ಗಾಜಾದ ಪರಿಸ್ಥಿತಿಯನ್ನು ಸುಧಾರಿಸಿದಿದ್ದರೆ, ಗಾಜಾ ನಿವಾಸಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಸುಧಾರಣೆಗಳನ್ನು ತರದಿದ್ದರೆ ಇಸ್ರೇಲ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ‘ಯುರೋಪಿಯನ್ ಒಕ್ಕೂಟ’ದ (ಇಯು) ವಿದೇಶಾಂಗ ನೀತಿ ಮುಖ್ಯಸ್ಥೆ ಕಾಜಾ ಕಲ್ಲಾಸ್ ಹೇಳಿದ್ದಾರೆ.
ಬ್ರಸೆಲ್ಸ್‌ನಲ್ಲಿ ಇಯು ಸದಸ್ಯ ರಾಷ್ಟ್ರಗಳ ವಿದೇಶಾಂಗ ಮಂತ್ರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದ್ದಾರೆ. “ಗಾಜಾ ಮತ್ತು ಪಶ್ಚಿಮ ಭಾಗದ ಪ್ರದೇಶಗಳ ವಿಚಾರದಲ್ಲಿ ಮಾನವ ಹಕ್ಕುಗಳ ಬದ್ಧತೆಗಳನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಸ್ಪಷ್ಟ” ಎಂದು ಹೇಳಿದ್ದಾರೆ.
“ಪ್ಯಾಲೆಸ್ಟೀನಿಯನ್ನರ ಪರಿಸ್ಥಿತಿ ಸುಧಾರಿಸದಿದ್ದರೆ ಇಸ್ರೇಲ್ ಮೇಲೆ ಹೆಚ್ಚು ಒತ್ತಡ ಹೇರಲು ಇಯು ಮತ್ತಷ್ಟು ಕ್ರಮಗಳನ್ನು ತರುವ ಬಗ್ಗೆ ಚರ್ಚಿಸುತ್ತದೆ. ಈ ಬಗ್ಗೆ ಜುಲೈನಲ್ಲಿ ಚರ್ಚಿಸಲು ಸಭೆ ಸೇರಲಾಗುತ್ತದೆ” ಎಂದು ಹೇಳಿದ್ದಾರೆ.
“ಪ್ರಸ್ತುತ, ಅತ್ಯಂತ ಮುಖ್ಯವಾದ ವಿಷಯವೆಂದರೆ ಗಾಜಾದ ಪರಿಸ್ಥಿತಿಯನ್ನು ಸುಧಾರಿಸುವುದು, ಪ್ಯಾಲೆಸ್ತೀನ್‌ನಲ್ಲಿನ ಜನರ ಜೀವನವನ್ನು ಸುಧಾರಿಸುವುದು ಹಾಗೂ ನಾವು ಪ್ರತಿದಿನ ಗಾಜಾದಲ್ಲಿ ನೋಡುತ್ತಿರುವ ದುಃಖ ಮತ್ತು ಮಾನವ ನಷ್ಟವನ್ನು ನಿಲ್ಲಿಸುವುದು” ಎಂದು ಹೇಳಿದ್ದಾರೆ.
ಸಂಘರ್ಷವನ್ನು ತಡೆಗಟ್ಟಲು ಕೆಲಸ ಮಾಡುವ ‘ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್’ನ ಲಿಸಾ ಮ್ಯೂಸಿಯೋಲ್ ಅವರು, “ಇಯು ಮಾನವ ಹಕ್ಕುಗಳ ವಿಚಾರದಲ್ಲಿ ತನ್ನದೇ ಆದ ಬದ್ದತೆಯನ್ನು ಹೊಂದಿದೆ. ಆದರೆ, ಗಾಜಾ ಮತ್ತು ಪಶ್ಚಿಮ ದಂಡೆಗಳ ವಿಚಾರದಲ್ಲಿ ಇಸ್ರೇಲ್ ಈ ಬದ್ದತೆಗಳನ್ನು ಮೀರಿದೆ. ಬಹಳ ದಿನಗಳ ಹಿಂದೆಯೇ ಬದ್ದತೆಯ ಕೆಂಪು ರೇಖೆಯನ್ನು ದಾಟಿದೆ” ಎಂದು ಹೇಳಿದ್ದಾರೆ.