ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ಹದಿಮೂರು ಹಳ್ಳಿಗಳ ರೈತರ 1,777 ಎಕರೆ ಭೂಮಿಯನ್ನು ವಶಪಡಿಸಿಕೊಂಡು ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ರಾಜ್ಯ ಸರ್ಕಾರ ವಿರುದ್ಧ ರೈತರು ಪ್ರತಿಭಟಿಸುತ್ತಿರುವ ಹೋರಾಟವನ್ನು ಹತ್ತಿಕ್ಕಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.
ರೈತರು ಕಳೆದ 1,180 ದಿನಗಳಿಂದ ನಿರಂತರ ಹೋರಾಟ ಮಾಡುತ್ತಾ ಬಂದಿದ್ದಾರೆ. ಬುಧವಾರ ‘ದೇವನಹಳ್ಳಿ ಚಲೋ’ ಹಮ್ಮಿಕೊಳ್ಳುವ ಮೂಲಕ ಹೋರಾಟವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದ್ದ ಹೋರಾಟಗಾರರನ್ನು ಬುಧವಾರ ಪೊಲೀಸರು ಬಂಧಿಸಿದರು.
ಗುರುವಾರ ನಟ ಪ್ರಕಾಶ್ ರಾಜ್ ಸೇರಿದಂತೆ ಚಿಂತಕರನ್ನು ಕುಮಾರಕೃಪಾ ಬಳಿ ಪ್ರಿವೆಂಟಿವ್ ಅರೆಸ್ಟ್ ಮಾಡಿದರು. ಬಳಿಕ ಕಾಯಿಸಿ ಸಿಎಂ ಭೇಟಿಗೆ ಅವಕಾಶ ನೀಡಲಾಗಿದೆ. ಪ್ರಕಾಶ್ ರೈ, ಕೆ ಎಸ್ ವಿಮಲಾ, ಸಿರಿಮನೆ ನಾಗರಾಜ್, ತಾರಾ, ಸುಷ್ಮಾ ಮತ್ತಿತರರು ಮುಖ್ಯಮಂತ್ರಿ ಅವರನ್ನು ಭೇಟಿಯಾಗಲು ಹೊರಟಿದ್ದಾರೆ.
ರೈತರ ಭೂ ಸ್ವಾಧೀನ ವಿರೋಧಿಸಿ ದೇವನಹಳ್ಳಿಯಲ್ಲಿ ನಡೆಯುತ್ತಿರುವ ‘ದೇವನಹಳ್ಳಿ ಚಲೋ’ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಬಹುಭಾಷಾ ನಟ ಪ್ರಕಾಶ್ ರಾಜ್ ಮಾತನಾಡುತ್ತ, “ನಾನು ರೈತರ ಜೊತೆ ಇಲ್ಲಿಯೇ ಮಲಗುತ್ತೇನೆ, ಜೈಲಿಗೆ ಹಾಕುವುದಾದರೆ ಹಾಕಿ. ಜಾಮೀನು ಕೂಡ ತೆಗೆದುಕೊಳ್ಳುವುದಿಲ್ಲ” ಎಂದು ಹೇಳಿದ್ದರು.