ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಹಲವರು ತಮ್ಮ ಕೆಲಸವನ್ನು ಗಂಭೀರವಾಗಿ ಮಾಡಿದ್ದಾರೆ. ಅಂತಹವರಲ್ಲಿ, ಎರಡು ವಿಭಿನ್ನ ಇಂಗ್ಲಿಷ್ ಭಾಷೆಯ ರಾಷ್ಟ್ರೀಯ ದಿನಪತ್ರಿಕೆಗಳೊಂದಿಗೆ ಕೆಲಸ ಮಾಡುತ್ತಿದ್ದ ವ್ಯಂಗ್ಯಚಿತ್ರಕಾರರಾದ ಅಬು ಅಬ್ರಹಾಂ ಮತ್ತು ಆರ್.ಕೆ ಲಕ್ಷ್ಮಣ್ ಪ್ರಮುಖರು.
ಯುಟೋಪಿಯನ್ (ಕನಸಿನ/ಪರಿಪೂರ್ಣವಾದ) ಸಮಾಜದಲ್ಲಿ, ರಾಜಕೀಯ ವ್ಯಂಗ್ಯಚಿತ್ರಕಾರರು ಅಗತ್ಯವೇ ಇರುವುದಿಲ್ಲ ಅಥವಾ ಅವರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿರುತ್ತಾರೆ. ರಾಜಕೀಯ ವ್ಯಂಗ್ಯಚಿತ್ರಕಾರನ ಕೆಲಸವೆಂದರೆ ಸಮಾಜದ ವಕ್ರಗಳು, ವಿಚಿತ್ರಗಳು ಹಾಗೂ ಅಸಂಗತತೆಗಳಿಗೆ ವ್ಯಂಗ್ಯಾತ್ಮಕ ಕನ್ನಡಿ ಹಿಡಿಯುವುದು. ವ್ಯಂಗ್ಯಚಿತ್ರಕಾರ ಚಿತ್ರಿಸುವ ವ್ಯಂಗ್ಯಚಿತ್ರವು ಅಪಹಾಸ್ಯ ಮತ್ತು ನಗುವಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಬದಲಾಗಿ, ಓದುಗರು/ವೀಕ್ಷಕರು ತಮ್ಮ ಸಮಾಜ ಮತ್ತು ಅದರ ಸಮಸ್ಯೆಗಳನ್ನು ವಿಮರ್ಶಾತ್ಮಕವಾಗಿ ನೋಡಲು ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ವ್ಯಂಗ್ಯಚಿತ್ರಕಾರರು ಆಳುವವರ ದೃಷ್ಟಿಯಲ್ಲಿ ವಿಮರ್ಶಕರಾಗಿ ಮತ್ತು ವಿಧ್ವಂಸಕರಾಗಿ ಕಾಣಿಸಿಕೊಳ್ಳುತ್ತಾರೆ.
ಆದಾಗ್ಯೂ, ವ್ಯಂಗ್ಯಚಿತ್ರಕಾರರು ಕೂಡ ಯಾವುದೇ ನಿರ್ಬಂಧಗಳಿಲ್ಲದೆ ಕೆಲಸ ಮಾಡುವ ಸಮಾಜವು ಕೇವಲ ಯುಟೋಪಿಯನ್ ಪ್ರಜಾಪ್ರಭುತ್ವ ಮಾತ್ರವೇ ಆಗಿರಬಹುದು. ಆದರೆ, ಅಂತಹ ಯುಟೋಪಿಯನ್ ಪ್ರಜಾಪ್ರಭುತ್ವವು ಎಂದಾದರೂ ಅಸ್ತಿತ್ವದಲ್ಲಿ ಇದ್ದಿರಬಹುದೇ? ಅಸಮಾಧಾನ, ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಅಭಿವ್ಯಕ್ತಿಯ ಮೇಲೆ ನಿರ್ಬಂಧಗಳನ್ನು ವಿಧಿಸಿದಾಗ ಏನಾಗುತ್ತದೆ? ಆ ಸನ್ನಿವೇಶವು ವ್ಯಂಗ್ಯಚಿತ್ರಕಾರರಿಂದ ಚಿತ್ರಿಸಲ್ಪಡಬೇಕಾದ ಸಂದರ್ಭವಾಗಿರುತ್ತದೆ. ಆದರೆ, ಅವರ ರೂಪಕಾತ್ಮಕ ಭಾಷೆ (ಚಿತ್ರಿಸುವ ಚಿಂತನೆ-ಕೌಶಲ್ಯ) ಕಟ್ಟಿಹಾಕಲ್ಪಟ್ಟಿರುತ್ತದೆ. ತುರ್ತು ಪರಿಸ್ಥಿತಿಯ ವರ್ಷಗಳ (1975-77) ವ್ಯಂಗ್ಯಚಿತ್ರಗಳು ತಮ್ಮ ಐತಿಹಾಸಿಕ ಸಂದರ್ಭದಲ್ಲಿ ಒಳನೋಟ, ವ್ಯಂಗ್ಯಚಿತ್ರಗಳ ಶಕ್ತಿ ಮತ್ತು ಅಭಿವ್ಯಕ್ತಿಯ ಅಗತ್ಯತೆ ಮತ್ತು ಬಂಧನಕ್ಕೊಳಗಾಗುವ ಬೆದರಿಕೆಯ ನಡುವೆ ವ್ಯಂಗ್ಯಚಿತ್ರಕಾರರು ಹೇಗೆ ಚಿತ್ರಿಸಿದರು, ಬಿಗಿಯಾದ ಹಗ್ಗದ ಮೇಲೆ ಹೇಗೆ ನಡೆದರು ಎಂಬುದರನ್ನು ವಿವರಿಸುತ್ತದೆ.
50 ವರ್ಷಗಳ ಹಿಂದೆ, 1975ರ ಜೂನ್ 26ರ ಮುಂಜಾನೆ, ”ರಾಷ್ಟ್ರಪತಿಗಳು ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಇದರ ಬಗ್ಗೆ ಆತಂಕಗೊಳ್ಳಲು ಯಾವುದೇ ಕಾರಣವಿಲ್ಲ” ಎಂದು ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಧ್ವನಿಯು ರೇಡಿಯೊದಲ್ಲಿ ಕೇಳಿಬಂದಿತು. ತುರ್ತು ಪರಿಸ್ಥಿತಿ ಘೋಷಣೆಯ ಬಗ್ಗೆ ಪತ್ರಿಕಾ ವರದಿ ಮಾಡುವುದನ್ನು ತಡೆಯಲು ಹಿಂದಿನ ರಾತ್ರಿಯೇ ಪ್ರಕಾಶನ ಸಂಸ್ಥೆಗಳಿಗೆ ವಿದ್ಯುತ್ ಕಡಿತಗೊಳಿಸಲಾಗಿತ್ತು. ಆದ್ದರಿಂದ, ಅಂದು ಬೆಳಗ್ಗೆ ಯಾವುದೇ ಪತ್ರಿಕೆಗಳು ಪ್ರಕಟವಾಗಲಿಲ್ಲ. ಅದಕ್ಕೂ 14 ದಿನಗಳ ಮುಂಚೆ, ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ಪ್ರಕಟಿಸಿದ ತೀರ್ಪಿನಲ್ಲಿ, 1971ರ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳು ನಡೆದಿದ್ದು, ಪ್ರಧಾನಿ ಇಂದಿರಾ ಅವರು ತಪ್ಪಿತಸ್ಥರೆಂದು ಘೋಷಿಸಲಾಗಿತ್ತು. ಆ ತೀರ್ಪಿನ ಮೇಲೆ 12 ದಿನಗಳ ತಡೆಯಾಜ್ಞೆ ವಿಧಿಸಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಯಿತು. ಇದರ ಉದ್ದೇಶ ‘ಆಂತರಿಕ ಗೊಂದಲ’ಗಳಿಂದ ರಾಷ್ಟ್ರವನ್ನು ರಕ್ಷಿಸುವುದಾಗಿತ್ತು. ಅದೇ ಸಮಯದಲ್ಲಿ, ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮ ಪ್ರಧಾನಿ ಸ್ಥಾನವನ್ನು ಉಳಿಸಿಕೊಳ್ಳಲು ಅವಕಾಶ ಸೃಷ್ಟಿಸಿಕೊಳ್ಳಲು ‘ಆಂತರಿಕ ಗೊಂದಲ’ದ ಕಥೆಯನ್ನು ಹೆಣೆದಿದ್ದಾರೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ಜೊತೆಗೆ, ಈ ಅಭಿಪ್ರಾಯ ದೇಶದ ಉದ್ದಗಲಕ್ಕೂ ಹರಡಿತ್ತು. ಮುಂದಿನ 1977ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುವ ಹೊತ್ತಿಗೆ, ಈ ಅಭಿಪ್ರಾಯವು ಇಂದಿರಾ ಗಾಂಧಿಯವರ ಚುನಾವಣಾ ಸೋಲಿಗೆ ಕಾರಣವಾಗುವಷ್ಟು ಬಲ ಪಡೆದುಕೊಂಡಿತ್ತು. ಇದರಲ್ಲಿ ಖಾಲಿ ಸಂಪಾದಕೀಯಗಳು, ವಿಡಂಬನಾತ್ಮಕ ಶ್ರದ್ಧಾಂಜಲಿಗಳು ಹಾಗೂ ಪತ್ರಿಕಾ ವರದಿಗಳು ಹೆಚ್ಚು ಪರಿಣಾಮ ಬೀರಿದ್ದರೂ, ತಮ್ಮ ಗೆರೆಗಳ ಮೂಲಕವೇ ಹೆಚ್ಚು ಜನರನ್ನು ಎಚ್ಚರಿಸಲು ಪ್ರಯತ್ನಿಸಿದ ರಾಜಕೀಯ ವ್ಯಂಗ್ಯಚಿತ್ರಕಾರರು ಕೂಡ ಆ ಪ್ರಭಾವ ಬೀರುವಲ್ಲಿ ನಿಜವಾದ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.
ವ್ಯಂಗ್ಯಚಿತ್ರಕಾರರ ಮೇಲೆ ‘ಸೆನ್ಸಾರ್‌ಶಿಪ್’ (ಪ್ರಕಟಣೆಗೂ ಮುನ್ನ ಅನುಮತಿ ಕಡ್ಡಾಯ) ಆದೇಶವನ್ನು ಹೇರಲಾಗಿತ್ತು. ಬರಹಗಾಗರು ಮತ್ತು ವ್ಯಂಗ್ಯಚಿತ್ರಕಾರರು ತಮ್ಮ ಲೇಖನಗಳು, ವ್ಯಂಗ್ಯಚಿತ್ರಗಳು, ವಿಡಂಬನೆಯ ಶ್ರದ್ಧಾಂಜಲಿಗಳು, ಜಾಹೀರಾತುಗಳು ಹಾಗೂ ಇತರ ಪ್ರಕಟಣೆಗೆ ಮೊದಲು ಅವುಗಳನ್ನು ಮುಖ್ಯ ಸೆನ್ಸಾರ್ ಕಚೇರಿಗೆ ಸಲ್ಲಿಸಿ, ಅನುಮತಿ ಪಡೆಯಬೇಕಿತ್ತು. ಆದರೂ, ಕೆಲವು ವ್ಯಂಗ್ಯಚಿತ್ರಕಾರರು ಮುಖ್ಯ ಸೆನ್ಸಾರ್ ಕಚೇರಿಯ ಅನಿಯಂತ್ರಿತ ದಬ್ಬಾಳಿಕೆಯನ್ನೇ ಎತ್ತಿ ತೋರಿಸಿದ್ದಾರೆ.
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ತಮ್ಮ ಹಲವರು ತಮ್ಮ ಕೆಲಸವನ್ನು ಗಂಭೀರವಾಗಿ ಮಾಡಿದ್ದಾರೆ. ಅಂತಹವರಲ್ಲಿ, ಎರಡು ವಿಭಿನ್ನ ಇಂಗ್ಲಿಷ್ ಭಾಷೆಯ ರಾಷ್ಟ್ರೀಯ ದಿನಪತ್ರಿಕೆಗಳೊಂದಿಗೆ ಕೆಲಸ ಮಾಡುತ್ತಿದ್ದ ವ್ಯಂಗ್ಯಚಿತ್ರಕಾರರಾದ ಅಬು ಅಬ್ರಹಾಂ ಮತ್ತು ಆರ್.ಕೆ ಲಕ್ಷ್ಮಣ್ ಪ್ರಮುಖರು. ಅವರು 21 ತಿಂಗಳುಗಳವರೆಗೆ ಜಾರಿಯಲ್ಲಿದ್ದ ತುರ್ತು ಪರಿಸ್ಥಿತಿಯನ್ನು ಟೀಕಿಸುವ ಗಂಭೀರ ವ್ಯಂಗ್ಯಚಿತ್ರಗಳನ್ನು ಬಿಡಿಸಿದ್ದರು. ಅಬು ಅವರ ನೆಚ್ಚಿನ ತಂತ್ರಗಳಲ್ಲಿ- ಶ್ಲೇಷೆಗಳು, ಪದಗಳ ತಿರುಚುವಿಕೆ, ಆಗಾಗ್ಗೆ ಉಲ್ಲೇಖಿಸಲಾದ ನುಡಿಗಟ್ಟುಗಳು ಅಥವಾ ಗಾದೆಗಳನ್ನು ವಿಡಂಬನಾತ್ಮಕ ಪರಿಣಾಮವನ್ನು ಬೀರುವಂತೆ ಚಿತ್ರಿಸುವುದು ಪ್ರಮುಖವಾಗಿದ್ದವು. ಆ ತಂತ್ರಗಳಿವೆ ಸೂಕ್ತ ಉದಾಹರಣೆಯೆಂದರೆ 1975ರ ಡಿಸೆಂಬರ್ 31ರಂದು ಪ್ರಕಟವಾದ ಅವರ ಒಂದು ವ್ಯಂಗ್ಯಚಿತ್ರ.
ಆ ವ್ಯಂಗ್ಯಚಿತ್ರದಲ್ಲಿ ಅಬು ಅವರು ‘Ring out the old, ring in the new’ (ಹಳೆಯದನ್ನು ಬಿಟ್ಟು, ಹೊಸದನ್ನು ಸ್ವಾಗತಿಸು) ಎಂಬ ಪರಿಚಿತ ಇಂಗ್ಲಿಷ್ ಗಾದೆಯನ್ನು ‘Ring out the old, ring in the old’ (ಹಳೆಯದನ್ನು ಹೊರ ಹಾಕು, ಮತ್ತೆ ಅದೇ ಹಳೆಯದನ್ನು ಕರೆ ತಾ) ಎಂದು ವ್ಯಂಗ್ಯವಾಗಿ ಚಿತ್ರಿಸಿದ್ದರು. ಆ ಹೇಳಿಕೆಯನ್ನು ಇಬ್ಬರು ಸ್ಟಾಕ್ ವ್ಯಕ್ತಿಗಳು (ಆಡಳಿತ ಪಕ್ಷದ ಕುಳ್ಳ, ದಪ್ಪ ಕಾರ್ಯಕರ್ತ ಮತ್ತು ಎತ್ತರದ, ತೆಳ್ಳಗಿನ ಕಾರ್ಯಕರ್ತ) ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ‘ಹಳೆಯದನ್ನು ಹೊರ ಹಾಕು, ಮತ್ತೆ ಅದೇ ಹಳೆಯದನ್ನು ಕರೆ ತಾ’ ಎಂಬುದರ ಸಂದರ್ಭೋಚಿತ ಅರ್ಥವು; “ಕಾಂಗ್ರೆಸ್ ಲೋಕಸಭೆಯ ಅವಧಿಯನ್ನು ವಿಸ್ತರಿಸಲು ಬಯಸುತ್ತದೆ” ಎಂಬುದಾಗಿತ್ತು. ಇದರರ್ಥ, ಆಡಳಿತ ಪಕ್ಷವು ಆರ್ಟಿಕಲ್ 352ಅನ್ನು ಉಲ್ಲೇಖಿಸಿ, ಸಾರ್ವತ್ರಿಕ ಚುನಾವಣೆಗಳ ದಿನಾಂಕವನ್ನು ಮುಂದೂಡುವ ಮೂಲಕ ಅಧಿಕಾರದಲ್ಲಿ ಉಳಿಯುತ್ತದೆ. ಆದ್ದರಿಂದ, ಆಡಳಿತ ಪಕ್ಷದ ಕಾರ್ಯಕರ್ತರು ಹಳೆಯದನ್ನು ಹೊರ ಹಾಕಿ, ಮತ್ತೆ ಅದೇ ಹಳೆಯದನ್ನು ವಿಡಂಬನಾತ್ಮಕ ನಗುವಿನಲ್ಲಿ ಆಹ್ವಾನಿಸುವ ಮೂಲಕ, ಆಚರಿಸುತ್ತಿದ್ದಾರೆ ಎಂದು ವ್ಯಂಗ್ಯಚಿತ್ರವು ವಿವರಿಸಿತ್ತು.

ಪ್ರಜಾಪ್ರಭುತ್ವದ ಚೈತನ್ಯದ ಮೇಲಿನ ದಾಳಿಯ ಬಗ್ಗೆ ಇನ್ನಷ್ಟು ನೇರವಾಗಿ ಪ್ರತಿಕ್ರಿಯಿಸಲು ಅಬು ಅದೇ ತಂತ್ರವನ್ನು ಬಳಸಿದಾಗ, ಕಾರ್ಟೂನ್ ಸೆನ್ಸಾರ್ ಅವರ ಚಿತ್ರವನ್ನು ತಡೆಹಿಡಿಯಿತು. ಆ ವ್ಯಂಗ್ಯಚಿತ್ರದಲ್ಲಿ; ಇಬ್ಬರು ಸ್ಟಾಕ್ ವ್ಯಕ್ತಿಗಳು ‘ಸೇವ್ ಡೆಮಾಕ್ರಸಿ’ ಎಂಬ ಫಲಕವನ್ನು ಹೊತ್ತೊಯ್ಯುತ್ತಿರುವುದು ಕಾಣಿಸುತ್ತದೆ. ಆದರೆ, ಅದರಲ್ಲಿ, ಸರಳ ಬದಲಾವಣೆಯೊಂದು ಕಾಣಿಸುತ್ತದೆ. ಅದರ ವಾಸ್ತವ ಬರಹವು ‘ಸೇವ್ಡ್ ಡೆಮಾಕ್ರಸಿ’ ಎಂದಿತ್ತು. ಇದರ ಸಂದೇಶವು: ಜನಸಾಮಾನ್ಯರಿಗಾಗಿ ಉಳಿಸಬೇಕಿದ್ದ ಪ್ರಜಾಪ್ರಭುತ್ವವನ್ನು, ಜನರಿಂದಲೇ ಕಸಿದುಕೊಳ್ಳಲಾಗಿದೆ/ದೂರವಿಡಲಾಗಿದೆ. ಈ ವ್ಯಂಗ್ಯಚಿತ್ರವನ್ನು ಅಂದಿನ ಸೆನ್ಸಾರ್ ಮಂಡಳಿ ಪುರಸ್ಕರಿಸಲಿಲ್ಲ. ಮಂಡಳಿಯು ಈ ಕಾರ್ಟೂನ್ಅನ್ನು ಮಧ್ಯಾಹ್ನ 2:50ಕ್ಕೆ ಸ್ವೀಕರಿಸಿ, ಮಧ್ಯಾಹ್ನ 3:00ಕ್ಕೆ ತಿರಸ್ಕರಿಸಿತು. ಆದಾಗ್ಯೂ, ಈ ಚಿತ್ರವನ್ನು ತುರ್ತುಪರಿಸ್ಥಿತಿ ರದ್ದಾದ ಬಳಿಕ, ಅಬು ಅವರು ತಮ್ಮ ‘ಗೇಮ್ಸ್ ಆಫ್ ಎಮರ್ಜೆನ್ಸಿ’ ಎಂಬ ಸಣ್ಣ ಸಂಕಲನದಲ್ಲಿ ಪ್ರಕಟಿಸಿದರು.
ಈ ಲೇಖನ ಓದಿದ್ದೀರಾ?: ರಾಯಭಾರ | ಬಿಜೆಪಿ ಏಕೆ ಸಂವಿಧಾನದ ಬಗ್ಗೆ ಮಾತನಾಡಬಾರದು?
ಮತ್ತೊಬ್ಬ ವ್ಯಂಗ್ಯಚಿತ್ರಕಾರ ಆರ್.ಕೆ ಲಕ್ಷ್ಮಣ್ ಅವರು ವ್ಯಂಗ್ಯಚಿತ್ರಗಳನ್ನು ಒಂದು ಅತ್ಯಗತ್ಯ ತಂತ್ರವಾಗಿ ಬಳಸಿದರು. ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳಲ್ಲಿ ಪಠ್ಯ ಅಥವಾ ಚಿತ್ರಗಳ ಮೂಲಕ ವಾಸ್ತವಾಂಶಗಳ ಅರ್ಥವನ್ನು ತಿಳಿಸಲಾಗುತ್ತಿತ್ತು. ಹಲವು ಸಮಯಗಳಲ್ಲಿ, ಆದರ್ಶ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ದೇಶದ ವಾಸ್ತವ ಸ್ಥಿತಿಯ ನಡುವಿನ ವ್ಯತ್ಯಾಸವನ್ನು ಪಠ್ಯ ರೂಪದಲ್ಲಿ, ಚಿತ್ರ ರೂಪದಲ್ಲಿ ಅಥವಾ ಕೆಲವೊಮ್ಮೆ ಎರಡನ್ನೂ ಬಳಸಿ ಚಿತ್ರಿಸುತ್ತಿದ್ದರು.
ವ್ಯಂಗ್ಯಚಿತ್ರಕಾರರು ಚಿತ್ರಿಸುತ್ತಿದ್ದ ವಿಡಂಬನಾ ಚಿತ್ರಗಳಲ್ಲಿ ವ್ಯಂಗ್ಯ ಮತ್ತು ಹಾಸ್ಯವು ಹೆಚ್ಚಾಗಿ ಅಸ್ತ್ರವಾಗಿತ್ತು. ಮುಖ್ಯ ಸೆನ್ಸಾರ್‌ಮಂಡಳಿಯ ಕಡಿವಾಣದಿಂದ ತಪ್ಪಿಸಿಕೊಂಡು 1975ರ ಡಿಸೆಂಬರ್ 11 ರಂದು ಪ್ರಕಟವಾದ ಒಂದು ಗಂಭೀರ ಸಂಪಾದಕೀಯದಲ್ಲಿ ಲಕ್ಷ್ಮಣ್ ಅವರ ವ್ಯಂಗ್ಯಚಿತ್ರವೂ ಇತ್ತು. ಅದರಲ್ಲಿ: ಸಾಮಾನ್ಯ ಮನುಷ್ಯನೊಬ್ಬ ಪತ್ರಿಕೆಯನ್ನು ತಲೆಯ ಮೇಲೆ ಹಾಕಿಕೊಂಡು, ತನ್ನ ತಲೆಯನ್ನು ನೆಲದೊಳಗೆ ಹೂತುಹಾಕಿಕೊಂಡು ಮಲಗಿರುವಂತೆ ಬಿಡಿಸಲಾಗಿದೆ. ಜೊತೆಗೆ, ಪತ್ರಿಕೆಯ ಮುಖಪುಟದ ಮುಖ್ಯಾಂಶಗಳ ಅಡಿಯಲ್ಲಿ ವ್ಯಕ್ತಿಯ ತಲೆಯನ್ನು ಮರೆಮಾಡಲಾಗಿದ್ದು, ಆ ವ್ಯಕ್ತಿ ಧರಿಸಿದ್ದ ವಿಶಿಷ್ಟವಾದ ಉಡುಪು (ಚೆಕ್ಡ್ ಕೋಟ್, ಧೋತಿ ಹಾಗೂ ಬೂಟುಗಳು) ಮಾತ್ರ ಗೋಚರಿಸುತ್ತದೆ. ಚಿತ್ರದಲ್ಲಿರುವ ಪತ್ರಿಕೆಯಲ್ಲಿ ‘ಫೈನ್, ಗ್ರೇಟ್, ವೆರಿಗುಡ್, ಪ್ಲೆಂಟಿ, ವೆರಿ ಹ್ಯಾಪಿ, ವೆರಿ ರೋಸಿ, ಮಾರ್ವೆಲ್ಲಸ್’ ಎಂಬ ಪದಗಳನ್ನು ಬರೆಯಲಾಗಿದೆ. ಈ ಕಾರ್ಟೂನ್, ದೇಶದಲ್ಲಿ ಆಗ ಅಸ್ತಿತ್ವದಲ್ಲಿ ಸೆನ್ಸಾರ್ ಮಂಡಳಿಯನ್ನು ವಿಶಿಷ್ಟವಾಗಿ ವಿಡಂಬನಾತ್ಮಕವಾಗಿ ಟೀಕಿಸುವ ಉದ್ದೇಶದಿಂದ ರಚಿತವಾಗಿತ್ತು. ಏಕೆಂದರೆ, ದೇಶದಲ್ಲಿ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಿರುವಾಗಲೂ ಎಲ್ಲವೂ ಚೆನ್ನಾಗಿದೆ ಎನ್ನುವ ಮೂಲಕ ವಾಸ್ತವವನ್ನು ಮರೆಮಾಚುವ ಪ್ರಚಾರಕ ಸುದ್ದಿ, ಲೇಖನಗಳಿಂದ ರೋಸಿಹೋಗಿ, ಹತಾಶೆಗೊಂಡಿರುವ ಸಾಮಾನ್ಯ ಜನರನ್ನು ಅದು ಬಿಂಬಿಸುತ್ತದೆ.

1976ರ ಫೆಬ್ರವರಿ 14ರಂದು ಪ್ರಕಟವಾದ ಮತ್ತೊಂದು ವ್ಯಂಗ್ಯಚಿತ್ರದಲ್ಲಿ: ಕೆಲವು ಭಿಕ್ಷುಕರು ಕಾರನ್ನು ಸಮೀಪಿಸುತ್ತಿರುವುದು ಕಾಣುತ್ತದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ, ಭಿಕ್ಷೆ ಕೇಳುವ ಭಿಕ್ಷುಕನಿಗೆ ಕಾರಿನ ಚಾಲಕ ‘ಹೋಗು, ಮೈ ಡಿಯರ್ – ನೀವು ಪತ್ರಿಕೆಗಳಲ್ಲಿ ಓದಿಲ್ಲವೇ? ನಮ್ಮದು ಬಡತನ ಮುಕ್ತ ದೇಶ’ ಎಂದು ಹೇಳುತ್ತಿರುವಂತೆ ಕಾಣುತ್ತದೆ. ಇದು ಪತ್ರಿಕೆಗಳಲ್ಲಿ ಬಿಂಬಿಸಲಾದ ಚಿತ್ರಣ ಮತ್ತು ಬೀದಿಯಲ್ಲಿನ ವಾಸ್ತವತೆಯ ನಡುವಿನ ವ್ಯತ್ಯಾಸವನ್ನು ವ್ಯಂಗ್ಯಾತ್ಮಕವಾಗಿ ಸ್ಪಷ್ಟವಾಗಿ ತೋರುತ್ತದೆ.
ಆದರ್ಶವನ್ನು ವಾಸ್ತವದೊಂದಿಗೆ ಮತ್ತು ಪಠ್ಯವನ್ನು ಚಿತ್ರದೊಂದಿಗೆ ಚಿತ್ರಿಸುವ-ವಿವರಿಸುವ ತಂತ್ರವು ಖಂಡಿತವಾಗಿಯೂ ಮೂರ್ಖತನವಲ್ಲ. ಹಲವು ಬಾರಿ, ಲಕ್ಷ್ಮಣ್ ಅವರ ವ್ಯಂಗ್ಯಚಿತ್ರಗಳ ಪ್ರಕಟಣೆಗೆ ಮುಖ್ಯ ಸೆನ್ಸಾರ್ ಕಚೇರಿಯು ಅನುಮತಿ ನೀಡಿಲ್ಲ. 1989ರಲ್ಲಿ ಪ್ರಕಟವಾದ ಒಂದು ಲೇಖನದಲ್ಲಿ, ತಮ್ಮ ವ್ಯಂಗ್ಯಚಿತ್ರವನ್ನು ಗಮನಿಸಿದ ಸೆನ್ಸಾರ್ ಅಧಿಕಾರಿಗಳು ಗೊಂದಲಕ್ಕೀಡಾದ ಬಗ್ಗೆ ಕಚೇರಿಯವರೇ ವಿವರಿಸಿದ್ದನ್ನು ಲಕ್ಷ್ಮಣ್ ನೆನಪಿಸಿಕೊಂಡಿದ್ದಾರೆ.
”ನನ್ನ ವ್ಯಂಗ್ಯಚಿತ್ರವನ್ನು ಸೆನ್ಸಾರ್ ಅಧಿಕಾರಿಗಳು ಪರಿಶೀಲಿಸಿದಾಗ, ಅವರೇ ಗೊಂದಲಕ್ಕೀಡಾಗಿದ್ದರು ಎಂಬುದು ನನಗೆ ತಿಳಿಯಿತು. ಅವರು ಒಂದು ವ್ಯಂಗ್ಯಚಿತ್ರವನ್ನು ಅರ್ಥಮಾಡಿಕೊಂಡರೆ, ಅವರ ಬುದ್ಧಿಯನ್ನು ಬಳಸಿದ್ದರೆ ಸರಿಯಿತ್ತು. ಆದರೆ, ಅವರು ಜನರನ್ನು ನಗಿಸುವಂತಹ ಯಾವುದೇ ಅಂಶವಿಲ್ಲ. ಇದು ಸರ್ಕಾರ ವಿರೋಧಿ ಚಿತ್ರವಿರಬಹುದು ಎಂಬ ಆಧಾರದ ಮೇಲೆ ನನ್ನ ವ್ಯಂಗ್ಯಚಿತ್ರವನ್ನು ತಿರಸ್ಕರಿಸಿದ್ದರು” ಎಂದು ಹೇಳಿಕೊಂಡಿದ್ದಾರೆ.
ಅದೇನೇ ಇದ್ದರೂ, ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟವಾಗುವ ವ್ಯಂಗ್ಯಚಿತ್ರಗಳು ಸೆನ್ಸಾರ್ ಮತ್ತು ನಿಷೇಧಗಳ ಮೂಲಕ ಲೇಖನಗಳ ಮೇಲೆ ಸರ್ಕಾರವು ಹೇರುವ ನಿರ್ಬಂಧಕ್ಕೆ ಒಂದು ನಿರಂತರ ಪ್ರತಿ-ನಿರೂಪಣೆಯನ್ನು ಒದಗಿಸುತ್ತವೆ. ಪ್ರತಿ ಬಾರಿಯೂ ವ್ಯಂಗ್ಯಚಿತ್ರವು ಪ್ರಕಟವಾದಾಗ, ಅದು ಓದುಗರ ದೃಷ್ಟಿಕೋನವನ್ನು ವಿಸ್ತರಿಸುತ್ತದೆ; ವಿಡಂಬನಾತ್ಮಕ ವ್ಯಂಗ್ಯಚಿತ್ರಗಳು ಓದುಗರಿಗೆ ಗೆರೆಗಳ ನಡುವೆ ವಾಸ್ತವವನ್ನು ಅರಿಯಲು, ನಿರೂಪಣೆಗಳನ್ನು ಹುಡುಕಲು ತರಬೇಕಿ ನೀಡುತ್ತವೆ. ಇದರಿಂದಾಗಿ ರಚನಾತ್ಮಕ ವಿಮರ್ಶೆ ಮತ್ತು ಪ್ರಶ್ನಿಸುವಿಕೆಯ ಪ್ರಜಾಪ್ರಭುತ್ವದ ಮನೋಭಾವ ಬಲವಾಗುತ್ತದೆ. ಒಂದು ಸಮಾಜದಲ್ಲಿ ವಿಡಂಬನಾತ್ಮಕ ರಾಜಕೀಯ ವ್ಯಂಗ್ಯಚಿತ್ರಕಾರರು ಎಷ್ಟು ಮುಕ್ತವಾಗಿ ಕಾರ್ಯನಿರ್ವಹಿಸುತ್ತಾರೆ ಎಂಬುದು ವಾಸ್ತವವಾಗಿ ಪ್ರಜಾಪ್ರಭುತ್ವದ ಸದೃಢತೆಯನ್ನು ಪ್ರತಿಬಿಂಬಿಸುತ್ತದೆ
ಮೂಲ: ಡೆಕ್ಕನ್ ಹೆರಾಲ್ಡ್
ಕನ್ನಡಕ್ಕೆ: ಸೋಮಶೇಖರ್ ಚಲ್ಯ