ಮಾವು ಬೆಳೆಗಾರರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ, ಮಾರುಕಟ್ಟೆ ಮಧ್ಯಪ್ರವೇಶ ದರ ಪ್ರತಿ ಕ್ವಿಂಟಾಲ್ಗೆ 1616 ರೂ. ನಿಗದಿಪಡಿಸಿದ್ದು, ಪ್ರತಿ ರೈತನಿಂದ ಗರಿಷ್ಠ 100 ಕ್ವಿಂಟಾಲ್ ಮಾವು ಖರೀದಿಗೆ ಆದೇಶ ಹೊರಡಿಸಲಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ಒಂದು ತಿಂಗಳ ಅವಧಿಯವರೆಗೆ ಈ ಮಾರುಕಟ್ಟೆ ಮಧ್ಯಪ್ರವೇಶ ದರ ಯೋಜನೆ ಜಾರಿಯಲ್ಲಿರುತ್ತದೆ ಎಂದು ಪ್ರಕಟಿಸಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಿನ್ನೆ ಪತ್ರ ಬರೆದಿದ್ದಾರೆ. ನಾವು ಅವರಿಗಿಂತ ಮೊದಲೇ ಪತ್ರ ಬರೆದಿದ್ದೆವು. ಕಳೆದ ಶನಿವಾರ ವಿಡಿಯೋ ಸಂವಾದದ ಮೂಲಕ ಮಾವು ಬೆಳೆಗಾರರ ಪರಿಸ್ಥಿತಿ ಮನವರಿಗೆ ಮಾಡಿದ್ದೆ. ಆದರೂ, ಕುಮಾರಸ್ವಾಮಿ ಅವರಿಗೂ ಧನ್ಯವಾದ. ಇದೇ ರೀತಿ ರಾಜ್ಯದ ಎಲ್ಲ ಸಂಕಷ್ಟಗಳಿಗೂ ಅವರು ಸ್ಪಂದಿಸಲಿ ಎಂದು ಚಲುವರಾಯಸ್ವಾಮಿ ಹೇಳಿದರು.
ಈ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ಪ್ರಸ್ತುತ ತೋತಾಪುರ ಮಾವಿನ ತಳಿ ಮಾರುಕಟ್ಟೆಯಲ್ಲಿ 500 ರಿಂದ 600 ರೂ. ಗಳಿಗೆ ಮಾರಾಟ ಆಗುತ್ತಿರುವುದರಿಂದ ಕೇಂದ್ರ ಸರ್ಕಾರ ಗರಿಷ್ಠ 1,616 ರೂ. ನಿಗದಿಪಡಿಸಿದ್ದು, ಮಾರುಕಟ್ಟೆ ಮಧ್ಯಪ್ರವೇಶ ದರ ಮತ್ತು ಪ್ರಚಲಿತ ಮಾರುಕಟ್ಟೆ ಧಾರಣೆಯು ಶೇ.25 ರ ಮಿತಿಗೊಳಪಟ್ಟಿರುವಂತೆ ನಿಯಮವಿದೆ. ಅಂದರೆ 1,212 ರೂ. ರಿಂದ 1,616 ರೂ.ವರೆಗಿನ ವ್ಯತ್ಯಾಸದ ಮೊತ್ತ ಮಾತ್ರ ಯೋಜನೆಯಡಿಯಲ್ಲಿ ರೈತರಿಗೆ ಪಾವತಿಸಬೇಕಾಗಿರುತ್ತದೆ. ಯೋಜನೆ ಅನುಷ್ಠಾನಕ್ಕಾಗಿ ಒಟ್ಟಾರೆ 2.50 ಲಕ್ಷ ಮೆಟ್ರಿಕ್ ಟನ್ಗೆ ತಗಲುವ ವೆಚ್ಚ 101 ಕೋಟಿ ರೂ. ಆಗಲಿದೆ. ಅದರಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ 50:50 ರ ಅನುಪಾತದಲ್ಲಿ ವೆಚ್ಚ ಭರಿಸಬೇಕಾಗಿರುತ್ತದೆ ಎಂದು ಹೇಳಿದರು.
ಮಾವು ಕರ್ನಾಟಕದ ಪ್ರಮುಖ ತೋಟಗಾರಿಕಾ ಬೆಳೆಗಳಲ್ಲೊಂದಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಪ್ರಮುಖ ಮಾವು ಬೆಳೆ ಪ್ರದೇಶಗಳಾಗಿವೆ. 2025-26ನೇ ಸಾಲಿನಲ್ಲಿ 1.39 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಇಂದಿರಾ ಕಾಲದ ಸತ್ಯ, ಮೋದಿ ಕಾಲಕ್ಕೆ ಮಿಥ್ಯೆಯಾದದ್ದು ಹೇಗೆ?
ಈ ಬಾರಿ ಅಂದಾಜು 8 ರಿಂದ 10 ಲಕ್ಷ ಟನ್ ಮಾವು ಉತ್ಪಾದನೆಯಾಗಿದೆ. ಕರ್ನಾಟಕದಲ್ಲಿ ಮಾವಿನ ಕೊಯ್ಲು ಮೇ ನಿಂದ ಜುಲೈ ವರೆಗೆ ನಡೆಯುತ್ತದೆ. ಈ ಅವಧಿಯಲ್ಲಿ ಮಾರುಕಟ್ಟೆ ಬೆಲೆಗಳಲ್ಲಿ ಗಮನಾರ್ಹ ಏರಿಳಿತಗಳನ್ನು ಗಮನಿಸಲಾಗಿದೆ. ಮೇ 2025 ರಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ರಾಮನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಮಾವಿನ ಹಣ್ಣಿನ ಬೆಲೆ ಕ್ವಿಂಟಾಲ್ಗೆ 1,200 ರಿಂದ 2,500 ರೂ. ರವರೆಗೆ ಇತ್ತು. ಶ್ರೀನಿವಾಸಪುರ ಮಾರುಕಟ್ಟೆಯಲ್ಲಿ ತೋತಾಪುರಿ ವೆರೈಟಿ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್ಗೆ 450-550 ರೂ.ಗೆ ಕುಸಿದಿದೆ ಎಂದು ಮಾಹಿತಿ ನೀಡಿದರು.
ಈ ವ್ಯತ್ಯಾಸ ದರ ಪಾವತಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶೇ.50:50 ಅನುಪಾತದಲ್ಲಿ ಭರಿಸುತ್ತಿವೆ. ಪ್ರತಿ ಎಕರೆಗೆ 20 ಕ್ವಿಂಟಾಲ್ನಂತೆ ಗರಿಷ್ಟ 100 ಕ್ವಿಂಟಾಲ್ ವರೆಗೆ ಪ್ರತಿ ರೈತರಿಂದ ಮಾವು ಖರೀದಿಸುವಂತೆ ಆದೇಶ ಹೊರಡಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ, ನಿರಂತರ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಮಾವು ಬೆಳೆಗಾರರ ನೆರವಿಗೆ ರಾಜ್ಯ ಸರ್ಕಾರವಿದೆ. ಜೂನ್ 11 ಹಾಗೂ 13 ರಂದು ಕೇಂದ್ರ ಸರ್ಕಾರಕ್ಕೆ ಎಂಐಎಸ್ ಯೋಜನೆಯಡಿ ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಕಳೆದ ಶನಿವಾರ ವಿಡಿಯೋ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕರ್ನಾಟಕದಲ್ಲಿನ ಮಾವು ಬೆಳೆಗಾರರ ಪರಿಸ್ಥಿತಿ ಮನವರಿಕೆ ಮಾಡಲಾಗಿತ್ತು ಎಂದು ತಿಳಿಸಿದರು.
ರಾಜ್ಯದಲ್ಲಿ ಮಾವಿನ ಬೆಲೆ ಕುಸಿತದ ಹಿನ್ನೆಲೆ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸಕಾರಾತ್ಮಕ ಸ್ಪಂದನೆ ನೀಡಿದೆ. ಇದ್ದಕಾಗಿ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ಅವರು ತಿಳಿಸಿದರು.
ಪಿಡಿಪಿಎಸ್ ಯೋಜನೆ ಅನುಷ್ಠಾನಕ್ಕೆ ಸಮ್ಮತಿ
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡು ಪ್ರತಿ ಕೆ.ಜಿ. ಮಾವುಗೆ ಎರಡೆರೆಡು ರೂ. ಗಳಂತೆ ಒಟ್ಟು 4 ರೂ ಪಾವತಿಸಿ ಮಾರುಕಟ್ಟೆ ಚೈತನ್ಯಕ್ಕೆ ಕ್ರಮಕೈಗೊಳ್ಳಲು ಸಿದ್ದತೆ ನಡೆಸಿವೆ. 2025-26ನೇ ಸಾಲಿನ ಮಾರುಕಟ್ಟೆ ಋತುವಿನಲ್ಲಿ ಮಾವಿಗೆ ಪಿಡಿಪಿಎಸ್ ಯೋಜನೆ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಕೃಷಿ ಸಚಿವರು ಸಹ ಸಮ್ಮತಿ ನೀಡಿದ್ದಾರೆ. 2.5 ಲಕ್ಷ ಮೆಟ್ರಿಕ್ ಟನ್ ಮಾವು ಖರೀದಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ನಿನ್ನೆ ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿದೆ ಎಂದು ಸಚಿವರು ಹೇಳಿದರು.