ಚುನಾವಣೆ ಮುಗಿದು ಸರ್ಕಾರ ರಚನೆ ಆಗಿ ವಿಧಾನಮಂಡಲ ಅಧಿವೇಶನ ಮುಗಿದರೂ ಬಿಜೆಪಿ ಇನ್ನು ವಿರೋಧ ಪಕ್ಷದ ನಾಯಕನ ಆಯ್ಕೆ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಾರಾಗುತ್ತಾರೆ ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಹೀಗಿರುವಾಗ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮಹತ್ವದ ಸುಳಿವು ನೀಡಿದ್ದಾರೆ.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸಿ ಟಿ ರವಿ, ವಿರೋಧ ಪಕ್ಷದ ನಾಯಕ ಯತ್ನಾಳ್ ಎಂಬುದು ಈಗಾಗಲೇ ಒಂದು ಹಂತದ ಚರ್ಚೆ ಆಗಿದೆ. ಅವರ ಪಕ್ಷದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಾವು ಗಮನಹರಿಸುವುದಿಲ್ಲ. ಅದು ಅವರಿಗೆ ಸೇರಿದ ವಿಚಾರ ನಮಗೆ ಯಾಕೆ ಬೇಕು” ಎಂದು ಹೇಳಿದರು.
ಸದನದಲ್ಲಿ ಬಿಜೆಪಿ, ಜೆಡಿಎಸ್ ಜಂಟಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜ್ಯ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಎಂದು ಬಹುತೇಕ ತೀರ್ಮಾನ ಆಗಿದೆ. ಹೀಗಾಗಿ ಬಿಜೆಪಿ ಜೊತೆ ನಮ್ಮ ಜಂಟಿ ಹೋರಾಟ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ಜೆಡಿಎಸ್ ಅಳಿಸಿಹಾಕಲು ಯಾರಿಂದಲೂ ಸಾಧ್ಯವಿಲ್ಲ: ಎಚ್ ಡಿ ದೇವೇಗೌಡ ತಿರುಗೇಟು
ರಾಜ್ಯದಲ್ಲಿ ಅಧಿಕೃತ ವಿರೋಧ ಪಕ್ಷ ಬಿಜೆಪಿಯೇ ಆಗಿದೆ. ನಮ್ಮದು ಅನಧಿಕೃತ ವಿಪಕ್ಷ. ಕುಮಾರಸ್ವಾಮಿ ಅವರು ಬಿಜೆಪಿ ಜೊತೆ ಹೋಗಿಲ್ಲ. ವಿರೋಧಿ ವಿಚಾರ ಬಂದಾಗ ಹೋರಾಟ ನಡೆಯುತ್ತದೆ. ಕಾಂಗ್ರೆಸ್ ಇದ್ದಾಗಲೂ ನಡೆದಿದೆ, ಬಿಜೆಪಿ ಇದ್ದಾಗಲೂ ನಡೆಯುತ್ತಿದೆ. ಕಾಂಗ್ರೆಸ್ ವಿಪಕ್ಷ ಇದ್ದಾಗಲೂ ಒಟ್ಟಿಗೆ ವಿರೋಧ ಮಾಡಿದ್ದೇವೆ. ಇದರಲ್ಲಿ ಹೊಂದಾಣಿಕೆ ಎನ್ನುವ ವಿಚಾರ ಬಳಸುವುದು ಬೇಡ ಎಂದು ಸ್ಪಷ್ಟನೆ ನೀಡಿದರು.