ನವದೆಹಲಿ-ಭೋಪಾಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಕಿಟಕಿ ಸೀಟಿನ ವಿಚಾರವಾಗಿ ಬಿಜೆಪಿ ಶಾಸಕ ರಾಜೀವ್ ಸಿಂಗ್ ಮತ್ತು ಅವರ ಬೆಂಬಲಿಗರು ಪ್ರಯಾಣಿಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಆದರೆ, ದಾಳಿ ಸಂಬಂಧ ದೂರು ದಾಖಲಿಸಲು ಸಂತ್ರಸ್ತ ವ್ಯಕ್ತಿ ನಿರಾಕರಿಸಿದ್ದಾರೆ ಎಂದು ವರದಿಯಾಗಿದೆ.
ಆದಾಗ್ಯೂ, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋವನ್ನು ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ಸುಪ್ರಿಯಾ ಶ್ರೀನಾಟೆ, “ಕಿಟಕಿ ಸೀಟನ್ನು ಬಿಟ್ಟುಕೊಡಲು ನಿರಾಕರಿಸಿದ ಸಹ-ಪ್ರಯಾಣಿಕನ ಮೇಲೆ ಬಿಜೆಪಿ ಶಾಸಕ ಸಿಂಗ್ ತನ್ನ ‘ಗೂಂಡಾ ಬೆಂಬಲಿಗ’ರಿಂದ ದಾಳಿ ಮಾಡಿಸಿದ್ದಾರೆ. ಸಿಂಗ್ ಅವರು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ಆಪ್ತನಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಬಿಜೆಪಿ, “ಸಿಂಗ್‌ಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಏಳು ದಿನಗಳಲ್ಲಿ ಲಿಖಿತ ವಿವರಣೆ ನೀಡುವಂತೆ ಕೇಳಲಾಗಿದೆ” ಎಂದು ಹೇಳಿದೆ.
A BJP MLA on Vande Bharat requested a window seat from a co-passenger, who refused.
— Kapil (@kapsology) June 23, 2025
The MLA made a call, and at the next station, men boarded the train and assaulted the passenger.
No arrests have been made yet.pic.twitter.com/88tvLk3tLf
ನೋಟಿಸ್‌ನಲ್ಲಿ, “ಸಿಂಗ್ ಅವರ ನಡವಳಿಕೆ ಪಕ್ಷದ ವರ್ಚಸ್ಸಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ. ಸೂಚಿತ ಅವಧಿಯೊಳಗೆ ಪ್ರತಿಕ್ರಿಯೆ ನೀಡದಿದ್ದಲ್ಲಿ ಅಥವಾ ನೀಡಿದ ವಿವರಣೆಯು ತೃಪ್ತಿಕರವಾಗಿರದಿದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಎಚ್ಚರಿಸಲಾಗಿದೆ.
ಕಳೆದ ಗುರುವಾರ ಸಂಜೆ ವಂದೇ ಭಾರತ್ ರೈಲಿನಲ್ಲಿ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್‌ಪಿ) ಪ್ರಕಾರ, ಸೀಟು ಬದಲಾಯಿಸುವ ವಿಚಾರದಲ್ಲಿ ಉಂಟಾದ ವಿವಾದ ಮತ್ತು ಸಹ ಪ್ರಯಾಣಿಕನ ಅನುಚಿತ ವರ್ತನೆಯಿಂದ ಘಟನೆ ನಡೆದಿದೆ. ರೈಲು ಝಾನ್ಸಿ ನಿಲ್ದಾಣವನ್ನು ತಲುಪಿದಾಗ ಶಾಸಕರ ಬೆಂಬಲಿಗರು ರೈಲು ಹತ್ತಿ, ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಜಿಆರ್‌ಪಿ ಪೊಲೀಸರು ಸಿಂಗ್ ವಿರುದ್ಧ ನಾನ್-ಕಾಗ್ನಿಜನಬಲ್ ರಿಪೋರ್ಟ್ (ಎನ್‌ಸಿಆರ್) ದಾಖಲಿಸಿದ್ದಾರೆ.