ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ 1777 ಎಕರೆ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಇಂದು ನಡೆಸುತ್ತಿರುವ ದೇವನಹಳ್ಳಿ ಚಲೋಗೆ ಪೊಲೀಸರು ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ.
1180 ದಿನಗಳಿಂದ 13 ಗ್ರಾಮಗಳ ರೈತರು ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಮತ್ತು ರಾಜ್ಯ ಸರ್ಕಾರದ ಅಂತಿಮ ಆದೇಶವನ್ನು ವಿರೋಧಿಸಿ ಸಂಯುಕ್ತ ಹೋರಾಟ ಕರ್ನಾಟಕ ಹೋರಾಟಕ್ಕೆ ಇಳಿದಿದೆ. ರಾಜ್ಯದ ಮೂಲೆ ಮೂಲೆಗಳಿಂದ ದೇವನಹಳ್ಳಿಗೆ ರೈತರು ಧಾವಿಸಿದ್ದಾರೆ. ದೇವನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಹೋರಾಟದಲ್ಲಿ ಜಮಾಯಿಸಿದ್ದಾರೆ.
ರೈತ, ದಲಿತ, ಕಾರ್ಮಿಕ, ವಿದ್ಯಾರ್ಥಿ, ಯುವಜನ, ಮಹಿಳಾ ಸಂಘಟನೆಗಳ ಸಮನ್ವಯ ಸಮಿತಿಯಾಗಿ ಹೊಮ್ಮಿರುವ ‘ಸಂಯುಕ್ತ ಹೋರಾಟ ಕರ್ನಾಟಕ’ವು ‘ದೇವನಹಳ್ಳಿ ಚಲೋ’ದ ನೇತೃತ್ವ ವಹಿಸಿದೆ. ವಕೀಲರು, ಕಾರ್ಮಿಕರು, ಪ್ರಾಧ್ಯಾಪಕರು, ಸಿನಿಮಾ ನಟರು, ಕಲಾವಿದರು ಹೋರಾಟದ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ದೇವನಹಳ್ಳಿಗೆ ಬರುತ್ತಿರುವ ಜನರನ್ನು, ಟ್ರಾಫಿಕ್ ನೆಪ ಹೇಳಿ ಮಾರ್ಗಮಧ್ಯೆದಲ್ಲೇ ತಡೆಯುವ ಕೆಲಸವನ್ನು ಪೊಲೀಸರು ಮಾಡಿದ್ದಾರೆಂದು ಹೋರಾಟಗಾರರು ಆರೋಪಿಸಿದ್ದಾರೆ.
ದೇವನಹಳ್ಳಿ ಚಲೋ ಹೋರಾಟ ಸ್ಥಳಕ್ಕೆ ಬರದಂತೆ ಹೋರಾಟಗಾರರನ್ನು ತಡೆಯುತ್ತಿರುವ ಪೊಲೀಸರಿಗೆ ಎಚ್ಚರಿಕೆ ನೀಡಿದ ರೈತ ಮುಖಂಡ ಬಡಗಲಪುರ ನಾಗೇಂದ್ರ ಅವರು, ಶಾಂತಿಯುತ ಹೋರಾಟಕ್ಕೆ ಅನುವು ಮಾಡಿಕೊಡಿ ಎಂದು ಕೋರಿದ್ದಾರೆ.
ಹೋರಾಟಗಾರರಾದ ಎಚ್.ಎಸ್.ಬಸವರಾಜಪ್ಪ, ಪ್ರಕಾಶ್ ಕಮ್ಮರಡಿ, ಪ್ರಕಾಶ್ ರಾಜ್, ವರಲಕ್ಷ್ಮಿ, ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಎಸ್ ವರಲಕ್ಷ್ಮಿ, ನೂರ್ ಶ್ರೀಧರ್, ಗುರುಪ್ರಸಾದ್ ಕೆರಗೋಡು, ʼಮುಖ್ಯಮಂತ್ರಿʼ ಚಂದ್ರು, ಮಾವಳ್ಳಿ ಶಂಕರ್, ಅನುಸೂಯಮ್ಮ, ಮೀನಾಕ್ಷಿ ಸುಂದರಂ, ಇಂದಿರಾ ಕೃಷ್ಣಪ್ಪ, ಶಿವಪ್ರಸಾದ್, ನಾಗರಾಜ್, ಶಿವಪ್ಪ, ಅಪ್ಪಣ್ಣ, ತಾರಾ ರಾವ್, ಚಂದ್ರಪ್ಪ ಹೊಸಕೆರೆ, ವಸಂತಕುಮಾರ್, ಕೆ.ಎನ್.ಉಮೇಶ್, ಶಿವಾನಂದ, ಮಹೇಶ್ ಪ್ರಭು, ಮಲ್ಲಯ್ಯ, ಲಕ್ಷ್ಮಿನಾರಾಯಣ ರೆಡ್ಡಿ, ನಾಗರತ್ನ, ಪ್ರಭಾ ಬೆಳವಂಗಲ, ಅಪ್ಪಣ್ಣ, ನಿರ್ವಾಣಪ್ಪ, ಶ್ರೀನಿವಾಸ್, ಸಿದ್ದರಾಜು, ನಂಜಪ್ಪ, ರಾಮೇಗೌಡ, ಅಶ್ವತ್ಥ, ರಾಮಚಂದ್ರಪ್ಪ, ಗೋವಿಂದರಾಜು, ಶಿವಮೊಗ್ಗ ನಾರಾಯಣಸ್ವಾಮಿ, ಮಹಿಮಾ ಪಟೇಲ್, ಎಸ್.ಜಿ.ಸಿದ್ದರಾಮಯ್ಯ ಹಲವಾರು ಜನರು ವೇದಿಕೆಯಲ್ಲಿದ್ದಾರೆ.



