ಮಾವಿನ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೂಡ ಸ್ಪಂದಿಸದಿರುವ ರಾಜ್ಯ ಸರ್ಕಾರದ ವಿರುದ್ಧ ಮಾವು ಬೆಳೆಗಾರರು, ಹೋರಾಟಗಾರರು ಮಂಗಳವಾರ ಬೆಳಿಗ್ಗೆ ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವು ಸುರಿದು ಪ್ರತಿಭಟನೆ ನಡೆಸಿದರು.
ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ಬಳಿ ಹೆದ್ದಾರಿಯಲ್ಲಿ(ಎನ್ ಎಚ್-75) ಮಾವಿನ ಹಣ್ಣುಗಳನ್ನು ತಂದು ಸುರಿದು ಪ್ರತಿಣಟನೆ ನಡೆಸಿದರು. ಹಣ್ಣುಗಳನ್ನು ಟ್ರ್ಯಾಕ್ಟರ್’ನಲ್ಲಿ ತಂದು ಸುರಿದರು. ಇದರಿಂದ ಸುಮಾರು ಅರ್ಧ ತಾಸು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆ ತೆರಳಬೇಕಿದ್ದ ವಾಹನಗಳಿಗೆ ಅಡಚಣೆ ಉಂಟಾಯಿತು. ನೂರಾರು ಸಂಖ್ಯೆಯಲ್ಲಿ ಪೊಲೀಸರು ಬಂದು ಪ್ರತಿಭಟನಕಾರರನ್ನು ಸ್ಥಳದಿಂದ ತೆರವುಗೊಳಿಸಲು ಪರದಾಡಿದರು.
“ಮಾವಿನ ಹಣ್ಣಿಗೆ ಬೆಂಬಲ ಬೆಲೆ ಘೋಷಿಸುವಂತೆ 20 ದಿನಗಳಿಂದ ಹೋರಾಟ ನಡೆಸಿದ್ದರೂ ಕೂಡ ರಾಜ್ಯ ಸರ್ಕಾರ ಸ್ಪಂದಿಸಿಲ್ಲ. ಮಾವಿನ ಸುಗ್ಗಿ ಮುಗಿಯುತ್ತ ಬರುತ್ತಿದ್ದರೂ ಬೆಂಬಲ ಬೆಲೆ ಘೋಷಿಸಿಲ್ಲ. ಧಾರಣೆ ಇಲ್ಲದೆ ಮಾವಿನ ಕಾಯಿಗಳನ್ನು ತೋಟದಲ್ಲೇ ಬಿಡಲಾಗಿದೆ. ಇದೀಗ ಅವುಗಳು ಕೊಳೆಯಲು ಆರಂಭಿಸಿವೆ. ರೈತರು ಬೀದಿಗೆ ಬಿದ್ದಿದ್ದಾರೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಾವು ಬೆಳೆಗಾರರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಕೋಲಾರದ ಕೊಂಡರಾಜನಹಳ್ಳಿ ಬಳಿ ಸುಮಾರು 2 ಕಿಮೀಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಸರ್ಕಾರ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ತೀವ್ರವಾದ ಹೋರಾಟ ಮಾಡುತ್ತೇವೆಂದು ಕಿಡಿ ಕಾರಿದರು.
“ಆಂಧ್ರಪ್ರದೇಶ ಮಾದರಿಯಲ್ಲಿ ರಾಜ್ಯ ಸರ್ಕಾರ ಈ ಕೂಡಲೇ ಮಾವು ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ ಮಾಡುತ್ತೇವೆ. ವಿಧಾನಸೌಧ ಮುತ್ತಿಗೆ ಹಾಕುತ್ತೇವೆ” ಎಂದು ರೈತರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇದನ್ನೂ ಓದಿದ್ದೀರಾ? ಬೆಳಗಾವಿ : ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಇಲ್ಲ: ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ
ಹೆದ್ದಾರಿ ತಡೆದಿದ್ದ ಕಾರಣ ಸಂಚಾರ ದಟ್ಟಣೆ ಉಂಟಾಗಿ ಒಂದು ಕಿಮೀ ದೂರದವರೆಗೆ ವಾಹನಗಳು ನಿಂತಿದ್ದವು.
ಪ್ರತಿಭಟನೆಯಲ್ಲಿ ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಪಿ ಆರ್ ಸೂರ್ಯನಾರಾಯಣ, ವಿ ಗೀತಾ, ಪಾತಕೋಟೆ ನವೀನ್ ಕುಮಾರ್ ಸೇರಿದಂತೆ ಎಲ್ಲ ಮಾವು ಬೆಳೆಗಾರರು ಇದ್ದರು.