ಬಿ ಆರ್ ಪಾಟೀಲ್ ನೆಪದಲ್ಲಿ ಸರ್ಕಾರದ ವಿರುದ್ಧ ಅಪಸ್ವರ ಎತ್ತಿರುವ ಶಾಸಕರು ನೈತಿಕತೆ ಉಳಿಸಿಕೊಂಡಿದ್ದಾರೆಯೇ?

Date:

Advertisements
ಬಿ ಆರ್ ಪಾಟೀಲ್ ಮಾಡಿದ ಆರೋಪಗಳಿಗೆ ಸರ್ಕಾರ ಉತ್ತರಿಸಬೇಕು. ಆದರೆ ಅವರಿಗೆ ಬೆಂಬಲ ಸೂಚಿಸುತ್ತಲೇ, ತಮ್ಮದೇ ಸರ್ಕಾರದ ವಿರುದ್ಧ ಅಪಸ್ವರ ಎತ್ತಿರುವ ಶಾಸಕರಾದ ರಾಜು ಕಾಗೆ, ಎನ್.ವೈ ಗೋಪಾಲಕೃಷ್ಣ ಹಾಗೂ ಬೇಳೂರು ಗೋಪಾಲಕೃಷ್ಣರನ್ನು ಅನುಮಾನದಿಂದ ನೋಡಬೇಕು. ಏಕೆಂದರೆ...

ರಾಜ್ಯ ಸರ್ಕಾರದ ವಿರುದ್ಧ ತಮ್ಮದೇ ಪಕ್ಷದ ಶಾಸಕರು ಗಂಭೀರ ಆರೋಪ ಮಾಡಿದ್ದಾರೆ. ಈ ಆರೋಪಗಳ ಕೇಂದ್ರಬಿಂದುವಾಗಿರುವುದು ಆಡಳಿತದ ವೈಫಲ್ಯ, ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಕಾಮಗಾರಿಗಳಲ್ಲಿ ವಿಳಂಬ ಮುಂತಾದವುಗಳನ್ನು ಒಳಗೊಂಡಿದೆ. ಸದ್ಯ ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಆರೋಪವು ರಾಜ್ಯ ರಾಜಕಾರಣ ಸುತ್ತ ವಿವಾದ ಸುತ್ತಿಕೊಂಡಿದೆ. ಆಳಂದ ಕ್ಷೇತ್ರದ ಶಾಸಕ ಬಿ.ಆರ್ ಪಾಟೀಲ್ ಅವರು, ವಸತಿ ಯೋಜನೆಯಡಿ ಮನೆಗಳ ಹಂಚಿಕೆಯಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದು, ಇವರ ಆರೋಪಕ್ಕೆ ಸ್ವಪಕ್ಷದ ಒಂದಷ್ಟು ಶಾಸಕರು ದನಿಗೂಡಿಸಿದ್ದಾರೆ.

ಜೂನ್ 20ರಂದು ವೈರಲ್ ಆದ ಆಡಿಯೋ ಕ್ಲಿಪ್‌ನಲ್ಲಿ, ಪಾಟೀಲ್ ಅವರು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜೊತೆ ಮಾತನಾಡುತ್ತ, “ದುಡ್ಡು ಕೊಟ್ಟವರಿಗಷ್ಟೇ ಮನೆಗಳನ್ನು ಮಂಜೂರು ಮಾಡಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಡಿಯೋದಲ್ಲಿ, ಪಾಟೀಲ್ ಅವರು ತಮ್ಮ ಕ್ಷೇತ್ರದ ಹಳ್ಳಿಗಳಲ್ಲಿ ಲಂಚ ನೀಡದವರಿಗೆ ಮನೆಗಳು ಸಿಗುತ್ತಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಈ ಆರೋಪವು ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಪಾಟೀಲ್ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡು, “ನಾನು ಸತ್ಯವನ್ನೇ ಹೇಳಿದ್ದೇನೆ, ಅದರಲ್ಲಿ ತಪ್ಪೇನಿದೆ?” ಎಂದಿದ್ದರು. ಕಳೆದ ಹಲವು ದಶಕಗಳಿಂದ ಪಾರದರ್ಶಕ ರಾಜಕೀಯ ನಡೆಸುತ್ತಿರುವ ಪಾಟೀಲರ ಮಾತುಗಳು ಅವರ ಪ್ರಾಮಾಣಿಕತೆ ಮತ್ತು ನೈತಿಕತೆಯನ್ನು ಎತ್ತಿ ತೋರಿಸುತ್ತದೆ.

ಬಿ.ಆರ್. ಪಾಟೀಲ್ ಅವರ ಹೇಳಿಕೆಗೆ ಬೆಳಗಾವಿಯ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ, ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಬೆಂಬಲ ಸೂಚಿಸಿದ್ದಾರೆ. ಹಾಗೆಯೇ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದ್ದಾರೆ. ಈ ಶಾಸಕರು ತಮ್ಮ ರಾಜಕೀಯ ಜೀವನದಲ್ಲಿ ಎಷ್ಟರಮಟ್ಟಿಗೆ ನೈತಿಕತೆ ಉಳಿಸಿಕೊಂಡಿದ್ದಾರೆ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ.

Advertisements

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಆಗ ಇರಾಕ್ – ಈಗ ಇರಾನ್: ಅಮೆರಿಕ ಕ್ರೌರ್ಯಕ್ಕೆ ಕೊನೆ ಎಂದು?

ರಾಜು ಕಾಗೆ ವಿಷಯಕ್ಕೆ ಬರುವುದಾದರೆ, ”ತಮ್ಮ ಕ್ಷೇತ್ರಕ್ಕೆ ಮಂಜೂರಾದ 25 ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ 13 ಕೋಟಿ ರೂಪಾಯಿಗಳ ಕಾಮಗಾರಿಗೆ ಇನ್ನೂ ವರ್ಕ್ ಆದೇಶ ದೊರಕಿಲ್ಲ. ಎರಡು ವರ್ಷಗಳಿಂದ ಭೂಮಿ ಪೂಜೆ ಮಾಡಿದ ಕಾಮಗಾರಿಗಳೂ ಆರಂಭವಾಗಿಲ್ಲ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ, ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನಗಳಲ್ಲಿ ಮುಖ್ಯಮಂತ್ರಿಗೆ ರಾಜೀನಾಮೆ ಕೊಡುತ್ತೇನೆ” ಎಂದು ಕಾಗೆ ಹೇಳಿದ್ದಾರೆ. ತಮಗೆ ಅನುಕೂಲ ಬಂದಾಗಲೆಲ್ಲ ಕಾಗೆ ರಾಜಕೀಯ ಬೇಳೆ ಬೇಯಿಸಿಕೊಂಡಿದ್ದಾರೆ. ಜನತಾ ಪರಿವಾರದಿಂದ ರಾಜಕೀಯ ಜೀವನ ಶುರು ಮಾಡಿದ ಕಾಗೆ ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಅಧಿಕಾರದ ರುಚಿ ಕಂಡಿದ್ದಾರೆ. ಬಿಜೆಪಿಯಿಂದಲೇ ಮೂರು ಬಾರಿ ಶಾಸಕರಾಗಿದ್ದ ಕಾಗೆ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂಬುದನ್ನು ತಿಳಿದು ಕೇಸರಿ ಪಕ್ಷ ಬಿಟ್ಟು ಕಳೆದ 6 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಪಕ್ಷಗಳಿಗೆ ಮಾತ್ರವಲ್ಲ ತಾವು ಪ್ರತಿನಿಧಿಸುವ ಕ್ಷೇತ್ರಗಳಿಗೂ ಬದ್ಧರಾಗಿಲ್ಲ ಎಂಬ ಮಾತುಗಳು ಸ್ವಕ್ಷೇತ್ರದ ಜನರಿಂದಲೇ ಕೇಳಿಬರುತ್ತಿದೆ.

ಹಾಗೆಯೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಮತ್ತೊಬ್ಬ ಕಾಂಗ್ರೆಸ್‌ ಶಾಸಕರಾದ ಬಳ್ಳಾರಿ ಗ್ರಾಮಾಂತರದ ಮೊಳಕಾಲ್ಮೂರು ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ಅವರೂ ಕೂಡ, “ಸರ್ಕಾರದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಒಂದು ಚರಂಡಿ, ರಸ್ತೆ, ಅಥವಾ ಶಾಲೆ ಕಟ್ಟಲೂ ಆಗುತ್ತಿಲ್ಲ” ಎಂದಿದ್ದಾರೆ. ಗೋಪಾಲಕೃಷ್ಣ ಅವರ ಹೇಳಿಕೆ ಹಾಗೂ ರಾಜಕೀಯ ಹಿನ್ನೆಲೆಯನ್ನು ಗಮನಿಸಿದಾಗ ಈ ಹೇಳಿಕೆಯು ರಾಜಕೀಯ ಲಾಭಕ್ಕಾಗಿ ಮಾಡಿರುವುದಲ್ಲದೆ ಮತ್ತೇನಿಲ್ಲ ಎಂಬುದು ಸುಲಭವಾಗಿ ಅರ್ಥೈಸಬಹುದು. 2018ರಲ್ಲಿ ಕಾಂಗ್ರೆಸ್‌ನಿಂದ ಮೊಳಕಾಲ್ಮೂರಿನಿಂದ ಟಿಕೆಟ್‌ ಸಿಗದಿದ್ದಾಗ ಬಿಜೆಪಿಗೆ ಜಿಗಿದು ಪಕ್ಷದ ಜೊತೆ ಕ್ಷೇತ್ರವನ್ನು ವಲಸೆ ಮಾಡಿ ಕೂಡ್ಲಿಗಿಯಿಂದ ಸ್ಪರ್ಧಿಸಿದ್ದರು.

ಸರ್ಕಾರದ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿರುವ ಮತ್ತೊಬ್ಬ ಶಾಸಕ ಶಿವಮೊಗ್ಗದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ. “ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ಸರ್ಕಾರದ ಗಮನ ಗ್ಯಾರಂಟಿ ಯೋಜನೆಗಳಿಗೆ ಮಾತ್ರ ಸೀಮಿತವಾಗಿದೆ” ಎಂದು ಹೇಳುತ್ತಿರುವ ಬೇಳೂರು ಗೋಪಾಲಕೃಷ್ಣ ಅವರ ಬಗ್ಗೆ ಪಕ್ಷದ ನಾಯಕರಿಗಿಂತ ಕ್ಷೇತ್ರದ ಜನರೆ ಹೆಚ್ಚು ಮಾತನಾಡುತ್ತಾರೆ. ಪ್ರಸ್ತುತ ಸರ್ಕಾರದಲ್ಲಿ ಬೇಳೂರು ಅವರನ್ನು ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಹತ್ತಿರದ ಸಂಬಂಧಿಯೂ ಆದ ಕಾಗೋಡು ತಿಮ್ಮಪ್ಪ ಅವರ ಹೆಸರಿನಲ್ಲಿ ರಾಜಕೀಯ ಶುರು ಮಾಡಿದ ಬೇಳೂರು ಗೋಪಾಲಕೃಷ್ಣ ಮೊದಲು ಕಾಂಗ್ರೆಸ್‌ನೊಂದಿಗೆ ರಾಜಕೀಯ ಶುರು ಮಾಡಿದರೂ ಅನಂತರದಲ್ಲಿ ಅಧಿಕಾರದ ಆಸೆಗಾಗಿ ಬಿಜೆಪಿ, ಜೆಡಿಎಸ್‌ ಪಕ್ಷಗಳ ಬಾಗಿಲು ತಟ್ಟಿ ಬಂದಿದ್ದಾರೆ. ಸಾಮಾಜಿಕ ನ್ಯಾಯ, ಅಭಿವೃದ್ಧಿ ಯೋಜನೆಗಳ ನಿಷ್ಠುರ ಅನುಷ್ಠಾನ ಮತ್ತು ಸ್ಥಳೀಯ ರಾಜಕೀಯ ಮಟ್ಟದಲ್ಲಿ ಅಂತಹ ಗುರುತರವಾದ ಕೆಲಸ ಮಾಡಿಲ್ಲ ಎಂಬುದು ಸ್ಥಳೀಯ ಕಾರ್ಯಕರ್ತರ ಆರೋಪವಾಗಿದೆ.

ರಾಜು ಕಾಗೆ, ಎನ್. ವೈ ಗೋಪಾಲಕೃಷ್ಣ ಹಾಗೂ ಬೇಳೂರು ಗೋಪಾಲಕೃಷ್ಣ ರಾಜಕೀಯ ಲಾಭಕ್ಕಾಗಿ ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಹೇಳಿಕೆ ನೀಡಿದರೂ ಈ ವಿಷಯದಲ್ಲಿ ಬಿ.ಆರ್ ಪಾಟೀಲ್ ಅವರ ಪ್ರಾಮಾಣಿಕತೆ ಮತ್ತು ಧೈರ್ಯವನ್ನು ಮೆಚ್ಚಲೇಬೇಕು. ಒಂದು ದೊಡ್ಡ ಪಕ್ಷದಲ್ಲಿ ಗುರುತಿಸಿಕೊಂಡವರು ಸತ್ಯವನ್ನು ಹೇಳಲು ಧೈರ್ಯ ಬೇಕು. ಬಿ.ಆರ್‌ ಪಾಟೀಲರು ಅದನ್ನು ತೋರಿಸಿದ್ದಾರೆ. ಸರ್ಕಾರ ಕೂಡ ಈ ಆರೋಪಗಳಿಗೆ ಸ್ಪಷ್ಟ ಉತ್ತರ ನೀಡಿ ವಿಶ್ವಾರ್ಹತೆಯನ್ನು ಉಳಿಸಿಕೊಳ್ಳಬೇಕಿದೆ.

ಬಿ.ಆರ್‌ ಪಾಟೀಲ್‌ ಅವರ ಗಂಭೀರ ಆರೋಪಗಳಿಗೆ ಸರ್ಕಾರ ತಕ್ಷಣವೇ ಉತ್ತರ ನೀಡಬೇಕಾಗಿತ್ತು. ಪಾಟೀಲ್ ಅವರಂತಹ ಚೂರು ಪ್ರಾಮಾಣಿಕ ಶಾಸಕರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಹಗರಣದ ಬಗ್ಗೆ ತನಿಖೆ ನಡೆಸಿ, ಸತ್ಯವನ್ನು ಬಯಲಿಗೆಳೆಯಬೇಕಿತ್ತು. ಆದರೆ, ಸರ್ಕಾರದ ಮೌನವು ಈ ವಿಷಯದಲ್ಲಿ ಇನ್ನಷ್ಟು ಸಂದೇಹಗಳಿಗೆ ಕಾರಣವಾಗುತ್ತದೆ. ಶಾಸಕರ ಆರೋಪಗಳು ಕಾಂಗ್ರೆಸ್ ಸರ್ಕಾರದ ಆಡಳಿತದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ. ವಸತಿ ಯೋಜನೆಯಂತಹ ಜನಪರ ಕಾರ್ಯಕ್ರಮಗಳಲ್ಲಿ ಭ್ರಷ್ಟಾಚಾರದ ಆರೋಪಗಳು, ಸರ್ಕಾರದ ವಿಶ್ವಾಸಾರ್ಹತೆಯನ್ನು ಕುಗ್ಗಿಸುತ್ತದೆ. ಇದರಿಂದ, ಗ್ಯಾರಂಟಿ ಯೋಜನೆಗಳು ಮತ್ತು ಜನಪರ ಕಾರ್ಯಕ್ರಮಗಳ ಮೇಲೆ ಜನರು ಸಂದೇಹ ವ್ಯಕ್ತಪಡಿಸಬಹುದು. 

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

ರಾಜ್ಯ ಶಿಕ್ಷಣ ನೀತಿ ಆಯೋಗ: ಶಾಲಾ ಶಿಕ್ಷಣ ಕುರಿತ ಹೊಸ ಅಂಶಗಳೇನು?

ಎನ್‌ಇಪಿ (ರಾಷ್ಟ್ರೀಯ ಶಿಕ್ಷಣ ನೀತಿ) ಎಂಬುದು ಭಾರತೀಯ ಜ್ಞಾನದ ನೆಲೆಯಲ್ಲಿ ರೂಪಿಸಲಾಗಿದೆ....

Download Eedina App Android / iOS

X