ಅಲ್ಪಸಂಖ್ಯಾತರ ಹಾಸ್ಟೆಲ್‌ಗೆ ಸುಸಜ್ಜಿತ ಕಟ್ಟಡ ಇದ್ದರೂ ಕೂಡ ಮೂಲ ಸೌಕರ್ಯಗಳ ಕೊರತೆಗಳು ಎದ್ದುಕಾಣುತ್ತಿವೆ. ಶೌಚಾಲಯ ನಿರ್ವಹಣೆ ಸಮಸ್ಯೆ, ಗ್ರಂಥಾಲಯ ಸೌಲಭ್ಯಗಳ ಕೊರತೆ, ಸ್ಪೋರ್ಟ್ಸ್ ಸಾಮಗ್ರಿಗಳ ಕೊರತೆ ಜತೆಗೆ ಇನ್ನೂ ಅನೇಕ ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ. ಆದರೂ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಹೆಚ್ಚಾಗಿ ಪದವಿ ವಿದ್ಯಾರ್ಥಿಗಳು ಇದ್ದಾರೆ. ಮೂಲತಃ ಈ ವಸತಿ ನಿಲಯವು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಊಟದ ವ್ಯವಸ್ಥೆ ಇಲ್ಲದೆ, ಕೇವಲ ವಸತಿಗಷ್ಟೇ ಇರಲು ಹಾಸ್ಟೆಲ್ ತೆರೆಯಲಾಗಿತ್ತು. ಒಂದು ತಿಂಗಳು ಮಾತ್ರ ವಿದ್ಯಾರ್ಥಿನಿಯರು ಇದ್ದು, ಆನಂತರದಲ್ಲಿ ಬಿಟ್ಟು ಹೋದರು. ಪ್ರಸ್ತುತ ವರ್ಷದಿಂದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನಾಗಿ ಮಾಡಲಾಗಿದೆ. 80 ವಿದ್ಯಾರ್ಥಿಗಳು ಇರಬಹುದಾದ ಈ ವಸತಿ ನಿಲಯಕ್ಕೆ 54 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ನಿತ್ಯವೂ ವಸತಿ ನಿಲಯದಲ್ಲಿ ಕೇವಲ 15 ಮಂದಿ ವಿದ್ಯಾರ್ಥಿಗಳು ಮಾತ್ರ ಇರುವುದು ಕಂಡುಬರುತ್ತಿದೆ.
ಇರುವ ವಿದ್ಯಾರ್ಥಿಗಳಿಗೆ ಕೆಲವೊಂದಿಷ್ಟು ಸೌಲಭ್ಯಗಳಿಲ್ಲದೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರತಿಯೊಂದು ವಸತಿ ನಿಲಯದಲ್ಲಿ ಗ್ರಂಥಾಲಯ ಇರಬೇಕು. ಆದರೆ ಈ ವಸತಿ ನಿಲಯದಲ್ಲಿ ಗ್ರಂಥಾಲಯ ಸೌಲಭ್ಯ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಓದು ಮತ್ತು ಪಠ್ಯೇತರ ಪುಸ್ತಕಗಳ ಜ್ಞಾನ ಇಲ್ಲದಂತಾಗಿದೆ. ಕಂಪ್ಯೂಟರ್ ವ್ಯವಸ್ಥೆ ಇರುವುದಿಲ್ಲ. ಆಟದ ಮೈದಾನ ಇದ್ದರೂ ಆಟದ ಸಾಮಗ್ರಿಗಳಿರುವುದಿಲ್ಲ. ವಸತಿ ನಿಲಯದಲ್ಲಿ ಇರಬೇಕಾದ ಯಾವುದೇ ರೀತಿಯ ಪಠ್ಯೇತರ ಚಟುವಟಿಕೆಗಳ ಸಾಮಗ್ರಿಗಳು ಇಲ್ಲದಿರುವುದು ವಿದ್ಯಾರ್ಥಿಗಳನ್ನು ವಂಚಿತರನ್ನಾಗಿಸಿದೆ.

ವಸತಿ ನಿಲಯದ ಸುತ್ತ ಎಲ್ಲೆಂದರಲ್ಲಿ ಮುಳ್ಳುಗಂಟಿಗಳು ಬೆಳೆದಿದ್ದು, ವಿದ್ಯಾರ್ಥಿಗಳು ಆಟವಾಡಲು ಹೋದರೆ ಅವರ ಕಾಲುಗೆ ಮುಳ್ಳುಗಳು ಚುಚ್ಚಿಕೊಳ್ಳುತ್ತವೆ. ವಸತಿ ನಿಲಯದ ಸುತ್ತಲೂ ಕಾಂಪೌಂಡ್ ಇಲ್ಲದೆ ದನಕರಗಳು ವಸತಿ ನಿಲಯಕ್ಕೆ ಬರುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ.
“ವಸತಿ ನಿಲಯದಲ್ಲಿ ಶೌಚಾಲಯ ಸ್ವಚ್ಛತೆಗೊಳಿಸಲು ಯಾರೂ ಬರುವುದಿಲ್ಲ. ನಾವೇ ಸ್ವಚ್ಛತೆ ಮಾಡಿಕೊಳ್ಳುತ್ತೇವೆ. ಅಟೆಂಡರ್, ಕಾವಲುಗಾರ ಯಾರೂ ಇಲ್ಲ” ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
“ನಿತ್ಯ ಕಾಲೇಜಗೆ ಹೋಗಿ ಬರಲು ದಾರಿಯೇ ಇಲ್ಲ. ಹೊಲದಲ್ಲಿಯೇ ವಸತಿ ನಿಲಯಕ್ಕೆ ದಾರಿ ಕೊಡಬೇಕಿತ್ತು. ಆದರೆ ದಾರಿ ಇಲ್ಲಿ ಇಲ್ಲ. ಬೇರೆಕಡೆ ಹಾದು ಹೋಗಿ ಎಂದು ಹೇಳುತ್ತಿದ್ದಾರೆ. ಹಾಗಾಗಿ ಕಾಲುದಾರಿಯಲ್ಲಿಯೇ ನಡೆದುಕೊಂಡು ಕಾಲೇಜಿಗೆ ಹೋಗುತ್ತಿದ್ದೇವೆ” ಎಂದು ವಿದ್ಯಾರ್ಥಿಗಳು ಹೇಳಿದರು.

ವಸತಿ ನಿಲಯದ ವಿದ್ಯಾರ್ಥಿ ಶರಣಪ್ಪ ಅಂಗಡಿ ಹಾಗೂ ಯಮನೂರು ನದಾಫ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ವಸತಿ ನಿಲಯದಲ್ಲಿ ಗ್ರಂಥಾಲಯ, ಆಟದ ಸಾಮಗ್ರಿ, ಶೌಚಾಲಯ ಸ್ವಚ್ಛತೆ, ಕಂಪ್ಯೂಟರ್ ವ್ಯವಸ್ಥೆ ಮಾಡಲು ಅಧಿಕಾರಿಗಳು ಮತ್ತು ವಾರ್ಡನ್ ಅವರಿಗೆ ಹೇಳಿದ್ದೇವೆ. ಆದರೂ ಯಾವುದೇ ಪ್ರಯೋಜನ ಆಗಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಚಂದ್ರು ರಾಠೋಡ ಈದಿನ.ಕಾಮ್ ಜತೆಗೆ ಮಾತನಾಡಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಮೂಲ ಸೌಕರ್ಯಗಳು ಇಲ್ಲದೆ ಬಿಕೋ ಎನ್ನುತ್ತಿವೆ. ಸುಮಾರು 80 ಮಂದಿ ಸಂಖ್ಯಾಬಲದ ವಸತಿ ನಿಲಯವಿದ್ಧು, ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳು ವಿಫಲರಾಗಿದ್ದಾರೆ. ಸರಿಯಾಗಿ ಊಟದ ವೇಳಾಪಟ್ಟಿ ಇಲ್ಲ, ಗ್ರಂಥಾಲಯ, ಪುಸ್ತಕ, ಕಂಪ್ಯೂಟರ್ ಲ್ಯಾಬ್, ಸ್ವಚ್ಛತಾ ಸಿಬ್ಬಂದಿ, ಈ ತರಹದ ಸಾಕಷ್ಟು ಸಮಸ್ಯೆಗಳು ವಸತಿ ನಿಲಯದಲ್ಲಿ ಇವೆ. ಆದಷ್ಟು ಬೇಗ ಇಲಾಖೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಸ್‌ಎಫ್‌ಐ ವಿದ್ಯಾರ್ಥಿ ಸಂಘಟನೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿದ್ದೀರಾ? ದಾವಣಗೆರೆ | ಜೀವನಾಡಿ ಭದ್ರಾ ಜಲಾಶಯದ ನೀರು ರೈತರಿಗೆ ತಪ್ಪುವ ಆತಂಕ ಬೇಡ ನಾವಿದ್ದೇವೆ; ಸಚಿವ ಎಸ್ ಎಸ್ ಮಲ್ಲಿಕಾರ್ಜುನ್
ವಸತಿ ನಿಲಯದ ವಾರ್ಡನ್ ಶರಣಪ್ಪ ಶೇರಬಾಳ ಅವರನ್ನು ಈ ದಿನ.ಕಾಮ್ ಮಾಡಿದಾಗ, “ಸರ್ಕಾರಿ ಪಾಲಿಟೆಕ್ನಿಕ್ ಸಂಬಂಧಿಸಿದ ವಸತಿ ನಿಲಯ ಆಗಿದ್ದು, ಖಾಲಿ ಇರುವುದರಿಂದ ಈ ವರ್ಷ ಅಲ್ಪಸಂಖ್ಯಾತರ ವಸತಿ ನಿಲಯವನ್ನು ಆರಂಭಿಸಲಾಗಿದೆ. ಸ್ವಂತ ಕಟ್ಟಡ ಇನ್ನೂ ಆಗಿರುವುದಿಲ್ಲ. ಕೆಲವೊಂದಿಷ್ಟು ಸಣ್ಣ ಪುಟ್ಟ ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಲಾಗುವುದು” ಎಂದು ತಿಳಿಸಿದರು.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.