ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲಗೊಳಿಸಿ ಮೆರವಣೆಗೆ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದೇಶವೇ ತಲೆ ತಗ್ಗಿಸುವಂತಾಗಿದೆ. ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ಕೂಡಲೇ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ.
ವಿಜಯನಗರ: ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕಾರ್ಯಕರ್ತರು, “ಮಣಿಪುರದಲ್ಲಿ ಮೂರು ತಿಂಗಳುಗಳಿಂದ ಹಿಂಸಾಚಾರ ನಡೆಯುತ್ತಿದೆ. ಮಹಿಳಾ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಆದರೂ, ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದೆ ಇರುವುದು ದುರಂತ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಬಿಜೆಪಿ, ಆರ್‌ಎಸ್‌ಎಸ್ ಶಕ್ತಿಗಳನ್ನು ಒಳಗೊಂಡಿರುವ ಪ್ಯಾಸಿಸ್ಟ್ ಆಡಳಿತ ಈ ವಿಷಯದಲ್ಲಿ ಮೌನವಾಗಿರುವುದು ನಾಚಿಕಿಗೇಡಿನ ಸಂಗತಿಯಾಗಿದೆ. ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಲೇ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜನವಾದಿ ಮಹಿಳಾ ಸಂಘದ ತಾಲೂಕು ಕಾರ್ಯದರ್ಶಿ ಸರ್ದಾರ್ ಹುಲಿಗೆಮ್ಮ, ಲಕ್ಷ್ಮಿದೇವಿ, ಅಂಬಿಕಾ, ರೇಖಾ, ಸಿಐಟಿಯು ಮಾರೆಕ್ಕ, ವಿಜಯ, ಸಂಗೀತ, ಕೋಟಗಿ ಮಲ್ಲಿಕಾರ್ಜುನ, ಆನಂದ ಹಾಗೂ ಇತರರು ಇದ್ದರು.
ರಾಯಚೂರು: ಜಿಲ್ಲೆಯ ಸಿಐಟಿಯು, ಕೆಪಿಆರ್‌ಎಸ್, ಎಐಎಡಬ್ಲ್ಯೂಯು ಸಂಘಟನೆಗಳ ಕಾರ್ಯಕರ್ತರು ಮಣಿಪುರದಲ್ಲಿನ ಹಿಂಸಾಚಾರ ಮತ್ತು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ್ದನ್ನು ಖಂಡಿಸಿ ಶಾಂತಿ ಸೌಹಾರ್ದತೆಗಾಗಿ ಒತ್ತಾಯಿಸಿ, ಮಣಿಪುರ ಸರ್ಕಾರವನ್ನು ವಜಾ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

“ಮಣಿಪುರದಲ್ಲಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆಯನ್ನು ಖಂಡಿಸಿದರು. ಮಣಿಪುರದಲ್ಲಿ ಕಳೆದ 2 ತಿಂಗಳಿನಿಂದ ವ್ಯಾಪಕ ಹಿಂಸಾಚಾರ ನಡೆಯುತ್ತಿದ್ದು, ಇಡೀ ರಾಜ್ಯವೇ ಹೊತ್ತಿ ಉರಿಯುತ್ತಿದೆ. ಮಹಿಳೆಯರು ಅತ್ಯಚಾರಕ್ಕೊಳಾಗಿ ಮಕ್ಕಳು ಅನಾಥರಾಗುತ್ತಿದ್ದಾರೆ. ಆದರೆ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಮಣಿಪುರದಲ್ಲಿ ಶಾಂತಿ ಸ್ಥಾಪನೆಗಾಗಿ ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಮಹಿಳೆಯರ ಬಗ್ಗೆ ಮಾತನಾಡುತ್ತಿರುವ ಕೇಂದ್ರ-ರಾಜ್ಯ ಸರ್ಕಾರಗಳು ಅಲ್ಲಿನ ಮಹಿಳೆಯರನ್ನು ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಾಮೂಹಿಕ ಅತ್ಯಾಚಾರಕ್ಕೆ ಅಲ್ಲಿನ ಪೊಲೀಸರು ಪರೋಕ್ಷ ಬೆಂಬಲ ನೀಡಿದ್ದಾರೆ. ಮಣಿಪುರ ರಾಜ್ಯದಲ್ಲಿ ಇಂಟರ್‌ನೆಟ್ ಕಡಿತಗೊಳಿಸಿ ಅತ್ಯಾಚಾರ, ಹತ್ಯೆಗಳು, ಮಹಿಳೆಯರ ಬೆತ್ತಲೆ ಮೆರವಣಿಗೆಗಳಿಗೆ ಅಲ್ಲಿನ ಬಿಜೆಪಿ ಸರ್ಕಾರ ಕುಮ್ಮಕ್ಕು ನೀಡುವ ಮೂಲಕ ಅಲ್ಲಿ ಹಿಂಸಾಚಾರ ನಡೆಸಲು ಪರೋಕ್ಷ ಬೆಂಬಲ ನೀಡುತ್ತಿದೆ” ಎಂದು ಆರೋಪಿಸಿದರು.
“ಮಹಿಳೆಯರ ಮೇಲಿನ ಅತ್ಯಾಚಾರ ಘಟನೆ ನಡೆದು 2 ತಿಂಗಳಾದರೂ ಮಾತನಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯತನವನ್ನು ತೋರಿಸಿರುವುದು ಸರಿಯಾದ ಕ್ರಮವಲ್ಲ. ಸಾರ್ವಜನಿಕರ ರಕ್ಷಣೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪುರ ಸರ್ಕಾರ ವಿಫಲ; ದಸಂಸ ಕಿಡಿ
“ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಮಣಿಪುರದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಬೇಕು. ಮಣಿಪುರದಲ್ಲಿ ಹಿಂಸಾಚಾರ ತಡೆಗಟ್ಟಲು ವಿಫಲವಾಗಿರುವ ಮಣಿಪುರದ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಗಳ ಮುಖಂಡರಾದ ಡಿ.ಎಸ್. ಶರಣಬಸವ, ಹೆಚ್. ಪದ್ಮಾ, ಕರಿಯಪ್ಪ ಹಚ್ಚೊಳ್ಳಿ, ರಂಗಪ್ಪ ಯಾಪಲದಿನ್ನಿ, ರಂಗನಗೌಡ, ವರಲಕ್ಷ್ಮಿ, ತಾಯಮ್ಮ ಸೇರಿದಂತೆ ಅನೇಕರು ಭಾಗವಹಿಸಿದ್ದರು.