ಕೊಡಗಿನಲ್ಲಿ ಭಾರೀ ಮಳೆಯಾಗುತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆ ಚಿಕ್ಕಪುಟ್ಟ ಬರೆ ಕುಸಿತ, ರಸ್ತೆ ಸಂಪರ್ಕ ಕಡಿತ, ಮರ ಬಿದ್ದಿರುವ ವರದಿಗಳಾಗಿವೆ. ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ. ಆರಿದ್ರಾ ಮಳೆಯ ಆರ್ಭಟಕ್ಕೆ ಇಡೀ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದುಪ್ಪಟ್ಟು ಮಳೆಯಾಗುತಿದ್ದು, ನೀರಿನ ಹರಿವಿನ ಮಟ್ಟದಲ್ಲಿ ಹೆಚ್ಚಳವಾಗಿದೆ.
ಇಂತಹ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಅವರು ಕೊಡಗಿನ ಕಡೆಗೆ ಮುಖ ಮಾಡದಿರುವುದಕ್ಕೆ ವ್ಯಾಪಕ ಆಕ್ರೋಶ ಕೇಳಿಬಂದಿದೆ. ಭಾರೀ ಮಳೆ ಸುರಿಯುತ್ತಿರುವ ಸಂದರ್ಭದಲ್ಲಿ ಮುಂಜಾಗ್ರತವಾಗಿ ಜಿಲ್ಲಾಡಳಿತ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಬೇಕು. ಆದರೆ, ಇಂದು ಬೆಳಿಗ್ಗೆ ಧಾರಾಕಾರ ಮಳೆಯ ನಡುವೆ ಸರಿ ಸುಮಾರು 8 ಗಂಟೆ ಹೊತ್ತಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದ್ದು, ಪೋಷಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜಿಲ್ಲೆಯ ಐದು ತಾಲೂಕಿನಲ್ಲಿ ಮಳೆ ಬಿರಿಸುಗೊಂಡಿದೆ. ಅದರಲ್ಲೂ, ಕೆಲವೆಡೆ ಪೊನ್ನಂಪೇಟೆ, ಮಡಿಕೇರಿ, ವಿರಾಜಪೇಟೆ ಭಾಗದಲ್ಲಿ ಕಳೆದೊಂದು ದಿನದಿಂದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮರ ಬಿದ್ದ ಕಡೆ, ಚಿಕ್ಕ ಪುಟ್ಟ ಬರೆ ಕುಸಿತದ ಕಡೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಹಾಗೆಯೇ, ಜನರಿಗೂ ಓಡಾಟದ ಸಮಸ್ಯೆ ಎದುರಾಗಿದೆ.

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್ ಎಸ್ ಬೋಸರಾಜು ಅವರು ಜಿಲ್ಲಾಡಳಿತದ ಜತೆಗೆ ಮಾತುಕತೆ ನಡೆಸಿ, ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮಕ್ಕೆ ಸೂಚನೆ ನೀಡಬಹುದಿತ್ತು. ಆದರೆ, ಇತ್ತ ಕಡೆ ತಲೆ ಹಾಕಲಿಲ್ಲ. ಮುಂಗಾರು ಚುರುಕಾಗಿದೆ, ಮಳೆ ವ್ಯಾಪಿಸುತ್ತಿದೆ. ಇಂತಹ ಸಮಯದಲ್ಲಿ ಕೊಡಗಿಗೆ ಕಾಲಿಡದಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
ಮಳೆ ಆರಂಭಕ್ಕೂ ಮುನ್ನ ಕೊಡಗಿಗೆ ಆಗಮಿಸಿ ಸಭೆಯ ಮೇಲೆ ಸಭೆ ನಡೆಸಿ ಹೋದವರು ಮತ್ತೆ ಕೊಡಗಿನ ಕಡೆಗೆ ಬರಲೇ ಇಲ್ಲ. ಪ್ರವಾಸಕ್ಕೆ ಬರುವಂತೆ ಬರುವ ಸಚಿವರಿಗೆ ಕೊಡಗಿನ ಪರಿಚಯವಿಲ್ಲ, ಹಿಡಿತವಿಲ್ಲ. ಭೌಗೋಳಿಕವಾಗಿ ಕೊಡಗಿನ ಪರಿಚಯವಿರದೆ ಹೆಣಗಾಡುವ ಪರಿಸ್ಥಿತಿಯಾಗಿದೆ. ಮಳೆ ಬಂದರೂ ಜಿಲ್ಲಾಡಳಿತಕ್ಕೆ ಕ್ರಮ ಕೈಗೊಳ್ಳಲು ಸೂಚನೆ ನೀಡದೆ ಇವತ್ತು ಮಳೆ ಸುರಿಯುವಾಗ ರಜೆ ಘೋಷಣೆ ಮಾಡುವಂತಾಗಿದೆ.

ಭಾರೀ ಮಳೆಗೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಆತಂಕ ಹೆಚ್ಚಿದ್ದು, ಭಾರೀ ಮಳೆಯಾಗುವ ಸಂಭವವಿರುವುದರಿಂದ ಕಾವೇರಿ ನಿಗಮ ನಿಯಮಿತ ಕಾರ್ಯಪಾಲಕ ಎಂಜಿನಿಯರ್ ಐ ಕೆ ಪುಟ್ಟಸ್ವಾಮಿಯವರು, ಹಾರಂಗಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಗರಿಷ್ಠ ಮಿತಿಯ ಮಟ್ಟ ತಲುಪುವುದರಿಂದ ಕಾವೇರಿ ನದಿಗೆ ಹೆಚ್ಚಿನ ನೀರು ಹರಿಸಲಾಗುವುದು. ನದಿ ಪಾತ್ರದ ಎರಡು ದಂಡೆಯಲ್ಲಿ ವಾಸಿಸುತ್ತಿರುವ ಜನರು ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆಗೆ ಮುನ್ನೆಚ್ಚರಿಕೆ ವಹಿಸಿ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಕೋರಿದ್ದಾರೆ.

ಇತ್ತ, ಮೈಸೂರಿನ ಕೃಷ್ಣರಾಜ ಸಾಗರ ಕಾರ್ಯಪಾಲಕ ಎಂಜಿನಿಯರ್ ಪ್ರವಾಹ ಮುನ್ನೆಚ್ಚರಿಕೆ ಸೂಚನೆ ನೀಡಿ, “ಜೂನ್ 25ಕ್ಕೆ ಜಲಾಶಯದ ಒಳ ಹರಿವು ಹೆಚ್ಚಿದ್ದು, ಕೃಷ್ಣರಾಜ ಜಲಾಶಯದಿಂದ 30,000 ಕ್ಯೂಸೆಕ್‌ನಿಂದ 50,000ಕ್ಯೂಸೆಕ್ ನೀರು ಹೊರ ಬಿಡಲಾಗುವುದು. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಈ ವರ್ಷ ವಾಡಿಕೆಗಿಂತ ಮುಂಚೆಯೇ ಮಳೆಯ ಆಗಮನವಾಗಿರುವುದರಿಂದ ಕಳೆದೆಲ್ಲ ವರ್ಷಗಳಿಗೆ ಹೋಲಿಸಿದರೆ ಈಗಾಗಲೇ ಅತಿ ಹೆಚ್ಚು ಮಳೆಯಾಗಿದೆ” ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ ಮಳೆಯ ಅತಿವೃಷ್ಟಿ ಅತಿರೇಕಕ್ಕೆ ತಲುಪುವಾಗ ಸ್ಥಳೀಯರಲ್ಲದ ಹೊರಗಿನ ಸಚಿವರು ಏನೂ ಮಾಡಲಾರರು. ಕೊಡಗಿನ ಬಹುತೇಕ ಪರಿಸರದ ಅನುಭವ ತಿಳಿದಿರುವುದಿಲ್ಲ. ಇಂತಹ ಪ್ರವಾಸಿ ಮಂತ್ರಿಗಳಿಂದ ಸಮಯಾನುಸಾರ ಕ್ರಮವಹಿಸುವಿಕೆಯ ನಿರೀಕ್ಷೆಗಳು ಅಸಾಧ್ಯವೆಂದು ಜನವಲಯದಲ್ಲಿ ಆಕ್ರೋಶದ ಮಾತುಗಳು ಕೇಳಿಬಂದಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಳೆ ವ್ಯಾಪಕವಾಗಿದ್ದು, ಜಿಲ್ಲಾಡಳಿತ ಮುಂದಿನ ದಿನಗಳ ಮಳೆಗೆ ಮುಂಜಾಗ್ರತವಾಗಿ ಹೇಗೆಲ್ಲ ಕ್ರಮ ವಹಿಸುತ್ತದೆ ಎಂದು ಕಾದು ನೋಡಬೇಕಿದೆ.

ಪೊನ್ನಂಪೇಟೆ, ಮಡಿಕೇರಿ, ವಿರಾಜಪೇಟೆ ತಾಲೂಕಿನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕುಂಜಿಲ ಪೈನರಿ ದರ್ಗಾ ತೆರಳುವ ರಸ್ತೆ ಜಲಾವೃತಗೊಂಡಿದೆ. ಕಾನೂರಿನ ನಿಟ್ಟೂರು ಬಳಿಯ ಲಕ್ಷ್ಮಣ ತೀರ್ಥ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಪ್ರವಾಹದ ಭೀತಿ ಎದುರಾಗಿದೆ. ಇನ್ನು ಕುಶಾಲನಗರ ಭಾಗದಲ್ಲಿ ಮಳೆಯಾಗುತಿದ್ದು, ಒಂದಷ್ಟು ಸಾಧಾರಣ ಮಳೆಯ ನಡುವೆ ಜನರಿಗೆ ತೊಂದರೆ ಎನಿಸುವಂತಿಲ್ಲ. ಜನಜೀವನ ಸಹಜ ಸ್ಥಿತಿಯಲಿದ್ದು, ಹೆಬ್ಬಾಲೆ ಭಾಗದ ಕ್ಲಸ್ಟರ್ ಶಾಲೆಗಳು ಸಹಜವಾಗಿ ತೆರೆದಿವೆ.
ಹೆಗ್ಗಳ, ಬೂದಿಮಾಳ ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದ್ದರೆ, ಬೇಕ್ರಿ ಬಳಿ ಲಘು ಬರೆ ಕುಸಿತ ಉಂಟಾಗಿದೆ. ಬಿರುನಾಣಿಯಿಂದ ಪೋಕಳ ಕಡೆಗೆ ತೆರಳುವ ರಸ್ತೆ ಜಲಾವೃತ್ತವಾಗಿದೆ. ವಿರಾಜಪೇಟೆ ತಾಲೂಕಿನ ಮೂರ್ನಾಡು, ನಾಪೋಕ್ಲು ಭಾಗದಲ್ಲಿ ಭಾರೀ ಮಳೆಗೆ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿದೆ. ಕೊಯ್ತಾರು, ನಾಲ್ಕೇರಿಯಲ್ಲಿ ಗದ್ದೆಗಳು ಜಲಾವೃತವಾದರೆ, ಬಿರುನಾಣಿ ಬಳಿಯ ಬಲ್ಲೆಯಪಟ್ಟ ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಿರುನಾಣಿಯಿಂದ ಹುದುಕೇರಿ ಬಳಿ(ಹೈಸೆಡ್ಲೂರು ಪೂರಾಡ್ ಸೇತುವೆ) ಬರೆ ಕುಸಿತವಾಗಿದೆ. ಪಾರಾಣೆ, ಬಿಲ್ಲಮಾಟ, ಶ್ರೀಮಂಗಲ, ಬಿರುಗಾ, ಕುಂಜಿಲಾ ಭಾಗದಲ್ಲಿ ವ್ಯಾಪಕ ಮಳೆಯಾಗುತಿದ್ದು, ಅಂಗನವಾಡಿ, ಶಾಲಾ, ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಹಾರಂಗಿ ಜಲಾಶಯದ ಗರಿಷ್ಟ ಮಟ್ಟ 2,859 ಅಡಿಯಾಗಿದ್ದು, ಇಂದಿನ(25-06-2025)ನೀರಿನ ಮಟ್ಟ 2851 ಅಡಿಗಳಿಗೆ ತಲುಪಿದೆ. ಕಳೆದ ವರ್ಷ ಇದೇ ದಿನ 2,829 ಅಡಿಗಳಷ್ಟಿತ್ತು. ಇಂದಿನ ಒಳ ಹರಿವು 4,561 ಕ್ಯೂಸೆಕ್ ಇದ್ದರೆ, ಹಿಂದಿನ ವರ್ಷ ಇದೇ ದಿನಕ್ಕೆ 514 ಕ್ಯೂಸೆಕ್ ಹರಿವಿತ್ತು. ಇಂದಿನ ಹೊರ ಹರಿವಿನ ಪ್ರಮಾಣ 5000 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ಸಮಯಕ್ಕೆ 200 ಕ್ಯೂಸೆಕ್ ನೀರಿನ ಹೊರ ಹರಿವಿತ್ತು. ಒಟ್ಟಾರೆ ಹಾರಂಗಿ ಜಲಾನಯನ ಪ್ರದೇಶದಲ್ಲಿ ಇವತ್ತಿಗೆ 6.20 ಮಿಮೀ ಮಳೆ ದಾಖಲಾದರೆ, ಕಳೆದ ವರ್ಷ ಇದೇ ದಿನಕ್ಕೆ 2.60 ಮಿಮೀ ಮಳೆ ದಾಖಲಾಗಿತ್ತು.
ಒಟ್ಟಾರೆ ಇಡೀ ಕೊಡಗು ಜಿಲ್ಲೆಯಲ್ಲಿ 24 ಗಂಟೆ ಅವಧಿಯಲ್ಲಿ ಸರಾಸರಿ 60.92 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನಕ್ಕೆ 22.50 ಮಿಮೀ ದಾಖಲಾಗಿತ್ತು. 2025ರ ಜನವರಿಯಿಂದ ಈವರೆಗೆ 1234.91 ಮಿಮೀ ಮಳೆಯಾದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 582 ಮಿಮೀ ಮಳೆಯಾಗಿತ್ತು. ಹಾಗೆ ನೋಡಿದರೆ ಈ ವರ್ಷ ಮುಂಚಿತವಾಗಿಯೇ ದುಪ್ಪಟ್ಟು ಮಳೆಯಾಗಿದೆ.

ಕುಶಾಲನಗರ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 16.90 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನದಲ್ಲಿ 4 ಮಿಮೀ ಮಾತ್ರ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 721.74 ಮಿಮೀ ಮಳೆಯಾಗಿದೆ. ಹಿಂದಿನ ವರ್ಷ 501 ಮಿಮೀ ಮಳೆಯಾಗಿತ್ತು.
ಸೋಮವಾರ ಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 107.5 ಮಿಮೀ, ಹಿಂದಿನ ವರ್ಷ ಇದೇ ದಿನಕ್ಕೆ 18.55 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 1251.04 ಮಿಮೀ ಮಳೆಯಾಗಿದೆ. ಹಿಂದಿನ ವರ್ಷ 472.01 ಮಿಮೀ ಮಳೆಯಾಗಿತ್ತು.

ಪೊನ್ನಂಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ 73.52 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನಕ್ಕೆ 22.75 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 1171.28 ಮಿಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನಕ್ಕೆ 566.49 ಮಿಮೀ ಮಳೆಯಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 57.18 ಮಿಮೀ ಆಗಿದೆ. ಹಿಂದಿನ ವರ್ಷ ಇದೇ ದಿನಕ್ಕೆ 22.95 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 1800.20 ಮಿಮೀ ಮಳೆಯಾಗಿದೆ. ಕಳೆದ ವರ್ಷ 833.65 ಮಿಮೀ ಮಳೆಯಾಗಿತ್ತು.

ವಿರಾಜಪೇಟೆ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 49.95 ಮಿಲಿ ಮೀಟರ್. ಹಿಂದಿನ ವರ್ಷ 44.25 ಮಿಮೀ ಮಳೆಯಾಗಿತ್ತು. ಜನವರಿಯಿಂದ ಈವರೆಗೆ 1230 ಮಿಮೀ ಮಳೆಯಾಗಿದೆ. ಕಳೆದ ವರ್ಷ 537.75 ಮಿಮೀ ಮಳೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಬಿಸಿಯೂಟ ಅಡುಗೆ ಸಿಬ್ಬಂದಿ ದಲಿತೆ; ಶಾಲೆಗೆ ಮಕ್ಕಳನ್ನು ಕಳಿಸದ ಪೋಷಕರು

ಹೋಬಳಿವಾರು ನೋಡುವುದಾದರೆ ಕೊಡ್ಲಿಪೇಟೆ 73 ಮಿಮೀ, ಸುಂಠಿಕೊಪ್ಪ 25 ಮಿಮೀ, ಕುಶಾಲನಗರ 8.80 ಮಿಮೀ, ಶಾಂತಳ್ಳಿ 160 ಮಿಮೀ, ಸೋಮವಾರಪೇಟೆ 83.20 ಮಿಮೀ, ಶನಿವಾರಸಂತೆ 112 ಮಿಮೀ, ಮಡಿಕೇರಿ ಕಸಬಾ 22 ಮಿಮೀ, ನಾಪೋಕ್ಲು 71.60 ಮಿಮೀ, ಸಂಪಾಜೆ 47.50 ಮಿಮೀ, ಭಾಗಮಂಡಲ 87.60 ಮಿಮೀ, ವಿರಾಜಪೇಟೆ 56.40 ಮಿಮೀ,
ಅಮ್ಮತ್ತಿ 43.50 ಮಿಮೀ, ಹುದಿಕೇರಿ 89 ಮಿಮೀ, ಶ್ರೀಮಂಗಲ 146 ಮಿಮೀ ಮಳೆ ದಾಖಲಾಗಿರುತ್ತದೆ.