ಕರ್ನಾಟಕದಲ್ಲೊಂದು ‘ಮಿನಿ ಇರಾನ್‌’- ಖೊಮೈನಿ ಜೊತೆ ಅಲಿಪುರಕ್ಕಿರುವ ನಂಟೇನು?

Date:

Advertisements

ಕಳೆದ ಎರಡು ವಾರಗಳಿಂದ ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಹೆಚ್ಚಾಗಿರುವ ಸಂದರ್ಭದಲ್ಲಿ ನಮ್ಮದೇ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಇಲ್ಲಿಯ ʼಮಿನಿ ಇರಾನ್‌ʼ ಎಂದು ಕರೆಸಿಕೊಳ್ಳುವ ಅಲಿಪುರಕ್ಕೂ, ಸಾಗರದಾಚೆಗಿನ ಇರಾನ್‌ ಸುಪ್ರೀಂ ನಾಯಕ ಖೊಮೈನಿಗೂ ಇರುವ ನಂಟು, ಶಿಯಾ ಮುಸ್ಲಿಂ ಪರಂಪರೆಯ ಅಂತಾರಾಷ್ಟ್ರೀಯ ಕೊಂಡಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.

1980ರಲ್ಲಿ ಸ್ವತಃ ಈಗಿನ ಇರಾನಿನ ಪರಮೋಚ್ಛ ನಾಯಕ ಆಯತುಲ್ ಸೈಯದ್ ಅಲಿ ಖೊಮೈನಿ ಅಲಿಪುರ ಗ್ರಾಮಕ್ಕೆ ಭೇಟಿ ನೀಡಿದ್ದರು. ಸುಮಾರು 20 ಸಾವಿರ ಜನಸಂಖ್ಯೆ ಇರುವ ಅಲಿಪುರದಲ್ಲಿ ಶೇ. 90ರಷ್ಟು ಜನ ಶಿಯಾ ಮುಸ್ಲಿಮರೇ ನೆಲೆಸಿದ್ದಾರೆ. ಅಲಿಪುರದ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸಕ್ಕೆ, ಉದ್ಯೋಗ ಹಾಗೂ ಇತರೆ ವ್ಯವಹಾರಕ್ಕೆ ಇರಾನ್‌ಗೆ ಪ್ರಯಾಣ ಬೆಳೆಸುತ್ತಾರೆ. ಅತ್ತ ಇರಾನ್‌ ಹಾಗೂ ಇಸ್ರೇಲ್‌ ಸಂಘರ್ಷದಲ್ಲಿ ಮುಳುಗಿರುವಾಗ ಇತ್ತ ಇರಾನ್‌ನಲ್ಲಿರುವ ತಮ್ಮ ಮಕ್ಕಳನ್ನು, ಸಂಬಂಧಿಗಳನ್ನು ನೆನೆದು ಅಲಿಪುರದ ಜನ ಆತಂಕಗೊಂಡಿದ್ದಾರೆ. ಅವರೆಲ್ಲರೂ ಶೀಘ್ರವಾಗಿ ಊರಿಗೆ ಹಿಂದಿರುಗುವ ನಿರೀಕ್ಷೆಯಲ್ಲಿದ್ದಾರೆ.

WhatsApp Image 2025 06 24 at 1.08.28 PM

ಅಲಿಪುರದ ಜನಸಂಖ್ಯೆಯಲ್ಲಿ ಸುಮಾರು 90% ರಷ್ಷು ಜನ ಶಿಯಾ ಮುಸ್ಲಿಮರು. ಇಲ್ಲಿ ಯಾವುದೇ ರೀತಿಯ ಕೋಮು ಸಂಬಂಧೀ ಸಮಸ್ಯೆ ಇಲ್ಲದೆ, ಹಿಂದೂ ಮುಸಲ್ಮಾನರು ಸಹೋದರರಂತೆ ಬದುಕುತ್ತಿದ್ದಾರೆ. ಅಲಿಪುರಕ್ಕೆ ಹಾಗೂ ಇರಾನ್‌ಗೆ ಧರ್ಮಾಧಾರಿತ ಸಂಬಂಧ ಬಿಟ್ಟರೆ, ಬೇರೆ ಯಾವ ರೀತಿಯ ಸಂಬಂಧವೂ ಇಲ್ಲ. ಆದರೆ, ಇಲ್ಲಿನ ಮಕ್ಕಳು ವೈದ್ಯಕೀಯ, ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಇರಾನಿಗೆ ಹೋಗಿದ್ದಾರೆ. ಇದನ್ನು ಹೊರತುಪಡಿಸಿ ವರ್ಷಕ್ಕೆ ಸುಮಾರು 200 ರಿಂದ 300 ಜನ ಅಲ್ಲಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತಾರೆ.

Advertisements

ಇರಾನ್‌ನಂತೆ ಅಲಿಪುರದಲ್ಲಿ ಶಿಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಒಂದೇ ಕಾರಣದಿಂದ 1980ರಲ್ಲಿ ಅಂದಿನ ಇರಾನ್ ಅಧ್ಯಕ್ಷರಾದ ಇಮಾನ್ ಖಾನಿ ಅವರ ಹೆಸರಿನಲ್ಲಿ ಅಲಿಪುರದಲ್ಲಿ ನಿರ್ಮಾಣವಾದ ಆಸ್ಪತ್ರೆಯ ಶಂಕುಸ್ಥಾಪನೆಗೆ ಇಂದಿನ ನಾಯಕ ಖೊಮೈನಿ ಅವರು ಭೇಟಿ ನೀಡಿದ್ದರು. ಇರಾನ್ ಜನರ ಜೀವನ ಶೈಲಿಯಂತೆಯೇ ಅಲಿಪುರದ ಜನರ ಜೀವನ ಶೈಲಿಯಿದೆ. ಆದರೆ ಪ್ರತ್ಯೇಕವಾಗಿ ಅಲಿಪುರಕ್ಕಾಗಿಯೇ ಇರಾನಿನ ಕೊಡುಗೆ ಏನೂ ಇಲ್ಲ.

WhatsApp Image 2025 06 24 at 1.08.29 PM 1

ಅಲಿಪುರದ ಅಂಜುಮನ್ ಜಾಫರಿಯಾ ಸಂಸ್ಥೆಯೇ ಇಲ್ಲಿ ಸುಪ್ರೀಂ ಆಗಿದ್ದು, ಇದರಡಿಯಲ್ಲೇ ಶಾಲಾ ಕಾಲೇಜು ಆಸ್ಪತ್ರೆ ಇದೆ. ಈ ಗ್ರಾಮದಲ್ಲಿ ಇದುವರೆಗೂ ಒಂದು ಮದ್ಯದಂಗಡಿ ಇಲ್ಲ. ಪೊಲೀಸ್ ಠಾಣೆಯೂ ಇಲ್ಲ. ಏನೇ ಸಮಸ್ಯೆ ಇದ್ದರೂ ಅಲ್ಲಿಯವರೇ ಕೂತು ಮಾತನಾಡಿ ಬಗೆಹರಿಸಿಕೊಳ್ಳುತ್ತಾರೆ. ಶಿಯಾಗಳಂತೆಯೇ ಸುನ್ನಿ ಮುಸ್ಲಿಂ ಸಮುದಾಯದವರೂ ಅಲ್ಲಿ ವಾಸ ಮಾಡುತ್ತಿದ್ದಾರೆ. ಇಲ್ಲಿ ಯಾವುದೇ ರೀತಿಯ ಜಾತಿ, ಬೇಧ, ಪಕ್ಷ ಎನ್ನುವ ಮಾತಿಲ್ಲ. ಅವರು ನಾವು ಇಬ್ಬರೂ ಸಹ ಮುಸಲ್ಮಾನರೇ ಎಂಬುದು ಅಲ್ಲಿ ಮುಸ್ಲಿಂ ಸಮುದಾಯದ ಪ್ರಜ್ಞಾವಂತರ ಮಾತು. ಅಲಿಪುರದಲ್ಲಿ ಇರಾನ್ ರೀತಿಯಲ್ಲೇ ಕರ್ಬಲಾ ಮೈದಾನ ಇದೆ. ಇಲ್ಲಿ ಪ್ರತೀ ವರ್ಷ ಮೊಹರಂ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಇದು ಇಲ್ಲಿಯ ಇನ್ನೊಂದು ವಿಶೇಷ.

WhatsApp Image 2025 06 24 at 1.08.31 PM

“ಇರಾನ್ ಮೇಲೆ ಮೊದಲು ದಾಳಿ ಮಾಡಿ ಇಸ್ರೇಲ್ ತಪ್ಪು ಮಾಡಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಬೇಕಿತ್ತು. ಆದರೆ, ಪ್ಯಾಲೆಸ್ತೀನ್, ಗಾಝಾದ ಮಕ್ಕಳು ಹಾಗೂ ಅಲ್ಲಿನ ಆಸ್ಪತ್ರೆಯ ಮೇಲೆ ಇಸ್ರೇಲ್ ಮಾಡಿದ ಬಾಂಬ್ ದಾಳಿಯ ರೀತಿ ಇರಾನ್ ಮಾಡಿಲ್ಲ. ಇಸ್ರೇಲ್‌ಗೆ ಸರಿಯಾದ ರೀತಿಯಲ್ಲಿ ಇರಾನ್ ಉತ್ತರ ನೀಡಿದೆ. ಆದರೆ, ಯುದ್ಧ ನಿಂತು ಹೋದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ” ಎಂದು ಅಲಿಪುರದ ಅಂಜುಮನ್ ಜಾಫರಿಯಾ ಸಂಸ್ಥೆಯ ಅಧ್ಯಕ್ಷ ಮೀರ್ ಅಲಿ ಅಬ್ಬಾಸ್ ಈದಿನಕ್ಕೆ ಪ್ರತಿಕ್ರಿಯಿಸಿದರು.

ಮುಸ್ಲಿಮರಲ್ಲಿ ಶಿಯಾ, ಸುನ್ನಿ ಪಂಗಡ ಆಗಲು ಕಾರಣ ಏನು?

ಮುಸ್ಲಿಮರ ಅಂತಿಮ ಪ್ರವಾದಿ ಮುಹಮ್ಮದ್(ಸ) ನಂತರ ಖಿಲಾಫತ್(ಅಧಿಕಾರ) ವನ್ನು ಹಝ್ರತ್ ಅಲಿ ಅವರಿಗೆ ನೀಡಬೇಕು ಎಂಬುದು ಶಿಯಾ ಮುಸ್ಲಿಮರ ಒತ್ತಾಯವಾಗಿತ್ತು. ಹೆಚ್ಚು ಪ್ರಾಮುಖ್ಯತೆಯನ್ನೂ ಹಝ್ರತ್ ಅಲಿ ಅವರಿಗೇ ನೀಡಬೇಕು ಎಂಬ ಮನವಿಯೂ ಇತ್ತು. ಆ ವೇಳೆ ಎರಡೂ ಸಮುದಾಯಗಳಲ್ಲಿ ಸ್ವಲ್ಪ ಮಟ್ಟಿಗೆ ವೈರುಧ್ಯ ಕಂಡುಬಂದಿದ್ದು ಬಿಟ್ಟರೆ, ಶಿಯಾ ಹಾಗೂ ಸುನ್ನಿ ಮುಸಲ್ಮಾನರಲ್ಲಿ ಯಾವುದೇ ರೀತಿಯ ವ್ಯತ್ಯಾಸ ಇಲ್ಲ. ಕುರಾನ್, ನಮಾಜ್, ಪೈಗಂಬರ್ ಎಲ್ಲವೂ ಒಂದೇ.

“ಅಲಿಪುರವನ್ನು ಮಿನಿ ಇರಾನ್ ಅಂತ ಯಾಕೆ ಕರಿತಾರೆ ಅಂದ್ರೆ, ಇರಾನ್ ಹಾಗೂ ಅಲಿಪುರ ಜನರ ಸಂಪ್ರದಾಯ ಒಂದೇ ರೀತಿಯಲ್ಲಿ ಇದೆ. ಅಲಿಪುರದಲ್ಲಿ ಒಂದೇ ಒಂದು ಮದ್ಯದಂಗಡಿ ಇಲ್ಲ. ಇಡಿ ಕರ್ನಾಟಕದಲ್ಲೇ ಅತಿ ಹೆಚ್ಚು ಶಿಯಾ ಮುಸ್ಲಿಮರು ಇರೋದು ಅಲಿಪುರದಲ್ಲಿ. ಅದಕ್ಕೆ ಅಲಿಪುರವನ್ನ ಮಿನಿ ಇರಾನ್ ಅಂತ ಕರೆಯುತ್ತಾರೆ” ಎನ್ನುತ್ತಾರೆ ಡಾ. ಮೀರ್ ನದೀಂ ಅಲಿ.

WhatsApp Image 2025 06 24 at 1.08.29 PM

ಇರಾನ್ ದೇಶದಂತೆ ಅಲಿಪುರದಲ್ಲಿ ಶಿಯಾ ಮುಸ್ಲಿಮರೇ ಇದ್ದೀವಿ. ಅವರ ಹಾಗೂ ನಮ್ಮ ಸಂಪ್ರದಾಯ ಒಂದೇ ರೀತಿಯಾಗಿದೆ. ಅಲಿಪುರದ ಗ್ರಾಮಸ್ಥರು ಆಸ್ಪತ್ರೆ ಮಾಡಲು 10 ಎಕರೆ ಜಮೀನು ನೀಡಿದ್ದರು. ಆ ಜಾಗದಲ್ಲಿ ಐ.ಕೆ ಆಸ್ಪತ್ರೆಯ ಶಂಕು ಸ್ಥಾಪನೆಯನ್ನು 1980ರಲ್ಲಿ ಇಂದಿನ ಇರಾನ್ ಅಧ್ಯಕ್ಷರಾದ ಆಯತುಲ್ ಸೈಯದ್ ಅಲಿ ಖೊಮೈನಿ ಅವರು ಮಾಡಿದ್ದರು. ಕೈಗೆಟಕುವ ದರದಲ್ಲಿ ಎಲ್ಲಾ ಧರ್ಮದ ಜನರಿಗೆ ಇಲ್ಲಿ ಆರೋಗ್ಯ ಸೇವೆ ನೀಡಲಾಗುತ್ತಿದೆ ಎಂದು ಡಾ. ಮೀರ್ ನದೀಂ ತಿಳಿಸಿದರು.

ಅಂಜುಮನ್ ಜಾಫರಿಯಾ ಕಾರ್ಯದರ್ಶಿ ಮೀರ್ ಫಾಝಿಲ್ ರಜಾ ಮಾತನಾಡಿ, “ಅಲಿಪುರದ ಜನರು ಹಾಗೂ ಇರಾನ್ ನಲ್ಲಿರುವ ಜನರು ಒಂದೇ ಧರ್ಮದವರು ಅದರಲ್ಲೂ ವಿಶೇಷವಾಗಿ ಶಿಯಾ ಮುಸ್ಲಿಮರೇ ಇರುವುದರಿಂದ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯ ಜಾಸ್ತಿ ಇದೆ. ವ್ಯಾವಹಾರಿಕ ಸಂಬಂಧ ಅಷ್ಟೇನೂ ಇಲ್ಲ. ಆದ್ರೆ, ಆಲಿಪುರದ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯಲು ಇರಾನ್‌ಗೆ ಹೋಗುತ್ತಲೇ ಇದ್ದಾರೆ. ಭಾರತದಲ್ಲಿ ಎಂಬಿಬಿಎಸ್ ಶಿಕ್ಷಣ ಪಡೆಯಲು ಸ್ವಲ್ಪ ಹೆಚ್ಚು ಹಣ ಕೊಡಬೇಕು. ಆದ್ರೆ, ಇರಾನ್ ನಲ್ಲಿ ಎಂಬಿಬಿಎಸ್ ಮಾಡಲು ಕಡಿಮೆ ಹಣ ಪಾವತಿ ಮಾಡಬೇಕಾಗಿರುವ ಕಾರಣ ಸುಮಾರು ವಿದ್ಯಾರ್ಥಿಗಳು ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಲ್ಲಿರುವ ನಮ್ಮ ಅಲಿಪುರದ ಮಕ್ಕಳು ಯಾವುದೇ ರೀತಿಯ ಭಯ ಇಲ್ಲದೆ ಸೇಫ್ ಆಗಿ ಇದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಸಹ ಇರಾನ್ ನಲ್ಲಿರುವ ಭಾರತೀಯರನ್ನು ಸೇಫ್ ಆಗಿ ನಮ್ಮ ದೇಶಕ್ಕೆ ಕರೆಸಿಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಅಲಿಪುರ ಗ್ರಾಮದ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಸ್ಥಳೀಯ ಶಾಸಕ ಪುಟ್ಟಸ್ವಾಮಿಗೌಡ ವಿಮಾನ ನಿಲ್ದಾಣಕ್ಕೆ ಹೋಗಿದ್ದರು” ಎಂದರು.

ಅಲಿಪುರದ ನಿವಾಸಿ ಹಮ್ದಾನ್ ಸೈಯದ್ ಮಾತನಾಡಿ, “ಇರಾನಿನಲ್ಲಿ ನನ್ನ ತಂಗಿ ಮತ್ತು ಅವರ ಗಂಡ ವಾಸವಾಗಿದ್ದು, ಅವರು ಎರಡು ದಿನಗಳ ಹಿಂದೆ ನಮಗೆ ಕರೆ ಮಾಡಿ, ವಸತಿ ಪ್ರದೇಶದ ಮೇಲೆ ಇಸ್ರೇಲ್ ದಾಳಿ ಮಾಡಿದ್ದು ನಮಗೆ ಭಯ ಆಗ್ತಿದೆ ಎಂದು ಹೇಳಿದರು. ತದನಂತರ ನಾವು ತುಂಬಾ ಆತಂಕದಲ್ಲಿ ಇದ್ದು, ರಾಯಭಾರಿ ಕಚೇರಿಗೆ ಮೇಲೆ ಮಾಡಿ ಅವರನ್ನು ನಮ್ಮ ದೇಶಕ್ಕೆ ಕಳುಹಿಸಿಕೊಡಿ ಎಂದು ವಿನಂತಿ ಮಾಡಿದ್ದೇವೆ. ನಾವು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೀವಿ. ಆದಷ್ಟು ಬೇಗ ನಮ್ಮ ದೇಶಕ್ಕೆ ಸುರಕ್ಷಿತವಾಗಿ ಬರುವಂತೆ ಮಾಡಿ” ಎಂದರು.

WhatsApp Image 2025 06 24 at 1.08.31 PM 1

“ನಮ್ಮ ಮಗ ಆಕೀಬ್ ಅಲಿ ಕೆಲಸಕ್ಕಾಗಿ ಇರಾನ್ ಗೆ ಹೋಗಿ ನಾಲ್ಕು ತಿಂಗಳು ಆಗಿದ್ದು, ಯುದ್ಧದ ಭೀತಿಯಿಂದ ನಮಗೆ ಕರೆ ಮಾಡಿ ಬರ್ತಿನಿ ಬರ್ತಿನಿ ಎಂದು ಹೇಳ್ತಿದ್ದಾನೆ. ನಾಲ್ಕು ದಿನಗಳಿಂದ ನಾವು ಭಯದಲ್ಲೇ ಇದ್ದೀವಿ ಏನಾಗುತ್ತೆ ಏನೋ ಅಂತ. ನಮ್ಮ ಕೇಂದ್ರ ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿದೆ. ಶೀಘ್ರದಲ್ಲೇ ವಾಪಸ್ ಬರುತ್ತಾರೆ ಎಂದು ಹೇಳ್ತಿದ್ದಾರೆ. ನಮ್ಮ ಮಗ ಬೇಗ ಬಂದ್ರೆ ನಮಗೆ ಬಹಳ ಸಂತೋಷ ಆಗುತ್ತೆ” ಎನ್ನುತ್ತಾರೆ ಅಲಿಪುರದ ಮತ್ತೊಬ್ಬ ನಿವಾಸಿ ಅಮ್ಜದ್ ಅಲಿ.

ಇದನ್ನೂ ಓದಿ: ಇರಾನ್-ಇಸ್ರೇಲ್ ಯುದ್ಧ | ಟ್ರಂಪ್ ತಿಕ್ಕಲುತನದಿಂದ ಜಾಗತಿಕ ಆರ್ಥಿಕ ಮಾರುಕಟ್ಟೆ ಕುಸಿತದ ಭೀತಿ

ಇಸ್ರೇಲ್–ಇರಾನ್ ನಡುವಿನ ಸಂಘರ್ಷ ಜಾಗತಿಕ ರಾಜಕೀಯದ ಸಮತೋಲನವನ್ನು ತೀವ್ರವಾಗಿ ಅಲುಗಿಸುತ್ತಿರುವ ಈ ಸಮಯದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ ಎಂಬ ಸಾಧಾರಣ ಗ್ರಾಮವು ಅಸಾಧಾರಣ ಚರ್ಚೆಗೆ ಗ್ರಾಸವಾಗಿದೆ. ಇದು ಭಾರತೀಯ ಮಣ್ಣಿನ ಮೇಲಿರುವ ಜಾಗತಿಕ ಸಂಸ್ಕೃತಿಯ ಪ್ರತಿಬಿಂಬವನ್ನು ತೋರಿಸುತ್ತದೆ.

ಅಲಿಪುರದ ಜನತೆಯ ಅಭಿಪ್ರಾಯಗಳು ಯುದ್ಧವಿರೋಧಿ ಹಾಗೂ ಶಾಂತಿಯ ಪರವಾಗಿವೆ. ಭಾರತ, ಶಾಂತಿಯನ್ನು ಮೆರೆದ ದೇಶವಾಗಿದ್ದು, ತನ್ನ ಒಳನಾಡು ಹಾಗೂ ಜಾಗತಿಕ ನಿಲುವಿನಲ್ಲಿ ಸಮತೋಲನ ಕಾಯ್ದುಕೊಳ್ಳುತ್ತಿರುವುದು ಸರಿಯಷ್ಟೆ. ಆದರೆ ಅಲ್ಲಿರುವ ನಮ್ಮ ದೇಶವಾಸಿಗಳನ್ನು ಸುರಕ್ಷಿತವಾಗಿ ವಾಪಸ್‌ ಕರೆತರುವ ಕಾರ್ಯಗಳು ಶೀಘ್ರವಾಗಿ ಆಗಬೇಕು ಎಂಬುದು ಅಲಿಪುರ ಗ್ರಾಮಸ್ಥರ ಮನವಿ.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಶಿವಮೊಗ್ಗ | ಮತ್ತೆ ಸದ್ದು ಮಾಡುತ್ತಿದೆ ವಾಹನಗಳ ಕರ್ಕಶ ಸೈಲೆಂಸರ್ ; ಕ್ರಮ ಕೈಗೊಳ್ಳುವರೆ ಟ್ರಾಫಿಕ್ ಪೊಲೀಸ್?

ಶಿವಮೊಗ್ಗ ನಗರದಲ್ಲಿ ಕೆಲವು ತಿಂಗಳು ಹಿಂದೆ ಸೈಲೆಂಟ್ ಆಗಿದ್ದ ಸೈಲೆಂಸರ್ ಕರ್ಕಶ...

ಕೋಲಾರ | ಎಫ್ಆರ್‌ಎಸ್ ನಿಲ್ಲಿಸುವಂತೆ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಅಂಗನವಾಡಿ ಕಾರ್ಯಕರ್ತೆಯರ ಮುಖಚರ್ಯೆ ಗುರುತಿಸುವ ಕ್ರಮಕ್ಕೆ (ಎಫ್ಆರ್‌ಎಸ್) ತಡೆ ಹಾಗೂ ಐಸಿಡಿಎಸ್...

Download Eedina App Android / iOS

X