ಭಾರತೀಯ ತರಕಾರಿ, ಸೊಪ್ಪುಗಳಲ್ಲಿ ಪೌಷ್ಟಿಕಾಂಶ ಹಾಗೂ ಔಷಧೀಯ ಗುಣಗಳಿವೆ ಎಂಬುದು ಸಾರ್ವಕಾಲಿಕ ಸತ್ಯ ಮತ್ತು ವೈಜ್ಞಾನಿಕವಾಗಿ ರುಜುವಾತಾಗಿದೆ. ವೈದ್ಯರೂ ಕೂಡ ಆರೋಗ್ಯದ ದೃಷ್ಟಿಯಿಂದ ಹೆಚ್ಚು ತರಕಾರಿ-ಸೊಪ್ಪುಗಳನ್ನು ಸೇವಿಸಲು ಸಲಹೆ ನೀಡುತ್ತಾರೆ. ಅದರಲ್ಲಿ ಹೆಚ್ಚು ಸೊಪ್ಪಿನ ಪಲ್ಯ ಹಾಗೂ ಹಸಿ ಸೊಪ್ಪು ಸೇವಿಸಿ ಇದರಿಂದ ಜೀರ್ಣಕ್ರಿಯೆ ಹೆಚ್ವಾಗುತ್ತದೆ ಎಂದು ಸಲಹೆ ನೀಡುತ್ತಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಿವಾಸಿಯಾದ ಬಸಯ್ಯ ಹಿರೇಮಠ ಮೂಲತಃ ರೈತ ಕುಟುಂಬದಿಂದ ಬಂದವರಾಗಿದ್ದರೂ ಕೂಡ ಸುಮಾರು 25 ಐಟಿ ಕಂಪೆನಿಗಳಲ್ಲಿ ಉದ್ಯೋಗಿಯಾಗಿ ಕೆಲಸ ಮಾಡಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದರು. ತಮ್ಮದೇ ಒಂದು ಸ್ವಂತ ಖಾಸಗಿ ಕಂಪೆನಿಯನ್ನೂ ಕಟ್ಟಿದ್ದರು. ಆದರೆ, ವಿದೇಶದ ಕಂಪೆನಿಗೆ ಮರ್ಜ್ ಮಾಡಿ. ಕೃಷಿಯ ಕಡೆಗೆ ಆಸಕ್ತಿ ಹೆಚ್ಚಾಗಿ ಕುಷ್ಟಗಿ ತಾಲೂಕಿನ ಗ್ರಾಮದಲ್ಲಿ 10 ವರ್ಷಗಳ ಹಿಂದೆ 30 ಎಕ್ಕರೆ ಜಮೀನನ್ನು ಖರೀದಿ ಮಾಡಿದರು.
ಜಮೀನು ಕೈಹಿಡಿದ ಮೇಲೆ ಯಾವ ರೀತಿ ಕೃಷಿ ಬೇಸಾಯ ಮಾಡಿದರೆ, ಉತ್ತಮ ಲಾಭ ಹಾಗೂ ರೈತ ಪ್ರಗತಿಯತ್ತ ಸಾಗಬಹುದು ಎಂಬುದರ ಕುರಿತು ಬಹಳ ಚಿಂತನೆಗೊಳಗಾಗುತ್ತಾರೆ. ಆಗ ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ಸಾಮಾಜಿಕ ಜಾಲತಾಣವನ್ನು ಕೆದಕಿದಾಗ ನುಗ್ಗೆಸೊಪ್ಪಿನಲ್ಲಿರುವ ಅಪಾರ ಔಷಧಿ ಗುಣದ ಬಗ್ಗೆ ಮಾಹಿತಿ ದೊರಕಿದೆ. ಅಪಾರ ಔಷಧೀಯ ಗುಣ ಹೊಂದಿರುವ ನುಗ್ಗೆಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದು, ನುಗ್ಗೆಸೊಪ್ಪಿನ ಪುಡಿಯನ್ನು ತಯಾರಿಸಿ ವಿದೇಶಗಳಿಗೆ ರಫ್ತು ಮಾಡಬಹುದೆಂದು ತಿಳಿದುಕೊಳ್ಳುತ್ತಾರೆ.

ಇದನ್ನೇ ತೋಟಗಾರಿಕೆ ಕೃಷಿ ಬೇಸಾಯ ಮಾಡೋಣವೆಂದು ನಿರ್ಧರಿಸಿ ಮೊದಲು ಐದು ಎಕರೆ ಜಮೀನಿನಲ್ಲಿ ನುಗ್ಗೆ ಬೆಳೆಯ ಬೇಸಾಯ ಆರಂಭಿಸಿದರು. ಮೊದಮೊದಲು ಬಸಯ್ಯ ಅವರ ಕೃಷಿಯ ಆಸಕ್ತಿ ಹಾಗೂ ನುಗ್ಗೆಸೊಪ್ಪಿನಿಂದ ಔಷಧಿ ಪುಡಿ ತಯಾರಿಸಿ ವಿದೇಶಕ್ಕೆ ರಪ್ತು ಮಾಡುವ ವಿಚಾರವನ್ನು ಕಂಡು ಕೇಳಿದ ಹಲವಾರು ರೈತರು ನಕ್ಕು ಆಡಿಕೊಂಡಿದ್ದರು. ಆದರೆ, ಬಸಯ್ಯ ಅವರು ಛಲ ಬಿಡದೆ ನುರಿತ ತಜ್ಞ-ವಿಜ್ಞಾನಿಗಳಿಂದ ಹಾಗೂ ಸಾಮಾಜಿಕ ಜಾಲತಣದ ಮಾಹಿತಿಯಿಂದ ನುಗ್ಗೆ ಬೇಸಾಯ ಮಾಡುತ್ತಿದ್ದಾರೆ.
ಸಾವಯವ ಬೇಸಾಯ
“ರಾಸಾಯನಿಕ ಗೊಬ್ಬರದಿಂದ ಭೂಮಿಯ ಫಲವತ್ತತೆ ಹಾಗೂ ಅದರಿಂದ ಬೆಳೆದ ಬೆಳೆಗಳ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಕೆಟ್ಟ ಪರಿಣಾಮ ಬೀರುತ್ತದಲ್ಲದೆ ಕೆಲವು ಖಾಯಿಲೆಗಳಿಗೆ ಕಾರಣವಾಗಿವೆ ಎಂದು ವೈದ್ಯರು ವೈಜ್ಞಾನಿಕವಾದ ಮಾಹಿತಿ ಕೊಡುತ್ತಿದ್ದಾರೆ. ಪತ್ರಿಕೆಯಲ್ಲೂ ವೈಜ್ಞಾನಿಕ ಬರಹಗಳನ್ನು ಓದುತ್ತೇವೆ. ಆ ಹಿನ್ನಲೆಯಲ್ಲಿ ರೈತರಿಗೆ ಪ್ರೇರಣೆಯಾಗುವುದಕ್ಕಿಂತ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು, ತಮ್ಮ ತೋಟದಲ್ಲಿಯೇ ಸುಮಾರು 20 ಹಸುಗಳನ್ನು ಸಾಕಿ ಅವುಗಳ ಕೊಟ್ಟಿಗೆ ಗೊಬ್ಬರ, ಗಂಜಲದಿಂದ ಜೀವಾಮೃತ ತಯಾರಿಸಿ ನುಗ್ಗೆ ಗಿಡಗಳಿಗೆ ಡ್ರಿಪ್ ಪೈಪ್ ಮುಖಾಂತರ ಹಾಯಿಸುತ್ತಾರೆ. ಇದರಿಂದ ಸೊಪ್ಪು ಸದೃಢವಾಗಿ ಫಲವತ್ತತೆಯಿಂದ ಬರುತ್ತದೆ. ತಮ್ಮ ತೋಟದಲ್ಲಿಯೇ ಬೆಳೆದ ಮರದ ಉದುರಿದ ಎಲೆಗಳು ಹಾಗೂ ಒಣಗಿದ ತ್ಯಾಜ್ಯ ಶೇಖರಿಸಿ ಎರೆಹುಳುವಿನಿಂದ ತಯಾರಾದ ಗೊಬ್ಬರವನ್ನು ಗಿಡಗಳಿಗೆ ಉಣಿಸುತ್ತಾರೆ. ಇದರಿಂದ ನುಗ್ಗೆಸೊಪ್ಪು ಫಲವತ್ತಾಗಿ ಬರುತ್ತದೆ. ಸೊಪ್ಪಿನಿಂದ ತಯಾರಾದ ಪುಡಿ(ಪೌಡರ್)ಯಲ್ಲಿ ಯಾವುದೇ ರಾಸಾಯನಿಕ ವಿಷಕಾರಿ ಅಂಶ ಇರುವುದಿಲ್ಲ. ಆರೋಗ್ಯಕ್ಕೂ ಇದು ಪೂರಕವಾಗಿರುತ್ತದೆ” ಎನ್ನುತ್ತಾರೆ ಬಸಯ್ಯ.

“ನುಗ್ಗೆಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್ ಆಗಿ ಪರಿವರ್ತಿಸಿದರೆ 2 ವರ್ಷಗಳವರೆಗೆ ದಾಸ್ತಾನು ಮಾಡಬಹುದು. ಆಹಾರ ವಸ್ತುವಾಗಿಯೂ ಬಳಸಬಹುದಾಗಿದೆ ಎಂಬ ಅಂಶ ಗಮನಸೆಳೆದಾಗ ಮೊದಲು 5 ಎಕರೆಯಿಂದ ಆರಂಭಿಸಿ ಈಗ ಸರಿಸುಮಾರು 25 ಎಕರೆ ಪ್ರದೇಶದಲ್ಲಿ ನುಗ್ಗೆ ಸಸಿಗಳನ್ನು ನಾಟಿ ಮಾಡಲಾಗಿದೆ. ನುಗ್ಗೆ ಬೇಸಾಯದಿಂದ ಗಳಿಕೆ ಹಾಗೂ ಲಾಭ ಹೆಚ್ಚಾದಂತೆ ತಮ್ಮ ಹೊಲಕ್ಕೆ ಹೊಂದಿಕೊಂಡಿರುವ ಇತರ ರೈತರ 15 ಎಕರೆಯನ್ನು ಲೀಸ್‌ಗೆ ಪಡೆದು ಅಲ್ಲಿಯೂ ನುಗ್ಗೆ ಸಸಿಗಳನ್ನು ಬೆಳೆಯಲಾಗಿದೆ” ಎನ್ನುತ್ತಾರೆ.
ಪೌಡರ್ ತಯಾರಿಸುವ ವಿಧಾನ
ನುಗ್ಗೆ ಸಸಿಗಳಲ್ಲಿ ಕಾಯಿಯಾಗುವವರೆಗೆ ರೈತ ಕಾಯುವುದಿಲ್ಲ. ಗಿಡಗಳಲ್ಲಿನ ಸೊಪ್ಪನ್ನು ಆಗಾಗ್ಗೆ ಕೊಯ್ಲು ಮಾಡಿ ಎಲೆಗಳ ಬಣ್ಣ ಕೆಡದಂತೆ ಪಾಲಿ ಡ್ರೈಯಿಂಗ್ ವಿಧಾನದ ಮೂಲಕ ಕನಿಷ್ಠ 26 ಡಿಗ್ರಿ, ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಎಲೆಗಳನ್ನು ಒಣಗಿಸಲಾಗುತ್ತದೆ. ನಂತರ ಪೌಡರ್ ಮಾಡಿ ಪ್ಯಾಕ್ ಮಾಡಲಾಗುತ್ತದೆ. ಹಸಿ ಎಲೆಗಳನ್ನು ನೇರವಾಗಿ ಅಡುಗೆಗೆ ಅಥವಾ ಸೇವನೆಗೆ ಬಳಸಲು ಜನರು ಹಿಂದೇಟು ಹಾಕುತ್ತಾರೆ. ನಿಗದಿತ ಉಷ್ಣಾಂಶದಲ್ಲಿ ಎಲೆಗಳನ್ನು ಒಣಗಿಸಿ ಪೌಡರ್ ತಯಾರಿಸಿ ಮಾರಾಟ ಮಾಡಿದರೆ ಬೇಡಿಕೆಯ ಜತೆಗೆ ಬೆಲೆಯೂ ಹೆಚ್ಚು ಎಂಬುದು ರೈತ ಬಸಯ್ಯ ಹಿರೇಮಠ ಅವರ ಅನುಭವದ ಮಾತಾಗಿದೆ. ಹೀಗೆ ಸ್ಥಳೀಯವಾಗಿ ತಯಾರಿಸಿದ ನುಗ್ಗೆ ಪೌಡರ್‌ಗೆ ಜರ್ಮನಿ, ಫ್ರಾನ್ಸ್ ಸೇರಿದಂತೆ 5 ದೇಶಗಳಿಂದ ಬೇಡಿಕೆ ಬರುತ್ತಿರುವುದು ಅವರ ಉತ್ಸಾಹ ಹೆಚ್ಚುಗೊಳಿಸಿದೆ.

ನುಗ್ಗೆ ಎಲೆಯಲ್ಲಿ ಸಾಕಷ್ಟು ಪೋಷಕಾಂಶಗಳು ಇರುವುದು ಪ್ರಯೋಗಗಳಿಂದ ರುಜುವಾತಾಗಿದೆ. ಇದರಲ್ಲಿ ಪೊಟ್ಯಾಷಿಯಂ, ಅಮಿನೋ ಆ್ಯಸಿಡ್, ಕ್ಯಾಲ್ಸಿಯಂ, ಕಬ್ಬಿಣಾಂಶ, ಕ್ಲೋರೊಫೆರಿಲ್ ನಾರಿನಾಂಶ ಇದೆ. ಮಧುಮೇಹ ರೋಗಿಗಳಿಗೆ ಇದು ಸೂಕ್ತ ಆಹಾರ. ಬಿಪಿ ನಿಯಂತ್ರಿಸುವ, ಕ್ಯಾನ್ಸರ್‌ಕಾರಕ ಅಂಶಗಳನ್ನು ನಾಶಮಾಡುವ ಗುಣವನ್ನು ನುಗ್ಗೆಸೊಪ್ಪು ಹೊಂದಿದೆ. ಸೊಪ್ಪನ್ನು ಸಾಂಬರ್‌ಗೂ ಹಾಕಬಹುದಾಗಿದೆ.
ನುಗ್ಗೆಸೊಪ್ಪು ಪೌಡರ್ ತಯಾರಿಕಾ ಘಟಕ
ನುಗ್ಗೆಸೊಪ್ಪಿನಿಂದ ಪೌಡರ್ ತಯಾರಿಸುವ ಘಟಕ ಆರಂಭಿಸುವುದಾಗಿ ಬಸಯ್ಯ ಹಿರೇಮಠ ಹೇಳಿದಾಗ ಆ ಬಗ್ಗೆ ಅಂದಿನ ಆರೋಗ್ಯ ಅಧಿಕಾರಿಗಳು, ಕೃಷಿ, ತೋಟಗಾರಿಕೆ ಹಾಗೂ ಜಿಲ್ಲಾಧಿಕಾರಿಗಳಿಂದ ಅಧ್ಯಯನ ನಡೆಸಲಾಯಿತು. ವೈಜ್ಞಾನಿಕವಾಗಿ ಇದು ಎಷ್ಟು ಸರಿ ಎಂಬುದನ್ನು ನಾನಾ ಆಕರಗಳ ಮೂಲಕ ತಿಳಿದು, ನುಗ್ಗೆ ಬೆಳೆ ಮತ್ತು ಪ್ರೊಸೆಸಿಂಗ್ ಯುನಿಟ್‌ಗೆ ಇಲಾಖೆಯಿಂದ ನೆರವು ಪಡೆದಿರುತ್ತಾರೆ.
ಬಸಯ್ಯ ಹಿರೇಮಠ ಅವರು ಈ ದಿನ.ಕಾಮ್ನೊಂದಿಗೆ ಮಾತನಾಡಿ, “ನಾನು ಎರಡು ಐಟಿ ಕಂಪೆನಿಗಳಲ್ಲಿ ಕೆಲಸ ಮಾಡಿ ಕಂಪೆನಿಗಳ ಕೆಲಸದ ನಿಮಿತ್ತವಾಗಿ ವಿದೇಶಕ್ಕೂ ಹೋಗಿಬಂದಿರುವೆ. ನನ್ನದೇ ಆದ ಒಂದು ಖಾಸಗಿ ಕಂಪೆನಿಯನ್ನೂ ತೆರೆದೆ. ಆದರೆ, ಯಾಕೋ ಆ ಕೆಲಸ ನನಗೆ ತೃಪ್ತಿಕೊಡಲಿಲ್ಲ. ಏನಾದರೂ ಮಾಡಬೇಕು ಅಂತ ಸಾಮಾಜಿಕ ಜಾಲತಾಣ ಜಾಲಾಡಿದಾಗ ನುಗ್ಗೆ ಕೃಷಿಯ ಬಗ್ಗೆ ತಿಳಿದೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಬೇಡಿಕೆಯ ಬಗ್ಗೆ ತಿಳಿದುಕೊಂಡೆ. ಈ ಬೇಸಾಯಕ್ಕೆ ಬೇಕಾದ ಭೂಮಿ ಹಾಗೂ ಬಹುಮುಖ್ಯವಾಗಿ ವಾತಾವರಣದ ಬಗ್ಗೆ ತಿಳಿದು, ಎಲ್ಲಿ ಬೇಸಾಯ ಮಾಡಿದರೆ ಸೂಕ್ತವೆಂದು ತಿಳಿದಾಗ ಕೊಪ್ಪಳ ಜಿಲ್ಲೆಯ ತಾವರಗೇರಾ ಭೂಮಿ ಸೂಕ್ತ ಎನಿಸಿತು.
ಇದನ್ನೂ ಓದಿದ್ದೀರಾ? ರಾಯಚೂರು | ಸರ್ಕಾರಿ ಭೂಮಿ ಮುಸ್ಲಿಂರ ಹೆಸರಿಗೆ ಮಾಡಿದ್ರೆ ಅಧಿಕಾರಿಗಳನ್ನು ನೇಣಿಗೆ ಹಾಕೋದು ಗ್ಯಾರಂಟಿ ಹೇಳಿಕೆ : ಎಸ್‌ಡಿಪಿಐ ಖಂಡನೆ
“ನಮ್ಮ ಜಿಲ್ಲೆಯಲ್ಲಿ ಅಪೌಷ್ಠಿಕತೆ ಹೆಚ್ಚಿತ್ತು. ಆದ್ದರಿಂದ, ನಾನು 20 ವರ್ಷದಿಂದ ಬೇರೆಬೇರೆ ಕೃಷಿಯ ಬಗ್ಗೆ ತಿಳಿದಿಕೊಳ್ಳಲು ಪ್ರಯತ್ನಿಸಿದೆ. ಆಗ ಈ ನುಗ್ಗೆ ಬೇಸಾಯ ಮಾಡಿದರೆ ಉತ್ತಮ ಎನಿಸಿತು. ಈಗ ಹತ್ತು ವರ್ಷಗಳಿಂದಲೂ ಈ ಬೆಳೆ ಲಾಭದಾಯಕವಾಗಿದೆ. ಹಾಗೂ ಇತರೆ ರೈತರೂ ಇಂಥ ಕೃಷಿ ಮಾಡಿದರೆ, ಆರ್ಥಿಕವಾಗಿ ಸಹಾಯಕವಾಗಬಹುದು. ಇದಕ್ಕೆ ಏನಾದರೂ ಮಾಹಿತಿ ಬೇಕಾದರೂ ನನ್ನ ಸಂಪರ್ಕಿಸಬಹುದು. ಅದಕ್ಕೆ ಬೇಕಾದ ಸಲಹೆಗಳನ್ನು ಕೊಡುವೆ” ಎಂದು ತಮ್ಮ ಕೃಷಿಯ ಯಶಸ್ಸಿನ ಕುರಿತು ಮಾತನಾಡಿದರು.
ಕಲ್ಯಾಣ ಕರ್ನಾಟಕದ ರೈತರು ತಮ್ಮ ಜಮೀನುಗಳನ್ನು ದೊಡ್ಡ ದೊಡ್ಡ ಕೈಗಾರಿಕಾ ಕಾರ್ಖಾನೆಗಳಿಗೆ ಮಾರಾಟ ಮಾಡಿ; ಇರುವ ಆಸ್ತಿ ಕಳೆದುಕೊಂಡು, ಪಟ್ಟಣ ಸೇರಿದ್ದಾರೆ. ಅಂಥದರಲ್ಲಿ ಬಸಯ್ಯ ಹಿರೇಮಠ ನುಗ್ಗೆ ಬೇಸಾಯ ಮಾಡಿ ಮಾದರಿ ರೈತರೆನಿಸಿಕೊಂಡಿದ್ದಾರೆ.
ಈ ದಿನ.ಕಾಮ್ ಬಸಯ್ಯ ಹಿರೇಮಠ ಅವರನ್ನು ಸಂದರ್ಶನ ಮಾಡುವಾಗಲೇ ಬೆಂಗಳೂರಿನಿಂದ ರೈತ ಮಹಿಳೆಯರು ಕರೆ ಮಾಡಿ ನುಗ್ಗೆ ಬೇಸಾಯ ಮಾಡುವುದರ ಕುರಿತು ಮಾಹಿತಿ ಕೇಳುತ್ತಿರುವುದು ಗಮನಕ್ಕೆ ಬಂದಿದೆ.
ಹೆಚ್ಚನ ಮಾಹಿತಿಗೆ ರೈತ ಬಸಯ್ಯ ಹಿರೇಮಠ, ಗಂಗಾವತಿ ಕೊಪ್ಪಳ ಜಿಲ್ಲೆ(ಕುಷ್ಠಗಿ ತಾಲೂಕು ತಾವರಗೇರಾ) ಅವರ 9845020948 ಸಂಪರ್ಕ ಸಂಖ್ಯೆಗೆ ಕರೆ ಮಾಡಬಹುದು.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್
Contact number send me sir I am from yadagir kanekal
Contact number send me Kalaburagi