ಶಿವಮೊಗ್ಗ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾ ಸಮಿತಿ ವತಿಯಿಂದ, ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ, ಜಿಲ್ಲಾ ಅಧ್ಯಕ್ಷರಾದ ಜಿಲಾನ್ ಖಾನ್ ಶ್ರೀರಂಗಪಟ್ಟಣದ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಮುಸ್ಲಿಮರಿಗೆ ಸರ್ಕಾರಿ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೆ ಹಾಕುತ್ತೇನೆ ಎಂದು ಬೆದರಿಕೆ ಹಾಕುವ ಮೂಲಕ ತನ್ನೊಳಗಿನ ಮುಸ್ಲಿಂ ದ್ವೇಷ ಹೊರ ಹಾಕಿದ್ದರು, ಮುಸ್ಲಿಮರ ಮತ ಪಡೆದು ಆಯ್ಕೆಯಾದ ರಾಜ್ಯದ ಕಾಂಗ್ರೆಸ್ ನಾಯಕರ ಮುಸ್ಲಿಂ ದ್ವೇಷವು ಸಂಘ ಪರಿವಾರದ ನಾಯಕರ ಮುಸ್ಲಿಂ ದ್ವೇಷವನ್ನು ಓವರ್ ಟೇಕ್ ಮಾಡಲು ಪೈಪೋಟಿ ನಡೆಸಿದಂತಿದೆ. ಆದ್ದರಿಂದ ಈ ಆರೆಸ್ಸೆಸ್ ಮನಸ್ಥಿತಿಯ ಶಾಸಕರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಿ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗ್ರಹಿಸಿದರು.

ಅದೇ ರೀತಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಉಪಾಧ್ಯಕ್ಷ ಸಲೀಂ ಖಾನ್ ಮಾತನಾಡಿ, ಇತ್ತೀಚಿಗೆ ರಾಷ್ಟ್ರೀಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಒಳಗಿನ ಆರ್ ಎಸ್ ಎಸ್ ಮನಸ್ಥಿತಿಯನ್ನು ಹೊರಗಟ್ಟಬೇಕು ಎಂದು ಹೇಳಿಕೆ ನೀಡಿ ಕಾಂಗ್ರೆಸ್ ಪಕ್ಷದೊಳಗೆ ಆರ್ ಎಸ್ ಎಸ್ ನವರು ಇದ್ದಾರೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದರು.
ಇದೀಗ ರಮೇಶ್ ಬಂಡಿಸಿದ್ದೇಗೌಡ ತಮ್ಮಲ್ಲಿನ ಮುಸ್ಲಿಂ ದ್ವೇಷವನ್ನು ಹೊರ ಹಾಕಿದ್ದಾರೆ. ಹಾಗೆ ಜಾತ್ಯಾತೀತ ಎಂಬ ಕಾಂಗ್ರೆಸ್, ಈ ಕೋಮು ದ್ವೇಷಿ ಶಾಸಕನನ್ನು ವಜಾಗೊಳಿಸಬೇಕು, ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟದ ಎಚ್ಚರಿಕೆ ನೀಡಿದರು.
ಕಳೆದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಸಮೇತ ಇಲ್ಲಿನ ಜಾತ್ಯಾತೀತ ವರ್ಗಗಳು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕೋಮು ಧ್ವೇಷದಿಂದ ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್ಗೆ ಬಹುಮತ ನೀಡುವ ಮೂಲಕ ಅಧಿಕಾರಕ್ಕೆ ತಂದರು, ಆದರೆ ಚುನಾವಣಾ ಸಂದರ್ಭದಲ್ಲಿ ಹಲವಾರು ಆಶ್ವಾಸನೆಗಳನ್ನು ನೀಡಿ ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ನಾಯಕರ ಮುಸ್ಲಿಂ ದ್ವೇಷಿ ಮಾತುಗಳು ಬಿಜೆಪಿಯನ್ನೇ ನಾಚಿಸುವಂತಿದೆ. ಆದ್ದರಿಂದ ಮುಂಬರುವ ಚುನಾವಣೆಗಳಲ್ಲಿ ಮುಸ್ಲಿಂ ಸಮುದಾಯ ಜಾತ್ಯಾತೀತ ಲೇಬಲ್ ನ ಕಾಂಗ್ರೆಸ್ ನಾಯಕರ ಮಾತುಗಳಿಗೆ ಮರುಳಾಗದೆ, ಪರ್ಯಾಯ ರಾಜಕೀಯ ಶಕ್ತಿಯಾದ SDPI ಬೆಂಬಲಿಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಜೀಲಾನ್ ಖಾನ್, ಜಿಲ್ಲಾ ಉಪಾಧ್ಯಕ್ಷರಾದ ಸಲೀಂ ಖಾನ್,ಜಿಲ್ಲಾ ಸಮಿತಿ ಸದಸ್ಯರಾದ ಮನ್ಸೂರ್ ಖಾನ್, ಇಸಾಕ್ ಅಹ್ಮದ್, ಅಬ್ದುಲ್ ರಹೀಮ್, ಮತ್ತು ಇತರರು ಉಪಸ್ಥಿತರಿದ್ದರು