ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಸರ್ಕಾರಿ ಶಾಲೆ ಉಳಿವಿಗಾಗಿ ಚಳವಳಿ ರೂಪಿಸಲು ಭಾನುವಾರ ದುಂಡು ಮೇಜಿನ ಸಭೆ ಕರೆಯಲಾಯಿತು.
ಬೀದರ ನಗರದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕ ಕಛೇರಿಯಲ್ಲಿ ಬುದ್ಧ, ಬೆಳಕು ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕರೆದ ದುಂಡು ಮೇಜಿನ ಸಭೆಯಲ್ಲಿ ʼಸರ್ಕಾರಿ ಶಾಲೆ ಉಳಿಸಿ-ಗುಣಮಟ್ಟ ಶಿಕ್ಷಣ ಕೊಡಿಸಿʼ ಕುರಿತು ಸುದೀರ್ಘವಾಗಿ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಲಾಯಿತು.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಗಣನೀಯ ಪ್ರಮಾಣದಲ್ಲಿ ದಾಖಲಾತಿ ಕುಸಿಯುತ್ತಿರುವುದಕ್ಕೆ ಸರ್ಕಾರದ ಇಚ್ಚಾಶಕ್ತಿ ಕೊರತೆ ಜೊತೆಗೆ ಅನೇಕ ಕಾರಣಗಳಿವೆ, ಹಲವು ಕಡೆ ಶಾಲೆಗಳು ಮುಚ್ಚಿರುವುದು ಅತ್ಯಂತ ನೋವಿನ ಸಂಗತಿ, ಇದಕ್ಕೆ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರೇ ಹೊಣೆಗಾರರಾಗುತ್ತಾರೆ. ತಮ್ಮ ಊರಿನ ಶಾಲೆಯ ಕುರಿತು ಗ್ರಾಮಸ್ಥರಿಗೆ, ಪಾಲಕರಲ್ಲಿ ಮೂಡಿರುವ ಅಸಡ್ಡೆಯಿಂದ ಶಾಲೆಗಳ ಅಭಿವೃದ್ಧಿ ಕುಂಠಿತವಾಗುತ್ತಿರುವ ಬಗ್ಗೆ ಅಭಿಪ್ರಾಯ ವ್ಯಕ್ತವಾಯಿತು.
ಸರ್ಕಾರಿ ಶಾಲೆಗಳ ಉಳಿಯಬೇಕು ಮತ್ತು ಗುಣಮಟ್ಟ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಸರ್ಕಾರ, ಅಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಕೈಗೊಳಬೇಕಾದ ಕ್ರಮಗಳು ಪಟ್ಟಿಸಿದ್ಧಪಡಿಸಿ, ಸರ್ಕಾರದ ಗಮನ ಸೆಳೆಯಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಚರ್ಚೆಯಾದ ವಿಷಯ :
ʼಚುನಾವಣೆ, ಸಮೀಕ್ಷೆ ಸೇರಿದಂತೆ ಇತರ ಕೆಲಸ, ಕಾರ್ಯಗಳಿಗೆ ಶಿಕ್ಷಕರನ್ನು ಬಳಸುವುದು ನಿಲ್ಲಿಸಬೇಕು. ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗುವ ಶಿಕ್ಷಕರಿಂದ ಖಾಲಿ ಉಳಿಸುವ ಹುದ್ದೆಗೆ ಶೀಘ್ರ ನೇಮಕ ಪ್ರಕ್ರಿಯೆ ನಡೆಯಬೇಕು. ರಾಜ್ಯದ ಎಲ್ಲ ಶಾಲೆಯ ತರಗತಿಗಳಲ್ಲಿ ಕಡ್ಡಾಯವಾಗಿ ಸಿ.ಸಿ.ಕ್ಯಾಮರಾ ಅಳವಡಿಸಬೇಕು ಮತ್ತು ತಾಲೂಕು ಶಿಕ್ಷಣ ಇಲಾಖೆ ಅದರ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಅಂಗನವಾಡಿಗಳಿಗೆ ನರ್ಸರಿ ಎಲ್.ಕೆ.ಜಿ ಹಾಗೂ ಯು.ಕೆ.ಜಿ ಶಾಲೆ ಎಂದು ಪರಿಗಣಿಸಿ ಸರ್ಕಾರಿ ಶಾಲೆಯೊಂದಿಗೆ ಜೋಡಣೆ ಮಾಡಬೇಕು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕರೆಂದು ಪರಿಗಣಿಸಬೇಕುʼ ಎಂದು ಹಕ್ಕೊತ್ತಾಯ ಮಂಡಿಸಿದರು.
ಗ್ರಾಮ ಪಂಚಾಯತಿ ಒಂದರಂತೆ ಮಾದರಿ ಸರ್ಕಾರಿ ವಸತಿ ಶಾಲೆ ತೆರೆಯಬೇಕು. ಶಿಕ್ಷಕರ ಚುನಾವಣೆ, ತರಬೇತಿ ರಜಾ ಅವಧಿಯಲ್ಲಿ ನಡೆಸಬೇಕು. ಖಾಸಗಿ ಶಾಲೆಗಳು ಸರ್ಕಾರದ ನಿಯಮದಂತೆ ನಡೆಸಲು ಕ್ರಮಕೈಗೊಳ್ಳಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು, ವಿಷಯ ಪರಿವೀಕ್ಷಕರು ಸೇರಿದಂತೆ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ನಾನಾ ವಿಷಯಗಳ ಕುರಿತು ಬೋಧಿಸಬೇಕು, ಶಿಕ್ಷಕರ ಬೋಧನೆ ಹಾಗೂ ಮಕ್ಕಳ ಕಲಿಕಾ ಬಗ್ಗೆ ಪರಿಶೀಲಿಸಬೇಕು. ಸಿಆರ್‌ಸಿ. ಬಿಆರ್‌ಸಿ ಹುದ್ದೆ ರದ್ದುಗೊಳಿಸಿ ಕ್ಲಸ್ಟರ್ ಮಟ್ಟದಲ್ಲಿ ಓರ್ವ ಕಂಪ್ಯೂಟರ್ ಆಪರೇಟರ್ ನೇಮಿಸಿ ಎಲ್ಲ ಶಾಲೆಗಳ ಮಾಹಿತಿ ಕ್ರೋಢಿಕರಣ ಮಾಡಬೇಕು. ಚುನಾಯಿತ ಪ್ರತಿನಿಧಿಗಳು ತಮ್ಮ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಕಡ್ಡಾಯವಾಗಿ ದತ್ತು ಪಡೆದು ಅಭಿವೃದ್ಧಿಪಡಿಸಲು ಹೊಸ ಕಾನೂನು ರೂಪಿಸಬೇಕುʼ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಸಚಿವರನ್ನು ನಿಯೋಗದೊಂದಿಗೆ ಭೇಟಿ ಮಾಡಿ ಸರ್ಕಾರ ಶಾಲೆ ಉಳಿವಿಗೆ ಬೇಕಾದ ತುರ್ತು ಕ್ರಮಗಳ ಕುರಿತು ಒತ್ತಾಯಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಜಯದೇವಿತಾಯಿ ಲಿಗಾಡೆ ಕನ್ನಡ ಪ್ರೀತಿ ಅನುಕರಣೀಯ: ನಾಗರಾಜ ಹಾವಣ್ಣ
ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹಾಗೂ ಬುದ್ಧ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಸಭೆಯ ಅಧ್ಯಕ್ಷತೆ ವಹಿಸಿದರು. ಟೀಮ್ ಯುವ ಸಂಯೋಜಕ ವಿನಯಕುಮಾರ ಮಾಳಗೆ, ದಸಂಸ ಹೋರಾಟಗಾರ ಅಶೋಕ ಗಾಯಕವಾಡ ಭಾಲ್ಕಿ, ಸಾಮಾಜಿಕ ಚಿಂತಕರಾದ ಜಗದೀಶ ಬಿರಾದರ, ಬಾಲಾಜಿ ಕುಂಬಾರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ಎಸ್.ಮನೋಹರ, ದಸಂಸ ಸಂಚಾಲಕ ಅರುಣ ಪಟೇಲ್, ಪ್ರಮುಖರಾದ ಪ್ರಕಾಶ ಭಾವಿಕಟ್ಟಿ, ಪ್ರಕಾಶ ರಾವಣ, ತುಕಾರಾಮ ಹೊನ್ನೆಕೆರಿ, ಸಂಜಯಕುಮಾರ ವಲ್ಲೆಪೂರ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.