ದೇವನಹಳ್ಳಿ ಚಲೋ | ‘ಎಂ.ಬಿ.ಪಾಟೀಲರೇ ನಿಮ್ಮ ಕುರ್ಚಿ ಮುರಿಯುತ್ತೇವೆ’: ಬಡಗಲಪುರ ನಾಗೇಂದ್ರ ಎಚ್ಚರಿಕೆ

Date:

Advertisements

“ಕೈಗಾರಿಕಾ ಸಚಿವ ಎಂ.ಬಿ.ಪಾಟೀಲರೇ ನಿಮ್ಮ ಕುರ್ಚಿ ಮುರಿಯುತ್ತೇವೆ” ಎಂದು ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಗಲಪುರ ನಾಗೇಂದ್ರ ಖಡಕ್ ಎಚ್ಚರಿಕೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಹಳ್ಳಿಗಳ ರೈತರು ತಮ್ಮ ಭೂಮಿ ಉಳಿಸಿಕೊಳ್ಳುವುದಕ್ಕಾಗಿ ನಡೆಸುತ್ತಿರುವ ಚಳವಳಿಗೆ ಬೆಂಬಲ ಸೂಚಿಸಿ ‘ಸಂಯುಕ್ತ ಹೋರಾಟ ಕರ್ನಾಟಕ’ ಇಂದು ಹಮ್ಮಿಕೊಂಡಿದ್ದ ದೇವನಹಳ್ಳಿ ಚಲೋದಲ್ಲಿ ಅವರು ಮಾತನಾಡಿದರು.

1180 ದಿನಗಳ ಹೋರಾಟವನ್ನು ನಡೆಸಿದರೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ 1777 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು ಕೆಐಎಡಿಬಿಗೆ ನೀಡಲು ಹೊರಟಿರುವುದು ಬೃಹತ್ ಹೋರಾಟಕ್ಕೆ ಕಾರಣವಾಯಿತು. ಸರ್ಕಾರದ ವಿರುದ್ಧ ದೇವನಹಳ್ಳಿಯಲ್ಲಿ ನಿಂತು ಹೋರಾಟಗಾರರು ಗುಡುಗಿದರು.

Advertisements

ಈ ವೇಳೆ ಬಡಗಲಪುರ ನಾಗೇಂದ್ರ ಅವರು, “ಭೂಮಿ ತಂಟೆಗೆ ಬಂದರೆ ಯಾವುದೇ ಸರ್ಕಾರಗಳು ಉಳಿಯಲ್ಲ. ಎಂ.ಬಿ. ಪಾಟೀಲರು ತಮ್ಮನ್ನು ರೈತರ ಮಗ ಎಂದು ಕರೆದುಕೊಂಡಿದ್ದಾರೆ. ಎಂ.ಬಿ. ಪಾಟೀಲರೇ ನೀವು ಸರಿಯಾಗಿ ನಿರ್ಧಾರ ಮಾಡದಿದ್ದರೆ ನಿಮ್ಮ ಕುರ್ಚಿಯನ್ನು ಮುರಿಯುತ್ತೇವೆ” ಎಂದು ಹೇಳಿದರು.

ಮುಂದುವರಿದು, “ಕಾರ್ಖಾನೆಗಳು ಬೇಕು ನಿಜ. ಇಲ್ಲಿರುವವರು ಯಾರೂ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ ಯಾವ ರೀತಿಯ ಅಭಿವೃದ್ಧಿ ಬೇಕೆಂದು ನಾವು ನಿರ್ಧರಿಸುತ್ತೇವೆ. ತಲೆಕೆಳಗಾದ, ಜನರ ಬದುಕನ್ನು ಮತ್ತು ಪರಿಸರವನ್ನು ಹಾಳು ಮಾಡುವಂತಹ, ಕೆಲವೇ ಕೆಲವು ವ್ಯಕ್ತಿಗಳನ್ನು ಶ್ರೀಮಂತರನ್ನಾಗಿಸುವ ಯೋಜನೆಗಳಿಗೆ ನಮ್ಮ ವಿರೋಧವಿದೆ” ಎಂದರು.

“ನೂರಕ್ಕೆ 99 ಭಾಗದಷ್ಟು ಇಲ್ಲಿನ ರೈತರು ಸರ್ಕಾರದ ನಿರ್ಧಾರಕ್ಕೆ ಅಸಮ್ಮತಿ ಸೂಚಿಸಿದ್ದಾರೆ. ರೈತರ ನಿಲುವುಗಳನ್ನು ಯಾವುದೇ ನಾಗರಿಕ ಸರ್ಕಾರ ಒಪ್ಪಲೇ ಬೇಕು. ಬಿಜೆಪಿ ಹಾಕಿಕೊಟ್ಟಿರುವ ಹಾದಿಯಲ್ಲೇ ಕಾಂಗ್ರೆಸ್ ನಡೆಯುತ್ತಿದೆ. ಈ ಹಿಂದೆ ಸಿದ್ದರಾಮಯ್ಯನವರು ಹೋರಾಟದ ಸ್ಥಳಕ್ಕೆ ಬಂದು, ಹೋರಾಟಕ್ಕೆ ಬೆಂಬಲ ಕೊಟ್ಟು, ನಾವು ಅಧಿಕಾರಕ್ಕೆ ಬಂದರೆ ಅಧಿಸೂಚನೆ ವಾಪಸ್ ಪಡೆಯುತ್ತೇವೆ ಎಂದಿದ್ದರು. ಆದರೆ ಬಿಜೆಪಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದರೆ, ಕಾಂಗ್ರೆಸ್ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿ ಮರಣ ಶಾಸನ ಬರೆಯಲು ಹೊರಟಿದೆ” ಎಂದು ಟೀಕಿಸಿದರು.

“ಸರ್ಕಾರ ನಮ್ಮ ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ. ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರು ನಿನ್ನೆ ಪತ್ರಿಕಾಗೋಷ್ಠಿ ಮಾಡಿ, ಹೊಸದಾಗಿ ಏನನ್ನೂ ಹೇಳಿಲ್ಲ. ರೈತರಿಗೆ ಪರಿಹಾರ ಬೇಡವಾದರೆ ಶೇ.25ರಷ್ಟು ಡೆವಲಪ್ಡ್‌ ಲ್ಯಾಂಡ್ ಕೊಟ್ಟು, ಬಿಸಿನೆಸ್ ಮಾಡಲು ಅವಕಾಶ ಮಾಡುತ್ತೇವೆ ಎಂದಿದ್ದಾರೆ ಸಚಿವರು. ಯಡಿಯೂರಪ್ಪ ಅವರ ಅವಧಿಯಲ್ಲಿ ಕೈಗಾರಿಕಾ ಉದ್ದೇಶಕ್ಕೆ ರೈತರ ಭೂಮಿ ತೆಗೆದುಕೊಂಡಾಗ ಒಂದು ನಿಯಮವನ್ನು ಮಾಡಿಸಿದ್ದೇವೆ. ಪರಿಹಾರದ ಬದಲು ಭೂಮಿ ಪಡೆಯುವುದಾದರೆ ಶೇ.50ರಷ್ಟು ಅಭಿವೃದ್ಧಿಪಡಿಸಿದ ಜಮೀನನ್ನು ಕೊಡಬೇಕು ಎಂಬುದು ಅಂದೇ ನಿರ್ಧಾರವಾಗಿದೆ. ಆದರೆ ಇವರು ಶೇ.25ಕ್ಕೆ ಇಳಿಸಲು ಹೊರಟಿದ್ದಾರೆ. ರೈತರು ಬಿಸಿನೆಸ್ ಮಾಡಬಹುದಂತೆ. ದೊಡ್ಡ ದೊಡ್ಡ ತಿಮಿಂಗಿಲಗಳ ಎದುರು ಸಣ್ಣ ಮೀನಿನಂತಿರುವ ರೈತರು ಬಿಸಿನೆಸ್ ಮಾಡಲು ಸಾಧ್ಯವೇ? ಆ ಭೂಮಿಯನ್ನು ರಿಯಲ್ ಎಸ್ಟೇಟ್ನವರಿಗೆ ಕೊಡಬೇಕಾಗುತ್ತದೆಯಷ್ಟೇ. ಒಟ್ಟಾರೆಯಾಗಿ ರೈತರ ಕುಲವನ್ನು ನಿರ್ವಂಶ ಮಾಡಲು ಈ ಸರ್ಕಾರ ಹೊರಟಿದೆ” ಎಂದು ಆಕ್ರೋಶ ಹೊರಹಾಕಿದರು.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಒಂದೇ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು. ಇವರ ನೀತಿಗಳು ಒಂದೇ. ನೀವು ಪ್ರತಿಭಟನೆ ನಡೆಸುವಂತಿಲ್ಲ. ಅದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪೊಲೀಸರು ಹೇಳಿದರು. ಕಾನೂನನ್ನು ಉಲ್ಲಂಘಿಸೋಕೆ ನಾವು ಬಂದಿದ್ದೇವೆ. ಕಾನೂನು ಮತ್ತು ನ್ಯಾಯ ಎರಡರಲ್ಲಿ ನ್ಯಾಯವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದಿದ್ದರು ಗಾಂಧೀಜಿ. ನಾವು ನ್ಯಾಯಕ್ಕಾಗಿ ಅರೆಸ್ಟ್ ಆಗುತ್ತೇವೆ ಎಂದು ಸ್ಪಷ್ಟಪಡಿಸಿದರು.

ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿಯನ್ನು ಕೈಗಾರಿಕೆ ಮಾಡಿಕೊಳ್ಳಲಿ. ಕೈಗಾರಿಕೋದ್ಯಮಿಗಳು ಉತ್ತಲ್ಲ, ಬಿತ್ತಲ್ಲ. ಅವರಿಗೆ ಫಲವತ್ತಾದ ಭೂಮಿ ಬೇಕಿಲ್ಲ. ಈ ಭೂಮಿ ಬೇಕಾಗಿರುವುದು ರೈತರಿಗೆ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶವೇ ಏಕೆ ಬೇಕು? ಎಂದು ಪ್ರಶ್ನಿಸಿದರು.

ಊರಲ್ಲಿ ಇರುತ್ತೇವೆ, ಇಲ್ಲ ಜೈಲಲ್ಲಿ ಇರುತ್ತೇವೆ: “ನಾವು ಊರಲ್ಲಿ ಇರುತ್ತೇವೆ, ಇಲ್ಲ ಜೈಲಲ್ಲಿ ಇರುತ್ತೇವೆ. ಸರ್ಕಾರ ಅದೇನು ಮಾಡುತ್ತದೆಯೋ ನೋಡಿಯೇ ಬಿಡೋಣ” ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟದ ಮುಂಚೂಣಿಯ ಮುಖಂಡ ಕಾರಳ್ಳಿ ಶ್ರೀನಿವಾಸ್ ಸರ್ಕಾರಕ್ಕೆ ಸವಾಲೆಸೆದರು.

11 19
ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟದ ಮುಂಚೂಣಿಯ ಮುಖಂಡ ಕಾರಳ್ಳಿ ಶ್ರೀನಿವಾಸ್ ಮಾತನಾಡಿದರು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿ ವ್ಯಾಪ್ತಿಯ 13 ಗ್ರಾಮಗಳ ರೈತರು, ಭೂ ಸ್ವಾಧೀನವನ್ನು ವಿರೋಧಿಸಿ ನಡೆಸುತ್ತಿರುವ 1180 ದಿನಗಳ ಹೋರಾಟವನ್ನು ಬೆಂಬಲಿಸಿ, ‘ಸಂಯುಕ್ತ ಹೋರಾಟ ಕರ್ನಾಟಕ’ದ ನೇತೃತ್ವದಲ್ಲಿ ಇಂದು ನಡೆದ ‘ದೇವನಹಳ್ಳಿ ಚಲೋ’ದಲ್ಲಿ ಅವರು ಮಾತನಾಡಿದರು. ತಮ್ಮ ಹೋರಾಟಕ್ಕೆ ಕೈ ಜೋಡಿಸಿದ ಎಲ್ಲ ಮನಸ್ಸುಗಳನ್ನು ಹೃದಯ ತುಂಬಿ ನೆನೆದರು.

“ದೇವನಹಳ್ಳಿ ತಾಲ್ಲೂಕು ಟಿಪ್ಪು ಸುಲ್ತಾನರ ಜನ್ಮಸ್ಥಳ. ಹಾಗೆಯೇ ಬೆಂಗಳೂರು ಕಟ್ಟಿದ ಕೆಂಪೇಗೌಡರ ಜನ್ಮಸ್ಥಳವೂ ಹೌದು. ಈ ಇಬ್ಬರೂ ಮಹನೀಯರು ರೈತರಿಗಾಗಿ ತಮ್ಮ ಬದುಕನ್ನು ಸವೆಸಿದವರು. ಇಂಥವರು ಹುಟ್ಟಿ ಬೆಳೆದ ಊರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಈ ಸರ್ಕಾರಗಳು ಕಸಿಯುವುದಕ್ಕೆ ಹೊರಟವು. ಇದನ್ನು ವಿರೋಧಿಸಿ ಮೂರೂವರೆ ವರ್ಷಗಳಿಂದ ನಿರಂತರ ಹೋರಾಟವನ್ನು ನಡೆಸಿದವರು ಇಲ್ಲಿನ ಸಾಮಾನ್ಯ ಜನ. ತೋಟದಲ್ಲಿ, ಹೊಲದಲ್ಲಿ ಕೆಲಸ ಮಾಡುವ ರೈತರು ಕಟ್ಟಿದ ಚಳವಳಿ ಇದು. ಎಲ್ಲ ಜಾತಿ ಜನವರ್ಗದ ರೈತರು ಒಟ್ಟಾಗಿ ಕಟ್ಟಿದ ಹೋರಾಟವಿದು. ಈ ನಾಡಿನ ಎಲ್ಲ ಚಳವಳಿಗಾರರ ಬೆಂಬಲ ಇದಕ್ಕೆ ದೊರಕಿತು” ಎಂದರು.

“ನಮ್ಮ ಮೇಲೆ ಕೇಸ್ಗಳು, ಹಲ್ಲೆಗಳಾಗಿವೆ. ಎಲ್ಲರೂ ರೈತರ ಭೂಮಿ ಉಳಿಯಬೇಕು ಎನ್ನುತ್ತಾರೆ. ಆದರೆ ಹಿಂಬದಿಯಿಂದ ಕಸಿಯಲು ಯತ್ನಿಸುತ್ತಾರೆ. ಎಂ.ಬಿ.ಪಾಟೀಲರು ರೈತರನ್ನು ಕಂಡರೆ ಹಾವು ಕಂಡಂತೆ ಆಡುತ್ತಾರೆ. ಅವರು (ಬಿಜೆಪಿಯವರು) ನೇರವಾಗಿ ಚೂರಿ ಹಾಕಿದರು. ಆದರೆ ಇವರು (ಕಾಂಗ್ರೆಸ್‌ನವರು) ಬೆನ್ನ ಹಿಂದಿನಿಂದ ಚೂರಿ ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಈ ಹೋರಾಟವು ಸೋತರೆ ಕರ್ನಾಟಕದ ರೈತ ಚಳವಳಿ ಸೋತಂತೆ. ಈ ನಾಡಿನ ಕಾರ್ಮಿಕ ಚಳವಳಿ, ದಲಿತ ಚಳವಳಿ, ಮಹಿಳಾ ಮತ್ತು ಎಲ್ಲ ದುಡಿಯುವ ವರ್ಗಗಳ ಚಳವಳಿಗಳು ಸೋತಂತೆ” ಎಂದು ಮಾರ್ಮಿಕವಾಗಿ ನುಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X