ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದ ಚನ್ನರಾಯಪಟ್ಟಣ ರೈತರ 1180 ದಿನಗಳ ಹೋರಾಟಕ್ಕೆ ಅನ್ನ ತಿನ್ನುವವರೆಲ್ಲರೂ ಬೆಂಬಲಿಸುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಕುರ್ಚಿ ಮೇಲೆ ಕೂತ ಅಧಿಕಾರಸ್ಥರು, ಅನ್ನ ತಿನ್ನುವವರೇ ಆದರೆ, ಭೂಸ್ವಾಧೀನ ಕೈಬಿಡಲಿ.
ನಮ್ಮ ಗ್ರಾಮೀಣ ಭಾಗದಲ್ಲಿ ಬೇಸಾಯ ಎಂದಾಕ್ಷಣ- ನೀ ಸಾಯ ನಾ ಸಾಯ, ಮನೆ ಮಂದಿಯೆಲ್ಲ ಸಾಯ ಎನ್ನುವ ಮಾತಿದೆ. ಬೇಸಾಯ ಎಂದರೆ ನೆಲ ನಂಬಿ ಗೇಯುವವರು, ಮನೆಮಂದಿ ವರ್ಷವಿಡೀ ಬೆವರು ಸುರಿಸಿ ದುಡಿಯುವವರು. ತಮ್ಮ ಹೊಟ್ಟೆ ತುಂಬುತ್ತದೋ ಇಲ್ಲವೋ, ಮತ್ತೊಬ್ಬರ ಹೊಟ್ಟೆ ತುಂಬಿಸಲು ತವಕಿಸುವವರು.
ಇಂತಹ ರೈತರ ಬೆಂಬಲಕ್ಕೆ ನಿಂತು, ಅವರ ಬದುಕನ್ನು ಹಸನು ಮಾಡಬೇಕಾದ ಸರ್ಕಾರ, ರೈತರ ಬದುಕಿಗೆ ಬೆಂಕಿ ಹಾಕಲು ಹೊರಟಿದೆ. ಕೃಷಿ ಯೋಗ್ಯ ಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗಾಗಿ ಬಳಸುವಂತಿಲ್ಲ ಎಂಬುದನ್ನು ಸರ್ಕಾರವೇ ಕಾನೂನು ಮಾಡಿದೆ. ಆದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ 1,777 ಎಕರೆ ಫಲವತ್ತಾದ ಕೃಷಿಭೂಮಿಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.
ಭೂಮಿ ಕಳೆದುಕೊಳ್ಳುವವರಲ್ಲಿ ಹೆಚ್ಚಿನವರು ಅತಿಸಣ್ಣ ಮತ್ತು ಸಣ್ಣ ರೈತರು ಹಾಗೂ ಬಗರ್ ಹುಕುಂ ಸಾಗುವಳಿದಾರರು. ಅವರು ಹಣ್ಣು, ತರಕಾರಿ, ಸೊಪ್ಪು, ದವಸ-ಧಾನ್ಯ ಬೆಳೆದು ಬೆಂಗಳೂರಿಗೆ ನೀಡುತ್ತಿದ್ದಾರೆ. ಆದರೂ, ಅದನ್ನು ಬಂಜರು ಭೂಮಿ ಎಂದು ದಾಖಲೆಗಳಲ್ಲಿ ನಮೂದಿಸಿ, ಭೂ ಒಡೆಯರಾದ ರೈತರೊಂದಿಗೆ ಚರ್ಚಿಸದೆ ಭೂಸ್ವಾಧೀನಕ್ಕೆ ನೋಟಿಸ್ ನೀಡಲಾಗಿದೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಇಂದಿರಾ ಕಾಲದ ಸತ್ಯ, ಮೋದಿ ಕಾಲಕ್ಕೆ ಮಿಥ್ಯೆಯಾದದ್ದು ಹೇಗೆ?
ಅಳಿದುಳಿದ ಈ ಸಮೃದ್ಧ ಭೂಮಿಗೂ ಅಭಿವೃದ್ಧಿ ನೆಪದಲ್ಲಿ ಕಾರ್ಪೊರೇಟ್ ಕುಳಗಳು ಕಣ್ಣು ಹಾಕಿದಾಗ ರೈತರು ತಿರುಗಿ ಬಿದ್ದಿದ್ದಾರೆ. ಅವರ ಬೆನ್ನಿಗೆ ಇಡೀ ತಾಲೂಕಿನ ರೈತರು ಮತ್ತು ಜನಸಾಮಾನ್ಯರು ನಿಂತಿದ್ದಾರೆ. ಅಧಿಕಾರಿಗಳಿಗೆ, ಅಧಿಕಾರಸ್ಥ ರಾಜಕಾರಣಿಗಳಿಗೆ ಮನವಿ ಮೇಲೆ ಮನವಿ ಮಾಡಿಕೊಂಡಿದ್ದಾರೆ. ಹಲವು ಸಲ ಕಾಲ್ನಡಿಗೆ ಜಾಥಾಗಳು, ರಸ್ತೆ ತಡೆ, ಪ್ರತಿಭಟನಾ ಸಮಾವೇಶಗಳು ಜರುಗಿವೆ. ಆ ಪ್ರತಿಭಟನೆಗಳಿಗೆ ನಾಡಿನ ರೈತ ನಾಯಕರು, ಸಂಘಟಕರು, ಪತ್ರಕರ್ತರು, ಸಾಹಿತಿಗಳು, ಕಲಾವಿದರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಭೂಸ್ವಾಧೀನ ವಿರೋಧಿಸಿ ಚನ್ನರಾಯಪಟ್ಟಣದ ರೈತರು, ‘ಪ್ರಾಣ ಬೇಕಾದರೆ ಬಿಟ್ಟೇವು, ಭೂಮಿ ಬಿಡುವುದಿಲ್ಲ’ವೆಂದು ಸಾವಿರಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸಿದವರೆಲ್ಲ ಸೇರಿ ಬುಧವಾರ ‘ದೇವನಹಳ್ಳಿ ಚಲೋ’ ನಡೆಸಿದ್ದಾರೆ. ಅಹೋರಾತ್ರಿ ಧರಣಿಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ವೇದಿಕೆಯಿಂದಲೇ ವಶಕ್ಕೆ ಪಡೆದಿದ್ದಾರೆ. ಬಂಧಿಸಿ, ಬಯಲಲ್ಲಿ, ಚಳಿಯಲ್ಲಿ ರಾತ್ರಿ ಕೊಳೆಹಾಕಿದ್ದಾರೆ.
ಸರ್ಕಾರ ಬಂಧಿಸಲಿ ನಾವು ಜೈಲಿನಿಂದಲೇ ಹೋರಾಟ ಮುಂದುವರೆಸೋಣ. ಯಾರೂ ಜಾಮೀನು ತೆಗೆದುಕೊಳ್ಳುವುದು ಬೇಡ ಎಂದು ಹೋರಾಟಗಾರರು ಒಮ್ಮತದ ನಿರ್ಣಯ ಕೈಗೊಂಡಿದ್ದಾರೆ. ಅಷ್ಟೇ ಅಲ್ಲ, ಪ್ರತಿಭಟನೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದರೆ, ಆ ಕಾನೂನು ಮುರಿಯಲೆಂದೇ ನಾವು ಇಲ್ಲಿ ಬಂದಿದ್ದೇವೆ ಎಂದು ಸರ್ಕಾರಕ್ಕೆ ಸವಾಲೊಡ್ಡಿದ್ದಾರೆ.
ಆದರೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ‘ಇಂದಿನ ದಿನಗಳಲ್ಲಿ ಕೈಗಾರಿಕೆಗಳು ಕೂಡ ಬರಬೇಕು. ಅದರಿಂದ, ರೈತರಿಗೂ ಅನುಕೂಲ ಆಗಬೇಕು. ಉದ್ಯೋಗ ಸೃಷ್ಟಿಯಾಗುತ್ತದೆ. ರೈತರ ಹೋರಾಟಕ್ಕೆ ಓಗೊಟ್ಟು ಮೂರು ಹಳ್ಳಿಗಳ 500 ಎಕರೆಗಳನ್ನು ಭೂಸ್ವಾಧೀನದಿಂದ ಕೈಬಿಟ್ಟಿದ್ದೇವೆ’ ಎಂದು ರೈತರ ಮನವೊಲಿಸಲು ನೋಡಿದ್ದಾರೆ.
ಕೇವಲ ಇಪ್ಪತ್ತು ವರ್ಷಗಳ ಹಿಂದೆ ಇದೇ ದೇವನಹಳ್ಳಿ ಭಾಗದ ರೈತರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟುಕೊಟ್ಟಿದ್ದರು. ಇಂದು ಅವರೆಲ್ಲ ಬೆಂಗಳೂರು ನಗರದಲ್ಲಿ ನಾಲ್ಕನೇ ದರ್ಜೆ ಕೂಲಿಕಾರ್ಮಿಕರಾಗಿದ್ದಾರೆ. ಹೆಂಗಸರು ಅಪಾರ್ಟ್‌ಮೆಂಟ್‌ಗಳಲ್ಲಿ ಕಸ ಗುಡಿಸುತ್ತ, ಮುಸುರೆ ತಿಕ್ಕುತ್ತಿದ್ದಾರೆ. ಅವರ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಈ ಕರಾಳ ಸತ್ಯ ನಮ್ಮೆದುರಿಗಿದ್ದರೂ, ಆಳುವ ಸರ್ಕಾರ ಮೊಂಡಾಟಕ್ಕೆ ಬಿದ್ದು ರೈತವಿರೋಧಿ ಭಾವನೆ ತಳೆದಿರುವುದು ಶೋಚನೀಯ.
ವಿಪರ್ಯಾಸಕರ ಸಂಗತಿ ಎಂದರೆ, ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ಧರಣಿನಿರತ ಸ್ಥಳಕ್ಕೆ ಆಗಮಿಸಿ, ‘ನಾವು ಅಧಿಕಾರಕ್ಕೆ ಬಂದರೆ, ಯಾವುದೇ ಕಾರಣಕ್ಕೂ ಭೂಸ್ವಾಧೀನಕ್ಕೆ ಅವಕಾಶ ಕೊಡುವುದಿಲ್ಲ’ವೆಂದು ರೈತರಿಗೆ ಆಶ್ವಾಸನೆ ಕೊಟ್ಟಿದ್ದರು.
ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾದವು. ರೈತರು ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿದ್ದಾರೆ, ಭೂಸ್ವಾಧೀನಕ್ಕೆ ಮುಂದಾಗುವುದಿಲ್ಲ ಎಂದು ನಂಬಿದ್ದರು. ಆದರೆ, ಕಾಂಗ್ರೆಸ್ಸಿಗರು ಕೂಡ ಹಿಂದಿನ ಬಿಜೆಪಿ ಸರ್ಕಾರದಂತೆಯೇ ವರ್ತಿಸತೊಡಗಿದಾಗ ಹೋರಾಟಕ್ಕಿಳಿದರು. ಅಧಿಕಾರವಿಲ್ಲದಿದ್ದಾಗ ಮನುಷ್ಯರಂತೆ ವರ್ತಿಸಿದವರು, ಅಧಿಕಾರಕ್ಕೇರುತ್ತಿದ್ದಂತೆ ರಾಕ್ಷಸರಂತೆ ಕಾಣತೊಡಗಿದ್ದಾರೆ. ಈ ರಾಕ್ಷಸರನ್ನು ಅಧಿಕಾರದ ಕುರ್ಚಿ ಮೇಲೆ ಕೂರಿಸಿದವರು ನಾವೇ ಅಲ್ಲವೇ ಎಂದು ರೈತರು ಹತಾಶರಾಗಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರ ಮೂರು ಕರಾಳ ಕೃಷಿ ಕಾಯಿದೆಗಳನ್ನು ಜಾರಿಗೆ ತಂದಾಗ, ದೇಶದ ರೈತರು ಒಂದಾಗಿ ಒಂದು ವರ್ಷ ಕಾಲ ನಿರಂತರವಾಗಿ ಹೋರಾಟ ಮಾಡಿ, ಸರ್ಕಾರವನ್ನು ಮಣಿಸಿದ್ದರು. ಕಾಯಿದೆಗಳನ್ನು ಹಿಂಪಡೆಯುವಂತೆ ಮಾಡಿದ್ದರು. ಇದು ನಮ್ಮ ಕಣ್ಣಮುಂದಿನ ಇತಿಹಾಸ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | 1180 ದಿನಗಳ ಚನ್ನರಾಯಪಟ್ಟಣ ಚಳವಳಿಗೆ ಸರ್ಕಾರ ಸ್ಪಂದಿಸಲಿ
ಹಾಗೆಯೇ 80ರ ದಶಕದಲ್ಲಿ ಧಾರವಾಡ ಜಿಲ್ಲೆಯ ನರಗುಂದ ನವಲಗುಂದ ರೈತ ಹೋರಾಟದಿಂದ ಅಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರ ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಮೂರು ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಬೇಕಾಯಿತು. ಇದು ಕೂಡ ನಮ್ಮ ಕಣ್ಣಮುಂದಿನ ಇತಿಹಾಸವೇ.
ಹಾಗಾಗಿ ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳರಿಯದ ಚನ್ನರಾಯಪಟ್ಟಣ ಹೋಬಳಿಯ ರೈತರ 1180 ದಿನಗಳ ಹೋರಾಟಕ್ಕೆ ಅನ್ನ ತಿನ್ನುವವರೆಲ್ಲರೂ ಬೆಂಬಲಿಸುತ್ತಿದ್ದಾರೆ. ಹೋರಾಟದ ಕಿಚ್ಚು ಆರದಂತೆ ಮುನ್ನಡೆಸುತ್ತಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಕುರ್ಚಿ ಮೇಲೆ ಕೂತ ಅಧಿಕಾರಸ್ಥರು, ಅನ್ನ ತಿನ್ನುವವರೇ ಆದರೆ, ಭೂಸ್ವಾಧೀನ ಕೈಬಿಡಲಿ.
