿಂದ ತಕ್ಷಣದ ದೃಢೀಕರಣ ಬರಲಿಲ್ಲ. ಆದಾಗ್ಯೂ, ಟ್ರಂಪ್ ಘೋಷಿಸಿದ ಕದನ ವಿರಾಮವನ್ನು ಇರಾನ್ ಅಲ್ಲಗಳೆಯಿತು. ಸಂಘರ್ಷವನ್ನು ತಡೆಯುವ ವಿಚಾರವಾಗಿ ತಮ್ಮೊಂದಿಗೆ ಯಾವುದೇ ಮಾತುಕತೆ-ಒಪ್ಪಂದ ನಡೆದಿಲ್ಲ ಎಂದು ಪ್ರತಿಕ್ರಿಯಿಸಿತು. ಮಾತ್ರವಲ್ಲ, ಮಂಗಳವಾರ ಮುಂಜಾನೆ ತಮ್ಮ ಮೇಲೆ ಇಸ್ರೇಲ್-ಅಮೆರಿಕ ಮಾಡಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿತು. ದಾಳಿಯ ಬಳಿಕ, ‘ಈಗ ಕದನ ವಿರಾಮ ಜಾರಿಗೆ ಬರಲಿದೆ’ ಎಂದು ಹೇಳಿತು. ಆದಾಗ್ಯೂ, ಇಸ್ರೇಲ್-ಇರಾನ್ ನಡುವಿನ ಸಂಘರ್ಷ ಇನ್ನೂ ಕೊನೆಗೊಂಡಿಲ್ಲ ಎಂದು ಜಾಗತಿಕ ಮಾಧ್ಯಮಗಳ ವರದಿಗಳು ಹೇಳುತ್ತಿವೆ.
ಇರಾನ್ ಜೊತೆಗೆ ಮಾತುಕತೆಯನ್ನೇ ನಡೆಸದೆ ಟ್ರಂಪ್, ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಘೋಷಿಸಿ, ತಮ್ಮ ಅಧಿಪತ್ಯದಂತೆಯೇ ಎಲ್ಲವೂ ನಡೆಯಲಿದೆ ಎಂಬುದಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸಿ, ಇರಾನ್ ಎದುರು ಅಪಹಾಸ್ಯಕ್ಕೀಡಾದರು.
ಇದಕ್ಕೂ ಮೊದಲು ಕೂಡ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಟ್ರಂಪ್ ತಮ್ಮ ಹುಚ್ಚಾಟವನ್ನು ಪ್ರದರ್ಶಿಸಿದ್ದರು. ಜೂನ್ 12ರಂದು ಇರಾನ್ ಮೇಲೆ ಇಸ್ರೇಲ್ ದಾಳಿ ಮಾಡಿದಾಗ, ಇಸ್ರೇಲ್ ಧೋರಣೆಯನ್ನು ಟ್ರಂಪ್ ಖಂಡಿಸಿದರು. ಇರಾನ್ ಜೊತೆ ಇಸ್ರೇಲ್ ರಾಜತಾಂತ್ರಿಕ ಮಾತುಕತೆ ನಡೆಸಬೇಕು ಎಂದು ಒತ್ತಾಯಿಸಿದರು. ಆದರೆ ಇಸ್ರೇಲ್‌ನ ಜೂನ್ 13ರ ದಾಳಿಗಳಿಗೆ ಸಂಪೂರ್ಣ ಬೆಂಬಲ ನೀಡಿದರು. ಜೂನ್ 21ರಂದು ಇಸ್ರೇಲ್ ಪರವಾಗಿ ಅಮೆರಿಕವೇ ಇರಾನ್‌ನ ಫೋರ್ಡೋ ಮತ್ತು ನತಾಂಜ್ ಪರಮಾಣು ಸೌಲಭ್ಯಗಳ ಮೇಲೆ ‘ಆಪರೇಷನ್ ಮಿಡ್‌ನೈಟ್ ಹ್ಯಾಮರ್’ ಎಂಬ ಹೆಸರಿನಲ್ಲಿ B-2 ಸ್ಟೆಲ್ತ್ ಬಾಂಬರ್‌ಗಳನ್ನು ಬಳಸಿ ‘GBU-57 ಬಂಕರ್ ಬಸ್ಟರ್ ಬಾಂಬ್’ಗಳನ್ನು ಹಾಕಿತು. ಈ ದಾಳಿಯು ಇರಾನ್‌ನ ಪ್ರತೀಕಾರಕ್ಕೆ ಕಾರಣವಾಯಿತು.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ಭಾರತಕ್ಕೆ ಗಂಭೀರ ಸವಾಲುಗಳು, ಪರಿಣಾಮಗಳು
ಇಸ್ರೇಲ್-ಇರಾನ್ ಸಂಘರ್ಷ ಆರಂಭವಾಗುವುದಕ್ಕೂ ಮೊದಲು, ಟ್ರಂಪ್ ಇರಾನ್‌ನೊಂದಿಗೆ ಅಣು ಕಾರ್ಯಕ್ರಮಗಳ ಕುರಿತು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ, ಆ ವೇಳೆಗೆ, ಇರಾನ್ ಮೇಲಿನ ಇಸ್ರೇಲ್ ದಾಳಿಯು ಟ್ರಂಪ್ ಅವರ ರಾಜತಾಂತ್ರಿಕ ಯತ್ನಗಳಿಗೆ ತಡೆಯೊಡ್ಡಿತು. ಇರಾನ್‌ನ ಅಧಿಕಾರಿಗಳು ಹೇಳುವಂತೆ, ‘ಇಸ್ರೇಲ್ ದಾಳಿಗಳನ್ನು ನಿಲ್ಲಿಸಿದರೆ ಮಾತ್ರ ರಾಜತಾಂತ್ರಿಕತೆ ಸಾಧ್ಯ’ ಎನ್ನಲಾಗಿದೆ. ಆದರೆ, ಈ ರಾಜತಾಂತ್ರಿಕತೆಯನ್ನು ನಿಭಾಯಿಸುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ. ಇರಾನ್‌ಅನ್ನು ಮತ್ತೆ ಎದುರು ಹಾಕಿಕೊಂಡಿದ್ದಾರೆ. ಇಸ್ರೇಲ್‌ಗೆ ಸೇನಾ ಬೆಂಬಲ ನೀಡಿದ್ದಾರೆ. ಇದು ಟ್ರಂಪ್ ಅವರ ಹುಚ್ಚಾಟಕ್ಕೆ ಮತ್ತೊಂದು ಉದಾಹರಣೆ.
ಕೇವಲ ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಮಾತ್ರವೇ ಟ್ರಂಪ್ ತಮ್ಮ ಹುಚ್ಚಾಟವನ್ನು ಪ್ರದರ್ಶಿಸಿಲ್ಲ. 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಲೇ ಟ್ರಂಪ್ ಅವರ ಹುಚ್ಚಾಟ ಆರಂಭಗೊಂಡಿತ್ತು. ಸುಂಕಗಳ ಬಗ್ಗೆ ಹೆಚ್ಚು ಮಾತನಾಡುತ್ತಿದ್ದ ಟ್ರಂಪ್, ಏಕಾಏಕಿ ಎಲ್ಲ ರಾಷ್ಟ್ರಗಳ ಮೇಲೆ ಬೃಹತ್ ತೆರಿಗೆಯ ಹೊರೆ ಹೇರಲು ಮುಂದಾದರು. ಭಾರೀ ಪ್ರಮಾಣದ ತೆರಿಗೆಗಳ ಪಟ್ಟಿಯನ್ನು ಘೋಷಿಸಿದರು. ಆದರೆ, ಅಮೆರಿಕದ ಉತ್ಪನ್ನಗಳಿಗೆ ಚೀನಾ ಕೂಡ ಸುಂಕವನ್ನು ಏರಿಸಿದ ಕೂಡಲೇ, ಚೀನಾ ಮೇಲಿನ ತೆರಿಗೆ ಪ್ರಮಾಣವನ್ನು ಕಡಿತಗೊಳಿಸಿದರು.
ಅಂತೆಯೇ, ಉಕ್ರೇನ್-ರಷ್ಯಾ ಸಂಘರ್ಷದಲ್ಲಿಯೂ ಟ್ರಂಪ್ ಅವರು ರಾಜತಾಂತ್ರಿಕತೆಯ ಮೂಲಕ ಶಾಂತಿ ಸ್ಥಾಪಿಸಲು ಮುಂದಾಗಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಅಮೆರಿಕ ನೇತೃತ್ವದ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ಅನ್ನು ಸೇರಿಸಿಕೊಳ್ಳಲು ಬಯಸಿದ್ದ ಟ್ರಂಪ್ ಅವರಿಗೆ ಈ ಸಂಘರ್ಷವನ್ನು ತಡೆಯಲು ಸಾಧ್ಯವಾಗಿಲ್ಲ. ಉಕ್ರೇನ್‌ಗೆ ಬೆಂಬಲ ನೀಡಿದ್ದ ಅಮೆರಿಕ, ಕಾಲಾನಂತರ, ಉಕ್ರೇನ್‌ನಿಂದ ಅಂತರ ಕಾಯ್ದುಕೊಳ್ಳಲು ಟ್ರಂಪ್ ನೋಡಿದರು. ವಾಷಿಂಗ್ಟನ್‌ಗೆ ಭೇಟಿ ನೀಡಿದ್ದ ಉಕ್ರೇನ್ ಪ್ರಧಾನಿ ಡೆನಿಸ್ ಶ್ಮಿಹಾಲ್ ಅವರು ಟ್ರಂಪ್ ಜೊತೆ ಬಹಿರಂಗವಾಗಿಯೇ ಜಗಳ ಮಾಡಿಕೊಂಡು, ಅಮೆರಿಕದಿಂದ ಮರಳಿದರು. ಆದರೂ, ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಸಂಘರ್ಷವನ್ನು ಯಶಸ್ವಿಯಾಗಿ ಪರಿಹರಿಸಿದ್ದೇನೆ ಎಂದು ಹೇಳಿಕೊಂಡರು.
ಈ ಲೇಖನ ಓದಿದ್ದೀರಾ?: ಇರಾನ್-ಇಸ್ರೇಲ್ ಸಂಘರ್ಷ | ಭಾರತದ ಬಾಸ್ಮತಿ ಬೆಳೆವ ರೈತರು-ರಫ್ತುದಾರರಿಗೆ ಸಂಕಷ್ಟ
ಭಾರತ-ಪಾಕಿಸ್ತಾನ ಸಂಘರ್ಷದ ವಿಚಾರದಲ್ಲಿಯೂ ಟ್ರಂಪ್ ತಮ್ಮ ತಿಕ್ಕಲುತನವನ್ನು ಪ್ರದರ್ಶಿಸುತ್ತಿದ್ದಾರೆ. ಮೊದಲಿಗೆ ಎರಡೂ ರಾಷ್ಟ್ರಗಳು ತಮ್ಮ ಸ್ನೇಹಿತರು ಎಂದು ಹೇಳಿಕೊಂಡರು. ಬಳಿಕ, ವ್ಯಾಪಾರ ಸಂಬಂಧದ ಅಸ್ತ್ರ ಬಳಸಿ, ಕದನ ವಿರಾಮ ಘೋಷಿಸುವಂತೆ ಮಾಡಿದೆ ಎಂದು ಈಗಲೂ ಹೇಳಿಕೊಳ್ಳುತ್ತಿದ್ದಾರೆ. ಈ ನಡುವೆ, ಪಾಕಿಸ್ತಾನ ಸೇನೆ ಮುಖ್ಯಸ್ಥ ಅಸೀಮ್ ಮುನೀರ್‍ಗೆ ಔತಣ ಕೂಟವನ್ನೂ ಆಯೋಜಿಸಿದ್ದರು. ಈ ಬೆನ್ನಲ್ಲೇ, ಟ್ರಂಪ್‌ಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ನೀಡುವಂತೆ ಶಿಫಾರಸು ಮಾಡಲು ಪಾಕಿಸ್ತಾನ ನಿರ್ಧರಿಸಿತು. ಆದರೆ, ಅದಾದ ಕೆಲವೇ ಗಂಟೆಗಳಲ್ಲಿ ಟ್ರಂಪ್, ‘ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ದೊರೆಯುವುದಿಲ್ಲ’ ಎಂದು ನೊಬೆಲ್ ಪ್ರಶಸ್ತಿ ಸಮಿತಿಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು. ಮಾತ್ರವಲ್ಲ, ನಂತರದ ದಿನವೇ ಇರಾನ್‌ನ ಪರಮಾಣು ಮೂಲ ಸೌಕರ್ಯಗಳ ಮೇಲೆ ಅಮೆರಿಕ ಸೇನೆಯಿಂದ ದಾಳಿ ಮಾಡಿಸಿದರು.
ಮಾತ್ರವಲ್ಲ, ಜೂನ್ 16, 17 ಮತ್ತು 18ರಂದು ನಡೆದ ಜಿ7 ಶೃಂಗಸಭೆಯಿಂದಲೂ ಟ್ರಂಪ್ ಅನಿರೀಕ್ಷಿತವಾಗಿ ಮೊದಲೇ ಹೊರಟರು. ಅವರು ಇಸ್ರೇಲ್-ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ‘ಬೃಹತ್ ಯೋಜನೆ’ಗಾಗಿ ಹೊರಟಿದ್ದಾಗಿ ಹೇಳಿಕೊಂಡರು. ಆದರೆ, ಸಂಘರ್ಷದ ವಿಚಾರದಲ್ಲಿ ಏನನ್ನೂ ಮಾಡಲಿಲ್ಲ. ಯಾವುದೇ ಕ್ರಮಕ್ಕೂ ಮುಂದಾಗಲಿಲ್ಲ.
ಅಂತೂ, ಈಗ ಇಸ್ರೇಲ್-ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದೆ. ತಾತ್ಕಾಲಿಕ ಶಾಂತಿ ನೆಲೆಸುವ ಸಾಧ್ಯತೆ ಇದೆ. ಆದರೆ, ಇದು ಹೆಚ್ಚು ದಿನ ಮುಂದುವರೆಯುವ ಸಾಧ್ಯತೆಗಳಿಲ್ಲ ಎಂಬ ಅಭಿಪ್ರಾಯಗಳಿವೆ.
ಆದಾಗ್ಯೂ, ಕದನ ವಿರಾಮವು ಇರಾನ್‌ನ ಅಣು ಕಾರ್ಯಕ್ರಮದ ಒಪ್ಪಂದದ ಭವಿಷ್ಯದ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ನೀಡಿಲ್ಲ. ಈ ಅಸ್ಪಷ್ಟತೆಯು ಇಸ್ರೇಲ್ ಮತ್ತು ಅಮೆರಿಕವನ್ನು ಚಿಂತೆಗೀಡುಮಾಡಿದೆ.
ಟ್ರಂಪ್ ಅವರ ಈ ರೀತಿಯ ಎಡಬಿಡಂಗಿ ನಿರ್ಧಾರಗಳು ಮತ್ತು ಘೋಷಣೆಗಳನ್ನು ಹಲವರು ಟೀಕಿಸಿದ್ದಾರೆ. ”ಟ್ರಂಪ್ ಅವರ ನಿಲುವು ರಾಜತಾಂತ್ರಿಕತೆಯಿಂದ ದಾಳಿಯ ಎಡೆಗೆ ಬದಲಾಗಿದ್ದು, ಅಮೆರಿಕದ ವಿದೇಶಾಂಗ ನೀತಿಯ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸಿದೆ. ಆರಂಭದಲ್ಲಿ ಇಸ್ರೇಲ್‌ನ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರ ಧೋರಣೆಯನ್ನು ಖಂಡಿಸಿದ್ದ ಟ್ರಂಪ್, ಈಗ ಬೆಂಬಲ ನೀಡಿದ್ದಾರೆ. ಇದು ಅಮೆರಿಕದ ಸ್ವಾಯತ್ತತೆಯನ್ನು ಕಡಿಮೆ ಮಾಡಿದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.