ತನ್ನ ಸಹಪಾಠಿಯನ್ನು ಪ್ರೀತಿಸಿ ಬಳಿಕ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿದ ಯುವಕನೋರ್ವನ ವಿರುದ್ಧ ಸಂತ್ರಸ್ತೆ ದೂರು ದಾಖಲಿಸಿದ್ದಾಳೆ. ಸಂತ್ರಸ್ತೆ ನೀಡಿರುವ ದೂರಿನಂತೆ ಆರೋಪಿತನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹದ ಪ್ರಕರಣ ದಾಖಲಾಗಿದೆ.
ಪುತ್ತೂರು ಬಪ್ಪಳಿಗೆ ನಿವಾಸಿ, ಬಿಜೆಪಿ ಮುಖಂಡ ಹಾಗೂ ವಾಸ್ತುಶಿಲ್ಪಿ ಪಿ ಜಿ ಜಗನ್ನಿವಾಸ್ ರಾವ್ ಎಂಬವರ ಪುತ್ರ ಪಿ ಜಿ ಕೃಷ್ಣ ಜೆ. ರಾವ್(21) ಆರೋಪಿತನೆಂದು ಪೊಲೀಸರು ತಿಳಿಸಿದ್ದಾರೆ.
ಪಿ ಜಿ ಕೃಷ್ಣ ಜೆ ರಾವ್‌ನಿಂದ ವಂಚನೆಗೊಳಗಾರುವ ಯುವತಿಯೂ ಪುತ್ತೂರಿನ ನಿವಾಸಿ. ಈಕೆ ಹಾಗೂ ಕೃಷ್ಣ ಜೆ ರಾವ್ ಇಬ್ಬರೂ ಸಹಪಾಠಿಗಳು. ಇವರಿಬ್ಬರು ಕಳೆದ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ಯಾರೂ ಇಲ್ಲದ ವೇಳೆ ಯುವತಿಯನನ್ನು ಮನೆಗೆ ಕರೆತಂದು ಬಲವಂತವಾಗಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಾನೆಂದು ಆರೋಪ ವ್ಯಕ್ತವಾಗಿದೆ.
“ದೂರಿನಲ್ಲಿ ತಿಳಿಸಿರುವಂತೆ 2024ರ ಅಕ್ಟೋಬರ್ 11ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆರೋಪಿ ಕೃಷ್ಣ ರಾವ್, ತನ್ನ ಮನೆಗೆ ಕರೆಸಿಕೊಂಡಿದ್ದು. ಬಳಿಕ ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಲು ಯತ್ನಿಸಿದ್ದ. ಇದಕ್ಕೆ ತಾನು ವಿರೋಧಿಸಿದಾಗ ಮದುವೆಯಾಗುವುದಾಗಿ ನಂಬಿಸಿದ್ದ ಹಾಗೂ ಈ ವಿಷಯವನ್ನು ರಹಸ್ಯವಾಗಿಡುವಂತೆ ತಿಳಿಸಿದ್ದ. ಬಳಿಕ ಜನವರಿ ತಿಂಗಳಲ್ಲಿ ಮತ್ತೆ ಮನೆಗೆ ಕರೆಸಿಕೊಂಡು ದೈಹಿಕ ಸಂಪರ್ಕ ನಡೆಸಿದ್ದನು” ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿದ್ದೀರಾ? ದ.ಕ. | ಕೆಎಸ್‌ಆರ್‌ಟಿಸಿ ಬಸ್‌ಗಳ ಮುಖಾಮುಖಿ ಡಿಕ್ಕಿ; ಮಹಿಳೆ ಸಾವು
ಇದರಿಂದಾಗಿ ಯುವತಿ ಗರ್ಭವತಿಯಾಗಿದ್ದು, ಈ ವಿಚಾರವನ್ನು ತನ್ನ ತಂದೆ ತಾಯಿಗೆ ತಿಳಿಸಿದ್ದಾಳೆ. ಬಳಿಕ ಮನೆಯವರು ಯುವಕನ ಮನೆಯವರಿಗೆ ವಿಚಾರ ತಿಳಿಸಿದಾಗ ಮಾತುಕತೆ ನಡೆದು ಮದುವೆಗೆ ಆತನ ಕಡೆಯವರು ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಆದರೆ, ಇದೀಗ ಯುವತಿ ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದು, ಕೃಷ್ಣ ರಾವ್ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ 64(1) ಹಾಗೂ 69ರಂತೆ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.