ಕೊಡಗು ಜಿಲ್ಲೆ, ಪೊನ್ನಂಪೇಟೆ ತಾಲ್ಲೂಕು ಕೆ ಬಾಡಗ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಡಿಕಲ್ಲು ಅತ್ತೂರು ಕೊಲ್ಲಿ ಹಾಡಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕರಾದ ಎ. ಎಸ್. ಪೊನ್ನಣ್ಣ ಭೇಟಿ ನೀಡಿ ಸ್ಥಳೀಯರ ಜೊತೆ ಮಾತುಕತೆ ನಡೆಸಿ ಸರ್ಕಾರದ ಜೊತೆ ಚರ್ಚಿಸುವ ಭರವಸೆ ನೀಡಿದರು.
” ಅರಣ್ಯ ಇಲಾಖೆಯ ಕಾನೂನಾತ್ಮಕ ಪ್ರಕ್ರಿಯೆಯಿಂದ ಹಾಡಿಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದು ಯಾವುದೇ ಭಯ ಪಡುವ ಅಗತ್ಯವಿಲ್ಲ. ಪ್ರಸ್ತುತ ವಾಸ ಮಾಡುತ್ತಿರುವ ಜಾಗದ ಕುರಿತಾಗಿ ಅರಣ್ಯ ಇಲಾಖೆ ಹಾಗೂ ಸರ್ಕಾರದ ಜೊತೆ ಚರ್ಚಿಸಿ ನ್ಯಾಯ ಒದಗಿಸಲಾಗುವುದು. ನಾನು ಸಹ ನಿಮ್ಮೊಟ್ಟಿಗೆ ಇದ್ದೇನೆ, ನಿಮ್ಮ ಹೋರಾಟದ ಜೊತೆಗಿದ್ದೇನೆ. ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ” ಎಂದು ಭರವಸೆ ನೀಡಿದರು.

ಹಾಡಿ ಅರಣ್ಯ ಹಕ್ಕುಗಳ ಸಮಿತಿ ಅಧ್ಯಕ್ಷ ಜೆ. ಎ. ಶಿವು ಮಾತನಾಡಿ ವಿಪರೀತ ಮಳೆಯಾಗುತಿದ್ದು ಗುಡಿಸಲು ಸಹ ಇರದೆ ತೊಂದರೆ ಅನುಭವಿಸುತಿದ್ದೇವೆ. ಇದ್ದ ಗುಡಿಸಲನ್ನು ಕಿತ್ತು ಅರಣ್ಯ ಇಲಾಖೆ ಅಧಿಕಾರಿಗಳು ಟಾರ್ಪಲ್ ಸಹಿತ ಹೊತ್ತೋಯ್ದರು. ಅದು ನಾವು ದುಡಿದ ಹಣದಿಂದ ತಂದಿದ್ದು. ಅದನ್ನು ತೆಗೆದುಕೊಂಡು ಹೋಗುವ ಅಗತ್ಯ ಏನಿತ್ತು.ಈಗ ಗುಡಿಸಲು ಇರದೆ ಚಿಕ್ಕಪುಟ್ಟ ಪ್ಲಾಸ್ಟಿಕ್ ತಾಟಿನಲ್ಲಿ ಇದ್ದೀವಿ. ಮಳೆ, ಗಾಳಿ, ಚಳಿ ತಡೆಯಲು ಆಗದ ಸ್ಥಿತಿ ಎದುರಿಸುತ್ತ ಇದ್ದೀವಿ. ನಮ್ಮನ್ನು ಮನುಷ್ಯರ ಹಾಗೆ ಕಾಣುತ್ತ ಇಲ್ಲ ಅರಣ್ಯ ಇಲಾಖೆಯವರು.

ಇನ್ನ ಹಗಲಾಗಲಿ, ರಾತ್ರಿಯಾಗಲಿ ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಗಂಡಸರು ಬಹಿರ್ದೆಸೆಗೆ ಹೇಗೋ ಹೋಗ್ತಾರೆ. ಆದರೆ, ಹೆಣ್ಣು ಮಕ್ಕಳ ಪರಿಸ್ಥಿತಿ ಶೋಚನಿಯವಾಗಿದೆ. ಮಹಿಳೆಯರು ಇರುತ್ತಾರೆ ಎನ್ನುವುದನ್ನು ಯೋಚಿಸದೆ ವಾಚಾರ್ ಗಳು, ಫಾರೆಸ್ಟ್ ಗಾರ್ಡ್ ಗಳು ಬಂದು ನಿಲ್ಲುತ್ತಾರೆ. ಆಗ ಹೆಣ್ಣು ಮಕ್ಕಳು ಏನು ಮಾಡಬೇಕು ಎಂದು ಪೊನ್ನಣ್ಣ ಅವರನ್ನು ಪ್ರಶ್ನೆ ಮಾಡಿದರು. ಮಳೆಯಲ್ಲಿ ಟಾರ್ಪಲ್ ಹೊದ್ದು ಮಲಗುತ್ತಿದ್ದೇವೆ. ನಮಗೆ ನಮ್ಮ ಜಾಗ ಬೇಕು ನ್ಯಾಯ ಒದಗಿಸಿಕೊಡಿ ಎಂದು ಮನವಿ ಮಾಡಿದರು.

ಹಾಡಿಯ ಜೆ. ಆರ್. ಶೀಲಾ ಮಾತನಾಡಿ ” ಜಾಗಕ್ಕಾಗಿ ಹೋರಾಟ ಮಾಡುತ್ತಾ ಇದ್ದೇವೆ. ನಾವು ಯಾರಿಗೂ ತೊಂದರೆ ನೀಡಿಲ್ಲ. ನೀಡುವವರು ಅಲ್ಲ. ನಮಗೆ ನಮ್ಮ ಜಾಗ ಬೇಕು. ಇಲ್ಲಿ ನಮ್ಮ ಪೂರ್ವಜರು ವಾಸ ಮಾಡಿದ್ದು. ನಾವು ಇಲ್ಲಿಯೇ ಹುಟ್ಟಿ ಬೆಳೆದಿದ್ದು. ಆದರೆ, ಈಗ ಅರಣ್ಯ ಇಲಾಖೆ ಕಾನೂನು ಹೆಸರಲ್ಲಿ ತೊಂದರೆ ಕೊಡುತ್ತಿದೆ.

ಚಿಕ್ಕ ಮಕ್ಕಳು, ವಯಸ್ಸಾದವರು ಇದ್ದಾರೆ. ತುಂಬಾ ಮಳೆ ಆಗ್ತಾ ಇದೆ. ಇರೋ ಟಾರ್ಪಲ್ ತಕೊಂಡು ಹೋದರು ಇದು ಯಾವ ಕಾನೂನು. ಬಡವರು ದುಡಿದ ಹಣದಲ್ಲಿ ತಂದ ಟಾರ್ಪಲ್ ತಕೊಂಡು ಹೋಗುವುದು ಸರಿಯ. ಹೆಣ್ಣು ಮಕ್ಕಳು ಇರ್ತಾರೆ ಇಲ್ಲಿ ಫಾರೆಸ್ಟ್ ಗಾರ್ಡಗಳು ಸಿಕ್ಕ ಸಿಕ್ಕ ಸಮಯದಲ್ಲಿ ಬಂದು ನೋಡುವುದು ಏನಿದೆ?. ನಾವು ಏನು ಮಾಡ್ತಾ ಇದ್ದೀವಿ. ಇವರಿಂದ ನಿತ್ಯ ತೊಂದರೆ ಆಗ್ತಾ ಇದೆ ನಮಗೆ ನ್ಯಾಯ ಕೊಡಿಸಿ ” ಎಂದರು.

ಭೇಟಿ ಸಂದರ್ಭದಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಿದೇರಿರ ನವೀನ್, ಪೊನ್ನಂಪೇಟೆ ತಹಶೀಲ್ದಾರ್ ಮೋಹನ್, ತಾಲ್ಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕಾಳಿಮಾಡ ರವಿ, ಚಿಮ್ಮಣ್ಣ ಮಾಡ ರವಿ, ಕಟ್ಟಿ ಕಾರ್ಯಪ್ಪ, ಪಲ್ವಿನ್ ಪೂಣಚ್ಚ, ಕೆ ಬಾಡಗ ಗ್ರಾಮ ಪಂಚಾಯತಿ ಅಧ್ಯಕ್ಷ ರೀತೀಶ್, ಅಜ್ಜಿಕುಟಿರ ಗಿರೀಶ್,
ನಾಗರಹೊಳೆ ಆದಿವಾಸಿ ಜಮ್ಮಾ ಪಾಳೆ ಹಕ್ಕು ಸ್ಥಾಪನ ಸಮಿತಿ ಅಧ್ಯಕ್ಷ ಜೆ. ಕೆ. ತಿಮ್ಮ, ನಿರ್ದೇಶಕ ಜೆ. ಎಸ್. ರಾಮಕೃಷ್ಣ, ಜೆ. ಆರ್. ರವಿ, ಜೆ. ಎಲ್. ಗಣೇಶ್, ಜೆ. ಡಿ. ಅಣ್ಣಯ್ಯ, ಜೆ. ಆರ್. ಶೀಲಾ, ಜೆ. ಪಿ. ಕಾಳಿಂಗ, ಜೆ. ಕೆ. ಸುಶೀಲ, ಜೆ. ಬಿ. ಪುಟ್ಟಿ ಸೇರಿದಂತೆ ಹಲವರು ಇದ್ದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ; ಬಂಧಿತರ ಮೇಲೆ ದೇಶ ದ್ರೋಹದ ಪ್ರಕರಣ ದಾಖಲಿಸುವಂತೆ ದಸಂಸ ಆಗ್ರಹ
