ಬಡವರಿಂದ ಹಣ ಪಡೆಯುವಷ್ಟು ದಾರಿದ್ರ್ಯ ನನಗೆ ಬಂದಿಲ್ಲ. ಬಡ ಜನರಿಂದ ದುಡ್ಡು ಪಡೆದವರು, ಪಡೆಯುವವರು ಹುಳ ಬಿದ್ದು ಸಾಯುತ್ತಾರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ವಸತಿ ಯೋಜನೆಯಡಿ ಮನೆ ಹಂಚಿಕೆಗೆ ಲಂಚ ಪಡೆಯಲಾಗಿದೆ ಎಂಬ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರ ಆರೋಪವನ್ನು ಜಮೀರ್ ನಿರಾಕರಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಬಿ.ಆರ್ ಪಾಟೀಲ್ ಅವರು ತುಂಬಾ ಹಿರಿಯರು. ಬಡವರ ಬಗ್ಗೆ ಕಾಳಜಿ ಇರುವವರು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ನನಗೆ ಅರ್ಥವಾಗಿಲ್ಲ” ಎಂದಿದ್ದಾರೆ.
“ಪಾಟೀಲ್ ಅವರು ನನ್ನ ಬಗ್ಗೆ ಮಾತನಾಡಿದ್ದಾರಾ? ಸಚಿವರು ಅಂತ ಹೇಳಿದ್ದಾರಾ? ಯಾವ ಇಲಾಖೆ ಎಂದೇನಾದರೂ ಹೇಳಿದ್ದಾರೆಯೇ? ಲಂಚ ಪಡೆದವರು ಯಾರು ಅಂತ ಅವರು ಹೇಳಬೇಕಲ್ಲವೇ? ಆಗ ಮಾತ್ರವೇ ತಾನೇ ಏನಾದರೂ ಕ್ಲಾರಿಟಿ ಸಿಗೋದು. ಈ ಬಗ್ಗೆ ತನಿಖೆ ಆಗಬೇಕು. ತನಿಖೆಯನ್ನು ಸಿಬಿಐಗೆ ಕೊಡಲಿ” ಎಂದು ಹೇಳಿದ್ದಾರೆ.
ಈ ಲೇಖನ ಓದಿದ್ದೀರಾ?: ಇಸ್ರೇಲ್-ಇರಾನ್ ಸಂಘರ್ಷ | ಭಾರತಕ್ಕೆ ಗಂಭೀರ ಸವಾಲುಗಳು, ಪರಿಣಾಮಗಳು
“ನಾನು ಮಂತ್ರಿ ಆದಮೇಲೆ ಇಲಾಖೆಯಿಂದ 36,000 ಮನೆ ಕಟ್ಟಿದ್ದೇನೆ. ಜನರಿಗೆ ಬಿಜೆಪಿ, ಜೆಡಿಎಸ್‌ನವರು ಒಂದೇ ಒಂದು ಮನೆ ಕಟ್ಟಿದ್ದಾರೆಯೇ? ಕೊಟ್ಟಿದ್ದರೆ ಅವರು ಹೇಳಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದಿದ್ದಾರೆ.
“ಶಾಸಕರು ನೀಡಿದ ಪತ್ರದ ಮೇಲೆಯೇ ನಾವು ಮನೆ ಹಂಚಿಕೆ ಮಾಡಿದ್ದೇವೆ. 42,300 ಮನೆಗಳನ್ನು ಕೊಡಲು ನಾವು ನಿರ್ಧರಿಸಿದ್ದೆವು. ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ 14 ಲಕ್ಷ ಮನೆ ಕೊಟ್ಟಿದ್ದರು. ನಂತರ ಬಂದ ಸರ್ಕಾರ 5.8 ಲಕ್ಷ ಮನೆಗಳನ್ನು ನೀಡಿದೆ. ಬಿಜೆಪಿಯವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ” ಎಂದು ಹೇಳಿದ್ದಾರೆ.