2026ರಿಂದ ವರ್ಷಕ್ಕೆ ಎರಡು ಬಾರಿ ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆ ನಡೆಯಲಿದೆ. ಆದರೆ ಫೆಬ್ರವರಿಯಲ್ಲಿ ನಡೆಯುವ ಮೊದಲ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎರಡನೇ ಹಂತದ ಪರೀಕ್ಷೆ ಮೇ ತಿಂಗಳಲ್ಲಿ ನಡೆಯಲಿದೆ.
ಮತ್ತೊಮ್ಮೆ ಪರೀಕ್ಷೆ ಬರೆದು ಅಧಿಕ ಅಂಕ ಗಳಿಸಲು ಬಯಸುವ ವಿದ್ಯಾರ್ಥಿಗಳು ಎರಡನೇ ಬಾರಿಗೆ ಪರೀಕ್ಷೆ ಬರೆಯಬಹುದಾಗಿದೆ. ಎರಡೂ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾದರೆ, ಈ ಪೈಕಿ ಉತ್ತಮ ಫಲಿತಾಂಶವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅಧಿಕಾರಿ ಸಂಯಮ್ ಭಾರದ್ವಾಜ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಿಬಿಎಸ್‌ಇ ಫಲಿತಾಂಶ: ಎರಡನೇ ಸ್ಥಾನ ಪಡೆದ ಸಿಲಿಕಾನ್ ಸಿಟಿ
ಹೊಸ ಶಿಕ್ಷಣ ನೀತಿ(ಎನ್‌ಇಪಿ) ಅಡಿಯಲ್ಲಿರುವ ಸಲಹೆಯಂತೆ ವರ್ಷದಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವ ನಿಯಮಕ್ಕೆ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ಒಪ್ಪಿಗೆ ಸೂಚಿಸಿದೆ ಎಂದು ವರದಿಯಾಗಿದೆ.
“ಮೊದಲ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯ. ತಮ್ಮ ಫಲಿತಾಂಶವನ್ನು ಉತ್ತಮಗೊಳಿಸುವ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಸಾಮಾಜಿಕ ವಿಜ್ಞಾ ಮತ್ತು ಭಾಷೆಗಳ ಪೈಕಿ ಮೂರು ವಿಷಯಗಳಲ್ಲಿ ಮರುಪರೀಕ್ಷೆ ಬರೆಯಬಹುದು. ಮೊದಲ ಪರೀಕ್ಷೆಗೆ ಹಾಜರಾಗದಿದ್ದರೆ, ಮರುಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗದು” ಎಂದು ಅಧಿಕಾರಿ ತಿಳಿಸಿದ್ದಾರೆ.
