ಅಕ್ರಮವಾಗಿ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿರುವ ಸಿಂದಗಿ ತಾಲೂಕಿನ ಬೊರಾಗಿ ಗ್ರಾಮದ ಭೀಮಣ್ಣ ಕೋಟಾರಗಸ್ತಿ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿ ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಡಿ ಕೆ ದ್ಯಾವಪ್ಪ ಆಗ್ರಹಿಸಿದರು.
ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿ, “ಅಸ್ಕಿ ಗ್ರಾಮದಲ್ಲಿ ಹೆಚ್ಚಿನ ಜನರು ಕೊಲಿ ಕಾರ್ಮಿಕರು, ಬಡವರು ಹಾಗೂ ಒಕ್ಕಲಿಗರು ಇದ್ದಾರೆ. ಇದನ್ನೇ ದುರುಪಯೋಗ ಮಾಡಿಕೊಂಡು ಭೀಮಣ್ಣ ಕೋಟಾರಗಸ್ತಿ 2017-18ರಲ್ಲಿ ಬಡ ಜನರಿಗೆ ಮನೆ ಕೊಡುಸುತ್ತೇನೆಂದು ನಂಬಿಸಿ ಅವರ ಆಧಾರ್ ಕಾರ್ಡ್ ಪಡೆದು ತಿದ್ದುಪಡಿ ಮಾಡಿದ್ದಾನೆ” ಎಂದು ಆರೋಪಿಸಿದರು.
ಇದನ್ನೂ ಓದಿದ್ದೀರಾ? ಶ್ರೀರಂಗಪಟ್ಟಣ | ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಏರಿಕೆ; ಪ್ರವಾಸಿಗರ ಪ್ರವೇಶ, ನದಿ ದಂಡೆಯ ಆಚರಣೆಗೆ ನಿಷೇಧ
“ಅವರ ಹೆಬ್ಬಟ್ಟಿನ ಗುರುತು ಪಡೆದು 50ರಿಂದ 100 ಜನರಿಗೆ ಮೋಸ ಮಾಡಿದ್ದಾನೆ. ಪ್ರತಿ ವ್ಯಕ್ತಿಯಿಂದ ತಲಾ ₹30 ರಿಂದ 50,000 ಪಡೆದಿದ್ದಾನೆ. ಇಲ್ಲಿಯವರೆಗೂ ಮನೆಗಳನ್ನು ಕೊಡದೆ ಮೋಸ ಮಾಡಿದ್ದಾನೆ. ಗ್ರಾಮಸ್ಥರಿಗೆ ಮೊದಲಿನಂತೆ ದಾಖಲೆ ಪತ್ರಗಳನ್ನು ತಿದ್ದುಪಡಿ ಮಾಡಿಸಬೇಕು. ಮೋಸ ಮಾಡಿದ ಆ ವ್ಯಕ್ತಿಯನ್ನು ಕೂಡಲೇ ಬಂದಿಸಬೇಕು” ಎಂದು ಒತ್ತಾಯಿಸಿದರು.
ಈ ವೇಳೆ ಕರವೇ ಜಿಲ್ಲಾ ಉಪಾಧ್ಯಕ್ಷ ಜೈಭೀಮ್ ಮುತ್ತಗಿ, ಸಿಂದಗಿಯ ಸಾಮಾಜಿಕ ಹೋರಾಟಗಾರ ಹರ್ಷವರ್ಧನ ಪೂಜಾರಿ, ಅನಿಲ್ ಗೊಟಖಂಡಕಿ, ಈರಣ್ಣ ಕೂಚಬಾಳ, ದೇವಪ್ಪ ಪೂಜಾರಿ ಹಾಗೂ ಸಂತ್ರಸ್ತ ಮಹಿಳೆಯರು ಇದ್ದರು.