ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ಚೈತನ್ಯವನ್ನು ಉಲ್ಲಂಘಿಸಿದ ರೀತಿಯನ್ನು ಯಾವುದೇ ಭಾರತೀಯ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶಕ್ಕೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ನೇ ವರ್ಷವಾಗಿದ್ದು, ಈ ಸಂದರ್ಭದಲ್ಲಿ ಎಕ್ಸ್ ಖಾತೆಯಲ್ಲಿ ಬುಧವಾರ ಸರಣಿ ಪೋಸ್ಟ್ ಗಳನ್ನು ಮಾಡಿರುವ ಅವರು, “ಇದು ಭಾರತದ ಪ್ರಜಾಪ್ರಭುತ್ವ ಇತಿಹಾಸದ ಅತ್ಯಂತ ಕರಾಳ ಅಧ್ಯಾಯಗಳಲ್ಲಿ ಒಂದಾಗಿದೆ” ಎಂದು ಬಣ್ಣಿಸಿದ್ದಾರೆ.
“ಸಂವಿಧಾನದಲ್ಲಿ ಪ್ರತಿಪಾದಿಸಿದ ಮೌಲ್ಯಗಳನ್ನು ಕಡೆಗಣಿಸಲಾಯಿತು. ಮೂಲಭೂತ ಹಕ್ಕುಗಳನ್ನು ಅಮಾನತ್ತಿನಲ್ಲಿಡಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರನ್ನು ಜೈಲಿಗೆ ಕಳುಹಿಸಲಾಯಿತು” ಎಂದು ಹೇಳಿದ್ದಾರೆ.
“ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ದೃಢವಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ನಮಸ್ಕರಿಸುತ್ತಾ, ಭಾರತದಾದ್ಯಂತದ ಎಲ್ಲಾ ಹಂತಗಳ ಜನರು, ವೈವಿಧ್ಯಮಯ ಸಿದ್ಧಾಂತಗಳಿಂದ ಬಂದವರು ಒಂದೇ ಗುರಿಯೊಂದಿಗೆ ಪರಸ್ಪರ ನಿಕಟವಾಗಿ ಕೆಲಸ ಮಾಡಿದರು: ಭಾರತದ ಪ್ರಜಾಪ್ರಭುತ್ವದ ರಚನೆಯನ್ನು ರಕ್ಷಿಸುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶಗಳನ್ನು ಸಂರಕ್ಷಿಸಬೇಕು” ಎಂದಿದ್ದಾರೆ.
“ತುರ್ತು ಪರಿಸ್ಥಿತಿ ವೇಳೆ ನಾನು ಆರ್‌ಎಸ್‌ಎಸ್ ಪ್ರಚಾರಕನಾಗಿದ್ದೆ. ತುರ್ತು ಪರಿಸ್ಥಿತಿ ವಿರೋಧಿ ಚಳವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ರಚನೆಯನ್ನು ರಕ್ಷಿಸುವ ಮಹತ್ವವನ್ನು ಪುನರುಚ್ಚರಿಸಿತು. ಅಲ್ಲದೆ, ರಾಜಕೀಯ ವರ್ಣಪಟಲದಾದ್ಯಂತ ಎಲ್ಲ ಜನರಿಂದ ನಾನು ಬಹಳಷ್ಟು ಕಲಿಯಲು ಸಾಧ್ಯವಾಯಿತು” ಎಂದು ಹೇಳಿದ್ದಾರೆ.