ನಿಸ್ವಾರ್ಥ ಭಾವದಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಕೈಜೋಡಿಸಬೇಕೆಂದು ಹುಮನಾಬಾದ್ ಹಿರೇಮಠ ಸಂಸ್ಥಾನದ ರೇಣುಕಾ ವೀರಗಾಂಧರ ಶಿವಾಚಾರ್ಯ ಹೇಳಿದರು.
ಹುಮನಾಬಾದ್ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮಂಗಳವಾರ ನಡೆದ ಆಶ್ರಯ ದೀಪ ಟ್ರಸ್ಟ್ ಉದ್ಘಾಟನೆ ಸಮಾರಂಭ ಹಾಗೂ ಬುದ್ಧ, ಬಸವ, ಅಂಬೇಡ್ಕರ್ ಅವರ ಕುರಿತು ಒಂದು ದಿನದ ವಿಚಾರ ಸಂಕಿರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ʼಸಮಾಜದಲ್ಲಿ ಬಡವರು, ದೀನ ದಲಿತರು, ಮಹಿಳೆಯರು ಹಲವು ಸಮಸ್ಯೆಗಳು ಎದುರಿಸುತ್ತಿದ್ದು, ಅಂತಹ ಸಮಸ್ಯೆಗಳನ್ನು ಗುರುತಿಸಿ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುವುದು ಅಗತ್ಯವಾಗಿದೆ. ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ವಿಚಾರಧಾರೆಗಳು ಮೈಗೂಡಿಸಿಕೊಂಡು ಮುನ್ನಡೆಯಬೇಕುʼ ಎಂದು ಸಲಹೆ ನೀಡಿದರು.

ಮಾಜಿ ಸಚಿವ ರಾಜಶೇಖರ್ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ʼ ಆಶ್ರಯ ದೀಪ ಟ್ರಸ್ಟ್ ಮುಖಾಂತರ ಸಮಾಜಮುಖಿ ಕಾರ್ಯಗಳು ನಡೆಯಲಿ. ಬುದ್ಧ, ಬಸವ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಂತನೆಗಳೊಂದಿಗೆ ಸಮಾಜ ಬದಲಾವಣೆಗೆ ಶ್ರಮಿಸೋಣʼ ಎಂದು ಹೇಳಿದರು.
ಪ್ರಮುಖರಾದ ಡಾ.ನಾಗಶೆಟ್ಟಿ ಶೇರಿಕಾರ್, ಪ್ರಶಾಂತ ಶೇರಿಕಾರ ಹಾಗೂ ಸತೀಶ ಸಿಂಧೆ ಅವರು ಭಗವಾನ ಬುದ್ಧ, ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ʼಸಮಾಜದಲ್ಲಿ ಬೇರೂರಿದ ಜಾತಿ, ಮೌಢ್ಯ, ಅಂಧಕಾರ ಹೊಡೆದೋಡಿಸಿ ಸಮ ಸಮಾಜ ನಿರ್ಮಾಣಕ್ಕಾಗಿ ಕ್ರಾಂತಿಗೈದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳು ಸಾರ್ವಕಾಲಿಕ ಸತ್ಯವಾಗಿವೆ. ಪ್ರತಿಯೊಬ್ಬರೂ ಮಹಾತ್ಮರ ಜೀವನ ಚರಿತ್ರೆ ಓದಿ, ಬದುಕಿನಲ್ಲಿ ಬದ್ಧತೆ ಅಳವಡಿಸಿಕೊಳ್ಳಬೇಕುʼ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹನೀಯರಿಗೆ ಹಾಗೂ ಪತ್ರಕರ್ತರಿಗೆ ಸನ್ಮಾನಿಸಲಾಯಿತು.
ಇದನ್ನೂ ಓದಿ : ಬೀದರ್ | ಸರ್ಕಾರಿ ಶಾಲೆ ಉಳಿವಿಗಾಗಿ ದುಂಡು ಮೇಜಿನ ಸಭೆ : ಚಳವಳಿಗೆ ಸಿದ್ಧತೆ
ಕಾರ್ಯಕ್ರಮದಲ್ಲಿ ಪ್ರಮುಖರಾದ ಅನೀಲ್ ದೊಡ್ಡಿ, ಹಣ್ಮುಪಾಜಿ, ಬಾಬಾ ಪಟೇಲ್. ಫಿರ್ದೋಶ್, ಸಿದ್ರಾಮ ವಾಗ್ಮಾರೆ, ಅರುಣ, ಉಮೇಶ, ಮಲ್ಲಿಕಾರ್ಜುನ್ ಹುಮನಾಬಾದೆ, ಶಶಿ ಜಮಾದರ್, ಸಂತೋಷ್, ವಿಕಾಶ ಮಠಪತಿ, ರೇವಣಸಿದ್ದಯ್ಯ ಸ್ವಾಮಿ ಸೇರಿದಂತೆ ಟ್ರಸ್ಟ್ ಅಧ್ಯಕ್ಷ ಭೀಮರೆಡ್ಡಿ ಸಿಂಧನಕೇರಾ ಹಾಗೂ ಪದಾಧಿಕಾರಿಗಳಾದ ಅರವಿಂದ ಜೋಗಿರೆ, ಮೋಹನಸಿಂಗ್ ರಜಪೂತ, ಉದಯಕುಮಾರ ವಾರದ, ಯುವರಾಜ ಐಹೊಳೆ ಮತ್ತಿತರರು ಪಾಲ್ಗೊಂಡಿದ್ದರು.