ಮಧ್ಯಪ್ರಾಚ್ಯದಲ್ಲಿ ಇರಾನ್ ಹಾಗೂ ಇಸ್ರೇಲ್ ಸಂಘರ್ಷದ ಹಿನ್ನೆಲೆಯಲ್ಲಿ ಈ ಪ್ರದೇಶಗಳಿಗೆ ವಿಮಾನ ಹಾರಾಟಗಳನ್ನು ರದ್ದು ಮಾಡಲು ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ಧರಿಸಿವೆ. ಇದರಿಂದಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸಮಸ್ಯೆಗಿಯಾಗಿದೆಯಲ್ಲದೇ, ವಿಮಾನಯಾನ ಸಂಸ್ಥೆಗಳಿಗೂ ದೊಡ್ಡ ಆರ್ಥಿಕ ನಷ್ಟ ಉಂಟಾಗಿದೆ.
ಈಗಾಗಲೇ ಏರ್ ಇಂಡಿಯಾದ ಹಲವು ವಿಮಾನಯಾನ ಸೇವೆಯಲ್ಲಿ ವ್ಯತ್ಯಯವಾಗಿದ್ದು, ಮಧ್ಯಪ್ರಾಚ್ಯ ಸೇರಿ ಯುರೋಪ್, ಕೆನಡಾ ಮತ್ತು ಅಮೆರಿಕದ ಐದು ಪ್ರದೇಶಗಳಿಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.
ಇದೇ ಕಾರಣಕ್ಕಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಗದಿತ ಸೇವೆಗಳಲ್ಲಿ ಅಡ್ಡಿ ಉಂಟಾಗಿದೆ. ವಿಮಾನ ನಿಲ್ದಾಣದ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಮಾಹಿತಿಯ ಪ್ರಕಾರ, ಜೂನ್ 24ರಂದು ಮಂಗಳೂರಿಗೆ ಆಗಮಿಸಬೇಕಿದ್ದ ನಾಲ್ಕು ಅಂತಾರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಬುಧಾಬಿಯಿಂದ ಮಂಗಳೂರಿಗೆ ಬರಲಿದ್ದ ಇಂಡಿಗೋ ವಿಮಾನ(6E1437), ದುಬೈನಿಂದ ಬರಬೇಕಿದ್ದ ಇಂಡಿಗೋ ವಿಮಾನ (6E1468) ಹಾಗೂ ದುಬೈನಿಂದ ಬರಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (IX832) , ದಮ್ಮಾಮ್ನಿಂದ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ (IX886)ವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ವಾಯುಪ್ರದೇಶದ ಮುಚ್ಚುವಿಕೆಯಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ದುಬೈ ಹಾಗೂ ದಮ್ಮಾಮ್ಗೆ ತೆರಳಬೇಕಿದ್ದ ಎರಡು ಏರ್ ಇಂಡಿಯಾ ಎಕ್ಸ್ಪ್ರೆಸ್ ಅಂತಾರಾಷ್ಟ್ರೀಯ ವಿಮಾನಗಳ ಪ್ರಯಾಣವನ್ನು ಕೂಡ ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಮಧ್ಯೆ ಮಂಗಳೂರಿನಿಂದ ಮುಂಬೈಗೆ ಹೋಗಬೇಕಿದ್ದ ದೇಶೀಯ ಇಂಡಿಗೋ ವಿಮಾನ (6E6523)ವನ್ನು ತಾಂತ್ರಿಕ ಸಮಸ್ಯೆಯ ಕಾರಣಕ್ಕಾಗಿ ಉಲ್ಲೇಖಿಸಿ ರದ್ದುಪಡಿಸಲಾಗಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಇರಾನ್-ಇಸ್ರೇಲ್ ಸಂಘರ್ಷ | ಇಸ್ರೇಲ್ಗೆ ಅವಾಚ್ಯ ಶಬ್ದಗಳಿಂದ ಬೈದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಜೂನ್ 23 ರಂದು ರಾತ್ರಿ ಕತಾರ್ನಲ್ಲಿ ಅಮೆರಿಕದ ಏರ್ ಬೇಸ್ಗೆ ಇರಾನ್ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಹೊರಟಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿತ್ತು. ಅಬುಧಾಬಿಯಲ್ಲಿ ಇಳಿಯಬೇಕಿದ್ದ ಇಂಡಿಗೋ ವಿಮಾನವನ್ನು ಮುಂಬೈಗೆ ತಿರುಗಿಸಲಾಯಿತು. ನಂತರ ಎರಡೂ ವಿಮಾನಗಳು ಜೂನ್ 24 ರ ಮಂಗಳವಾರ ಮಂಗಳೂರಿಗೆ ಮರಳಿ ಬಂದಿರುವುದಾಗಿ ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ದೇಶಗಳಿಗೆ ಪ್ರಯಾಣಿಸುವ ಅಥವಾ ಅಲ್ಲಿಂದ ಬರುವ ಪ್ರಯಾಣಿಕರು ತಮ್ಮ ವಿಮಾನ ಪ್ರಯಾಣದ ಪ್ರಸ್ತುತ ಸ್ಥಿತಿಯನ್ನು ಸೋಷಿಯಲ್ ಮೀಡಿಯಾ ಅಥವಾ ಸಂಬಂಧಪಟ್ಟ ವಿಮಾನಯಾನ ಸಂಸ್ಥೆಯ ಅಧಿಕಾರಿಗಳನ್ನು ಮುಂಚಿತವಾಗಿ ಸಂಪರ್ಕಿಸಿ ದೃಢೀಕರಿಸಿ ಪ್ರಯಾಣಿಸುವಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.