ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ನಿಲ್ಲಿಸಬೇಕು. ಅಲ್ಲಿನ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಮಣಿಪುರದಲ್ಲಿ ಶಾಂತಿ ನೆಲಸಲು ಹೋರಾಟ ನಡೆಸಿದ ಎನ್‌ಎಫ್‌ಐಡಬ್ಲ್ಯೂ ಮಹಿಳಾ ಸಂಘಟನೆ ಮುಖಂಡರ ಮೇಲೆ ದಾಖಲಾಗಿರುವ ಎಫ್‌ಐಆರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಸಿಪಿಐ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ ಸಿಪಿಐ ಕಾರ್ಯಕರ್ತರು, ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, “ಕಳೆದ ಮೂರು ತಿಂಗಳುಗಳಿಂದ ಮಣಿಪುರದಲ್ಲಿ ಮೀಸಲಾತಿ ಆದೇಶ ಸಂಬಂಧ ಜನಾಂಗೀಯ ಗಲಭೆ ನಡೆಯುತ್ತಿದೆ. ಈ ಹಿಂಸಾಚಾರ ನಿಯಂತ್ರಿಸುವಲ್ಲಿ ಮಣಿಪುರ ರಾಜ್ಯದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನ ಮಂತ್ರಿಗಳು ವಿಫಲರಾಗಿದ್ದಾರೆ. ಅವರಿಬ್ಬರೂ ರಾಜೀನಾಮೆ ನೀಡಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಅವರಗೆರೆ ವಾಸು, ಆವರಗೆರೆ ಚಂದ್ರು, ಆವರಗೆರೆ ಉಮೇಶ್, ಆನಂದ್ ರಾಜ್, ಉಮಾಪತಿ, ರಂಗನಾಥ, ನೇತ್ರಾವತಿ, ಉಮೇಶ್, ಐರಣಿ ಚಂದ್ರು ಇತರರು ಇದ್ದರು.
ಶಹಾಪುರದಲ್ಲೂ ಪ್ರತಿಭಟನೆ
ಮಣಿಪುರದಲ್ಲಿ ನಡಯುತ್ತಿರುವ ಹಿಂಸಾಚಾರವನ್ನು ಖಂಡಿಸಿ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸೆಂಟರ್ ಆಪ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಚನ್ನಪ್ಪ ಆನೆಗುಂದಿ, “ಮಣಿಪುರದಲ್ಲಿ ದೌರ್ಜನ್ಯಕ್ಕೊಳಗಾದ ಕುಕಿ ಮಹಿಳೆಯರಿದ್ದ ಗ್ರಾಮದ ಮೇಲೆ 600 ರಿಂದ 800 ಜನರ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ದಾಳಿ ಮಾಡಿದ್ದು, ಗ್ರಾಮವನ್ನೇ ಸುಟ್ಟುಹಾಕಿದೆ. ಘಟನೆಯಲ್ಲಿ ತಪ್ಪಿಸಿಕೊಂಡು ಇಬ್ಬರು ಸಂತ್ರಸ್ತ ಮಹಿಳೆಯರು ಸೇರಿದಂತೆ ಐವರು ಅರಣ್ಯ ಬಚ್ಚಿಕೊಂಡು ಪ್ರಾಣ ಉಳಿಸಿಕೊಂಡಿದ್ದರು. ಆದರೆ, ಅವರನ್ನು ಪೊಲೀಸರೇ ಕರೆದೊಯ್ದು ಕಟುಕರ ಕೈಗಿತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ಕೃತ್ಯವಾಗಿದೆ” ಎಂದು ಕಿಡಿಕಾರಿದ್ದಾರೆ.
“ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಮೇ 18ರಂದು ದೂರು ದಾಖಲಾಗಿದ್ದರೂ, ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುವವರೆಗೂ ಆರೋಪಿಗಳು ಪೊಲೀಸರು ಬಂಧಿಸಿರಲಿಲ್ಲ. ಸರ್ಕಾರ, ಪೊಲೀಸರು ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿರುವಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಚನ್ನಪ್ಪ ಆನೆಗುಂದಿ, ಜೈಲಾಲ ತೋಟದಮನಿ, ದಾವಲಸಾಬ ನದಾಫ್, ಭೀಮರಾಯ ಬಳಗಾರಿ, ಎಸ್.ಎಂ.ಸಾಗರ, ಭೀಮಣ್ಣ ಟಿಪ್ಪೇದಾರ, ರಂಗಮ್ಮ ಕಟ್ಟಿಮನಿ, ಸಿದ್ದಯ್ಯ ಗುಂಡಹಳ್ಳಿ, ಅಮಲಯ್ಯ ಬೇವಿನಕಡ್ಡಿ, ನಿಂಗಣ್ಣ ಕುರುಕುಂದಾ, ಶಿವು ಇನ್ನಿತರರು ಇದ್ದರು.