ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೈಕ್ರೋಫೋನ್ ಸ್ವಿಚ್ಡ್ ಆಫ್ ಮಾಡಿದ ಕಾರಣ ‘ಇಂಡಿಯಾ’ ಒಕ್ಕೂಟದ ಪಕ್ಷಗಳು ಸರ್ಕಾರದ ನಡೆಯನ್ನು ಖಂಡಿಸಿ ಸಭಾತ್ಯಾಗ ನಡೆಸಿದವು.
ಟಿಎಂಸಿ ರಾಜ್ಯಸಭಾ ಸದಸ್ಯ ಡೆರೆಕ್ ಓಬ್ರಿಯಾನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಮೈಕ್ರೋಫೋನ್ ಸ್ವಿಚ್ಡ್ ಆಫ್ ಮಾಡಲಾಗಿತ್ತು. ಈ ಘಟನೆಗೆ ಪ್ರತಿಭಟನೆ ವ್ಯಕ್ತಪಡಿಸಿ ‘ಇಂಡಿಯಾ’ ಒಕ್ಕೂಟದ ಸದಸ್ಯರು ಸಭಾತ್ಯಾಗ ಮಾಡಿದರು” ಎಂದು ತಿಳಿಸಿದ್ದಾರೆ.
ಮಣಿಪುರದ ಕುರಿತು ಸದನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ಪಡೆಯಲು ‘ಇಂಡಿಯಾ’ ಒಕ್ಕೂಟ ಮಂಡಿಸಿದ ಬೇಡಿಕೆಯನ್ನು ತಡೆಯಲು ಬಿಜೆಪಿ ಸಂಸದರು ಖರ್ಗೆ ಅವರ ಮೈಕ್ರೋಫೋನ್ ಅನ್ನು ಸ್ವಿಚ್ಡ್ ಆಫ್ ಮಾಡಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಮಿಸ್ಟರ್ ಮೋದಿ, ನಮ್ಮನ್ನು ಏನೆಂದು ಕರೆದರೂ ಮಣಿಪುರದಲ್ಲಿ ಶಾಂತಿ ಮರಳಿಸುತ್ತೇವೆ’: ಪ್ರಧಾನಿಗೆ ರಾಹುಲ್ ತಿರುಗೇಟು
ಬಿಜೆಪಿ ಸದಸ್ಯರ ಪ್ರಚೋದನೆಯಿಂದ ಸ್ವತಃ ಸಭಾನಾಯಕರೇ ಪದೇ ಪದೇ ಅಡ್ಡಿಪಡಿಸಿದರು. ಗದ್ದಲದಲ್ಲಿಯೇ ಮಸೂದೆಗಳನ್ನು ಮಂಡಿಸಲಾಯಿತು. ಸರ್ಕಾರದ ನಿರ್ಧಾರವನ್ನು ಖಂಡಿಸಿ ‘ಇಂಡಿಯಾ’ ಸದಸ್ಯರು ಸಭಾತ್ಯಾಗ ಮಾಡಿದರು ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷದ ನಾಯಕರು ಮಣಿಪುರ ಹಿಂಸಾಚಾರದ ಬಗ್ಗೆ ವಿವರವಾದ ಚರ್ಚೆಗೆ ಮತ್ತು ಈಶಾನ್ಯ ರಾಜ್ಯದ ಸಮಸ್ಯೆಯ ಬಗ್ಗೆ ಸದನದಲ್ಲಿ ಪ್ರಧಾನಿ ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.