ಮೋದಿ ಸಚಿವ ಸಂಪುಟದಲ್ಲಿ ಇಂಗ್ಲಿಷಿನಲ್ಲಿಯೇ ಪುಂಖಾನುಪುಂಖವಾಗಿ ಮಾತನಾಡುವ ಹಲವು ಸಚಿವರಿದ್ದಾರೆ. ಅನಂತ ಕುಮಾರ್ ಕ್ಯಾನ್ಸರ್‌ಗೆ ಬಲಿಯಾದ ನಂತರ ಅವರ ಜಾಗಕ್ಕೆ ಖುದ್ದು ಅಮಿತ್ ಶಾ ಅವರೇ ಹುಡುಕಿ ಟಿಕೆಟ್ ಕೊಟ್ಟು ಲೋಕಸಭೆಗೆ ಗೆಲ್ಲಿಸಿರುವ ತೇಜಸ್ವಿ ಸೂರ್ಯ ಅವರು ಮಾತಾಡುವುದು ಅಸ್ಖಲಿತ ಇಂಗ್ಲಿಷನ್ನೇ. ಇವರೇನೂ ನಾಚಿಕೆಯಿಂದ ತಲೆತಗ್ಗಿಸಬೇಕಿಲ್ಲ.
ಇಂಗ್ಲಿಷ್ ಮಾತಾಡುವವರಿಗೆ ನಾಚಿಕೆಯಾಗಲಿದೆ, ಅಂತಹ ಸಮಾಜವನ್ನು ಸದ್ಯದಲ್ಲೇ ನಿರ್ಮಿಸಲಿದ್ದೇವೆ ಎಂದು ಗೃಹಮಂತ್ರಿ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಅಮಿತ್ ಶಾ ನೀಡುವ ಯಾವುದೇ ಎಚ್ಚರಿಕೆಯನ್ನು ಲಘುವಾಗಿ ತೆಗೆದುಕೊಳ್ಳುವಂತಿಲ್ಲ. ಯಾಕೆಂದರೆ ಈ ಎಚ್ಚರಿಕೆಗಳನ್ನು ಅವರ ಸುಪರ್ದಿನಲ್ಲಿರುವ ಖಡಾ ಖಡಕ್ ಏಜೆನ್ಸಿಗಳು ಜಾರಿಗೆ ತಂದೇ ತೋರಿಸುತ್ತವೆ. ಸಾಕ್ಷ್ಯಗಳಿಲ್ಲದಿದ್ದರೂ ಜೈಲಿಗೆ ತಳ್ಳುತ್ತವೆ. ವರ್ಷಗಟ್ಟಲೆ ಅಲ್ಲಿ ಕೊಳೆಸುತ್ತವೆ. ನ್ಯಾಯಾಲಯಗಳಿಗೆ ಅಲೆದಾಡಿಸುತ್ತವೆ. ಕಡೆಗೊಂದು ದಿನ ಪುರಾವೆಗಳಿಲ್ಲ ಎಂದು ನ್ಯಾಯಾಲಯ ಸಾರಿ ಬಿಡುಗಡೆ ಮಾಡುತ್ತದೆ. ಆದರೆ ಅಲ್ಲಿಯವರೆಗೆ ವರ್ಷಗಟ್ಟಲೆ ಜೈಲು ಶಿಕ್ಷೆ ಮಾನಸಿಕ ದೈಹಿಕ ಕಿರುಕುಳ ಹಿಂಸೆಯನ್ನು ಅನುಭವಿಸಿ ಆಗಿರುತ್ತದೆ. ಹೀಗೆ ಪ್ರಕ್ರಿಯೆಯೇ ಶಿಕ್ಷೆ (Process is Punishment) ಎಂಬ ಹೊಸ ವಜ್ರಾಯುಧವಿದು. ಕಳೆದ ಹನ್ನೊಂದು ವರ್ಷಗಳಿಂದ ಮಾನ್ಯ ಗೃಹಮಂತ್ರಿಯವರ ಬಾಹುವಿನ ಅವ್ಯಕ್ತ ಅಂಗವಾಗಿಯೇ ಹೋಗಿದೆ.
ಹೀಗಾಗಿ ಇಂಗ್ಲಿಷ್ ಮಾತಾಡುವವರಿಗೆ ಅದೇನು ಶಿಕ್ಷೆ ಕಾದಿದೆಯೋ, ಸದ್ಯದಲ್ಲೇ ತಿಳಿಯಲಿದೆ. ಮೋದಿಯವರು ಹಲವಾರು ಇಂಗ್ಲಿಷ್ ಭಾಷಣಗಳನ್ನು ವಿದೇಶಗಳಲ್ಲಿ ಮಾಡಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೇ ಬಿಹಾರದ ಜನಸಾಮಾನ್ಯರ ರ್ಯಾಲಿಯೊಂದರಲ್ಲಿ ಇಂಗ್ಲಿಷ್ ಭಾಷಣ ಮಾಡಿದರು. ಭಯೋತ್ಪಾದಕರು ಜಗತ್ತಿನ ಯಾವುದೇ ತುದಿಯಲ್ಲಿ ಅವಿತುಕೊಂಡರೂ ಬಿಡದೆ ಹುಡುಕಿ ಪ್ರತಿಯೊಬ್ಬನನ್ನೂ ಅವರಿಗೆ ಬೆಂಬಲವಾಗಿ ನಿಂತಿರುವವರನ್ನೂ ಶಿಕ್ಷಿಸುತ್ತೇವೆ ಎಂದು ಸಾರಿದರು. ಈ ಭಾಗವನ್ನು ಅವರು ಇಂಗ್ಲಿಷಿನಲ್ಲಿಯೇ ಹೇಳಬೇಕಾಯಿತು.
ಮೋದಿ ಸಚಿವ ಸಂಪುಟದಲ್ಲಿ ಇಂಗ್ಲಿಷಿನಲ್ಲಿಯೇ ಪುಂಖಾನುಪುಂಖವಾಗಿ ಮಾತನಾಡುವ ಹಲವು ಸಚಿವರಿದ್ದಾರೆ. ಅನಂತ ಕುಮಾರ್ ಕ್ಯಾನ್ಸರ್‌ಗೆ ಬಲಿಯಾದ ನಂತರ ಅವರ ಜಾಗಕ್ಕೆ ಖುದ್ದು ಅಮಿತ್ ಶಾ ಅವರೇ ಹುಡುಕಿ ಟಿಕೆಟ್ ಕೊಟ್ಟು ಲೋಕಸಭೆಗೆ ಗೆಲ್ಲಿಸಿರುವ ತೇಜಸ್ವಿ ಸೂರ್ಯ ಅವರು ಮಾತಾಡುವುದು ಅಸ್ಖಲಿತ ಇಂಗ್ಲಿಷನ್ನೇ. ಇವರೇನೂ ನಾಚಿಕೆಯಿಂದ ತಲೆತಗ್ಗಿಸಬೇಕಿಲ್ಲ. ಯಾಕೆಂದರೆ ಇವರು ಮತ್ತು ಇವರಂತಹವರೆಲ್ಲ ಬಿಜೆಪಿಯಲ್ಲಿದ್ದಾರೆ. ಅದೇ ಅವರ ಪಾಲಿನ ಕವಚ ಕುಂಡಲ.
ಆದರೆ ಈ ದೇಶದ ಜನ ಇಂಗ್ಲಿಷ್ ಭಾಷೆಯನ್ನು ಆಧರಿಸಿದ್ದಾರೆ. ಇಂಗ್ಲಿಷ್ ಆಶೋತ್ತರಗಳ ಭಾಷೆಯಾಗಿ, ಜೀವನಮಟ್ಟವನ್ನು ಸುಧಾರಿಸುವ ಭಾಷೆಯಾಗಿ, ಸಂಪಾದನೆಯ ಭಾಷೆಯಾಗಿ, ಹೊರಹೊಮ್ಮಿದೆ. ಅತ್ಯಂತ ಬಡವರು ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಸೇರಿಸಿದ್ದಾರೆ. ಹಾಗೆ ಸೇರಿಸದೆ ಇರುವವರು ತೀವ್ರ ಪ್ರಯತ್ನ ನಡೆಸಿದ್ದಾರೆ.
ಇಂತಹ ಎಲ್ಲ ಜನರಿಗೆ ದನಿಯಾಗಿ ಮಾತನಾಡಿದ್ದಾರೆ ಹಲವು ದಲಿತ ನಾಯಕರು. ಇವರ ಪೈಕಿ ಬಾಬಾಸಾಹೇಬ ಡಾ ಬಿ ಆರ್ ಅಂಬೇಡ್ಕರ್ ಪ್ರಮುಖರು.
ಬಾಬಾ ಸಾಹೇಬ ಡಾ ಬಿ ಆರ್ ಅಂಬೇಡ್ಕರ್ ಅವರಿಗಿಂತ ಮುಂಚೆಯೇ ಬದುಕಿದ್ದ ಬಹುದೊಡ್ಡ ಸಮಾಜ ಸುಧಾರಕಿ ಸಾವಿತ್ರಿ ಬಾಯಿ ಫುಲೆ. ಬಾಲಕಿಯರಿಗಾಗಿ ಮೊದಲ ಶಾಲೆಗಳನ್ನು ತೆರೆದ ಅಕ್ಷರದವ್ವ. ಭಾರತದಲ್ಲಿನ ಸಾಮಾಜಿಕ ದಾಸ್ಯದ ನೊಗವನ್ನು ಕಿತ್ತೊಗೆಯಲು ಶೂದ್ರರು-ದಲಿತರು ಇಂಗ್ಲಿಷ್ ಕಲಿಯಬೇಕೆಂದು 170 ವರ್ಷಗಳ ಹಿಂದೆಯೇ ವಾದಿಸಿದ್ದರು.
ಸಾವಿತ್ರಿಬಾಯಿ ಫುಲೆ ಮಹಿಳೆಯರು, ಅದರಲ್ಲೂ ವಿಶೇಷವಾಗಿ ತಳವರ್ಗದ ಹೆಣ್ಣುಮಕ್ಕಳಿಗೆ ಇಂಗ್ಲಿಷು ವಿಮೋಚನೆಯ ಭಾಷೆ ಎಂದಿದ್ದರು. ಪ್ರಾಯಶಃ ಈ ಮಾತನ್ನು ಹೇಳಿದ ಮೊದಲ ಸಮಾಜ ಸುಧಾರಕರಿವರು. 1854ರಲ್ಲಿಯೇ ಈ ಕುರಿತು ಪದ್ಯ ಬರೆದರು. ‘ಕಾವ್ಯಾ ಫುಲೆ’ ಎಂಬ ಕವಿತಾ ಸಂಗ್ರಹದ ಭಾಗವಾಗಿದೆ ಈ ಕವಿತೆ
ಇಂಗ್ಲಿಷನ್ನು ಮೆಚ್ಚಿ 1854ರಲ್ಲಿ ಅವರು ರಚಿಸಿದ್ದ ಕವಿತೆಯ ಅನುವಾದ ಹೀಗಿದೆ-
ಇಂಗ್ಲಿಷ್ ತಾಯಿ ಬಂದಳು, ಬೆಳಕಿನ
ಕಿರಣವ ತಂದಳು,
ಬ್ರಾಹ್ಮಣ ಪುರೋಹಿತರ ಆಳ್ವಿಕೆಯ ಕತ್ತಲೆಯ
ಹರಿದೊಗೆದಳು.
ಓ ದಮನಿತರೇ, ಈ ಸದವಕಾಶವ
ಕೈ ಚೆಲ್ಲದಿರಿ, ಕಲಿಯಿರಿ, ಮುರಿದೊಗೆಯಿರಿ
ಮನುವಿನ ಸಂಕೋಲೆಗಳನ್ನು
ಕೈವಶ ಮಾಡಿಕೊಳ್ಳಿರಿ ಸ್ವಾತಂತ್ರ್ಯವನ್ನು
ಶಿಕ್ಷಣವೇ ನಿಮ್ಮ ಹತಾರು, ಜ್ಞಾನವೇ
ನಿಮ್ಮ ಬಲ,
ಎದ್ದೇಳಿರಿ, ಇಂಗ್ಲಿಷ್ ಕಲಿಯಿರಿ,
ಕೊನೆಗೊಳಿಸಿರಿ ಈ ದುಮ್ಮಾನಗಳ ದೀರ್ಘ ಇರುಳನ್ನು.
ನಿಮ್ಮನ್ನು ಜಾತಿಗಳಲ್ಲಿ ಬಂಧಿಸುವ ಶಾಸ್ತ್ರಗಳನ್ನು
ಎತ್ತಿ ಬಿಸಾಡಿರಿ, ಸ್ವಾವಲಂಬಿಗಳಾಗಿರಿ
ಸಾವಿತ್ರಿ ಬಾಯಿ ಅವರ ‘ಕಾವ್ಯಾ ಫುಲೆ’ ಎಂಬ ಮರಾಠೀ ಕವಿತಾ ಸಂಕಲನದ ಕವಿತೆಯಿದು. ಅದರ ಇಂಗ್ಲಿಷ್ ಅನುವಾದಗಳ ಮೂಲಕ ಮರುನಿರ್ಮಿಸಿದ ಆವೃತ್ತಿಯಿದು.
ಇಂಗ್ಲಿಷ್ ಕಲಿಯಬೇಕೆಂಬ ಸಾವಿತ್ರಿಬಾಯಿ ಅವರ ಕರೆಯನ್ನು ಬ್ರಿಟಿಷರಿಗೆ ನೀಡಿದ ಬೆಂಬಲವೆಂದು ತಿಳಿಯುವುದು ತಪ್ಪಾದೀತು. ಬ್ರಾಹ್ಮಣಿಕೆಯ ಯಜಮಾನ್ಯದಿಂದ ಬಿಡಿಸಿಕೊಳ್ಳುವ ಸಾಧನವೆಂದು ಬಗೆಯಬೇಕು. ದಮನಿತರು ಮತ್ತು ಹೆಣ್ಣುಮಕ್ಕಳಿಗೆ ಅಕ್ಷರವನ್ನು ನಿರಾಕರಿಸಿದ್ದ ಸಮಾಜದೊಂದಿಗೆ ಅಕ್ಷರದವ್ವನ ಮುಖಾಮುಖಿಯಿದು. ಇಂಗ್ಲಿಷ್ ಶಿಕ್ಷಣವನ್ನು ತಾಯಿ ಎಂದು ಕರೆಯುವ ಮೂಲಕ ಅವರು ಗಂಡಾಳಿಕೆಯ ಬ್ರಾಹ್ಮಣವಾದಿ- ಜಾತಿವಾದಿ ಶಾಸ್ತ್ರಗಳ ರೂಪದಲ್ಲಿದ್ದ ‘ತಂದೆ’ಯ ವಿರುದ್ಧ ದನಿಯೆತ್ತಿದ್ದಾರೆ. ಶತಮಾನಗಳಿಂದ ಜರುಗಿದ್ದ ಜಾತಿಗ್ರಸ್ತ ದಮನದ ವಿಮೋಚನೆಯ ರೂಪವಾಗಿ ಇಂಗ್ಲಿಷ್ ಶಿಕ್ಷಣವನ್ನು ಅವರು ಕಂಡಿದ್ದಾರೆ.

ಡಿ ಉಮಾಪತಿ
ಹಿರಿಯ ಪತ್ರಕರ್ತರು